ಪೇಜಾವರ ಸ್ವಾಮಿಗಳು ಮಾಧ್ವರು, ಮೇಲ್ಜಾತಿಗೆ ಸೇರಿದವರು. ಅವರು ಜಾತಿ ಗಣತಿ ಏಕೆ ಬೇಕು ಎಂದು ಪ್ರಶ್ನೆ ಮಾಡುವುದಾದರೆ, ಮಾಡಲಿ. ಆದರೆ ಮೇಲ್ಜಾತಿಯವರಿಗೆ ನೀಡುತ್ತಿರುವ ಶೇ. 10 ಮೀಸಲಾತಿಯನ್ನು ಮೊದಲು ನಿರಾಕರಿಸಬೇಕಲ್ಲವೇ?
‘ಭಾರತ ಜಾತ್ಯತೀತ ರಾಷ್ಟ್ರವಾಗಿರುವಾಗ ಜಾತಿ ಗಣತಿ ಏಕೆ ಬೇಕು’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಮುಖ್ಯಸ್ಥರು, ಗುರುಪರಂಪರೆಯಲ್ಲಿ 35ನೇ ಋಷಿಗಳು, ಮಾಧ್ವ ಮತದ ಪ್ರಚಾರಕರು, ಹಿರಿಯ ಆಚಾರ್ಯರು, ಸಾಮಾಜಿಕ ಸೇವಾ ಕಳಕಳಿಯ ಮನೋಭಾವವುಳ್ಳವರು. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ದಕ್ಷಿಣ ಭಾರತದ ಏಕೈಕ ಸದಸ್ಯರು. ಜೊತೆಗೆ ಸಂಘ ಪರಿವಾರ ಮತ್ತು ಬಿಜೆಪಿಯೊಂದಿಗೆ ಗುರುತಿಸಿಕೊಂಡವರು.
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಎತ್ತಿರುವ ಈ ಪ್ರಶ್ನೆ ಹಲವರಿಗೆ ಹಲವು ರೀತಿಯಲ್ಲಿ ಕೇಳಿಸಬಹುದು. ಸರಿ-ತಪ್ಪುಗಳ ಚರ್ಚೆ ಒತ್ತಟ್ಟಿಗಿರಲಿ. ನಾವಿಲ್ಲಿ ಗಮನಿಸಬೇಕಾದ ಸೂಕ್ಷ್ಮವಾದ ವಿಚಾರವೆಂದರೆ, ಶಂಖದಿಂದ ಬಂದದ್ದು ತೀರ್ಥ ಎನ್ನುವ ಮನೋಭಾವ ಇನ್ನೂ ಈ ಸಮಾಜದಲ್ಲಿದೆ ಎಂಬುದನ್ನು.
ಆ ನಿಟ್ಟಿನಲ್ಲಿ ಪೇಜಾವರ ಸ್ವಾಮಿಗಳ ಇಂತಹ ಹೇಳಿಕೆ- ದೇಶದ ಸಂವಿಧಾನವನ್ನು ಅವಮಾನಿಸುತ್ತದೆ. ಸಾಮಾಜಿಕ ನ್ಯಾಯವನ್ನು ಅಣಕಿಸುತ್ತದೆ. ಇತರರು ಅನುಸರಿಸುವಂತೆ ಪ್ರೇರೇಪಿಸುತ್ತದೆ. ಇದು ಗೊತ್ತಿದ್ದೇ ಪೇಜಾವರ ಸ್ವಾಮಿ ಜಾತ್ಯತೀತತೆ ಮತ್ತು ಜಾತಿ ಗಣತಿ ಬಗ್ಗೆ ಮಾತನಾಡಿದ್ದಾರೆ.
ಶಿವಮೊಗ್ಗದಲ್ಲಿ ಸೋಮವಾರ ಸ್ವಾಮೀಜಿ ಮಾತನಾಡಿದ ಕೆಲವೇ ಗಂಟೆಗಳ ನಂತರ, ದೇಶದ ಸರ್ವೋಚ್ಚ ನ್ಯಾಯಾಲಯ, ‘ಜಾತ್ಯತೀತತೆ ಸಂವಿಧಾನ ರಚನೆಯ ಮೂಲ ಭಾಗವಾಗಿದೆ. ಜಾತ್ಯತೀತತೆ ಪದಕ್ಕೆ ತಿದ್ದುಪಡಿ ಮಾಡಲಾಗದ ಸ್ಥಾನಮಾನವಿದೆ. ಜಾತ್ಯತೀತತೆ ಸಂವಿಧಾನದ ತಿರುಳು’ ಎಂದು ಪುನರುಚ್ಚರಿಸಿದೆ.
ಜಾತ್ಯತೀತತೆ, ಸಮಾಜವಾದ ಪದಗಳನ್ನು ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಪೀಠಿಕೆಗೆ ಸೇರ್ಪಡೆ ಮಾಡಿದ ಕ್ರಮ ಪ್ರಶ್ನಿಸಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ಹಾಗೂ ನ್ಯಾ. ಪಿ.ವಿ. ಸಂಜಯ್ ಕುಮಾರ್ ಅವರಿದ್ದ ನ್ಯಾಯಪೀಠ, ‘ಎರಡೂ ಪದಗಳು ಭಾರತೀಯ ಸಂದರ್ಭದಲ್ಲಿ ವಿಭಿನ್ನ ಅರ್ಥ ಹೊಂದಿರಬಹುದು. ಆದರೆ, ಸಮಾಜವಾದ ಎಂದರೆ ಎಲ್ಲರಿಗೂ ನ್ಯಾಯಯುತ ಅವಕಾಶ ಸಿಗಬೇಕು ಎಂಬುದಾಗಿದ್ದು, ಸಮಾನತೆಯ ಪರಿಕಲ್ಪನೆಯಾಗಿದೆ. ಜಾತ್ಯತೀತತೆ ಪದದ ವಿಚಾರದಲ್ಲೂ ಸಂಕುಚಿತ ಮನೋಭಾವನೆ ಹೊಂದುವ ಅಗತ್ಯವಿಲ್ಲ’ ಎಂದು ಹೇಳಿದೆ.
ಜಾತ್ಯತೀತತೆ ಬಗ್ಗೆ ಸುಪ್ರೀಂ ಕೋರ್ಟ್ ಮಾಡಿರುವ ಈ ವ್ಯಾಖ್ಯಾನ, ಹಿರಿಯರು, ಜ್ಞಾನಿಗಳು, ತಿಳಿದವರು ಆದ ಪೇಜಾವರ ಸ್ವಾಮಿಗಳಿಗೆ ಗೊತ್ತಿಲ್ಲದ ವಿಷಯವಲ್ಲ. ಗೊತ್ತಿದ್ದೂ ಬಹುಜನರು ಕೇಳುತ್ತಾರೆ, ಮಾಧ್ಯಮಗಳು ಆದ್ಯತೆ ನೀಡಿ ಪ್ರಕಟಿಸುತ್ತವೆ, ಪ್ರಚಾರ ನೀಡುತ್ತವೆ, ವಿವಾದವಾಗುತ್ತದೆ, ಆಗಲಿ ಎಂದೇ ಆಡಿದಂತಿದೆ.
ಏಕೆಂದರೆ, ಜಾತಿ ಗಣತಿ ಏಕೆ ಬೇಕು ಎಂಬ ಪ್ರಶ್ನೆಯನ್ನು ಎತ್ತುವವರು ಮೂಲಭೂತವಾಗಿ ಮೀಸಲಾತಿ ವಿರೋಧಿಗಳು. ಸಣ್ಣ ಜಾತಿಗಳ ಸ್ಥಿತಿ-ಗತಿಯನ್ನು ಅರಿಯದವರು. ಅವರ ಶೈಕ್ಷಣಿಕ ಮತ್ತು ರಾಜಕೀಯ ಅವಕಾಶಗಳನ್ನು ಕಿತ್ತುಕೊಂಡವರು. ಸಮ ಸಮಾಜದ ಕನಸನ್ನು ಕೊಂದವರು.

ಹಾಗೆ ನೋಡಿದರೆ, ದೇಶದಲ್ಲಿ 2011ರ ನಂತರ ಜನ ಗಣತಿ ನಡೆದಿಲ್ಲ. 2021ಕ್ಕೆ ಆಗಬೇಕಾಗಿತ್ತು, ಆಗಲಿಲ್ಲ. ಆಗದಂತೆ ತಡೆದಿಲ್ಲ. ಆದರೆ ಮಾಡಲು ಮನಸ್ಸು ಮಾಡಿಲ್ಲ ಎನ್ನುವುದು ಇಡೀ ದೇಶಕ್ಕೆ ಗೊತ್ತಿರುವ ವಿಚಾರ. ಈ ದೇಶವನ್ನು ಕಳೆದ ಹತ್ತು ವರ್ಷಗಳಿಂದ ಆಳುತ್ತಿರುವವರು ಬಿಜೆಪಿ ನಾಯಕರಾದ ಪ್ರಧಾನಿ ಮೋದಿಯವರು. ಅಂತಹ ಬಿಜೆಪಿಯನ್ನು, ಮೋದಿಯನ್ನು ಬಹಿರಂಗವಾಗಿಯೇ ಬೆಂಬಲಿಸುವ ಪೇಜಾವರ ಸ್ವಾಮಿಗಳು, ಜಾತಿ ಗಣತಿ ಏಕೆ ಬೇಕು ಎಂದು ಪ್ರಶ್ನಿಸಿರುವುದು, ಅವರ ಮನೋಭಾವಕ್ಕೆ ಹತ್ತಿರವಾಗಿದೆ. ಒಳಗಿನ ಕೊಳಕನ್ನು ಹೊರಹಾಕಿದೆ. ಅದು, ಒಂದು ರೀತಿಯಲ್ಲಿ ಒಳ್ಳೆಯದೇ.
ಜಾತಿ ಗಣತಿ ಮತ್ತು ಮೀಸಲಾತಿ ವಿಚಾರದಲ್ಲಿ ಬಿಜೆಪಿ, ತನ್ನ ಅನುಕೂಲಕ್ಕೆ ತಕ್ಕಂತೆ ಆಟ ಆಡುತ್ತಲೇ ಬಂದಿದೆ. ಕೇಂದ್ರದ ಬಿಜೆಪಿ ಸರ್ಕಾರ, 2019ರ ಲೋಕಸಭಾ ಚುನಾವಣೆಗೂ ಮುನ್ನ ಆರ್ಥಿಕವಾಗಿ ದುರ್ಬಲ ವರ್ಗ(ಬ್ರಾಹ್ಮಣ, ಆರ್ಯ ವೈಶ್ಯ, ಮೊದಲಿಯಾರ್, ಜೈನ, ನಗರ್ತರು)ಗಳಿಗೆ(ಇಡಬ್ಲ್ಯೂಎಸ್) ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಶೇ. 10ರಷ್ಟು ಮೀಸಲಾತಿ ನೀಡುವ ಉದ್ದೇಶದಿಂದ ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದಿತ್ತು. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಚರ್ಚೆಗೂ ಆಸ್ಪದ ಕೊಡದೆ, ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿತ್ತು. ಸರ್ಕಾರದ ಈ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಕ್ರಮವನ್ನು ಎತ್ತಿ ಹಿಡಿಯಿತು.
ಬ್ರಾಹ್ಮಣರು ಹಾಗೂ ಬ್ರಾಹ್ಮಣೇತರ ಮೇಲ್ಜಾತಿಗಳಿಗೆ ನೀಡಿರುವ ಆರ್ಥಿಕತೆ ಆಧಾರಿತ ಶೇ. 10ರಷ್ಟು ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದು ಚಾತುರ್ವರ್ಣ್ಯ ವ್ಯವಸ್ಥೆಯ ಜಾರಿಗೆ ಹಾದಿ ಸುಗಮವಾದಂತೆ. ಇದೊಂದು ಬಹುದೊಡ್ಡ ಸಾಮಾಜಿಕ ವಂಚನೆ. ಸಂವಿಧಾನದ ಪರಿಚ್ಛೇದ 15(4), 16(4)ಕ್ಕೆ ಹಿನ್ನಡೆ ಎಂಬುದು ಆ ಸಂದರ್ಭದಲ್ಲಿ ಬಹುಸಂಖ್ಯಾತರ ನಿಲುವಾಗಿತ್ತು.
ಇದನ್ನು ಓದಿದ್ದೀರಾ?: ಸಚಿವ ಪ್ರಲ್ಹಾದ್ ಜೋಶಿ ಸಹೋದರನ ವಂಚನೆ ಪ್ರಕರಣಗಳೂ, ಸಂಬಂಧವಿಲ್ಲದ ಸಬೂಬುಗಳೂ
ಅದಕ್ಕೆ ಪೂರಕವಾಗಿ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್, ‘ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ಕಲ್ಪಿಸುವ ತೀರ್ಮಾನವನ್ನು ಮೂವರು ನ್ಯಾಯಮೂರ್ತಿಗಳು ಎತ್ತಿ ಹಿಡಿದಿದ್ದರೆ, ಇಬ್ಬರು ತಿರಸ್ಕರಿಸಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವವರು, ಶೋಷಣೆ ಅನುಭವಿಸಿದವರಿಗೆ ಮಾತ್ರ ಮೀಸಲಾತಿ ಒದಗಿಸಲು ನಮ್ಮ ಸಂವಿಧಾನದಲ್ಲಿ ಅವಕಾಶವಿದೆ. ಆರ್ಥಿಕ ಮಾನದಂಡದ ಆಧಾರದಲ್ಲಿ ಮೀಸಲಾತಿ ಕಲ್ಪಿಸಲು ಅವಕಾಶ ಇರಲಿಲ್ಲ. ಅದನ್ನು ತಿದ್ದುಪಡಿ ಮಾಡಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವುದು ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು. ಹಂಚಿಕೆ ಮತ್ತು ಮೀಸಲಾತಿ ಎರಡೂ ಒಂದೇ ಅಲ್ಲ’ ಎಂದದ್ದು, ಭಾರತದ ಬಹುತ್ವವನ್ನು ಎತ್ತಿ ಹಿಡಿದಿತ್ತು.
ಈಗ, ನಮ್ಮ ಪ್ರಶ್ನೆ ಏನೆಂದರೆ, ನಮ್ಮ ದೇಶದಲ್ಲಿ ನಾಗರಿಕರನ್ನು, ನಾಯಕರನ್ನು ಮತ್ತು ಮಠಾಧೀಶರನ್ನು ಗುರುತಿಸುವುದು ಅವರವರ ಜಾತಿಯ ಮುಖಾಂತರ. ಹಾಗಿರುವಾಗ ಜಾತಿ ಜನಗಣತಿ ನಡೆಸುವುದು ಬೇಡವೇ?
ಪೇಜಾವರ ಸ್ವಾಮಿಗಳು ಮಾಧ್ವರು, ಮೇಲ್ಜಾತಿಗೆ ಸೇರಿದವರು. ಅವರು ಜಾತಿ ಗಣತಿ ಏಕೆ ಬೇಕು ಎಂದು ಪ್ರಶ್ನೆ ಮಾಡುವುದಾದರೆ, ಮಾಡಲಿ. ಆದರೆ ಮೇಲ್ಜಾತಿಯವರಿಗೆ ನೀಡುತ್ತಿರುವ ಶೇ. 10 ಮೀಸಲಾತಿಯನ್ನು ಮೊದಲು ನಿರಾಕರಿಸಬೇಕಲ್ಲವೇ?

ಭಾರತದಲ್ಲಿ ಹತ್ತಾರು ಧರ್ಮ, ಸಾವಿರಾರು ಜಾತಿಗಳಿವೆ. ಕೆಲವು ಜಾತಿಯ ಜನ ಸಬಲರಾಗಿದ್ದರೆ, ಹಲವು ಜಾತಿಯ ಜನ ದುರ್ಬಲರಾಗಿದ್ದಾರೆ. ಅಂಬೇಡ್ಕರ್ ರಚಿತ ಸಂವಿಧಾನದ ಫಲವಾಗಿ ಸ್ವತಂತ್ರ ಭಾರತದಲ್ಲಿ ಮೀಸಲಾತಿಯ ಹೊರತಾಗಿಯೂ ಕೆಲವೇ ಕೆಲವು ಸಮುದಾಯಗಳು ಹೆಚ್ಚಿನ ಅವಕಾಶಗಳನ್ನು ಗಿಟ್ಟಿಸಿಕೊಂಡಿವೆ. ಪರಿಣಾಮವಾಗಿ ಅಸಮಾನತೆ, ಅಸ್ಪೃಶ್ಯತೆ, ತಾರತಮ್ಯ ಇವತ್ತಿಗೂ ಇದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಎಲ್ಲ ಸಮುದಾಯಗಳು ಅಭಿವೃದ್ಧಿ ಹೊಂದಲು, ದನಿ ಎತ್ತಿ ಮಾತನಾಡಲು, ಸಮ ಸಮಾಜ ನಿರ್ಮಾಣವಾಗಲು ಜಾತಿಗಣತಿ ಅಗತ್ಯವಿದೆಯಲ್ಲವೇ?
ಜಾತಿಶ್ರೇಷ್ಠತೆ ಪಾಲಿಸುವ, ಪೋಷಿಸುವ ಪೇಜಾವರ ಸ್ವಾಮಿಯವರು, ಈ ಪ್ರಶ್ನೆಗಳಿಗೂ ಉತ್ತರಿಸಲಿ.

ಲೇಖಕ, ಪತ್ರಕರ್ತ