ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, “ಚಿತ್ತಾಪುರ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ್ ಹಲ್ಲೆ ಆರೋಪ ಸತ್ಯ ಬಯಲಾಗಿದೆ. ಅಪಘಾತದ ಘಟನೆಯನ್ನು ಹಲ್ಲೆ ಎಂದು ಕಥೆ ಕಟ್ಟಿದ್ದು ಪೊಲೀಸ್ ತನಿಖೆಯಿಂದ ಹೊರ ಬಂದಿದೆ. ಮಣಿಕಂಠ ರಾಠೋಡ್ ನನ್ನು ಸಮರ್ಥಿಸಿಕೊಂಡು ನಾನೇ ಹಲ್ಲೆ ಮಾಡಿದ್ದೇನೆಂದು ನೇರವಾಗಿ ನನ್ನ ವಿರುದ್ಧ ಆರೋಪಿಸಿ ನನ್ನ ರಾಜಿನಾಮೆಗೂ ಒತ್ತಾಯಿಸಿದ ವಿಪಕ್ಷ ನಾಯಕ ಆರ್.ಅಶೋಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜಿನಾಮೆ ಕೊಡ್ತಾರಾ? ಎಂದು ಪ್ರಶ್ನಿಸಿದರು.
“ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಈ ಹಲ್ಲೆಗೆ ನೇರವಾಗಿ ಹಾಲಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿ ಎಂದು ಹೇಳಿಕೆ ನೀಡಿದ್ದಾರೆ. ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಣಿಕಂಠ ರಾಠೋಡ್ ಜೀವಕ್ಕೆ ಹಾನಿಯಾದರೆ ಅದಕ್ಕೆ ಪ್ರಿಯಾಂಕ್ ಖರ್ಗೆ ನೇರ ಹೊಣೆ ಆರೋಪಿಸಿದ್ದರು. ನನ್ನ ರಾಜಿನಾಮೆಗೂ ಒತ್ತಾಯಿಸಿದ್ದರು. ಈಗ ಸತ್ಯ ಬಯಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಮಣಿಕಂಠ ರಾಠೋಡ್ ಹಾಗೂ ಬಿಜೆಪಿ ನಾಯಕರ ಮೇಲೆ ಮಾನನಷ್ಟ ಮೊಕ್ಕದ್ದಮೆ ಹೂಡುತ್ತೇನೆ” ಎಂದು ಹೇಳಿದರು.
“ಖರ್ಗೆ ಕುಟುಂಬ ನಾಶ ಮಾಡ್ತೇನೆ, ಪ್ರಿಯಾಂಕ್ ಖರ್ಗೆಯನ್ನು ಶೂಟ್ ಮಾಡ್ತೇನೆ ಎಂದು ಹೇಳಿದ್ದವರಿಗೆ ಬೆಂಬಲ ಕೊಡ್ತಿರಾ? ಬಿಜೆಪಿ ಟಿಕೆಟ್ ಕೊಡ್ತೀರಾ? ಇದರಿಂದ ನಿಮ್ಮ ವರ್ಚಸ್ಸು ಕಡಿಮೆಯಾಗುತ್ತದೆ. ನನ್ನ ವಿರುದ್ಧ ಹೇಳಿಕೆ ಕೊಡುವಾಗ ಜಾಗರೂಕತೆಯಿಂದ ಕೊಡಿ ಇಲ್ಲಾಂದ್ರೆ ಕಾನೂನು ಪ್ರಕಾರ ನೋಡಿಕೊಳ್ಳುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹುಟ್ಟುವ ಮುನ್ನವೇ ಹೆಣ್ಣು ಜೀವಗಳನ್ನು ಬಲಿ ಪಡೆಯುತ್ತಿರುವ ಅನಾಗರಿಕ ವ್ಯವಸ್ಥೆ
“ನನ್ನ ಸಹನೆ ಪರೀಕ್ಷಿಸಬೇಡಿ. ಬುದ್ದ, ಬಸವ ತತ್ವದ ಜೊತೆಗೆ ಅಂಬೇಡ್ಕರ್ ಹೋರಾಟದ ಗುಣ ಇದೆ. ಸುಳ್ಳು ಆರೋಪ ಮಾಡಬೇಡಿ. ಹಕ್ಕುಚ್ಯುತಿ ಮಂಡನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ” ಎಂದರು.