‘ಈ ದಿನʼ ಗ್ರೌಂಡ್‌ ರಿಪೋರ್ಟ್‌ 3 | ವಿಡಿಯೊ ಪ್ರಕರಣ; ಹಲವು ಮಹಿಳೆಯರ ರಾಜಕೀಯ ಮಹತ್ವಾಕಾಂಕ್ಷೆ ಮಣ್ಣುಪಾಲು

Date:

ಹಾಸನದ ಸಂಸದನ ಕಾಮಕಾಂಡ ಬಯಲಾಗುತ್ತಿದ್ದಂತೆ ಆ ಪಕ್ಷದ ಹಲವು ನಾಯಕಿಯರ ರಾಜಕೀಯ ಬದುಕು ಮಸುಕಾಗಲಿದೆಯೇ ಎಂಬ ಅನುಮಾನ ಶುರುವಾಗಿದೆ. ಇಡೀ ಮಹಿಳಾ ಸಮುದಾಯದ ರಾಜಕೀಯ ಮಹತ್ವಾಕಾಂಕ್ಷೆಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.

 

ರಾಜಕಾರಣದಲ್ಲಿ ಮಹಿಳೆಯರ ಒಳಗೊಳ್ಳುವಿಕೆ ತೀರಾ ಕಡಿಮೆಯಿದೆ. ಪುರುಷ ಪಾರಮ್ಯದ ಈ ಕ್ಷೇತ್ರದಲ್ಲಿ ಹೆಣ್ಣುಮಕ್ಕಳು ಅಧಿಕಾರ, ಸ್ಥಾನಮಾನ ಪಡೆಯಬೇಕಿದ್ದರೆ ಒಂದೋ ಆಕೆ ರಾಜಕಾರಣಿಯ ಕುಟುಂಬದವಳಾಗಿರಬೇಕು ಅಥವಾ ರಾಜಕಾರಣಿಯೊಬ್ಬ ಗಾಡ್‌ಫಾದರ್‌ ಆಗಿರಬೇಕು ಎಂಬುದು ಎಲ್ಲರೂ ಬಲ್ಲ ಸತ್ಯ. ತಮ್ಮ ಪಕ್ಷದ ಝಂಡಾ ಹಿಡಿದು ವರ್ಷಗಳ ಕಾಲ, ಚುನಾವಣಾ ಪ್ರಚಾರ, ಪ್ರತಿಭಟನೆ, ಸಭೆ ಎಂದು ಯಾವುದೇ ಫಲಾಪೇಕ್ಷೆ ಇಲ್ಲದೇ ತೊಡಗಿಕೊಳ್ಳುವ ಕಾರ್ಯಕರ್ತರ ಪಡೆ ಎಲ್ಲಾ ಪಕ್ಷಗಳಲ್ಲೂ ಇವೆ. ಪಕ್ಷಕ್ಕಾಗಿ ದುಡಿಯುವ ಕಾರಣದಿಂದ ತಮ್ಮ ನಾಯಕನ ಬಳಿ ಸಹಾಯ ಪಡೆಯಲು ಹೋದ ಮಹಿಳೆಯರನ್ನು ಅದಕ್ಕೆ ಪ್ರತಿಯಾಗಿ ಆತ ತನ್ನ ತೆವಲು ತೀರಿಸಿಕೊಳ್ಳಲು ಬಳಸಿರುವ ಹಾಸನದ ಸಂಸದನ ಪ್ರಕರಣದಿಂದಾಗಿ ಭವಿಷ್ಯದಲ್ಲಿ ಮಹಿಳೆಯರನ್ನು ರಾಜಕಾರಣಕ್ಕೆ ಕಳುಹಿಸುವ ಬಗ್ಗೆ ಕುಟುಂಬದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆಯಿದೆ.

ಸಂಸದನ ಅಕ್ರಮ ಲೈಂಗಿಕ ಚಟುವಟಿಕೆಯ ಪ್ರಮುಖ ಬಲಿಪಶುಗಳಲ್ಲಿ ಜೆಡಿಎಸ್‌ ಪಕ್ಷದ ಕಾರ್ಯಕರ್ತೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಈಗಾಗಲೇ ಬಹಿರಂಗಗೊಂಡಿರುವ ವಿಚಾರ. ಹೊಳೆನರಸೀಪುರದ ಸುಮಾರು ಅರವತ್ತು ಜೆಡಿಎಸ್‌ ಕಾರ್ಯಕರ್ತೆಯರ ವಿಡಿಯೊಗಳು ಇವೆ ಎಂದು ಹೇಳಲಾಗಿದೆ. ಈ ಪ್ರಕರಣದ ವಿಸ್ತಾರ ಮತ್ತು ಅದು ಪಡೆದುಕೊಳ್ಳುತ್ತಿರುವ ರಾಜಕೀಯ ಬಣ್ಣದಲ್ಲಿ ಮಹಿಳೆಯರ ಘನತೆ ಮಣ್ಣು ಪಾಲಾಗುತ್ತಿದೆ. ಅಷ್ಟೇ ಅಲ್ಲ ತಳಮಟ್ಟದಲ್ಲಿ ರಾಜಕೀಯದಲ್ಲಿ ಕಾಣಿಸಿಕೊಳ್ಳುವ ಮಹಿಳೆಯರ ಬಗ್ಗೆ ಇಡೀ ಸಮಾಜ ಅನುಮಾನದಿಂದ ಕಾಣುವಂತಾಗಿದೆ. ಅವರ ರಾಜಕೀಯ ಮಹತ್ವಾಕಾಂಕ್ಷೆಯೂ ಮಣ್ಣುಪಾಲಾಗುತ್ತಿದೆ.

ಗಂಡನ್ನು ಸಂತೃಪ್ತಿಪಡಿಸಿಯೇ ಆಕೆ ಸ್ಥಾನ ಗಳಿಸಿದ್ದಾಳೆ ಎಂಬ ಹಣೆಪಟ್ಟಿ ಕಟ್ಟುವುದು ಹಿಂದಿನಿಂದಲೂ ಇತ್ತು. ಹಾಸನದ ಪ್ರಕರಣದಲ್ಲಿ ಸಿಲುಕಿರುವ ಎಲ್ಲ ಮಹಿಳೆಯರ ಮೇಲೂ “ಲಾಭ” ಪಡೆದ ಈ ಆಪಾದನೆ ಬಂದಿದೆ. ದಶಕಗಳಿಂದ ಎರಡು ತಲೆಮಾರುಗಳಿಂದ ಆ ಪಕ್ಷಕ್ಕಾಗಿ ದುಡಿದ ಹಲವು ಕುಟುಂಬಗಳು ಇಂದು ಕಳಂಕ ಹೊತ್ತುಕೊಳ್ಳುವ ಪರಿಸ್ಥಿತಿ ಬಂದಿದೆ. ಪಕ್ಷದ ಮುಖಂಡರ ಜೊತೆಗೆ ವೇದಿಕೆ ಹಂಚಿಕೊಂಡ ಮಹಿಳೆಯರು ಈಗ ಅದಕ್ಕಾಗಿ ಮುಜುಗರಪಡುವ ಸ್ಥಿತಿ ಬಂದೊದಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ದಿನ.ಕಾಮ್‌ ಹಾಸನದ ಜೆಡಿಎಸ್‌ ಕಾರ್ಯಕರ್ತೆಯರನ್ನು ಸಂಪರ್ಕಿಸುವ ಪ್ರಯತ್ನ ಮಾಡಿತ್ತು. ಪ್ರಜ್ವಲ್‌ನ ಮೊಬೈಲ್‌ನಿಂದ ಡೌನ್‌ಲೋಡ್‌ ಮಾಡಿರುವ ವಿಡಿಯೊ, ಫೋಟೋಗಳ ಜೊತೆಗೆ ತನ್ನ ಮಾರ್ಫಿಂಗ್‌ ಮಾಡಿದ ಫೋಟೋಗಳನ್ನು ಹೊರಬಿಡಲಾಗಿದೆ ಎಂದು ಕಾರ್ಯಕರ್ತೆಯೊಬ್ಬರು ಮಾತು ಶುರು ಮಾಡಿದರು.

“ನನ್ನ ಎಡಿಟ್‌ ಮಾಡಿದ ಫೋಟೋ ನಾಲ್ಕು ವರ್ಷಗಳ ಹಿಂದೆಯೂ ವೈರಲ್‌ ಮಾಡಲಾಗಿತ್ತು. ಸೈಬರ್‌ ಕ್ರೈಮ್‌ನವರಿಗೆ ದೂರು ಕೊಟ್ಟಿದ್ದೆ. ಅದನ್ನು ಅಂತರ್ಜಾಲದಿಂದ ತೆಗೆದುಹಾಕಲಾಗಿತ್ತು. ಇದೀಗ ಚುನಾವಣೆಯ ಸಮಯದಲ್ಲಿ ಆ ಫೋಟೋಗಳನ್ನು ಕಿಡಿಗೇಡಿಗಳು ಮತ್ತೆ ವೈರಲ್‌ ಮಾಡಿದ್ದಾರೆ” ಎಂದು ಐದು ವರ್ಷಗಳ ಹಿಂದೆಯೇ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ, ಈ ಚುನಾವಣೆಯಲ್ಲೂ ಪಕ್ಷದ ಗೆಲುವಿಗಾಗಿ ದುಡಿದಿರುವ ಕಾರ್ಯಕರ್ತೆಯೊಬ್ಬರು ಹೇಳಿದರು.

“ನಾನು ನಾಲ್ಕು ವರ್ಷ ಹಿಂದೆ ಪಕ್ಷದಲ್ಲಿ ಬಹಳ ಆಕ್ಟಿವ್‌ ಕಾರ್ಯಕರ್ತೆಯಾಗಿದೆ. ಲೋಕಲ್‌ ಎಂಎಲ್‌ಎ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದೆ. ನಾಲ್ಕು ವರ್ಷಗಳಿಂದ ಹೋಗಿರಲಿಲ್ಲ. ಈ ಚುನಾವಣೆಯಲ್ಲಿ ಮತ್ತೆ ಪಕ್ಷದ ಅಭ್ಯರ್ಥಿ ಪರ ನಮ್ಮ ವಾರ್ಡ್‌ನಲ್ಲಷ್ಟೇ ಪ್ರಚಾರ ಮಾಡಿದ್ದೆ. ಈ ಬಾರಿಯೂ ನಾನು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದಿದ್ದೆ” ಎಂದು ಹೇಳಿದರು.

ವಿಡಿಯೊ ಮಾಡಿಕೊಂಡವನ ಮೇಲಿನ ಸಿಟ್ಟಿಗಿಂತ ವಿಡಿಯೊ ಬಹಿರಂಗಪಡಿಸಿದವರ ಮೇಲೆ ಆಕೆಗೆ ದುಪ್ಪಟ್ಟು ಸಿಟ್ಟಿದೆ. ಎರಡು ಮೂರು ತಿಂಗಳ ನಂತರ ಫೋಟೊ ವೈರಲ್‌ ಮಾಡಿದವರ ಮೇಲೆ ಮಾನನಷ್ಟ ಪ್ರಕರಣ ದಾಖಲಿಸುತ್ತೇನೆ. ಅವರಿಗೆ ಶಿಕ್ಷೆ ಕೊಡಿಸದೇ ಬಿಡಲ್ಲ ಎಂದೂ ಆಕ್ರೋಶದಿಂದ ಹೇಳಿದರು.

“ನಾನು ಹಲವು ಸಂಘಟನೆಗಳಲ್ಲಿ ಕೆಲಸ ಮಾಡಿದ್ದೇನೆ. ನನ್ನ ಏಳಿಗೆ ಸಹಿಸದವರು, ನನ್ನ ಫೋಟೋಗಳನ್ನು ಬಿಟ್ಟಿದ್ದಾರೆ. ಚುನಾವಣೆಯ ಹಿಂದಿನ ದಿನ ನನಗೆ ಎರಡೂ ಪಕ್ಷಗಳಿಂದ ಬ್ಲ್ಯಾಕ್‌ಮೇಲ್‌ ಕರೆಗಳು ಬಂದಿದ್ದವು. ನಾನು ಅದಕ್ಕೆ ತಲೆ ಕೆಡಿಸಿಕೊಂಡಿಲ್ಲ. ನಾನು ಅದರಲ್ಲಿ ಇಲ್ಲ ಎಂದ ಮೇಲೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ” ಎಂಬುದು ಅವರ ಪ್ರಶ್ನೆ.

ಈ ಬಗ್ಗೆ ನೀವು ಎಸ್‌ಐಟಿ ಮುಂದೆ ಹೇಳಿಕೆ ನೀಡಬಹುದು ಅಥವಾ ಸೈಬರ್‌ ಕ್ರೈಂಗೆ ದೂರು ಕೊಡುತ್ತಿಲ್ಲ ಯಾಕೆ ಎಂಬ ಪ್ರಶ್ನೆಗೆ, “ನನ್ನದು ಪೋಟೋ ಮಾತ್ರ ಇರೋದು, ಬೇರೆಯವರದ್ದು ವಿಡಿಯೊಗಳಿವೆ. ನಾನು ಇದಕ್ಕೆಲ್ಲ ಕೇಸು- ಕೋರ್ಟು ಅಂತ ಹೋದರೆ ನಿಜಕ್ಕೂ ಅನ್ಯಾಯ ಆಗಿರೋರಿಗೆ ನ್ಯಾಯ ಸಿಗಲ್ಲ. ಎಲ್ಲವೂ ಮಾರ್ಫಿಂಗ್‌ ಎಂದು ಮುಚ್ಚಿ ಹೋಗಬಹುದು” ಎಂದು ಹೇಳಿದರು.

“ವಿಡಿಯೊ ಬಿಡುಗಡೆ ಮಾಡಿದವರಿಗೆ ಗಲ್ಲು ಶಿಕ್ಷೆಯೇ ಆಗಬೇಕು. ಅವರಿಗೆ ನಿಜಕ್ಕೂ ಕಾಳಜಿ ಇದ್ದಿದ್ದರೆ ಅವರು ಕೋರ್ಟಿಗೆ ಕೊಡಬೇಕಿತ್ತು, ಚುನಾವಣೆಯ ಸಮಯದಲ್ಲಿ ಅದನ್ನು ಬಿಡುಗಡೆ ಮಾಡಿದ್ದು ರಾಜಕೀಯ ದುರುದ್ದೇಶದಿಂದ” ಎಂದು ಹೇಳುತ್ತಲೇ, “ನಾನು ಆ ವಿಡಿಯೊಗಳನ್ನು ನೋಡಿಲ್ಲ ಆದರೆ, ಅವುಗಳನ್ನು ಆತ ಮಾಡಿರೋದಿಕ್ಕೆ ಯಾವುದೇ ಪುರಾವೆ ಇಲ್ಲ ಎಂದು ನೋಡಿದವರು ಹೇಳುತ್ತಿದ್ದಾರೆ” ಎಂದು ಹೇಳಿದರು. ಆ ಮಟ್ಟಿಗೆ ಆಕೆಯಲ್ಲಿ ಪಕ್ಷ ಪ್ರೇಮ ಮತ್ತು ಆ ಕುಟುಂಬದ ಮೇಲಿನ ನಂಬಿಕೆ ಇನ್ನೂ ಇದೆ!.

“ಜೆಡಿಎಸ್‌ನಲ್ಲಿ ಬಹಳ ಅಗ್ರೆಸಿವ್‌ ಆಗಿ ಪ್ರಚಾರ ಮಾಡುತ್ತಿದ್ದೆ. ಅದಕ್ಕೆ ನನ್ನ ರಾಜಕೀಯ ವಿರೋಧಿಗಳು ನನ್ನ ಫೋಟೋಗಳನ್ನು ಅಪಪ್ರಚಾರಕ್ಕೆ ಬಳಸುತ್ತಿದ್ದಾರೆ. ನನ್ನ ಸಂಬಂಧಿಗಳು, ಸ್ನೇಹಿತರು, ನನ್ನ ನಂಟಿರುವ ಎಲ್ಲರಿಗೂ ಫೋಟೋ ತೋರಿಸಿ ಇದು ಅವಳೇ ಎಂದು ನಂಬಿಸಲು ಯತ್ನಿಸುತ್ತಿದ್ದಾರೆ. ಈಗ ನನ್ನನ್ನು ಯಾರೂ ಮಾತನಾಡಿಸುತ್ತಿಲ್ಲ. ನಾನೊಬ್ಬಳೇ ಮನೆಗೆ ಆಧಾರ, ಚಿಕ್ಕ ಮಕ್ಕಳಿದ್ದಾರೆ. ಅದೆಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ನಾನು ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದೇನೆ. ಈಗ ನಾನು ಕೋಟಿಗಟ್ಟಲೆ ಹಣ ಪಡೆದಿದ್ದೇನೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ಯಾರೋ ಯಾಕೆ ಕೋಟಿಗಟ್ಟಲೆ ಹಣ ಕೊಡ್ತಾರೆ” ಎಂದು ಪ್ರಶ್ನಿಸಿದರು.

ಇದನ್ನೂ ಓದಿ
ʼಈ ದಿನʼ ಗ್ರೌಂಡ್‌ ರಿಪೋರ್ಟ್‌ 1 | ನಿಶ್ಚಿತಾರ್ಥ, ಮದುವೆ, ಸಂಬಂಧ ಮುರಿಯುವ ಆತಂಕದಲ್ಲಿ ಹಾಸನದ ಕುಟುಂಬಗಳು…

ಆಕೆ ಈ ಘಟನೆಯಿಂದ ಕುಗ್ಗಿದಂತೆ ಕಾಣುತ್ತಿಲ್ಲ. ಅಥವಾ ಅಂತಹ ಮುಖವಾಡ ತೊಟ್ಟಿರಬಹುದು. ಆದರೆ ವಿಡಿಯೊದಲ್ಲಿರುವ ಮತ್ತೊಬ್ಬ ಹಿರಿಯ ಮಹಿಳೆಯ ಸಂಕಟವನ್ನು ಆಕೆ ʼಈ ದಿನʼಕ್ಕೆ ವಿವರಿಸಿದರು. “ಸುಮಾರು 55 ವರ್ಷದ ಆ ಮಹಿಳೆ ಈಗಷ್ಟೇ ಮಗಳ ಮದುವೆ ಮಾಡಿದ್ದಾರೆ. ಮೂರ್ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯ ವಿಡಿಯೊ ಇದೆ ಎಂಬುದು ಆಕೆಗೆ ಗೊತ್ತೇ ಇರಲಿಲ್ಲ. ಈ ವಿಷಯ ಮಗಳ ಮನೆಯವರಿಗೆ ಗೊತ್ತಾದರೆ ಎಂಬ ಆತಂಕದಲ್ಲಿ ಕಣ್ಣೀರು ಹಾಕುತ್ತಲೇ ಮರೆಯಲ್ಲಿ ಬದುಕುತ್ತಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿ ʼಈ ದಿನʼ ಗ್ರೌಂಡ್‌ ರಿಪೋರ್ಟ್ 2 | ನಾಲ್ಕು ದಶಕಗಳ ಗೌಡರ ಕುಟುಂಬದ ಅತ್ಯಾಪ್ತರ ಮೊಮ್ಮಗಳೂ ಬಲಿಪಶು!

ಸಂತ್ರಸ್ತೆಯರೆಲ್ಲ ಊರು ಬಿಟ್ಟಿದ್ದಾರೆ ಎಂಬುದು ಸುಳ್ಳು. ಎಲ್ಲರೂ ಮನೆಯಲ್ಲಿಯೇ ಇದ್ದಾರೆ. ಕೆಲವರು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ ಎಂಬುದು ಆಕೆಯ ಅಭಿಪ್ರಾಯ.

ವಿಡಿಯೊ ಹೊರ ಬಂದ ನಂತರ ಹಾಸನದ ಹಲವು ಕುಟುಂಬಗಳು ಛಿದ್ರಗೊಂಡಿವೆ. ಕುಟುಂಬದ ಹಿಂಸೆ ಒಂದೆಡೆಯಾದರೆ ಸಮಾಜವನ್ನು ಎದುರಿಸುವುದು ಬಲುದೊಡ್ಡ ಸವಾಲು. ಕೆಲ ಕಿಡಿಗೇಡಿಗಳು ಆ ಮಹಿಳೆಯರಿಗೆ ಫೋನ್‌ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿರುವ ಆರೋಪಗಳೂ ಕೇಳಿಬಂದಿವೆ.

ಹೇಮಾ ವೆಂಕಟ್
+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಹೊಳೆ ನರಸೀಪುರದಲ್ಲಿ 60ಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತೆಯರ ವಿಡಿಯೋಗಳಿವೆ ಅಂತ ಹೇಳಿರೋದು ಸರಿಯಲ್ಲ, ಅದನ್ನು ಬರೆಯಬಾರದಿತ್ತು. ತಾಲ್ಲೂಕು ಆಗಿರೋದ್ರಿಂದ ಬಹಳ ಬೇಗ ಗುರುತು ಹಿಡಿಯಬಹುದು.ಈ ಬಗ್ಗೆ ಮುಂದೆ ಲೇಖನ ಮಾಡುವಾಗ ಮಹಿಳಾ ಸೂಕ್ಷ್ಮತೆಯ ಬಗ್ಗೆ ಅರಿವಿರಲಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಡವಾಳ ಹೂಡಿಕೆದಾರರ ಆಕರ್ಷಣೆಗೆ ಶೀಘ್ರ ಪ್ರವಾಸೋದ್ಯಮ ನೀತಿ ಜಾರಿ: ಡಿಸಿಎಂ ಡಿ ಕೆ ಶಿವಕುಮಾರ್

ಕರ್ನಾಟಕ ಸರ್ಕಾರ ಪ್ರವಾಸೋದ್ಯಮದ ಅಭಿವೃದ್ದಿಗೆ ಬದ್ದವಾಗಿದ್ದು, ಹೆಚ್ಚು ಬಂಡವಾಳ ಹೂಡಿಕೆದಾರರ ಆಕರ್ಷಣೆಗೆ...

ಇಂದಿರಾ ಗಾಂಧಿಯನ್ನು ಭಾರತ ಮಾತೆ ಎಂದು ಕರೆದ ಕೇಂದ್ರ ಸಚಿವ ಸುರೇಶ್ ಗೋಪಿ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು 'ಭಾರತ ಮಾತೆ' ಎಂದು ಬಣ್ಣಿಸಿರುವ...

ಕೈಗಾರಿಕೆಗಳಿಗೆ ಉತ್ತೇಜನ ಎಲ್ಲ ರಾಜ್ಯಗಳಿಗೂ ಸಮಾನವಾಗಿರಲಿ:‌ ಎಚ್‌ಡಿಕೆ ಮಾತಿಗೆ ಎಂ ಬಿ ಪಾಟೀಲ್ ಸಹಮತ

ಗುಜರಾತಿನ ಸಾನಂದ್‌ನಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿರುವ ಅಮೆರಿಕ ಮೂಲದ ಮೈಕ್ರಾನ್...