“ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ, ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವೆ” ಎಂದು ಸಚಿವ ಕೆ ಎನ್ ರಾಜಣ್ಣ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಧ್ಯಕ್ಷರ ಬದಲಾವಣೆ ಸನ್ನಿವೇಶ ಎದುರಾದರೆ ನಾನು ಅಧ್ಯಕ್ಷನಾಗಲು ಸಿದ್ಧನಿದ್ದೇನೆ. ಅಧ್ಯಕ್ಷ ಸ್ಥಾನ ಸಿಕ್ಕರೆ ಮಂತ್ರಿ ಸ್ಥಾನ ಬಿಡಲು ನಾನು ತಯಾರಿದ್ದೇನೆ. ನಾನು ಮುಂದೆ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ. ಅಧ್ಯಕ್ಷ ಸ್ಥಾನ ಸಿಕ್ಕರೆ ಪಕ್ಷಕ್ಕಾಗಿ ದುಡಿಯುತ್ತೇನೆ” ಎಂದರು.
“ಸರ್ಕಾರಕ್ಕೆ ಒಂದು ವರ್ಷ ಪೂರ್ಣವಾಗಿದೆ. ಐದು ವರ್ಷ ಪೂರ್ಣ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಇರುತ್ತಾರೆ ಅಂತ ವೇಣುಗೋಪಾಲ್ ಹೇಳಿದ್ದರು. ಆದರೆ ಚುನಾವಣೆ ಫಲಿತಾಂಶ ಬರಲಿ. ಬದಲಾವಣೆ ಆದರೂ ಆಗಬಹುದು. ಇಲ್ಲಿ ಮಾತ್ರವಲ್ಲ ಎಲ್ಲ ಕಡೆಯೂ ಆಗಬಹುದು” ಎಂದು ಕೆ ಎನ್ ರಾಜಣ್ಣ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡ ದೇವರಾಜೇಗೌಡ, ಡಿಕೆ ಶಿವಕುಮಾರ್ ಆಡಿಯೋ ವಿಚಾರವಾಗಿ ಮಾತನಾಡಿದ ಅವರು, “ಕರೆ ಮಾಡಿದರೆ ಮಾತನಾಡೋಕೆ ಆಗಲ್ಲವೆಂದು ಹೇಳಲು ಆಗುತ್ತಾ? ನಮ್ಮನ್ನು ಸಿಲುಕಿಸಲು ಪ್ರಯತ್ನ ಮಾಡುತ್ತಾರೆ. ಹೆಣ್ಣುಮಕ್ಕಳು ಕರೆ ಮಾಡಿದರೆ ನಾನೇ ಬ್ಲಾಕ್ ಮಾಡುತ್ತೇನೆ. ಯಾಕೆ ಬೇಕಪ್ಪ ಅಂತ ನಂಬರ್ ಬ್ಲಾಕ್ ಮಾಡುತ್ತೇನೆ. ನಾನು ಮೊಬೈಲ್ ಎಕ್ಸ್ಪರ್ಟ್ ಅಲ್ಲ, ನನಗೆ ಫೋನ್ ಮಾಡುವುದು ಅಷ್ಟೇ ಗೊತ್ತು” ಎಂದು ಕೆ ಎನ್ ರಾಜಣ್ಣ ತಿಳಿಸಿದರು.
