ಗೆಳೆಯ ಗಂಗಾಧರಯ್ಯನಿಗೆ ಶಾ ಬಾಲೂರಾವ್ ಪ್ರಶಸ್ತಿ: ಉಜ್ಜಜ್ಜಿ ರಾಜಣ್ಣ ಬರೆಹ

Date:

ನಾಡಿನ ಹೆಸರಾಂತ ಕತೆಗಾರ ಎಸ್. ಗಂಗಾಧರಯ್ಯ ಅವರ ‘ಬುನಿನ್ ಕತೆಗಳು’ ಕೃತಿಗೆ ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದ ಶಾ.ಬಾಲುರಾವ್ ಅನುವಾದ ಪ್ರಶಸ್ತಿ ದೊರಕಿದೆ. ಬುನಿನ್ ರಷ್ಯಾಕ್ಕೆ ಮೊದಲ ನೊಬೆಲ್ ಬಹುಮಾನವನ್ನು ತಂದುಕೊಟ್ಟ ಬಲು ದೊಡ್ಡ ಲೇಖಕ. ವ್ಯವಸ್ಥೆಯ ವಿರುದ್ಧವಿದ್ದ ಕಾರಣಕ್ಕೆ ರಷ್ಯಾದ ಸರ್ಕಾರ ಬುನಿನ್ ನನ್ನು ಗಡಿಪಾರು ಮಾಡಿದ್ದಲ್ಲದೆ ರಷ್ಯಾದ ಸಾಹಿತ್ಯ ಲೋಕದಲ್ಲಿ ಮುಂಚೂಣಿಗೆ ಬಾರದಂತೆ ನೋಡಿಕೊಂಡಿತ್ತು. ತನ್ನ ತಾಯ್ನಾಡಿನಿಂದ ದೂರವಿದ್ದೂ ಅಲ್ಲಿನ ಮಣ್ಣಿನ ಘಮವನ್ನು ತನ್ನ ಸೃಜನಶೀಲ ಬರವಣಿಗೆಯಲ್ಲಿ ಘಮಿಸಿದವನು. ಅಂತಹ ಲೇಖಕನ ಕತೆಗಳನ್ನು ಹೋರಾಟ, ಅನುವಾದ, ಕೃಷಿ, ಮಾಸ್ತರಿಕೆಯಲ್ಲಿ ಮುಳುಗೆದ್ದ ಗಂಗಾಧರಯ್ಯ ಕನ್ನಡಕ್ಕೆ ತಂದಿದ್ದಾರೆ. ಅವರ ಕುರಿತು ಪುಟ್ಟ ಟಿಪ್ಪಣಿ 

ಹಿರಿಯ ಕತೆಗಾರ ಎಸ್. ಗಂಗಾಧರಯ್ಯನವರು ಅನುವಾದ ಮಾಡಿರುವ ‘ಬುನಿನ್ ಕತೆಗಳು’ ಕೃತಿಗೆ ಶಾ ಬಾಲೂರಾವ್ ಪ್ರಶಸ್ತಿ ಬಂದಿದೆ. ಅನುವಾದಕರು ಮತ್ತು ಕತೆಗಾರರು ಆದ ಎಸ್. ಗಂಗಾಧರಯ್ಯನವರು ಶೆಟ್ಟೀಕೆರೆ ತವುಲ ಮಾಕುವಳ್ಳಿಯವರು. ಹಾಲ್ಕುರಿಗೆ ಅಮಾನಿಕೆರೆ ಸುವರ್ಣ ನದಿ ಉಗಮವಾಗುವ ಜಾಗ ದಾಟಿದರೆ ಅದರಾಚೆಯ ಮೂಡ್ಲಾಗಿ ಕೆಳ ನೆಲದ ಹಾದಿಗುಂಟಾ ಹೋದರೆ ಮಾಕುವಳ್ಳಿ ಹಾದಿ. ದಿಬ್ಬ ಹತ್ತಿದರೆ ಮಾಕುವಳ್ಳಿ ಗೊಲ್ಲರ ಹಟ್ಟಿ. ಓಟು ದೂರದಲ್ಲೇ ಕಾಲ್ದಾರಿಯಲ್ಲೇ ಹೋದರೆ ಮಾಕುವಳ್ಳಿ ಗ್ರಾಮಠಾಣ. ಅತ್ತಮಖನಾಗಿ ಪಡುಲಾಗಿ ಪಟ್ಟದ ದೇವರಕೆರೆ, ಕರ್ನಾಟಕ ರಾಜ್ಯ ಮೀಸಲು ಅರಣ್ಯ ಮತ್ತು ಅಮೃತ್ ಮಹಲ್ ಕಾವುಲು. ಪ್ರಸಿದ್ದ ಜಾನುವಾರು ತಳಿ ಪರಂಪರೆಯ ಹುಲ್ಲುಗಾವಲು. ಬೋರನ ಕಣಿವೆ ಜಲಾಶಯಕ್ಕೆ ಬಳ್ಳಿ ಬಳ್ಳಿಯಾಗಿ ಹರಿದಿರುವ ನೂರಾರು ಹಳ್ಳಗಳು. ಸಾಲಳ್ಳಿಗಳ ತಡಾದು ಬೆಳೆದಿರುವ ಸಾಲುಕೆರೆಗಳ ಸರಮಾಲೆಯೊಳಗೆ ಪೂರ್ವಿಕರು ಹಿಡಿಗಂಟು ಕಟ್ಟಿ ಇಟ್ಟಂತಹ ಜಲಕಾಯಗಳು.

ಮಾಕುವಳ್ಳಿ ಈಶಾನ್ಯಕ್ಕೆ ಚಿಕ್ಕನಾಯ್ಕನಹಳ್ಳಿ, ನೈರುತ್ಯಕ್ಕೆ ಮಂಚೆಕಲ್ಲು ಬೆಟ್ಟದ ಹಾದಿ. ಹಾದಿನಾಯ್ಕನಹಳ್ಳಿ ಅಳಲೆಕಾಯಿ ವನದ ಮುಂದಲ ಹಾದಿ ಒಳಗೇ ಬರೋ ತಿಪಟೂರು. ಬೂದಾಳು ಮೂಲೆಗೆ ಜಾಲಗಿರಿ ದಿಬ್ಬ. ಕುಪ್ಪೂರು ಗುಡ್ಡ ದಾಟಿದರೆ ಗಂಗಾಧರಯ್ಯ ವೃತ್ತಿ ಬದುಕು ಪೂರೈಸಿದ ಕಾಲೇಜು. ಇವುಗಳನ್ನೆಲ್ಲಾ ಅಡವು ಮಾಡಿಕೊಂಡವುಗಳ ಹಾಗೆ ಇವರ ಹಲವಾರು ಕತೆಗಳು ಮೂಡುತ್ತಾ, ಮೈದಾಳಿ ಬೆಳೆಯುತ್ತಾ ಹೋಗುತ್ತವೆ. ಇದೇ ಪಾಸಲೆಯ ಜನರ ಬದುಕಿನ ಭಾಷೆಯೂ ಇವರ ಕತೆಗಳಲ್ಲಿ ಬಳಕೆಯಾಗುತ್ತದೆ.

ಇದನ್ನು ಓದಿದ್ದೀರಾ?: ಕರ್ನಾಟಕದಲ್ಲಿ ಎಷ್ಟು ಮಾತೃಭಾಷೆಗಳಿವೆ ಗೊತ್ತೇ? ; ರಾಜ್ಯ ಒಂದು, ನುಡಿ ಹಲವು

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತತ್ವಪದಕಾರ ಚುಂಗದಹಳ್ಳಿ ಶಿವಪ್ಪ ಮತ್ತು ಶೆಟ್ಟೀಕೆರೆ ಕಾರಬ್ಬದ ಹಾಗೆಯೇ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಸ್. ಗಂಗಾಧರಯ್ಯನವರ ಹೆಸರೂ ಒಕ್ಕಬಳಕೆಯಾಗಿದೆ. ತತ್ವಪದ ರಚನೆಕಾರ ಚುಂಗದಹಳ್ಳಿ ಶಿವಪ್ಪನವರು ಈ ಪಾಸಲೆಯವರೆ.

ವೈಕಂ ಗಂಗಾಧರಯ್ಯ ಎಂತಲೇ ಸಾಹಿತ್ಯ ರಂಗದಲ್ಲಿ ಮೊದಮೊದಲು ಹೆಸರುವಾಸಿಯಾದ ಇವರ ‘ವೈಕಂ ಕತೆಗಳು’ ಅನುವಾದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದಶಕದ ಹಿಂದೆಯೇ ಬಂದಿತ್ತು. ಕನ್ನಡ ಸಾಹಿತ್ಯದಲ್ಲಿ ಕತೆಗಾರರಾಗಿ ನೆಲೆಯಾಗಿ ಗುರುತಿಸಿಕೊಂಡ ಇವರ ಇತ್ತೀಚಿನ ಕೃತಿ, ಈ ತನಕದ ಕತೆಗಳು ‘ಎರೆನೆತ್ತಿ’ ಪ್ರಕಟವಾಯಿತು. ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ ಮತ್ತು ಮಣ್ಣಿನ ಮುಚ್ಚಳ ಕಥಾ ಸಂಕಲನಗಳು ‘ಎರೆನೆತ್ತಿ’ ಒಳಗೆ ಇವೆ ಈ ತನಕದ ಕತೆಗಳಾಗಿ.

‘ಎರೆನೆತ್ತಿ’ ಗುಣವಾದ ಅಪರೂಪದ ಭೌಗೋಳಿಕ ಸನ್ನಿವೇಶವೂ ಹೌದು, ಈತನಕದ ಕಥಾ ಸಂಕಲನವೂ ಹೌದು, ನಮ್ಮ ಸುತ್ತಿನೊಳಗೆ. ಎರೆನೆತ್ತಿ, ಯರೆದಿಬ್ಬ, ಯರೆನೆಲ, ಯರೆಕೆಬ್ಬೆ ಹೀಗೆಲ್ಲಾ ಕರೆಯಲಾಗುವುದು. ಬಿತ್ತಿದ ಬೀಜ, ಬಿದ್ದ ಕಾಯಿ, ಹುಲ್ಲು ಕಾಳು ದೇಕುಲುವೆ ದೇಕಿಯಾದರೂ ಅಪರೂಪವಾಗಿ ಬೆಳೆಯುವ ಜಾಗ. ಹಾಗೆಯೇ ಕತೆಗಳೂ ನಿರೂಪವಾಗಿವೆ. ಅಪರೂಪವಾಗಿ ಒಂದು ಪಾಸಲೆಯ ಭೌಗೋಳಿಕ ಭೂಗುಣ ಮತ್ತು ಬಾಳಿಬದುಕಿದ ಪಾತ್ರಗಳನ್ನು ಎರೆನೆತ್ತಿ ಒಳಗೆ ಹಿರಿಯರಾದ ಗಂಗಾಧರಯ್ಯ ಇಸ್ರಾಂಬಾಗಿ ಬೆಳೆಸುವ ಮೂಲಕ ಕತೆಗಳ ನಿರ್ಮಾಣದಲ್ಲಿ ಕಾಣತೊಡಗಿದವರಾಗಿ ಪರಿಚಯಕ್ಕೆ ಬರತೊಡಗುವರು. ಓದುಗರಿಗೆ ಇವು ನಮ್ಮವೆ ಕತೆಗಳು, ಕಂಡ ಹಾಗೆ ಬರೆದಿದ್ದಾರಲ್ಲ ಎನಿಸುವಷ್ಟರ ಮಟ್ಟಿಗೆ, ಅವರು ಕಥನಕಾಯಕದೊಳಗೆ ನಿರೂಪಿಸಿದ್ದಾರೆ.

ವೈಕಂ ಕತೆಗಳು, ಸೀಬೆ ಸೊಗಡು, ಗುಲಾಬಿ ಗರ್ಭ, ಜಮೀಲಾ, ಚರಮಗೀತೆ, ನಾಟಕ ಎರ್ಮಾ, ಬೇಟೆಗಾರನ ಚಿತ್ರಗಳು, ಹಲವು ರೆಕ್ಕೆಯ ಹಕ್ಕಿ, ಬುನಿಯನ್ ಕತೆಗಳು ಇವುಗಳನ್ನೂ ಕನ್ನಡಕ್ಕೆ ತರುವಾಗ ಅನುವಾದಿತ ಇವರ ಕೃತಿಗಳು ಸ್ಥಳೀಯ ಭಾಷಾ ಹವಾಗುಣಕ್ಕೆ ಒಗ್ಗುವ ಹಾಗೆಯೇ ಇವೆ.

ಗಂಗಾಧರಯ್ಯ, ಉಜ್ಜಜ್ಜಿ ರಾಜಣ್ಣ
ಗಂಗಾಧರಯ್ಯ, ಉಜ್ಜಜ್ಜಿ ರಾಜಣ್ಣ

ನಾಡಿನ ಹೆಸರಾಂತ ಕತೆಗಾರ ಎಸ್. ಗಂಗಾಧರಯ್ಯ ಅವರಿಗೆ ‘ಶಾ ಬಾಲೂರಾವ್’ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿ. ನಾಡೆಲ್ಲಾ ಕನ್ನಡ ರಾಜ್ಯೋತ್ಸವ ಆಚರಿಸುವ ನವಂಬರ್ ತಿಂಗಳೂ ಒಂದು ವಿಶೇಷ ಸಂದರ್ಭ.

ಹೋರಾಟ, ಅನುವಾದ, ಕೃಷಿ, ಮಾಸ್ತರಿಕೆ.. ಹೀಗೆಲ್ಲಾ ಆಗಿ, ಏಗುತ್ತಾ ಆಗಾಗ ಸಿಕ್ಕಿ ಮಾತನಾಡುವ ಎಸ್. ಗಂಗಾಧರಯ್ಯ ಅವರ ಜೊತೆಯಲ್ಲಿ ತಡಹೊತ್ತು ಕೂತು ಮಾತಾಡುವ ಎನಿಸುವಷ್ಟರ ಮಟ್ಟಿನ ಸಲುಗೆ. ಒಮ್ಮೊಮ್ಮೆ ಊಪ್ರುಕೆ ಮಾತಾಡಿ ಅರುಗಾಗುವುದೂ ಉಂಟು ಯಪ್ಪೆ ಮಾಡಿಕೊಂಡು.

ಗೆಳೆಯರೊಂದಿಗೆ, ಹೋಗೋ ಬಾರೋ ಎನ್ನುತ್ತಲೇ ಒಂದು ಬೊಗಸೆ ನಗು ಚೆಲ್ಲಿ ಅವಸರಕ್ಕೆ ಬಸ್ಸತ್ತಿ ಕೆಲಸಕ್ಕೆ ಹೋಗುತಿದ್ದ ಮೇಷ್ಟ್ರು ಈಗ ನಿವೃತ್ತಿಯ ಇರಾಮವಾದ ಕಾಲವಾದರೂ; ಹಳ್ಳಿ ಹಾದಿ ಒಳಗಲ, ದಾರಿ ಒಬ್ಬೆಯ ಬೇಸಾಯದ ಬದುಕಿನ ಬೆನ್ನಾಡಿಯೇ ಇರುವರು.

ಕಾದಂಬರಿ ಬರೆಯಲು ಗ್ರಾಮನಕಾಶೆಗಳಲ್ಲಿ ತಿರುಗಾಡುವ ಕ್ರಿಯಾಯೋಜನೆ ಸಿದ್ದಪಡಿಸಿಕೊಳ್ಳುವ ತವಕ ತಡಕಾಟದಲ್ಲಿದ್ದಾರೆ. ಅದಕ್ಕೂ ಮುಂಚೆ ‘ಆಸ್ಟ್ರೇಲಿಯಾದ ಅವಳು’ ಇನ್ನೊಂದು ಇಂಬಾದ ಕತೆ ಬರೆಯಲೂ ಹೊಂಚಾಕುತ್ತಿದ್ದಾರೆ. ಆ ದಿನಗಳ ‘ಅವಳ’ ಜೊತೆಗಿನ ಬದುಕನ್ನು ಸಲೀಸಾಗಿ ಕನವರಿಸಿಕೊಂಡವರಂತೆ, ಒಂದು ನೆನಪಿನ ನೆಪವಾಗಿ ಕತೆ ಮುಂದುವರೆಯಬಹುದೇನೋ, ನೋಡೋಣ.

ಉಜ್ಜಜ್ಜಿ ರಾಜಣ್ಣ
+ posts

ಪತ್ರಕರ್ತ, ಲೇಖಕ, ಸಾಮಾಜಿಕ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಉಜ್ಜಜ್ಜಿ ರಾಜಣ್ಣ
ಉಜ್ಜಜ್ಜಿ ರಾಜಣ್ಣ
ಪತ್ರಕರ್ತ, ಲೇಖಕ, ಸಾಮಾಜಿಕ ಹೋರಾಟಗಾರ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂದಿನ ಲೋಕಸಭೆಗೆ ಹೋಗಲಿರುವ ಸಂಸದರಿಂದ ಜನಸಾಮಾನ್ಯರು ನಿರೀಕ್ಷಿಸುವುದೇನು?

ಜನರನ್ನು ಅದರಲ್ಲೂ ಸಾಮಾನ್ಯರನ್ನು ನಿಕೃಷ್ಟರಂತೆ ಕಾಣುವ ಅಥವಾ ಇವರೇನು ಮಾಡಿಯಾರು ಎಂಬ...

ಪ್ರಜ್ವಲ್ ಪ್ರಕರಣ | ʼನಿಷ್ಪಕ್ಷಪಾತ ತನಿಖೆ‌ ಆಗಲಿ, ನಾವೆಲ್ಲ ನಿಮ್ಮೊಂದಿಗಿದ್ದೇವೆʼ ಎಂದು ಹೇಳುವ ಅಗತ್ಯವಿದೆ

"ಯಾವುದೇ ಪೂರ್ವಗ್ರಹವಿಲ್ಲದೆ ನಿಷ್ಪಕ್ಷಪಾತ ತನಿಖೆ‌ ಆಗಲಿ... ನಾವೆಲ್ಲ ನಿಮ್ಮೊಂದಿಗೆ ಇರುತ್ತೇವೆ" ಎಂದು...

ಸಾಹಿತ್ಯ ಚಿಂತನ-ಮಂಥನ | ವೈದೇಹಿ ಸಮಗ್ರ ಸಾಹಿತ್ಯವನ್ನು ಹೊಸ ಕಣ್ಣಿನಲ್ಲಿ ನೋಡುವ ಪ್ರಯತ್ನ

ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯಲೋಕದ ಹಿರಿಯ, ಸೂಕ್ಷ್ಮ ಬರಹಗಾರರಾದ...