ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಗದಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಯಾವುದೇ ಯೋಚನೆ ಮಾಡಿಲ್ಲ. ನಾನು ರಾಜ್ಯಾಧ್ಯಕ್ಷ ಹುದ್ದೆಗೆ ಪ್ರಯತ್ನಿಸಿದ್ದೆ. ಆದರೆ, ಅದು ಸಿಗುವುದಿಲ್ಲ ಎಂದು ಗೊತ್ತಾಯಿತು. ನಾನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತನಾಗಿ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಶ್ರೀರಾಮುಲು, ‘ರಾಜ್ಯದಲ್ಲಿ ಭೀಕರ ಬರ ತಾಂಡವವಾಡುತ್ತಿದೆ. ರೈತರು, ಜನರು ಸಂಕಷ್ಟದಲ್ಲಿದ್ದಾರೆ. ಆದರೆ, ರಾಜ್ಯದ ಸಿಎಂ ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದಾರೆ. ಹಂಪಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಇಂಥ ಸಂಕಷ್ಟದಲ್ಲಿ ರೈತರೆದುರೇ ಸಿಎಂ ಡ್ಯಾನ್ಸ್ ಮಾಡುತ್ತಾ ಮಜಾ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನು ಓದಿದ್ದೀರಾ? ವಿಶ್ವಕಪ್ ಕ್ರಿಕೆಟ್ | ದಾಖಲೆಗಳ ಸರದಾರ ಮೊಹಮ್ಮದ್ ಶಮಿಗೊಂದು ಸಲಾಮ್
ನಮ್ಮ ರಾಜ್ಯದಲ್ಲಿ ಏನೂ ಆಗಿಯೇ ಇಲ್ಲ ಎಂಬಂತೆ ಸಿಎಂ ವರ್ತಿಸುತ್ತಿದ್ದಾರೆ. ಜನ ಗುಳೆ ಹೋಗುತ್ತಿದ್ದಾರೆ ಈ ಸಂದರ್ಭದಲ್ಲಿ ಕ್ಯಾರೇ ಅನ್ನದೇ ಸಿಎಂ ಸಂತೋಷದಿಂದ ಇದ್ದಾರೆ. ಜನರ ಸಂಕಷ್ಟ ಕೇಳಬೇಕಾದ ಸಿಎಂ ಈ ರೀತಿ ಕುಣಿದರೆ ಹೇಗೆ? ಬೇರೆ ಪಕ್ಷದವರು ಏನಾದರೂ ಈ ರೀತಿ ಡ್ಯಾನ್ಸ್ ಮಾಡಿದ್ದಿದ್ದರೆ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ಬೈಯುತ್ತಿದ್ದರು. ಈ ಸರ್ಕಾರದ ಬಗ್ಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದು ಶ್ರೀರಾಮುಲು ಹೇಳಿದರು.
ಸಿದ್ದರಾಮಯ್ಯನವರು ಐದು ವರ್ಷ ನಾನೇ ಸಿಎಂ ಅಂತ ಹೇಳುತ್ತಾರೆ. ಡಿಸಿಎಂ ಡಿ ಕೆ ಶಿವಕುಮಾರ್, ಪರಮೇಶ್ವರ್ ಕೂಡ ಸಿಎಂ ಕುರ್ಚಿಗೆ ಕಣ್ಣಿಟ್ಟಿದ್ದಾರೆ. ಬೇರೆ ರಾಜ್ಯಗಳ ಚುನಾವಣೆಗೆ ಕರ್ನಾಟಕವನ್ನು ಕಲೆಕ್ಷನ್ ಸೆಂಟರ್ ಆಗಿ ಮಾಡಿ, ಕರ್ನಾಟಕವನ್ನು ಎಟಿಎಂ ಆಗಿ ಪರಿವರ್ತಿಸಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.