ವ್ಯಕ್ತಿ ವಿಶೇಷ | ಬಾಂಗ್ಲಾದ ಬಡವರ ಬ್ಯಾಂಕರ್ ಯೂನುಸ್, ದಿಕ್ಕೆಟ್ಟ ದೇಶಕ್ಕೂ ದಿಕ್ಕಾಗುವರೇ?

Date:

Advertisements
ಬಾಂಗ್ಲಾದೇಶ ರಾಜಕೀಯ ಅಸ್ಥಿರತೆಗೆ ಸಿಕ್ಕು ಸೂತ್ರವಿಲ್ಲದ ಗಾಳಿಪಟದಂತಾಗಿದೆ. ಆರ್ಥಿಕವಾಗಿ ದಿವಾಳಿ ಎದ್ದಿದೆ. ಸಾಮಾಜಿಕ ಬದುಕು ಅಸ್ತವ್ಯಸ್ತವಾಗಿದೆ. ಜನಾಂಗೀಯ ಕದನ, ವಲಸೆ, ಬಲಿಷ್ಠ ರಾಷ್ಟ್ರಗಳ ಹಿಡಿತ- ಎಲ್ಲವನ್ನೂ ಒಂದು ಸೂತ್ರಕ್ಕೆ ತರುವ ಜನನಾಯಕನ ಕೊರತೆ ಎದ್ದು ಕಾಣುತ್ತಿದೆ. ಮೊಹಮ್ಮದ್ ಯೂನುಸ್ ಸವಾಲಿನಂತೆ ಸ್ವೀಕರಿಸಿ, ದೇಶದ ದಿಕ್ಕು ಬದಲಿಸಬಲ್ಲರೇ?

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಗಲಭೆ, ದೊಂಬಿ, ಲೂಟಿಯ ರೂಪ ಪಡೆಯುತ್ತಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ. ಪ್ರತಿಭಟನಾಕಾರರ ಸಿಟ್ಟು, ಆಕ್ರೋಶ ಇದ್ದದ್ದು ಪ್ರಧಾನಿ ಶೇಖ್ ಹಸೀನಾರ ಮೇಲೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದ ನಂತರವೂ ತಣ್ಣಗಾಗಿಲ್ಲ.

ಕ್ಷಿಪ್ರ ಬೆಳವಣಿಗೆಗಳ ಬೆನ್ನಲ್ಲೇ, ಸೇನಾ ಮುಖ್ಯಸ್ಥರು ಮಧ್ಯಂತರ ಸರ್ಕಾರ ರಚಿಸಿದ್ದಾರೆ. ಈ ಸರ್ಕಾರವನ್ನು ಮೊಹಮ್ಮದ್ ಯೂನುಸ್ ಅವರ ಮಾರ್ಗದರ್ಶನದಂತೆ ನಡೆಸಬೇಕು. ಅವರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದು ವಿದ್ಯಾರ್ಥಿಗಳ ನಾಯಕ ನಹೀದ್ ಇಸ್ಲಾಂ ಒತ್ತಾಯಿಸಿದ್ದಾರೆ. ಮೊದಲು ನಿರಾಕರಿಸಿದ್ದ ಯೂನುಸ್, ನಂತರ ಮುಖ್ಯಸ್ಥರಾಗಲು ಒಪ್ಪಿಗೆ ಸೂಚಿಸಿದ್ದಾರೆ.

ಯಾರು ಈ ಯೂನುಸ್?

Advertisements

1940ರಲ್ಲಿ ಚಿತ್ತಗಾಂಗ್ ನಲ್ಲಿ ಜನಿಸಿದ ಮೊಹಮ್ಮದ್ ಯೂನುಸ್, ಅರ್ಥಶಾಸ್ತ್ರ ಪದವೀಧರರು. 1961ರಿಂದ 65ರವರೆಗೆ ಚಿತ್ತಗಾಂಗ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಬೋಧಿಸುತ್ತಿದ್ದರು. ಫುಲ್‌ಬ್ರೈಟ್ ಸ್ಕಾಲರ್‍‌ ಶಿಪ್ ಸಿಕ್ಕಿದ್ದರಿಂದ, ವಾಂಡರ್‌ಬಿಲ್ಟ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಗಳಿಸಿದರು. ಆನಂತರ ಅವರು, 1972ರಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಚಿತ್ತಗಾಂಗ್ ವಿಶ್ವವಿದ್ಯಾನಿಲಯಕ್ಕೆ ಮರಳಿದರು. 1974ರಲ್ಲಿ ಬಾಂಗ್ಲಾದೇಶ ಕ್ಷಾಮಕ್ಕೆ ತುತ್ತಾದಾಗ, ಬಡತನದ ಆರ್ಥಿಕ ಅಂಶಗಳನ್ನು ಕುರಿತು ಅಧ್ಯಯನ ಮಾಡಲು ಆರಂಭಿಸಿದರು. ಆಗ ಅವರ ಅರಿವಿಗೆ ಬಂದದ್ದು, ಬಾಂಗ್ಲಾ ದೇಶವನ್ನು ಕಿತ್ತು ತಿನ್ನುತ್ತಿರುವ ಬಡತನ. ಅದರಿಂದ ಬಡವರನ್ನು ಮುಕ್ತಗೊಳಿಸುವ ಮಾರ್ಗೋಪಾಯಗಳು.

ಇದನ್ನು ಓದಿದ್ದೀರಾ?: ಬಾಂಗ್ಲಾದೇಶದಲ್ಲಿ ಏನಾಗುತ್ತಿದೆ? ಪ್ರಧಾನಿ ಶೇಖ್ ಹಸೀನಾ ದೇಶ ತೊರೆದು ಓಡಿಹೋಗಿದ್ದೇಕೆ? 

ಆ ಸಂದರ್ಭದಲ್ಲಿ ಬಾಂಗ್ಲಾದ ಬಡವರು ಸಣ್ಣಪುಟ್ಟ ವ್ಯವಹಾರಗಳಿಗೆ ಮತ್ತು ಮನೆಯ ಖರ್ಚುಗಳಿಗೆ ಸಾಂಪ್ರದಾಯಿಕ ಲೇವಾದೇವಿಗಾರರನ್ನು ಆಶ್ರಯಿಸುತ್ತಿದ್ದರು. ಅವರು ಸುಸ್ತಿ ಬಡ್ಡಿ ವಿಧಿಸಿ ಜೀವ ಹಿಂಡುತ್ತಿದ್ದರು. ದುಡಿದ ದುಡ್ಡೆಲ್ಲ ಬಡ್ಡಿ ಕಟ್ಟುವುದಕ್ಕೇ ವಿನಿಯೋಗವಾಗಿ, ಬಡತನ ನೀಗುವುದಿರಲಿ, ಬಡ್ಡಿಯ ಸುಳಿಗೆ ಸಿಕ್ಕಿ ಸಾಯುತ್ತಿದ್ದರು. ಇದನ್ನೆಲ್ಲ ಅಧ್ಯಯನದಿಂದ ಅರಿತ ಯೂನುಸ್, ಸಾಲ ಎನ್ನುವುದು ಮನುಷ್ಯರ ಮೂಲಭೂತವಾದ ಹಕ್ಕು. ಅವರ ಅಗತ್ಯಗಳಿಗೆ ತಕ್ಕಂತೆ ಸಾಲ ನೀಡಿದರೆ, ಮರುಪಾವತಿಯ ಮಾರ್ಗೋಪಾಯಗಳನ್ನು ಗುರುತಿಸಿದರೆ, ಅವರು ಅದನ್ನು ಬಳಸಿಕೊಂಡು ಸಣ್ಣ ವ್ಯವಹಾರಗಳಲ್ಲಿ ತೊಡಗಿಕೊಳ್ಳುತ್ತಾರೆ. ಕಾಲಾನಂತರ ಆರ್ಥಿಕವಾಗಿ ಸಬಲರಾಗುತ್ತಾರೆ. ಅದು ಅವರಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸದೃಢರಾಗಲು ಸಹಕರಿಸುತ್ತದೆ ಎಂಬುದನ್ನು ಕಂಡುಕೊಂಡರು.   

ಆ ನಿಟ್ಟಿನಲ್ಲಿ ಯೂನುಸ್, 1976ರಲ್ಲಿ ‘ಸಣ್ಣ ಸಾಲ’ಗಳ ಯೋಜನೆ ಆರಂಭಿಸಿದರು. ಇದು ಬಾಂಗ್ಲಾದ ಬಡವರ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಸಾಲದ ವ್ಯವಸ್ಥೆಯಾಗಿತ್ತು. ಅದರಲ್ಲಿ ಅವರು ನಂಬಿದ್ದು ಗ್ರಾಮೀಣ ಮಹಿಳೆಯರನ್ನು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಯೂನುಸ್, ಅವರ ಸಂಘ ಸ್ಥಾಪಿಸಿ, ಆ ಸಂಘದ ಮೂಲಕ ಸಾಲ ಸೌಲಭ್ಯ ಒದಗಿಸಿ, ಕುಲಕಸುಬುಗಳಲ್ಲಿ, ಕರಕುಶಲ ಉದ್ಯೋಗದಲ್ಲಿ, ಸಣ್ಣ-ಪುಟ್ಟ ವ್ಯವಹಾರಗಳಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಂಡರು. ಆ ನಂತರ ಅವರು ಆರ್ಥಿಕವಾಗಿ ಸದೃಢರಾಗಿ ಹಳ್ಳಿ ಹಳ್ಳಿಗೆ ಅದನ್ನು ಮುಟ್ಟಿಸತೊಡಗಿದರು.

ಮೊಹಮ್ಮದ್ ಯೂನುಸ್3

ಇದರಿಂದ ಉತ್ತೇಜನಗೊಂಡ ಬಾಂಗ್ಲಾ ಸರ್ಕಾರ 1983ರಲ್ಲಿ ಗ್ರಾಮೀಣ ಬ್ಯಾಂಕ್ ಯೋಜನೆಯನ್ನು ಸ್ವತಂತ್ರ ಬ್ಯಾಂಕ್ ಆಗಿ ಮಾಡಿತು. ಆ ಬ್ಯಾಂಕಿನ ಮೈಕ್ರೊಫೈನಾನ್ಸ್ ಪರಿಕಲ್ಪನೆ ಲಕ್ಷಾಂತರ ಜನರನ್ನು ಬಡತನದಿಂದ ಬಚಾವು ಮಾಡಿತು. ಆರ್ಥಿಕ ಚಕ್ರ ಚಲಿಸತೊಡಗಿತು. ನಿಧಾನವಾಗಿ ದೇಶದ ಚಹರೆ ಬದಲಾಗತೊಡಗಿತು. ಇದು ಪ್ರಪಂಚದಾದ್ಯಂತ ಸಣ್ಣಸಾಲಗಳ ಇನ್ನಿತರ ಮಾರ್ಗಗಳನ್ನು ಹುಡುಕಲು ಉತ್ತೇಜಿಸಿತು. ಯೂನುಸ್‌ರಿಗೆ ಹೆಸರು ಮತ್ತು ಖ್ಯಾತಿಯನ್ನು ತಂದುಕೊಟ್ಟಿತು. ಅಷ್ಟೇ ಅಲ್ಲ, ಮೊಹಮ್ಮದ್ ಯೂನುಸ್ ಮತ್ತವರ ಗ್ರಾಮೀಣ ಬ್ಯಾಂಕ್‌ನ ಸಾಧನೆಗೆ 2006ರಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯೂ ಒಲಿಯಿತು.

ಗ್ರಾಮೀಣ ಜನರ ಆರ್ಥಿಕ ಮತ್ತು ಸಾಮಾಜಿಕ ಬದುಕಿನ ಬಗ್ಗೆ ಯೋಚಿಸುತ್ತಿದ್ದ ಯೂನುಸ್, ಮೊದಲಿನಿಂದಲೂ ಪ್ರಭುತ್ವದ ವಿರುದ್ಧದ ದನಿಯಾಗಿಯೇ ಗುರುತಿಸಿಕೊಂಡವರು. ಆ ನಿಟ್ಟಿನಲ್ಲಿ 2007ರಲ್ಲಿ ಅವರು ನಾಗೋರಿಕ್ ಶಕ್ತಿ(ನಾಗರಿಕ ಶಕ್ತಿ) ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದರು. ಆ ಮೂಲಕ ಬಾಂಗ್ಲಾ ದೇಶದ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದರು. ಉತ್ತಮ ಆಡಳಿತವನ್ನು ಪುನಃಸ್ಥಾಪಿಸಲು ಮತ್ತು ಭ್ರಷ್ಟಾಚಾರವನ್ನು ತೊಡೆದುಹಾಕಲು ತಮ್ಮ ಪಕ್ಷ ಪ್ರಯತ್ನಿಸುತ್ತದೆ ಎಂದು ಹೇಳಿಕೊಂಡರು.

ಅಲ್ಲಿಯವರೆಗೆ ಬಾಂಗ್ಲಾದಲ್ಲಿದ್ದದ್ದು ಎರಡು ಪ್ರಮುಖ ಪಕ್ಷಗಳಾದ ಅವಾಮಿ ಲೀಗ್ ಮತ್ತು ಬಾಂಗ್ಲಾ ನ್ಯಾಷನಲ್ ಪಾರ್ಟಿ. ಅವೆರಡೂ ಪಕ್ಷಗಳ ನಾಯಕರಾದ ಶೇಖ್ ಹಸೀನಾ ಮತ್ತು ಖಾಲೀದಾ ಜಿಯಾ, ಒಬ್ಬರಾದ ಮೇಲೆ ಒಬ್ಬರು ಆಡಳಿತ ನಡೆಸಿ, ಸ್ವಾರ್ಥ ರಾಜಕಾರಣದಲ್ಲಿ ಮೆರೆಯತೊಡಗಿದ್ದರು. ಬಾಂಗ್ಲಾದ ಅಭಿವೃದ್ಧಿಯನ್ನು ಕಡೆಗಣಿಸಿದ್ದರು. ಅಂತಹ ಸ್ಥಿತಿಯಲ್ಲಿ ಯೂನುಸ್ ರಾಜಕೀಯ ಪಕ್ಷ ಕಟ್ಟಿ, ಭ್ರಷ್ಟಾಚಾರ ತೊಡೆದುಹಾಕಲು ಮುಂದಾದಾಗ, ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾದರು. ಅಷ್ಟೇ ಅಲ್ಲ, ಅವರ ಗ್ರಾಮೀಣ ಬ್ಯಾಂಕ್ ಬಗ್ಗೆ ಅಪಸ್ವರ ಎತ್ತತೊಡಗಿ, ಫಾರಿನ್ ಫಂಡ್ ಬಗ್ಗೆ ಲೆಕ್ಕ ಕೇಳತೊಡಗಿದರು. ಹಣ ದುರುಪಯೋಗದ ಆರೋಪ ಹೊರಿಸಿ ಅಪಪ್ರಚಾರದಲ್ಲಿ ನಿರತರಾದರು. ಇದರಿಂದ ಬೇಸತ್ತ ಯೂನುಸ್, ರಾಜಕೀಯ ಬದುಕಿಗೆ ತೆರೆ ಎಳೆದರು.

2010ರಲ್ಲಿ ಯೂನುಸ್ ಮತ್ತವರ ಗ್ರಾಮೀಣ ಬ್ಯಾಂಕ್ ಕುರಿತ ಸಾಕ್ಷ್ಯ ಚಿತ್ರವೊಂದು ತಯಾರಾಯಿತು. ಅದರಲ್ಲಿ ಕಿರುಸಾಲಗಳನ್ನು ಟೀಕಿಸುವುದರ ಜೊತೆಗೆ ಯೂನುಸ್ ಮತ್ತು ಬ್ಯಾಂಕ್, ನಾರ್ವೆ ದೇಶ ನೀಡಿದ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂಬ ಆರೋಪವನ್ನು ಹೊರಿಸಲಾಯಿತು. ಇದಕ್ಕಾಗಿಯೇ ಕಾಯುತ್ತಿದ್ದ ಬಾಂಗ್ಲಾದೇಶ ಸರ್ಕಾರ ತನಿಖೆಗೆ ಆದೇಶ ನೀಡಿತು. ಜೊತೆಗೆ, ಪ್ರಧಾನಿ ಹಸೀನಾ, ‘ಯೂನುಸ್ ಬಡವರ ರಕ್ತ ಹೀರುತ್ತಿದ್ದಾರೆ’ ಎಂದದ್ದೂ ಆಯಿತು. ಮುಂದುವರೆದು ವಯಸ್ಸಿನ ನೆಪ ಮುಂದಿಟ್ಟು ಅವರನ್ನು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲಾಯಿತು. ಬಾಂಗ್ಲಾ ನ್ಯಾಯಾಲಯ ಕೂಡ ಯೂನುಸ್ ಪದಚ್ಯುತಿಯನ್ನು ಎತ್ತಿಹಿಡಿಯಿತು.  

ಇದರಿಂದ ವಿಚಲಿತರಾಗದ ಯೂನುಸ್, ಆಡಳಿತಾರೂಢ ಪಕ್ಷದ ನಾಯಕರ ವಿರುದ್ಧ ಬಹಿರಂಗ ಸಮರಕ್ಕೆ ನಿಂತರು. ಸರ್ಕಾರದ ರೀತಿ-ನೀತಿಗಳ ಕುರಿತು ತರ್ಕಬದ್ಧವಾಗಿ ಟೀಕಿಸಿದರು. ಹಸೀನಾ ಸರ್ಕಾರ ಯೂನುಸ್ ವಿರುದ್ಧ ಒಂದಲ್ಲ, 190ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿ, ಅವರನ್ನು ಖಳನಾಯಕನಂತೆ ಚಿತ್ರಿಸಲು ಯತ್ನಿಸಿತು. ಕಾರ್ಮಿಕರ ಕಾನೂನು ಉಲ್ಲಂಘಿಸಿದ ಆರೋಪದಡಿ ಅವರು ತಪ್ಪಿತಸ್ಥರೆಂದು ನ್ಯಾಯಾಲಯ ಕೂಡ ತೀರ್ಪು ನೀಡಿತು. ಸದ್ಯ, ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.

ಅರ್ಥಶಾಸ್ತ್ರದ ಕುರಿತು ಹಲವಾರು ಮಹತ್ವದ ಗ್ರಂಥಗಳನ್ನು ರಚಿಸಿರುವ ಮೊಹಮ್ಮದ್ ಯೂನುಸ್, ಸಮಸಮಾಜ ನಿರ್ಮಾಣಕ್ಕಾಗಿ ಕೈಗೊಂಡ ಕಾರ್ಯಗಳಿಗಾಗಿ ಹಲವು ದೇಶಗಳ ಪ್ರಶಂಸೆಗೆ ಪಾತ್ರರಾದವರು. ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದವರು. 40 ವರ್ಷಗಳಿಗೂ ಹೆಚ್ಚು ಕಾಲ ಬಾಂಗ್ಲಾದ ಬಡವರ, ಶೋಷಿತರ ಮತ್ತು ಮಹಿಳೆಯರ ಪರ ಕೆಲಸ ಮಾಡಿದವರು. ದೇಶಕ್ಕಾಗಿ ದುಡಿದವರು.

ಮೊಹಮ್ಮದ್ ಯೂನುಸ್2

ಯೂನುಸ್ ಮುಂದಿರುವ ಸವಾಲುಗಳು  

ಇಂತಹ ಯೂನುಸ್‌ಗೆ ಈಗ 84ರ ಹರೆಯ. ಬಾಂಗ್ಲಾದೇಶ ಆಂತರಿಕ ದಳ್ಳುರಿಯಲ್ಲಿ ಬೇಯುತ್ತಿರುವ ದುರಿತ ಕಾಲದಲ್ಲಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ದೇಶದ ಒಳಗೆ ವಿದ್ಯಾರ್ಥಿಗಳ ಪ್ರತಿಭಟನೆ ಬೇರೆ ಬೇರೆ ರೂಪ ಪಡೆಯುತ್ತಿದ್ದರೆ, ಅಲ್ಪಸಂಖ್ಯಾತರ(ಹಿಂದೂಗಳ) ಮೇಲಿನ ದಾಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಜಮಾತ್–ಎ–ಇಸ್ಲಾಮಿಯಂಥ ಮೂಲಭೂತವಾದಿ ಸಂಘಟನೆಗಳ ಕೈ ಮೇಲಾಗುತ್ತಿದೆ. ಜತೆಗೆ ಪಾಕಿಸ್ತಾನದಂತೆ ಬಾಂಗ್ಲಾ ಕೂಡ ಭಾರತ ವಿರೋಧಿ ಉಗ್ರಗಾಮಿ ಗುಂಪುಗಳಿಗೆ ನೆಲೆ ಒದಗಿಸಿ, ಭಾರತವನ್ನು ಗುರಿಯಾಗಿಸಿಕೊಳ್ಳಬಹುದು ಎನ್ನುವ ಆತಂಕ ಸೃಷ್ಟಿಸುತ್ತಿದೆ. ಇದು ಭಾರತದ ಮೇಲೆ ಯಾವ ಪರಿಣಾಮ ಬೀರಬಹುದೆಂಬ ಭಯವೂ ಕಾಡುತ್ತಿದೆ.

ಅದರಲ್ಲೂ ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಶೇಖ್ ಹಸೀನಾ, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದರು. ಅದಕ್ಕೆ ನಮ್ಮ ಪ್ರಧಾನಿ ಮೋದಿಯವರ ಕೊಡುಗೆ ಇತ್ತೆಂದು, ಕೈಗೊಂಬೆಯಂತೆ ವರ್ತಿಸಿದರೆಂದು ಬಾಂಗ್ಲಾದೇಶಿಯರು ಬೇಸರಗೊಂಡಿದ್ದಾರೆ. ದೇಶದ ಭದ್ರತೆಯ ದೃಷ್ಟಿಯಿಂದ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಬಹಳ ಮುಖ್ಯ. ಆದರೆ, ಮೋದಿಯವರು ದೊಡ್ಡ ದೇಶದ ಮಹಾರಾಜನಂತೆ ಧಿಮಾಕಿನಿಂದ ವರ್ತಿಸಿದ ಫಲವಾಗಿ ನೆರೆಯ ರಾಷ್ಟ್ರಗಳಾದ ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಮಾಲ್ದೀವ್ಸ್‌ ದೇಶಗಳೊಂದಿಗಿನ ರಾಜತಾಂತ್ರಿಕ ಸಂಬಂಧ ಹಳಸಿದೆ. ಪರಿಸ್ಥಿತಿಯ ಲಾಭ ಪಡೆದ ಪಕ್ಕದ ಚೈನಾ ಈ ದೇಶಗಳಿಗೆ ಬೆಂಬಲ ಘೋಷಿಸಿದೆ. ಆರ್ಥಿಕ ಸಹಾಯ ನೀಡಿ, ಹಿಡಿತದಲ್ಲಿಟ್ಟುಕೊಳ್ಳಲು ಹವಣಿಸುತ್ತಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸರ್ವಾಧಿಕಾರಿಗಳ ಪತನಕ್ಕೆ ಕನ್ನಡಿ ಹಿಡಿದ ಬಾಂಗ್ಲಾದೇಶ

ಇದೇ ಸಂದರ್ಭದಲ್ಲಿ, ಬಾಂಗ್ಲಾದೇಶ ರಾಜಕೀಯ ಅಸ್ಥಿರತೆಗೆ ಸಿಕ್ಕು ಸೂತ್ರವಿಲ್ಲದ ಗಾಳಿಪಟದಂತಾಗಿದೆ. ಆರ್ಥಿಕವಾಗಿ ದಿವಾಳಿ ಎದ್ದಿದೆ. ಸಾಮಾಜಿಕ ಬದುಕು ಅಸ್ತವ್ಯಸ್ತವಾಗಿದೆ. ಜನಾಂಗೀಯ ಕದನ, ವಲಸೆ, ಬಲಿಷ್ಠ ರಾಷ್ಟ್ರಗಳ ಹಿಡಿತ- ಎಲ್ಲವನ್ನೂ ಒಂದು ಸೂತ್ರಕ್ಕೆ ತರುವ ಜನನಾಯಕನ ಕೊರತೆ ಎದ್ದು ಕಾಣುತ್ತಿದೆ. ಸದ್ಯಕ್ಕೆ ಉಸ್ತುವಾರಿ ಸರ್ಕಾರ ನಡೆಸುತ್ತಿರುವ ಸೇನಾ ಅಧಿಕಾರಿಗಳಾಗಲಿ, ಇದೀಗತಾನೆ ಗೃಹಬಂಧನದಿಂದ ಹೊರಬಂದಿರುವ ಮಾಜಿ ಪ್ರಧಾನಿ ಖಲೀದಾ ಜಿಯಾ ಆಗಲಿ, ಜಮಾತ್-ಎ-ಇಸ್ಲಾಮ್ ಆಗಲಿ ಬಾಂಗ್ಲಾದೇಶವನ್ನು ಸಮಸ್ಯೆಗಳಿಂದ ಪಾರು ಮಾಡುವುದು ಕಷ್ಟವಿದೆ. ಜೊತೆಗೆ ಚಳವಳಿಯ ನೇತೃತ್ವ ವಹಿಸಿರುವ ವಿದ್ಯಾರ್ಥಿಗಳು ಈಗಿರುವ ರಾಜಕೀಯ ಪಕ್ಷಗಳು ಬೇಡವೇ ಬೇಡ, ಹೊಸ ಪಕ್ಷಗಳು ಬರಬೇಕು ಎಂಬ ಆಶಯ ಹೊಂದಿದ್ದಾರೆ. ಇಂತಹ ಹಲವಾರು ಸಿಕ್ಕುಗಳಿಗೆ ಸಿಲುಕಿರುವ ಬಾಂಗ್ಲಾದೇಶವನ್ನು ಮೊಹಮ್ಮದ್ ಯೂನುಸ್ ಸವಾಲಿನಂತೆ ಸ್ವೀಕರಿಸಿ, ದೇಶದ ದಿಕ್ಕು ಬದಲಿಸಬಲ್ಲರೇ? ಕಾದು ನೋಡಬೇಕು.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಅಮೆರಿಕದ ‘ಅಕ್ಕರೆಯ ನ್ಯಾಯಾಧೀಶ’ ಫ್ರಾಂಕ್ ಕ್ಯಾಪ್ರಿಯೊ ನಿಧನ

ರೋಡ್ ಐಲ್ಯಾಂಡ್‌ನ ನಿವೃತ್ತ ಮುನಿಸಿಪಲ್ ನ್ಯಾಯಾಧೀಶರಾಗಿದ್ದ, ಸಾಮಾಜಿಕ ಜಾಲತಾಣಗಳಲ್ಲಿ 'ಅಕ್ಕರೆಯ ನ್ಯಾಯಾಧೀಶ'...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X