ದೇಶದ ಮೊದಲ ದಲಿತ ಪ್ರಧಾನಿಯಾಗಿ ಇತಿಹಾಸ ಸೃಷ್ಟಿಸುವರೇ ಮಲ್ಲಿಕಾರ್ಜುನ ಖರ್ಗೆ?

Date:

Advertisements

‘ಇಂಡಿಯಾ’ ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಪ್ರಸ್ತಾಪವಾಗಿರುವುದು ಅನಿರೀಕ್ಷಿತವಾದರೂ, ಅದು ಒಂದು ರೀತಿಯಲ್ಲಿ ಅನಿವಾರ್ಯ ಕೂಡ. ಬಿಜೆಪಿಯ ಹಿಂದುತ್ವಕ್ಕೆ ವಿರುದ್ಧವಾಗಿ ನೆಹರೂ ಸಮಾಜವಾದ ಮತ್ತು ಅಂಬೇಡ್ಕರ್‌ವಾದವನ್ನು ಪ್ರತಿಪಾದಿಸುವ ಖರ್ಗೆ, ಸಹಜವಾಗಿಯೇ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿಯಾಗುವುದು ಹೆಚ್ಚು ಸೂಕ್ತವಾಗಿದೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಇಂಡಿಯಾ’ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವ ಮಾತುಗಳು ಆ ವೇದಿಕೆಯ ನಾಯಕರಿಂದಲೇ ವ್ಯಕ್ತವಾಗಿವೆ. ದೇಶದ ರಾಜಕೀಯದ ಮಟ್ಟಿಗೆ ಇದು ಮಹತ್ವದ ಬೆಳವಣಿಗೆ.

ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಪ್ರಸ್ತಾಪವಾಗಿರುವುದು ಅನಿರೀಕ್ಷಿತವಾದರೂ, ಅದು ಒಂದು ರೀತಿಯಲ್ಲಿ ಅನಿವಾರ್ಯ ಕೂಡ. ‘ಇಂಡಿಯಾ’ ಒಕ್ಕೂಟದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿದೆ. ಬಿಜೆಪಿಯ ಮಟ್ಟಿಗೆ ಮುಖ್ಯ ಪ್ರತಿಪಕ್ಷವೂ ಆಗಿದೆ. ದೇಶದ ಸುಮಾರು 150 ಕ್ಷೇತ್ರಗಳಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಪ್ರತಿರೋಧ ಒಡ್ಡುತ್ತಿದೆ. ಯಾವುದೇ ಒಕ್ಕೂಟದಲ್ಲಿ ದೊಡ್ಡ ಪಕ್ಷದವರೇ ಪ್ರಧಾನಿ ಅಭ್ಯರ್ಥಿಯಾಗುವುದು ಸ್ವಾಭಾವಿಕ.

Advertisements

ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿ ಅತ್ಯಂತ ಜನಪ್ರಿಯ ನಾಯಕನಾದರೂ, ‘ಇಂಡಿಯಾ’ ಒಕ್ಕೂಟದ ಎಲ್ಲ ಪಕ್ಷಗಳೂ ಅವರನ್ನು ಬೆಂಬಲಿಸುವವೇ ಎನ್ನುವುದು ಅನುಮಾನಾಸ್ಪದ. ಹಾಗಾಗಿ ಪಕ್ಷದಲ್ಲಿ ಉಳಿದ ಎಲ್ಲರಿಗಿಂತ ಹೆಚ್ಚು ಬೆಂಬಲ ಗಿಟ್ಟಿಸುವ ಸರ್ವಸಮ್ಮತ ಅಭ್ಯರ್ಥಿ ಖರ್ಗೆಯೊಬ್ಬರೇ. ಅವರು ಕಾಂಗ್ರೆಸ್ಸೇತರ ಪಕ್ಷಗಳ ಮಟ್ಟಿಗೂ ಒಪ್ಪಿಗೆಯಾಗಬಲ್ಲ ವ್ಯಕ್ತಿ.

 

kharge old

ಕರ್ನಾಟಕದ ಗಡಿ ಜಿಲ್ಲೆ ಬೀದರ್‌ನ ಒಬ್ಬ ಸಾಮಾನ್ಯ ಮಿಲ್ ಕಾರ್ಮಿಕನ ಮಗ ಇವತ್ತು ದೇಶದ ಪ್ರಧಾನಿ ಅಭ್ಯರ್ಥಿಯಾಗುವ ಮಟ್ಟಕ್ಕೆ ಬೆಳೆದಿದ್ದು ಒಂದು ಪವಾಡಸದೃಶ ಕಥೆ. ಖರ್ಗೆ ಚಿಕ್ಕಂದಿನಲ್ಲಿ ಬೆಂಕಿ ಆಕಸ್ಮಿಕದಲ್ಲಿ ಬದುಕುಳಿದಿದ್ದೂ ಒಂದು ಪವಾಡವೇ. ಖರ್ಗೆ ಹುಟ್ಟಿದ್ದು ಬೀದರ್‌ ಜಿಲ್ಲೆ ಭಾಲ್ಕಿ ತಾಲ್ಲೂಕಿನ ವರವಟ್ಟಿ ಗ್ರಾಮದಲ್ಲಿ. ಅವರ ತಂದೆ ಮಾಪಣ್ಣ ಎಂಎಸ್‌ಕೆ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಖರ್ಗೆಗೆ ಏಳು ವರ್ಷವಾಗಿದ್ದಾಗ ಸ್ಫೋಟಗೊಂಡಿದ್ದ ಕೋಮು ಗಲಭೆಯಲ್ಲಿ ದುಷ್ಕರ್ಮಿಗಳು ಅವರ ಮನೆಗೆ ಬೆಂಕಿ ಹಚ್ಚಿದ್ದರು. ಆ ಬೆಂಕಿಯಲ್ಲಿ ಅವರ ತಾಯಿ ಮತ್ತು ಸಹೋದರಿ ಸುಟ್ಟು ಹೋಗಿದ್ದರು. ಖರ್ಗೆ ಸ್ವಲ್ಪದರಲ್ಲಿ ಪಾರಾಗಿದ್ದರು.

ಖರ್ಗೆಯವರಿಗೆ ವಿದ್ಯಾರ್ಥಿ ದೆಸೆಯಿಂದಲೇ ರಾಜಕಾರಣದ ಆಸಕ್ತಿ. ಕಾನೂನು ಪದವಿ ಪಡೆದು ಶಿವರಾಜ್ ಪಾಟೀಲ್ ಅವರ ಅಡಿಯಲ್ಲಿ ವಕೀಲಿಕೆ ಮಾಡುತ್ತಿದ್ದ ಖರ್ಗೆ, ಆಗ ಕಾರ್ಮಿಕ ಸಂಘಟನೆಗಳ ಪರವಾಗಿ ಹಲವು ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು. ಎಂಎಸ್‌ಕೆ ಮಿಲ್‌ನ ಉದ್ಯೋಗಿಗಳ ಸಂಘದ ಕಾನೂನು ಸಲಹೆಗಾರರಾಗಿ ಜನಪ್ರಿಯರಾಗಿದ್ದ ಖರ್ಗೆ, 1969ರಲ್ಲಿ ಕಾಂಗ್ರೆಸ್ ಸೇರಿ, ಕಲಬುರಗಿ ನಗರ ಕಾಂಗ್ರೆಸ್‌ನ ಅಧ್ಯಕ್ಷರಾದರು. 1972ರಲ್ಲಿ ಗುರುಮಿಠಕಲ್‌ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ಅಂದಿನಿಂದ ಸತತ ಎಂಟು ಬಾರಿ ಗುರುಮಿಠಕಲ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಖರ್ಗೆ, 2008ರ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಚಿತ್ತಾಪುರಕ್ಕೆ ಬಂದು, ಅಲ್ಲಿಂದ ಸ್ಪರ್ಧಿಸಿ ಸತತ ಒಂಬತ್ತನೇ ಬಾರಿಗೆ ಶಾಸಕರಾಗಿ ‘ಸೋಲಿಲ್ಲದ ಸರದಾರ’ ಎನ್ನಿಸಿಕೊಡರು.

ರಾಜ್ಯದ ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಹಲವು ಪ್ರಮುಖ ಖಾತೆಗಳ ಸಚಿವರಾಗಿ ಖರ್ಗೆ ಕೆಲಸ ಮಾಡಿದ್ದಾರೆ. 1976ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದಾಗ 16000 ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಿದ್ದರು. 1978ರ ದೇವರಾಜ ಅರಸು ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ ರಾಜ್ ರಾಜ್ಯ ಸಚಿವ; 1980ರಲ್ಲಿ ಗುಂಡೂರಾವ್ ಅವರ ಸಂಪುಟದಲ್ಲಿ ಕಂದಾಯ ಸಚಿವ; 1990ರಲ್ಲಿ ಬಂಗಾರಪ್ಪ ಸಂಪುಟದಲ್ಲಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ; 1992ರಿಂದ 1994ರವರೆಗೆ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಹಕಾರ ಮತ್ತು ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಸಚಿವ; 1999ರಲ್ಲಿ ಎಸ್ ಎಂ ಕೃಷ್ಣ ಸಂಪುಟದಲ್ಲಿ ಗೃಹ ಸಚಿವರಾಗಿಯೂ ಮಲ್ಲಿಕಾರ್ಜುನ ಖರ್ಗೆ ಕೆಲಸ ಮಾಡಿದ್ದಾರೆ. 2004ರ ಧರ್ಮಸಿಂಗ್ ಸಂಪುಟದಲ್ಲಿ ಅವರು ಸಾರಿಗೆ ಮತ್ತು ಜಲಸಂಪನ್ಮೂಲ ಸಚಿವರಾಗಿದ್ದರು. ಹಲವು ಬಾರಿ ಮುಖ್ಯಮಂತ್ರಿ ಗಾದಿಯ ಸನಿಹ ಬಂದಿದ್ದ ಖರ್ಗೆಯವರು, ಕೊನೆಯ ಗಳಿಗೆಯ ರಾಜಕೀಯ ಲೆಕ್ಕಾಚಾರಗಳಿಂದ ಆ ಪದವಿಯಿಂದ ವಂಚಿತರಾಗಿದ್ದರು.

1994ರಲ್ಲಿ ಹಾಗೂ 2008ರಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು, 2005ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ಎರಡು ಬಾರಿ ಸಂಸದರಾಗಿದ್ದ ಅವರು, ಮನಮೋಹನ್‌ಸಿಂಗ್ ಸಂಪುಟದಲ್ಲಿ ರೈಲ್ವೆ ಸಚಿವ, ಕಾರ್ಮಿಕ ಮತ್ತು ಉದ್ಯೋಗ ಸಚಿವ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದರು. 2014-19ರವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿದ್ದರು. ನಂತರ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರೂ ಆಗಿದ್ದರು. ಖರ್ಗೆಯವರು 2019ರ ಲೋಕಸಭಾ ಚುನಾವಣೆಯಲ್ಲಿ ಉಮೇಶ್ ಜಾಧವ್ ವಿರುದ್ಧ ಸೋತಿದ್ದರು. ಅದು ಐದು ದಶಕಗಳ ಚುನಾವಣಾ ರಾಜಕಾರಣದಲ್ಲಿ ಅವರ ಮೊದಲ ಸೋಲು.

 

ದೇವರಾಜ ಅರಸು, ಧರಂ ಸಿಂಗ್ ಅವರೊಂದಿಗೆ ಖರ್ಗೆ
ದೇವರಾಜ ಅರಸು, ಧರಂ ಸಿಂಗ್ ಅವರೊಂದಿಗೆ ಖರ್ಗೆ

ಖರ್ಗೆಯವರು ಬಹುಭಾಷಾ ಪರಿಣತರು. ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ಕನ್ನಡ ಭಾಷೆಗಳ ಮೇಲೆ ಅವರಿಗೆ ಹಿಡಿತವಿದೆ. ಸುದೀರ್ಘ ರಾಜಕೀಯ ಅನುಭವವಿರುವ ಖರ್ಗೆಯವರು, ಇಂಗ್ಲಿಷ್ ಬಲ್ಲ ಫಾರಿನ್ ರಿಟರ್ನ್ಡ್ ಶಶಿ ತರೂರ್ ಅವರನ್ನು ಮಣಿಸಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಕಡಿಮೆ ಸಾಧನೆ ಏನಲ್ಲ.

ಖರ್ಗೆ ಕೂಡ ದೇವೇಗೌಡರಂತೆ 24/7 ರಾಜಕಾರಣಿ. ಅವರು ಅಧ್ಯಕ್ಷರಾದಾಗಿನಿಂದ ಕಾಂಗ್ರೆಸ್ ಜನರಿಗೆ ಹಾಗೂ ಕಾರ್ಯಕರ್ತರಿಗೆ ಹೆಚ್ಚು ಹತ್ತಿರವಾಗುತ್ತಿದೆ ಎನ್ನುವ ಮಾತುಗಳಿವೆ. ಕರ್ನಾಟಕದ ಈಚಿನ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಗೆಲುವಿನಲ್ಲೂ ಖರ್ಗೆಯವರ ಪಾತ್ರವಿದೆ; ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮಾಡುವಾಗ ಖರ್ಗೆ ವಹಿಸಿದ ಪಾತ್ರ ಮಹತ್ತರವಾದದ್ದು.

ಮಲ್ಲಿಕಾರ್ಜುನ ಖರ್ಗೆ-ರಾಧಾ ಬಾಯಿ ಅವರಿಗೆ ಐವರು ಮಕ್ಕಳು. ಅವರ ಪೈಕಿ ಪ್ರಿಯಾಂಕ್ ಖರ್ಗೆ ಮಾತ್ರ ರಾಜಕೀಯದಲ್ಲಿದ್ದು, ಸದ್ಯ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾರೆ.

ಸಾರ್ವಜನಿಕವಾಗಿ ಸದಾ ಅತ್ಯಂತ ಗಂಭೀರವಾಗಿರುವ ಮಲ್ಲಿಕಾರ್ಜುನ ಖರ್ಗೆ, ಖಾಸಗಿ ಮಾತುಕತೆಯಲ್ಲಿ ಹಾಸ್ಯದ ಮಾತು ಮತ್ತು ವಿಡಂಬನೆಗೆ ಹೆಸರಾದವರು. ಚಟಾಕಿ ಹಾರಿಸುವುದರಲ್ಲಿ ಅವರು ಸಿದ್ಧಹಸ್ತರು; ಸುದೀರ್ಘ ರಾಜಕೀಯ ಜೀವನದಲ್ಲಿ ಎಂದೂ ಕೀಳು ಮಟ್ಟದ ಭಾಷೆ, ವರ್ತನೆ ತೋರದ ಖರ್ಗೆಯವರು ತಮ್ಮ ಘನತೆಯ ವ್ಯಕ್ತಿತ್ವಕ್ಕೆ ಹೆಸರಾದವರು. ಹಾಗೆಯೇ ಹೇಳಬೇಕಾದುದನ್ನು ನೇರವಾಗಿ ಹೇಳುವ ನಿಷ್ಠುರತೆಯನ್ನೂ ತೋರಲು ಹಿಂಜರಿಯದವರು.

ಈ ಸುದ್ದಿ ಓದಿದ್ದೀರಾ: ಕನಿಷ್ಠ ಜನರ ಈ ಪ್ರಶ್ನೆಗಳಿಗಾದರೂ ಉತ್ತರ ನೀಡುವರೇ ಪ್ರಧಾನಿ ಮೋದಿ?

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಯಾದ ಖರ್ಗೆ ಅವರು, ಕಲಬುರಗಿಯಲ್ಲಿ ಬುದ್ಧ ವಿಹಾರ ಸ್ಥಾಪಿಸಿ, ಅದನ್ನೊಂದು ಪ್ರವಾಸಿ ತಾಣವನ್ನಾಗಿ ರೂಪಿಸಿದ್ದಾರೆ. ಬಿಜೆಪಿಯ ಹಿಂದುತ್ವಕ್ಕೆ ವಿರುದ್ಧವಾಗಿ ನೆಹರೂ ಸಮಾಜವಾದ ಮತ್ತು ಅಂಬೇಡ್ಕರ್‌ವಾದವನ್ನು ಪ್ರತಿಪಾದಿಸುವ ಖರ್ಗೆ, ಸಹಜವಾಗಿಯೇ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿಯಾಗುವುದು ಹೆಚ್ಚು ಸೂಕ್ತವಾಗಿದೆ. ಒಂದು ವೇಳೆ ಖರ್ಗೆಯವರೇನಾದರೂ ಪ್ರಧಾನಿಯಾದರೆ, ದೇಶದ ಮೊದಲ ದಲಿತ ಪ್ರಧಾನ ಮಂತ್ರಿ ಎನ್ನಿಸಿಕೊಳ್ಳಲಿದ್ದಾರೆ.

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X