ಮಣಿಪುರದಲ್ಲಿ ಅತ್ಯಾಚಾರ ಹಾಗೂ ಬೆತ್ತಲೆ ಮೆರವಣಿಗೆ ಒಳಗಾದ ಮಹಿಳೆಯೊಬ್ಬರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದು, ಪೊಲೀಸರು ಯುವಕರ ಗುಂಪಿನಲ್ಲಿ ಇದ್ದರು. ಅವರುಗಳೆ ನಮ್ಮನ್ನು ಬೆತ್ತಲೆ ಮೆರವಣಿಗೆ ಮಾಡಿದ ಗುಂಪಿನೊಳಗೆ ತಂದು ಬಿಟ್ಟರು ಎಂದು ತಮ್ಮ ಆಘಾತಕಾರಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಮಣಿಪುರದಲ್ಲಿ ಕುಕಿ-ಜೋಮಿ ಸಮುದಾಯದ ಇಬ್ಬರು ಮಹಿಳೆಯರನ್ನು ಗುಂಪೊಂದು ಬೆತ್ತಲೆಯಾಗಿ ಮೆರವಣಿಗೆ ಮಾಡುವ ಮತ್ತು ಲೈಂಗಿಕ ದೌರ್ಜನ್ಯ ನಡೆಸುವ ವಿಡಿಯೋ ಕಾಣಿಸಿಕೊಂಡ ಒಂದು ದಿನದ ನಂತರ ಮಾಧ್ಯಮದೊಂದಿಗೆ 20 ವರ್ಷ ವಯಸ್ಸಿನ ಸಂತ್ರಸ್ತ ಮಹಿಳೆ ಮಾತನಾಡಿದ್ದಾರೆ.
ತನ್ನ ಗಂಡನ ಮನೆಯಿಂದ ಫೋನ್‌ನಲ್ಲಿ ಮಾಧ್ಯಮವೊಂದಕ್ಕೆ ಮಾತನಾಡಿದ ಮಹಿಳೆ, “ನಮ್ಮ ಹಳ್ಳಿಯ ಮೇಲೆ ದಾಳಿ ಮಾಡುತ್ತಿದ್ದ ಗುಂಪಿನೊಂದಿಗೆ ಪೊಲೀಸರು ಅಲ್ಲಿದ್ದರು. ಪೊಲೀಸರು ನಮ್ಮನ್ನು ಹಳ್ಳಿಯ ಮನೆಯ ಬಳಿಯಿಂದ ಸ್ವಲ್ಪ ದೂರ ಕರೆದುಕೊಂಡು ಹೋಗಿ ಮನುಷ್ಯ ಮುಖದ ರಾಕ್ಷಸರ ಗುಂಪಿನೊಂದಿಗೆ ರಸ್ತೆಯಲ್ಲಿ ಬಿಟ್ಟರು. ಪೊಲೀಸರೆ ನಮ್ಮನ್ನು ಅವರ ಬಳಿ ಬಿಟ್ಟರು” ಎಂದು ಹೇಳಿದ್ದಾರೆ.
ದೇಶಾದ್ಯಂತ ಆಕ್ರೋಶಕ್ಕೆ ಒಳಗಾಗಿರುವ ಬೆತ್ತಲೆ ಮೆರವಣಿಗೆಯ ವಿಡಿಯೋದ ದೃಶ್ಯದಲ್ಲಿರುವಂತೆ, ಇಬ್ಬರು ಮಹಿಳೆಯರು. ಒಬ್ಬರು 20 ವರ್ಷದವರು ಮತ್ತು ಇನ್ನೊಬ್ಬರು 40 ವರ್ಷ ವಯಸ್ಸಿನವರು. ಇವರನ್ನು ಪುರುಷರ ಗುಂಪೊಂದು ರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿಕೊಂಡು ಹೊಲದ ಕಡೆಗೆ ಬಲವಂತವಾಗಿ ಎಳೆದುಕೊಂಡು ಹೋಗುತ್ತದೆ.
ಈ ಸುದ್ದಿ ಓದಿದ್ದೀರಾ? ಮಣಿಪುರ | ಮಹಿಳೆಯರನ್ನು ಬೆತ್ತಲೆಗೊಳಿಸಿ ವಿಕೃತಿ ಮೆರೆದ ದುಷ್ಟರ ಗುಂಪು; ದೇಶಾದ್ಯಂತ ಆಕ್ರೋಶ
ಮೇ 18 ರಂದು 20 ವರ್ಷದ ಮಹಿಳೆಯು ಸಲ್ಲಿಸಲಾದ ಪೊಲೀಸ್ ದೂರಿನಲ್ಲಿ, ಯುವಕರ ಗುಂಪು ತನ್ನನ್ನು ಹಗಲಿನ ವೇಳೆಯಲ್ಲಿಯೇ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಯುವಕರ ಗುಂಪು ಕಾಂಗ್‌ಪೋಕ್ಪಿ ಜಿಲ್ಲೆಯ ತಮ್ಮ ಹಳ್ಳಿಯ ಮೇಲೆ ದಾಳಿ ಮಾಡಿದ ನಂತರ ಆಶ್ರಯಕ್ಕಾಗಿ ಕಾಡಿಗೆ ನಾವಿಬ್ಬರು ಓಡಿಹೋಗುತ್ತಿದ್ದೆವು. ತೌಬಲ್ ಠಾಣೆಯ ಪೊಲೀಸರು ತಮ್ಮನ್ನು ರಕ್ಷಿಸಿ ಠಾಣೆಗೆ ಕರೆದೊಯ್ಯುತ್ತಿರುವಾಗ ಮಾರ್ಗ ಮಧ್ಯೆಯಲ್ಲಿ ಬಂದ ಮತ್ತೊಂದು ಗುಂಪು ನಮ್ಮನ್ನು ಕರೆದುಕೊಂಡು ಹೋದರು. ಅಲ್ಲದೆ ತನ್ನ ತಂದೆ ಮತ್ತು ಸಹೋದರನನ್ನು ಈ ಗುಂಪು ಹತ್ಯೆ ಮಾಡಿದೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
ಎಫ್‌ಐಆರ್ ದಾಖಲಾದ ಎರಡು ತಿಂಗಳ ನಂತರ, ಘಟನೆಯ ವಿಡಿಯೋದ ಬಗ್ಗೆ ತನಗೆ ಮತ್ತು ತನ್ನ ಕುಟುಂಬಕ್ಕೆ ತಿಳಿದಿಲ್ಲ. ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ಈ ಘಟನೆ ನಮ್ಮ ಮನೆಯಲ್ಲಿ ಇಂಟರ್‌ನೆಟ್ ಇಲ್ಲದ ಕಾರಣ ಗೊತ್ತಾಗಿಲ್ಲ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ.
ಎರಡು ತಿಂಗಳ ಹಿಂದೆ ನಡೆದ ಈ ವಿಡಿಯೋ ಬುಧವಾರ(ಜುಲೈ 19) ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆಯ ಪ್ರಮುಖ ಆರೋಪಿಯನ್ನು ನಿನ್ನೆ ರಾತ್ರಿ 1.30 ರ ಸುಮಾರಿಗೆ ಬಂಧಿಸಲಾಗಿದೆ.
ಈ ವಿಡಿಯೋವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಿದ ಕೂಡಲೇ ಮಣಿಪುರ ಪೊಲೀಸರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಕಳೆದ ತಿಂಗಳು ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಕೂಡ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಪೈಶಾಚಿಕ ಕೃತ್ಯವನ್ನು ಖಂಡಿಸಿದ್ದಾರೆ.
ವಿಡಿಯೊ ಎಲ್ಲಡೆ ಪ್ರಸಾರವಾದ ನಂತರ, ವಿರೋಧ ಪಕ್ಷಗಳು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಅಧಿಕಾರದಲ್ಲಿರುವ ಆಡಳಿತಾರೂಢ ಬಿಜೆಪಿಯ ಮೇಲೆ ಪಟ್ಟುಬಿಡದೆ ದಾಳಿ ನಡೆಸುತ್ತಿವೆ. ಕೇಂದ್ರ ಸರ್ಕಾರವು ಈ ಬಗ್ಗೆ ಕಠಿಣ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸುತ್ತಿವೆ.