ಕರ್ನಾಟಕ ಬಿಜೆಪಿ ಘಟಕದ ನೂತನ ರಾಜ್ಯಾಧ್ಯಕ್ಷನಾಗಿ ಆಯ್ಕೆಯಾಗಿರುವ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ, ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದು, ‘ಮುಂದಿನ ಶುಕ್ರವಾರ ವಿಪಕ್ಷ ನಾಯಕನ ಆಯ್ಕೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ ವೈ ವಿಜಯೇಂದ್ರ, ನನ್ನನ್ನು ಅಧ್ಯಕ್ಷನನ್ನಾಗಿ ನೇಮಕ ಮಾಡಿರುವುದಕ್ಕೆ ಪಕ್ಷದ ಹಿರಿಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪಕ್ಷದ ಎಲ್ಲ ಕಿರಿಯ ಹಾಗೂ ಹಿರಿಯರನ್ನು ಜೊತೆಗೂಡಿಸಿಕೊಂಡು ಸಂಘಟಿಸಲು ಶ್ರಮ ಪಡುತ್ತೇನೆ ಎಂದು ತಿಳಿಸಿದರು.
ವಿಪಕ್ಷ ನಾಯಕನ ಆಯ್ಕೆ ವಿಚಾರದ ಬಗ್ಗೆ ನನ್ನನ್ನು ರಾಜ್ಯಾಧ್ಯಕ್ಷನಾಗಿ ಆಯ್ಕೆ ಮಾಡಿದ ಬಳಿಕ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಜೊತೆಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದೇನೆ. ನ.17ರಂದು(ಮುಂದಿನ ಶುಕ್ರವಾರ) ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಆ ಬಳಿಕ ವಿಪಕ್ಷ ನಾಯಕನ ಆಯ್ಕೆ ಮಾಡುತ್ತೇವೆ. ಅವತ್ತೇ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯು ಬಹಳಷ್ಟು ಸವಾಲುಗಳಿಂದ ಕೂಡಿದೆ. ಹೆಚ್ಚಿನ ಸ್ಥಾನಗಳನ್ನು ರಾಜ್ಯದಲ್ಲಿ ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಶ್ರಮಪಡುತ್ತೇನೆ. ಯಡಿಯೂರಪ್ಪನವರ ಮಗ ಎಂದು ಹೇಳಲು ನನಗೆ ಹೆಮ್ಮೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ತಿಳಿಸಿದ್ದಾರೆ.