ಈ ದಿನ ವಿಶೇಷ | ಹರಿಯಾಣ ಫಲಿತಾಂಶದಿಂದ ರಾಜ್ಯ ಕಾಂಗ್ರೆಸ್ ಪಾಠ ಕಲಿಯುತ್ತದೆಯೇ?

Date:

Advertisements
ಕಾಂಗ್ರೆಸ್ಸಿಗರು ಪಾಠ ಕಲಿಯುವ ಪೈಕಿಯಲ್ಲ ಎನ್ನುವುದು ಸರಣಿ ಸೋಲುಗಳಿಂದ ಸಾಬೀತಾಗುತ್ತಲೇ ಸಾಗಿದೆ. ಕರ್ನಾಟಕದಲ್ಲೂ ಅದೇ ಕಾದಾಟ, ಕಾಲೆಳೆದಾಟ, ಉಡಾಫೆ, ಉದಾಸೀನ ಮುಂದುವರೆದರೆ- 2019ರಲ್ಲಾಗಿದ್ದು ಮತ್ತೊಮ್ಮೆ ಮರುಕಳಿಸಬಹುದು. ಹರಿಯಾಣದಲ್ಲಾಗಿದ್ದು ಕರ್ನಾಟಕದಲ್ಲೂ ಸಂಭವಿಸಬಹುದು...

ಹರಿಯಾಣದಲ್ಲಿ ಚುನಾವಣೆಗೆ ಮುಂಚೆಯೇ ಗೆದ್ದು ಬೀಗುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಫಲಿತಾಂಶ ಭಾರಿ ನಿರಾಸೆ ಮೂಡಿಸಿದೆ. ಹಿನ್ನಡೆಗೆ, ಮುಖಭಂಗಕ್ಕೆ ಕಾರಣಗಳನ್ನು ಹೆಕ್ಕಿ ತೆಗೆದ ಸುದ್ದಿ ಮಾಧ್ಯಮಗಳು ಜನರ ಮುಂದಿಟ್ಟಿವೆ. ದೇಶದ ಜನ, ಇದರಿಂದ ಕಾಂಗ್ರೆಸ್ ಪಕ್ಷ ಪಾಠ ಕಲಿತಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.

ಇದು ಇಂದು ಕೇಳಿಬರುತ್ತಿರುವ ಪ್ರಶ್ನೆಯಲ್ಲ. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ— ಮೂರು ರಾಜ್ಯಗಳನ್ನು ಕಳೆದುಕೊಂಡಾಗಲೂ ದೇಶದ ಜನ ಕಾಂಗ್ರೆಸ್ ಪಕ್ಷಕ್ಕೆ ಇದೇ ರೀತಿ ಪ್ರಶ್ನೆ ಕೇಳಿದ್ದರು.

ಗುಜರಾತಿನಲ್ಲಿ ಹಾರ್ದಿಕ್ ಪಟೇಲ್, ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾರನ್ನು ಸೆಳೆದುಕೊಂಡ ಬಿಜೆಪಿ, ಆಡಳಿತವಿರೋಧಿ ಅಲೆಯನ್ನೂ ಮರೆಸಿ, ಗೆಲುವು ಸಾಧಿಸಿತ್ತು. ಹಾಗೆಯೇ ರಾಜಸ್ತಾನದಲ್ಲಿ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ವಿರಸವನ್ನೇ ವಿಪರೀತಕ್ಕೊಯ್ದು ಗೆಲುವು ಪಡೆಯಿತು. ಈಗ ಹರಿಯಾಣದಲ್ಲಿಯೂ ಹತ್ತು ವರ್ಷಗಳ ಆಡಳಿತವಿರೋಧಿ ಅಲೆಯನ್ನು, ರೈತಹೋರಾಟದ ಕಾವನ್ನು, ನಿರುದ್ಯೋಗದ ಬಿಸಿಯನ್ನು, ಜಾಟರ ಪ್ರಾಬಲ್ಯವನ್ನು ಕೂಡ ಹಿನ್ನೆಲೆಗೆ ಸರಿಸಿ ಬಿಜೆಪಿ ಗೆದ್ದಿದೆ. ಅದಕ್ಕೆ ಭೂಪಿಂದರ್ ಹೂಡಾ ಮತ್ತು ಕುಮಾರಿ ಸೆಲ್ಜಾ ನಡುವಿನ ವಿರಸವನ್ನು ನಾಜೂಕಾಗಿ ಬಳಸಿಕೊಂಡಿದೆ.

Advertisements

ವಿಪರ್ಯಾಸಕರ ಸಂಗತಿ ಎಂದರೆ, ಸೋಲಿನ ಮೇಲೆ ಸೋಲು ಕಂಡರೂ, ಕಾಂಗ್ರೆಸ್ ಪಕ್ಷ ಪಾಠ ಕಲಿತ ಕುರುಹು ಕಾಣುತ್ತಿಲ್ಲ.

ಹರಿಯಾಣ ಫಲಿತಾಂಶ ಹೊರಬೀಳುತ್ತಿದ್ದಂತೆ, ಬಿಜೆಪಿ ಗೆಲ್ಲುತ್ತಿದ್ದಂತೆ ಐಟಿ ಸೆಲ್ ಜಾಗೃತವಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಮತ್ತೊಮ್ಮೆ ಪಪ್ಪು ಮಾಡಲಾಗಿದೆ. ಅದನ್ನು ಟ್ರೆಂಡಿಂಗ್‌ನಲ್ಲಿರುವಂತೆ ನೋಡಿಕೊಳ್ಳಲಾಗಿದೆ. ಇಷ್ಟಾದರೂ, ಕಾಂಗ್ರೆಸ್ ಪಕ್ಷದ ನಾಯಕರು ಈಗಲೂ ಇವಿಎಂ ಮೇಲೆ ದೂರುವುದನ್ನು ಬಿಡುತ್ತಿಲ್ಲ.

ಕಾಂಗ್ರೆಸ್ ಎನ್ನುವುದು ಒಂದು ಜಡತ್ವದ ಪಕ್ಷ. ಸೋಮಾರಿಗಳ ಸಂತೆ. ಅಲ್ಲಿ ನೂರಾರು ವರ್ಷಗಳ ಪಳೆಯುಳಿಕೆಯಂತಹ ನಾಯಕರು ಬೀಡುಬಿಟ್ಟಿದ್ದಾರೆ. ಕುಟುಂಬ ರಾಜಕಾರಣವನ್ನು ಮುಂದುವರೆಸಿದ್ದಾರೆ. ಅದೇ ಹಳಸಲು ಕಾರ್ಯತಂತ್ರಗಳನ್ನು ಈಗಲೂ ಚಾಲ್ತಿಯಲ್ಲಿಟ್ಟಿದ್ದಾರೆ. ರಾಹುಲ್ ಗಾಂಧಿ ಜನರನ್ನು ಮುಟ್ಟಿ ಮಾತನಾಡಿಸುತ್ತಿದ್ದರೆ, ಪ್ರೀತಿ ಗಳಿಸುತ್ತಿದ್ದರೆ- ಕಾಂಗ್ರೆಸ್ ನಾಯಕರು ಆ ಫೋಟೋ ಹಂಚಿಕೊಂಡು ಖುಷಿಪಡುತ್ತಿದ್ದಾರೆಯೇ ಹೊರತು, ಜನನಾಯಕರಾಗುತ್ತಿಲ್ಲ.    

ಬೇರೆ ಪಕ್ಷಗಳ ಆಡಳಿತದಿಂದ ಬೇಸತ್ತ ಜನ ಕಾಂಗ್ರೆಸ್‌ಗೆ ಮತ ನೀಡಿ ಗೆಲ್ಲಿಸಿದರಷ್ಟೇ ಕುರ್ಚಿಯಲ್ಲಿ ಕೂರುತ್ತಾರೆ. ಅನಾಯಾಸವಾಗಿ ಸಿಕ್ಕ ಅಧಿಕಾರ ಅನುಭವಿಸುತ್ತಾರೆ. ಆದರೆ, ಹೊಸ ಚುನಾವಣಾ ತಂತ್ರಗಳ ಕುರಿತು ಆಲೋಚಿಸುವುದಿಲ್ಲ, ಹೊಸಗಾಲಕ್ಕೆ ಬೇಕಾದ ರಾಜಕೀಯ ನಡೆಗಳನ್ನು, ನಿರೂಪಣೆಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಯುವಜನರನ್ನು ತಲುಪುವ ಬಗೆ ಹೇಗೆ ಎಂಬುದನ್ನು ಯೋಚಿಸುವುದಿಲ್ಲ.

2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಪ್ರಜ್ಞಾವಂತ ಮತದಾರರು ಫ್ಯಾಸಿಸ್ಟ್‌ ಶಕ್ತಿಗಳನ್ನು ಸೋಲಿಸಬೇಕೆಂಬ ದೃಢ ನಿರ್ಧಾರವನ್ನು ತಳೆದರು. ಅದರ ಫಲವಾಗಿ ಕಾಂಗ್ರೆಸ್ ಬಹುಮತ ಗಳಿಸಿತೇ ಹೊರತು, ಕಾಂಗ್ರೆಸ್ಸಿಗರ ಸ್ವಂತಶಕ್ತಿಯಿಂದಲ್ಲ. ವಿಪರ್ಯಾಸಕರ ಸಂಗತಿ ಎಂದರೆ, ಚುನಾವಣಾ ಪ್ರಕ್ರಿಯೆ ಆರಂಭವಾದ ಗಳಿಗೆಯಿಂದಲೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಕುರ್ಚಿಗಾಗಿ ಹಗ್ಗ ಜಗ್ಗಾಟವೂ ಶುರುವಾಯಿತು. ಬಹುಮತ ಗಳಿಸಿ ಅಧಿಕಾರಕ್ಕೇರುವ ಸಮಯದಲ್ಲಿ ಅದು ತಾರಕಕ್ಕೇರಿತು. ಹೈಕಮಾಂಡ್ ಮಧ್ಯೆ ಪ್ರವೇಶಿಸಿ ಸಂಧಾನವೇರ್ಪಟ್ಟಾಗ ತಣ್ಣಗಾಯಿತು.

ಇದನ್ನು ಓದಿದ್ದೀರಾ?: ಹರಿಯಾಣ ಫಲಿತಾಂಶ | ಕೊಟ್ಟ ಕುದುರೆ ಏರದ ಕಾಂಗ್ರೆಸ್

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಇಲ್ಲಿಗೆ ಒಂದೂವರೆ ವರ್ಷವಾಯಿತು. ರಾಜಕಾರಣದಲ್ಲಿ ನಲವತ್ತು ವರ್ಷಗಳ ಅನುಭವವಿರುವ ಸಿದ್ದರಾಮಯ್ಯನವರಿಗೆ ಇದು ಮುಖ್ಯಮಂತ್ರಿಗಳಾಗಿ ಎರಡನೇ ಅವಧಿ. ವಿರೋಧಿಗಳನ್ನು ಹೇಗೆ ಹಣಿಯಬೇಕು, ಸ್ವಪಕ್ಷದವರ ಅಸಹನೆಯನ್ನು ಹೇಗೆ ಶಮನಗೊಳಿಸಬೇಕು, ಆಡಳಿತವನ್ನು ಹೇಗೆ ನಡೆಸಬೇಕು ಎಂಬುದನ್ನು ಅನುಭವದಿಂದ ಅರಿತವರು. ದಾಖಲೆ ಬಜೆಟ್ ಮಂಡಿಸಿ ದಾಖಲೆ ಬರೆದವರು.

ಇಂತಹ ಹಿರಿಯ ಅನುಭವಿ ರಾಜಕಾರಣಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುತ್ತಿದ್ದಂತೆ ಭಟ್ಟಂಗಿಗಳ ಭದ್ರಕೋಟೆ ಕಟ್ಟಿಕೊಂಡರು. ಮುಖ್ಯಮಂತ್ರಿ ಕಚೇರಿಯಲ್ಲಿ ವಿಷಭಟರು ಸುಳಿದಾಡತೊಡಗಿದರು. ಬಂಡಾಯವೆದ್ದ, ಧ್ವನಿ ಎತ್ತರಿಸಿದ ಪಕ್ಷದ ಕೆಲವರಿಗೆ ಸ್ಥಾನಮಾನ ಕಲ್ಪಿಸಿ ಸುಮ್ಮನಾಗಿಸಿದರು. ಆದರೆ ಸಚಿವರು ಕೆಲಸ ಮಾಡುತ್ತಿದ್ದಾರೆಯೇ, ಜನರ ಬಳಿಗೆ ಹೋಗಿ ಸಹನೆಯಿಂದ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆಯೇ, ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆಯೇ ಎಂಬುದನ್ನು ಕೇಳದಾದರು.

ಇದು ಕಾಂಗ್ರೆಸ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಸಚಿವರು ಮತ್ತು ಶಾಸಕರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿತು. ಅವರಿಗೆ ಗೊತ್ತಿರುವ ಮತ್ತು ಪರಂಪರಾಗತವಾಗಿ ಮಾಡಿಕೊಂಡುಬಂದಿರುವ ವರ್ಗಾವಣೆ ದಂಧೆಯಲ್ಲಿ ನಿರತರಾದರು. ಹಣ ಕೊಟ್ಟು ಆಯಕಟ್ಟಿನ ಜಾಗಕ್ಕೆ ಬಂದ ಅಧಿಕಾರಿಗಳು ಅಕ್ಷರಶಃ ಜನಪೀಡಕರಾದರು. ಸಚಿವರು, ಶಾಸಕರು ಸರ್ಕಾರಿ ಸಮಾರಂಭಗಳಲ್ಲಿ ಮೆರೆಯತೊಡಗಿದರು. ಜನ ಬಿಜೆಪಿ ಬಿಟ್ಟು ನಮ್ಮನ್ನೇಕೆ ಗೆಲ್ಲಿಸಿದ್ದಾರೆ ಎಂಬುದನ್ನೇ ಮರೆತು ಕೂತರು.

ಇವೆಲ್ಲ ಹಾಳಾಗಿ ಹೋಗಲಿ ಎಂದರೆ, ಜಾತಿಗೊಂದು ಉಪಮುಖ್ಯಮಂತ್ರಿ ಮಾಡಿ ಎಂದು ಒಂದೊಂದು ದಿಕ್ಕಿನಿಂದ ಒಬ್ಬೊಬ್ಬ ಸಚಿವರು ಚಿಲ್ಲರೆಗಳಂತೆ ಚೀರತೊಡಗಿದರು. ಒಂದು ಸಲ ಕೆ.ಎನ್. ರಾಜಣ್ಣ ದನಿ ಎತ್ತಿದರೆ, ಮತ್ತೊಂದು ಸಲ ಸತೀಶ್ ಜಾರಕಿಹೊಳಿ ಬೆಳಗಾವಿಯಿಂದ ಬೊಬ್ಬೆ ಹಾಕುತ್ತಿದ್ದರು. ಇತ್ತ ಡಾ. ಜಿ. ಪರಮೇಶ್ವರ್ ಕೂಗು ಎಬ್ಬಿಸಿದರೆ, ಅತ್ತ ಎಂ.ಬಿ. ಪಾಟೀಲ್ ಗುಟುರು ಹಾಕುತ್ತಿದ್ದರು. ಇದಕ್ಕೆ ಶಕ್ತ್ಯಾನುಸಾರ ಡಾ. ಮಹದೇವಪ್ಪ, ಜಮೀರ್ ಅಹಮದ್ ದನಿಗೂಡಿಸತೊಡಗಿದರು. ವರ್ಷದುದ್ದಕ್ಕೂ ಜೀವಂತವಾಗಿಟ್ಟರು.  

ಜಾತಿಗೊಂದು ಉಪಮುಖ್ಯಮಂತ್ರಿ ಹುದ್ದೆ ಎನ್ನುವುದು ಬೇಡದ ವಿಚಾರ. ಪಕ್ಷವೂ ಹೇಳಿಲ್ಲ, ಜನರಿಗೂ ಬೇಕಾಗಿಲ್ಲ. ಆದರೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಕುರ್ಚಿಯತ್ತ ಕಣ್ಣು ಹಾಕಬಾರದೆಂದು ಜಾತಿಗೊಂದು ಉಪಮುಖ್ಯಮಂತ್ರಿ ಹುದ್ದೆಯನ್ನು ಗುರಾಣಿಯಂತೆ ಬಳಸಿದರು. ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಂತುಷ್ಟಗೊಳಿಸಲು ಹವಣಿಸಿದರು.  

ಮುತ್ಸದ್ದಿ ಸಿದ್ದರಾಮಯ್ಯನವರಾದರೂ ಇದು ಕೆಟ್ಟ ರಾಜಕಾರಣ, ನಿಲ್ಲಿಸಿ ಎಂದು ತಮ್ಮ ಸಚಿವರಿಗೆ ಖಡಕ್ಕಾಗಿ ಹೇಳಲಿಲ್ಲ. ಇದು ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರಿತು. ಮೊದಲೇ ಗ್ಯಾರಂಟಿಯಿಂದ ಕುಂಠಿತಗೊಂಡಿದ್ದ ಅಭಿವೃದ್ಧಿ ಹಳ್ಳ ಹಿಡಿಯಿತು. ಹಣ ಹೊಂದಿಸಲು ಅಬಕಾರಿ, ಕಂದಾಯ ಇಲಾಖೆಗಳ ಮೇಲೆ ಹೆಚ್ಚಿನ ಒತ್ತಡ ಹೇರಲಾಯಿತು.

ಇದರ ನಡುವೆ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಮತ್ತು ಮುಡಾ ಹಗರಣಗಳು ಎದ್ದು ಕುಣಿಯತೊಡಗಿದವು. ಒಂದರಲ್ಲಿ ಸಚಿವರು ರಾಜೀನಾಮೆ ಕೊಟ್ಟರೆ, ಮತ್ತೊಂದರಲ್ಲಿ ಮುಖ್ಯಮಂತ್ರಿಯೇ ಆರೋಪಿಯಾದರು. ಅವರ ಮೇಲೆ ಎಫ್ಐಆರ್ ಕೂಡ ದಾಖಲಾಯಿತು. ಇದು ಸತ್ತಂತಿದ್ದ ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್‌ಗೆ ಕಾಂಗ್ರೆಸ್ಸಿಗರೇ ಕೈ ಹಿಡಿದು ಎತ್ತಿ ನಿಲ್ಲಿಸಿದಂತಾಯಿತು.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳು ನೇರವಾಗಿ ಭಾಗಿಯಾಗಿಲ್ಲದಿದ್ದರೂ, ಅದನ್ನು ನಿರ್ವಹಿಸಿದ ರೀತಿ ಸರಿ ಇರಲಿಲ್ಲ ಎಂಬುದನ್ನು ಜನಸಾಮಾನ್ಯರೇ ಮಾತನಾಡಿಕೊಳ್ಳತೊಡಗಿದರು. ಸಿದ್ದರಾಮಯ್ಯನವರ ಮೇಲೆ ಬಂದ ಆರೋಪವನ್ನು ಅಲ್ಲಗಳೆಯಲು, ಅಪಾರ ಅನುಭವ, ಶ್ರಮ, ಸಮಯವನ್ನು ವ್ಯಯಿಸಬೇಕಾಯಿತು. ಸಾಹಿತಿ, ಕಲಾವಿದರು, ಚಿಂತಕರು, ಹೋರಾಟಗಾರರ ಅಕ್ಷೋಹಿಣಿ ಸೈನ್ಯವನ್ನೇ ಬಳಸಬೇಕಾಯಿತು.

ಆರ್‍ಎಸ್ಎಸ್ ಮತ್ತು ಬಿಜೆಪಿಯ ಅಜೆಂಡಾ ಏನು ಎನ್ನುವುದು ಸಿದ್ದರಾಮಯ್ಯನವರಿಗೆ ತಿಳಿಯದ ವಿಚಾರವಲ್ಲ. ಶಾಸಕರನ್ನು ಖರೀದಿಸಿ ಸರ್ಕಾರಗಳನ್ನು ಉರುಳಿಸುವುದು ಗೊತ್ತಿಲ್ಲದ ಸಂಗತಿಯಲ್ಲ. ಐಟಿ, ಇಡಿ, ಸಿಬಿಐ, ರಾಜ್ಯಪಾಲರನ್ನು ಬಳಸಿ ವ್ಯಕ್ತಿತ್ವಕ್ಕೆ ಮಸಿ ಬಳಿದು ವರ್ಚಸ್ಸಿಗೆ ಕಳಂಕ ತರುವುದು ತಿಳಿಯದ್ದೇನಲ್ಲ.

ಆದರೂ ಸಿದ್ದರಾಮಯ್ಯನವರು ಮೈ ಮರೆತರು. ಉಡಾಫೆ ನಮ್ಮನೆ ದೇವರು ಎಂದರು. ಈಗ ʼಸಿಎಂ ಬದಲಾವಣೆʼಯ ಗುಲ್ಲೆದ್ದಿದೆ. ಕಾಂಗ್ರೆಸ್ ಪಕ್ಷದೊಳಗೆ ಸಂಚಲನ ಸೃಷ್ಟಿಸಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಯುವುದಿಲ್ಲ, ಅದೆಲ್ಲ ಊಹಾಪೋಹ ಎಂದರೂ, ಅದನ್ನೇ ಹೈಕಮಾಂಡ್ ಕೂಡ ಪುನರುಚ್ಚರಿಸಿದರೂ, ಅದರ ಸುತ್ತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಜನರಿಗೆ ಬೇರೆಯದೇ ಸಂದೇಶವನ್ನು ರವಾನಿಸುತ್ತಿವೆ.

ಏತನ್ಮಧ್ಯೆ, ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿ, ಕೆಪಿಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಕಂಡು, ದಲಿತ ಮುಖ್ಯಮಂತ್ರಿಯ ಕಾರ್ಡ್ ಹೊಡೆದು ಬಂದಿದ್ದಾರೆ. ಆ ತಕ್ಷಣವೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವ ಡಾ. ಮಹದೇವಪ್ಪನವರನ್ನು ಖುದ್ದು ಭೇಟಿ ಮಾಡಿ, ದೆಹಲಿ ವಿದ್ಯಮಾನಗಳ ಕುರಿತು ಚರ್ಚಿಸಿದ್ದಾರೆ. ಈ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ್ ಮನೆಗೆ ಧಾವಿಸಿದ್ದಾರೆ. ಎಂ.ಬಿ.ಪಾಟೀಲ್ ಮನೆಗೆ ಡಾ. ಜಿ. ಪರಮೇಶ್ವರ್ ಭೇಟಿ ಕೊಟ್ಟಿದ್ದಾರೆ. ಮಾಜಿ ಸಂಸದ ಡಿ.ಕೆ. ಸುರೇಶ್, ಸತೀಶ್ ಜಾರಕಿಹೊಳಿಯವರನ್ನು ಭೇಟಿ ಮಾಡಿ ಮಾತುಕತೆಯಾಡಿದ್ದಾರೆ.

dk cm

ಈ ರಾಜಕೀಯ ವಿದ್ಯಮಾನಗಳನ್ನು ಗೋದಿ ಮೀಡಿಯಾದ ಕಲ್ಪಿತ ಸುದ್ದಿ ಎಂದುಕೊಂಡರೂ, ಕಾಂಗ್ರೆಸ್ಸಿಗರು ಎಚ್ಚೆತ್ತುಕೊಳ್ಳದಿದ್ದರೆ, ನಿಜಸಂಗತಿಯನ್ನು ಜನರಿಗೆ ತಿಳಿಸದೆ ಹೋದರೆ, ಅದು ಕಾಂಗ್ರೆಸ್ಸಿನ ವೈಫಲ್ಯವೆಂದೇ ದಾಖಲಾಗುತ್ತದೆ.   

ಕುರ್ಚಿಗಾಗಿ ನಾಯಕರ ಕಾಲೆಳೆದಾಟ, ಉದಾಸೀನ, ಜಡತ್ವ ಎನ್ನುವುದು ಕಾಂಗ್ರೆಸ್ಸಿನ ಹಳೇ ರೋಗ. ಇದು ಯಾವ ಮುಖ್ಯಮಂತ್ರಿಗಳನ್ನೂ ಬಿಟ್ಟಿಲ್ಲ. ಹೊಸದೂ ಅಲ್ಲ. ಈ ಹಿಂದೆ ಮಧ್ಯಪ್ರದೇಶ, ರಾಜಸ್ತಾನದಲ್ಲಿ ನಾಯಕರ ನಡುವಿನ ಕಲಹದಿಂದಾಗಿಯೇ ಆ ರಾಜ್ಯಗಳನ್ನು ಕಾಂಗ್ರೆಸ್ ಕಳೆದುಕೊಂಡಿತ್ತು. ಕಳೆದುಕೊಂಡಾಗ ಕಾಂಗ್ರೆಸ್ ಪಾಠ ಕಲಿಯಬೇಕಾಗಿತ್ತು. ಪಾಠ ಕಲಿಯದ್ದರಿಂದ ಗೆಲ್ಲುವ ಹರಿಯಾಣ ಕೂಡ ಸುಲಭವಾಗಿ ಬಿಜೆಪಿ ಬಾಯಿಗೆ ಬಿತ್ತು.

ಕಾಂಗ್ರೆಸ್ಸಿಗರು ಪಾಠ ಕಲಿಯುವ ಪೈಕಿಯಲ್ಲ ಎನ್ನುವುದು ಸರಣಿ ಸೋಲುಗಳಿಂದ ಸಾಬೀತಾಗುತ್ತಲೇ ಸಾಗಿದೆ. ಕರ್ನಾಟಕದಲ್ಲೂ ಅದೇ ಕಾದಾಟ, ಕಾಲೆಳೆದಾಟ, ಉಡಾಫೆ, ಉದಾಸೀನ ಮುಂದುವರೆದರೆ- 2019ರಲ್ಲಾಗಿದ್ದು ಮತ್ತೊಮ್ಮೆ ಮರುಕಳಿಸುತ್ತದೆ. ಹರಿಯಾಣದಲ್ಲಾಗಿದ್ದು ಕರ್ನಾಟಕದಲ್ಲೂ ಸಂಭವಿಸುತ್ತದೆ. ಅದು, ಬಿಜೆಪಿ ಬೇಡವೆಂದು ಕಾಂಗ್ರೆಸ್ಸನ್ನು ಆಯ್ಕೆ ಮಾಡಿಕೊಂಡ ರಾಜ್ಯದ ಜನತೆಗೆ ಎಸಗಿದ ಮಹಾ ದ್ರೋಹವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ.  

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ಚಳ್ಳಕೆರೆ ನಗರದಲ್ಲಿ ರಸ್ತೆ ಗುಂಡಿಗಳ ಪೂಜೆ; ಕರ್ನಾಟಕ ರಾಷ್ಟ್ರ ಸಮಿತಿಯಿಂದ ವಿನೂತನ ಪ್ರತಿಭಟನೆ

ಚಳ್ಳಕೆರೆ ನಗರದ ಬಹುತೇಕ ವಾರ್ಡುಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ, ಅಲ್ಲದೆ ತಾಲೂಕಿನ...

ವಿಧಾನಸಭೆಯ ಮುಂಗಾರು ಅಧಿವೇಶನ ಮುಕ್ತಾಯ: ಒಟ್ಟು 39 ವಿಧೇಯಕ ಅಂಗೀಕಾರ

ಕಳೆದ ಆಗಸ್ಟ್ 11ರಿಂದ ಆರಂಭಗೊಂಡಿದ್ದ 16ನೇ ವಿಧಾನಸಭೆಯ ಮುಂಗಾರು ಅಧಿವೇಶನವು ಇಂದು(ಆ.22)...

ಪ್ರಧಾನಿ, ಮುಖ್ಯಮಂತ್ರಿ, ಸಚಿವರನ್ನು ವಜಾ ಮಾಡುವ ಮಸೂದೆ: ಪ್ರಜಾಪ್ರಭುತ್ವದ ಮೇಲಿನ ದಾಳಿಯೇ?

ಪದಚ್ಯುತಿ ಮಸೂದೆಯು ಭ್ರಷ್ಟಾಚಾರ ನಿಗ್ರಹದ ನೆಪದಲ್ಲಿ ರಾಜಕೀಯ ಪಿತೂರಿಯನ್ನು ಹುಟ್ಟುಹಾಕುತ್ತದೆ. ಬಿಜೆಪಿ...

Download Eedina App Android / iOS

X