‘ಭಾರತ’ ಹಾಗೂ ‘ಇಂಡಿಯಾ’ ಚರ್ಚೆಯ ನಡುವೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಭಾರತದ ಆತ್ಮದ ಮೇಲೆ ದಾಳಿ ಮಾಡುವ ಜನರು ತಕ್ಕ ಬೆಲೆ ತೆರುತ್ತಾರೆ’ ಎಂದು ಹೇಳಿದ್ದಾರೆ.
ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಸೈನ್ಸಸ್ ಪಿಒ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ರಾಹುಲ್ ಗಾಂಧಿ,“ದೇಶದ ಹೆಸರನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವ ಜನರು ಮೂಲತಃ ಇತಿಹಾಸವನ್ನು ನಿರಾಕರಿಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರದ ಈ ರೀತಿಯ ಕಾರ್ಯಗಳಿಗೆ ತಕ್ಕ ಬೆಲೆ ತೆರುತ್ತಾರೆ. ಭಾರತದ ಆತ್ಮದ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸುವ ಯಾರಾದರೂ ಸರಿಯೇ ತಮ್ಮ ಕಾರ್ಯಗಳಿಗೆ ಬೆಲೆ ತೆರಲೇಬೇಕಾಗುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದರು.
“ದೇಶವನ್ನು ಇಂಡಿಯಾ ಅಥವಾ ಭಾರತ ಎಂದು ಕರೆದರೂ ಪರವಾಗಿಲ್ಲ, ಬದಲಾವಣೆಯ ಹಿಂದಿನ ಉದ್ದೇಶವು ಕೇಂದ್ರಕ್ಕೆ ಹೆಚ್ಚು ಮುಖ್ಯವಾಗಿದೆ. ವಿರೋಧ ಪಕ್ಷಗಳ ಒಕ್ಕೂಟದ ‘ಇಂಡಿಯಾ’ ಹೆಸರು ಕೇಂದ್ರ ಸರ್ಕಾರವನ್ನು ‘ಭಾರತ್’ ಎಂದು ದೇಶದ ಹೆಸರಾಗಿ ಒತ್ತಿಹೇಳುವಂತೆ ಮಾಡಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಪ್ರೋಟೋಕಾಲ್ ಉಲ್ಲಂಘನೆ: ಬೈಡನ್ ಜಿ20 ಬೆಂಗಾವಲು ಪಡೆಯ ಚಾಲಕನ ಬಂಧನ
“ಭಾರತೀಯ ಸಂವಿಧಾನವು ಇಂಡಿಯಾ ಹಾಗೂ ಭಾರತ್ ಎರಡೂ ಹೆಸರುಗಳನ್ನು ಬಳಸುತ್ತದೆ. ಎರಡೂ ಪದಗಳು ಸರಿಯಾಗಿವೆ. ಆದರೆ ಬಹುಶಃ ನಾವು ನಮ್ಮ ಒಕ್ಕೂಟದ ಹೆಸರಿನಿಂದ ಕೇಂದ್ರ ಸರ್ಕಾರವನ್ನು ಕೆರಳಿಸಿದ್ದೇವೆ. ನಮ್ಮ ಒಕ್ಕೂಟದ ಹೆಸರು ಇಂಡಿಯಾ. ಅದಕ್ಕಾಗಿಯೇ ಅವರು ದೇಶದ ಹೆಸರನ್ನು ಬದಲಾಯಿಸಲು ನಿರ್ಧರಿಸಿದರು” ಎಂದು ರಾಹುಲ್ ಹೇಳಿದರು.
“ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬಲಪಂಥೀಯ ಸಂಘಟನೆಯಾದ ಆರ್‌ಎಸ್‌ಎಸ್ ಭಾರತದಲ್ಲಿ ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರ ಏಳಿಗೆಯನ್ನು ದಮನ ಮಾಡುತ್ತಿದೆ. ಶೋಷಿತರನ್ನು ಹೀನಾಯವಾಗಿ ನಡೆಸಿಕೊಳ್ಳುವ ಈ ರೀತಿಯ ಸರ್ಕಾರ ನನಗೆ ಬೇಡ” ಎಂದರು.
“ಅಲ್ಪಸಂಖ್ಯಾತರು ತಮ್ಮ ಸ್ವಂತ ದೇಶದಲ್ಲಿ ತೊಂದರೆ ಅನುಭವಿಸುವುದು ಭಾರತಕ್ಕೆ ನಾಚಿಕೆಗೇಡಿನ ವಿಷಯ. ಭಾರತದಲ್ಲಿ 20 ಕೋಟಿ ಜನರು ತೊಂದರೆ ಅನುಭವಿಸಿದರೆ, ಸಿಖ್ ಸಮುದಾಯ, ಮಹಿಳೆಯರು ತೊಂದರೆ ಅನುಭವಿಸಿದರೆ ಅದು ನಮಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಅದನ್ನು ಸರಿಪಡಿಸಬೇಕು” ಎಂದರು.
“ನಾನು ಭಗವದ್ಗೀತೆ, ಉಪನಿಷತ್ತುಗಳು ಮತ್ತು ಇತರ ಹಿಂದೂ ಧರ್ಮಗ್ರಂಥಗಳನ್ನು ಓದಿದ್ದೇನೆ. ಬಿಜೆಪಿ ಮಾಡುತ್ತಿರುವ ಸಂಘರ್ಷದಲ್ಲಿ ಹಿಂದೂ ಕಲ್ಪನೆಯಲ್ಲಿ ಯಾವುದೇ ಸಿದ್ಧಾಂತವಿಲ್ಲ ಎಂದು ನಾನು ಹೇಳಬಲ್ಲೆ. ತಮಗಿಂತ ದುರ್ಬಲರಾದ ಜನರನ್ನು ಭಯಭೀತಗೊಳಿಸಬಾರದು ಅಥವಾ ಹಾನಿ ಮಾಡಬಾರದು ಎಂದು ಒಬ್ಬ ಹಿಂದೂ ಸಂತರು ತನಗೆ ಕಲಿಸಿದ್ದಾರೆ. ಆದರೆ ಈ ಬಿಜೆಪಿಯವರು ಹಿಂದೂ ರಾಷ್ಟ್ರೀಯವಾದಿಗಳಲ್ಲ. ಅವರು ಅಧಿಕಾರಕ್ಕಾಗಿ ಮತ್ತು ಪ್ರಾಬಲ್ಯ ಸಾಧಿಸಲು ಏನು ಬೇಕಾದರೂ ಮಾಡಬಹುದು. ಇದರಲ್ಲಿ ಹಿಂದೂ ಪರಿಕಲ್ಪನೆ ಏನೂ ಇಲ್ಲ” ಎಂದರು.
ಚೀನಾದಿಂದ ಜಾಗತಿಕ ಬೆದರಿಕೆ
ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ಮತ್ತು ಭಾರತ-ಚೀನಾ ಸಂಬಂಧದ ಹಿನ್ನೆಲೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಜಾಗತಿಕ ಮಟ್ಟದಲ್ಲಿ ಉತ್ಪಾದನಾ ಕೈಗಾರಿಕೆಗಳ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿರುವ ಚೀನಾ ‘ಪ್ರಜಾಪ್ರಭುತ್ವೇತರ’ ರಾಷ್ಟ್ರವಾಗಿದೆ ಎಂದು ಟೀಕಿಸಿದರು.
“ನಾವೆಲ್ಲರೂ ಒಂದು ಸಮಸ್ಯೆಯ ಬಗ್ಗೆ ಚಿಂತಿಸಬೇಕಾಗಿದೆ. ಇದು ಎಲ್ಲರಿಗೂ ಸಮಸ್ಯೆಯಾಗಿದೆ. ಭಾರತ, ಯುರೋಪ್ ಮತ್ತು ಅಮೆರಿಕದ ಸಮಸ್ಯೆಯೆಂದರೆ, ಎಲ್ಲ ರಾಷ್ಟ್ರಗಳಲ್ಲಿ ಚೀನಾ ವಸ್ತುಗಳನ್ನು ಉತ್ಪಾದನೆ ಮಾಡಲಾಗುತ್ತದೆ. ಚೀನಿಯರು ನಮ್ಮ ವಿರುದ್ಧ ಸ್ಪರ್ಧಿಸಿ ಯಶಸ್ವಿಯಾಗಿದ್ದಾರೆ. ಅವರು ವಸ್ತುಗಳನ್ನು ಉತ್ಪಾದಿಸುವಲ್ಲಿ ಉತ್ತಮರು, ಆದರೆ ಅವರು ಅದನ್ನು ಪ್ರಜಾಪ್ರಭುತ್ವವಲ್ಲದ ಪ್ರಕ್ರಿಯೆಯೊಂದಿಗೆ ಮಾಡುತ್ತಾರೆ” ಎಂದು ರಾಹುಲ್ ಹೇಳಿದರು.
“ನಾವು ಸಹ ಅವರೊಂದಿಗೆ ಪ್ರಜಾಪ್ರಭುತ್ವ ಮತ್ತು ರಾಜಕೀಯ ಸ್ವಾತಂತ್ರ್ಯದೊಂದಿಗೆ ಸ್ಪರ್ಧಿಸಲು ಪ್ರಯತ್ನಿಸಬೇಕು” ಎಂದು ಕಾಂಗ್ರೆಸ್ ನಾಯಕ ಹೇಳಿದರು.