ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ರಾಜ್ಯ ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಾಗಲಕೋಟೆಯಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, “ಬಾಗಲಕೋಟೆ ಜಿಲ್ಲೆಗೆ 2014-15ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ವೈದ್ಯಕೀಯ ಮಹಾವಿದ್ಯಾಲಯ ಘೋಷಣೆ ಮಾಡಿತ್ತು. ನಂತರ ಅಧಿಕಾರಕ್ಕೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ವೈದ್ಯಕೀಯ ಕಾಲೇಜಿಗೆ ಯಾವುದೇ ಅನುದಾನ ಬಿಡುಗಡೆ ಮಾಡಲಿಲ್ಲ. ಈ ಕಾರಣದಿಂದ ವೈದ್ಯಕೀಯ ಮಹಾವಿದ್ಯಾಲಯದ ನನೆಗುದಿಗೆ ಬಿದ್ದಿತು” ಎಂದು ಅಸಮದಾನ ವ್ಯಕ್ತಪಡಿಸಿದರು.
“ಚುನಾವಣೆ ಪ್ರಚಾರದ ಸಂಧರ್ಭದಲ್ಲಿ ಮುಖ್ಯಮಂತ್ರಸಿ ಸಿದ್ದರಾಮಯ್ಯ ಅವರು, ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುದಾನ ಒದಗಿಸಿ ಗುದ್ದಲಿ ಪೂಜೆಗೂ ಬರ್ತೀನಿ, ಹಾಗೆಯೇ ಉದ್ಘಾಟನೆಗೂ ನಾನೇ ಬರ್ತೀನಿ ಎಂದು ಭರವಸೆ ನೀಡಿದ್ದು ಮರೆತು ಹೋಯಿತೇ? ನಿಮಗೆ ರಾಜಕೀಯ ಪುನರ್ಜನ್ಮ ನೀಡಿದ ಬಾಗಲಕೋಟೆ ಜಿಲ್ಲೆಗೆ ನೀವು ಮಾಡುತ್ತಿರುವ ಪ್ರತ್ಯುಪಕಾರ ಏನು? ನಿಜವಾಗಿಯೂ ನೀವು ನುಡಿದಂತೆ ನಡೆದಿದ್ದೀರಾ” ಎಂದು ಪ್ರಶ್ನಿಸಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಲಕೋಟೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅನುದಾನ ಒದಗಿಸುತ್ತೇವೆ’ ಎಂದು ಭರವಸೆ ನೀಡಿದ್ದರು. ಬಾಗಲಕೋಟೆ ಜನರ ಆಶೀರ್ವಾದದಿಂದಲೂ ಕರ್ನಾಟಕದಲ್ಲಿ ನಿಮ್ಮದೇ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ, 2023-24 ಬಜೆಟ್‌ನಲ್ಲಿ ಬಾಗಲಕೋಟೆ ವೈದ್ಯಕೀಯ ಕಾಲೇಜಿಗೆ ಅನುದಾನ ಬಿಡುಗಡೆ ಮಾಡದೆ ಜಿಲ್ಲೆ ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಿದ್ದೀರಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ರಾಜ್ಯ ಸರ್ಕಾರ ಕೂಡಲೇ ಗಮನಹರಿಸಿ ಪ್ರೊ. ನಂಜುಂಡಪ್ಪ ವರದಿಯಂತೆ ಹಿಂದುಳಿದಿರುವ ಮತ್ತು ಮುಳುಗಡೆಯಿಂದ ಬಾಧಿತವಾಗಿರುವ ಬಾಗಲಕೋಟೆ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಬೇಕು” ಎಂದು ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮೂಲ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ ಬಾಗ್ಯ ಬೇಟಗೇರಿ, ರಾಜೇಶ್ವರಿ, ಹಿರೇಮಠ, ಬಸವರಾಜ್ ಅಂಬಿಗೇರ, ಶಿವಾನಂದ ಲೆಕ್ಕನ್ನವರ, ರಾಚಪ್ಪ ಸನದಿ, ದಾದಾಪೀರ್ ಶಿವಳ್ಳಿ, ಹುಚ್ಚಪ್ಪ ಯಡಹಳ್ಳಿ, ಮಂಜುನಾಥ ಯಡಹಳ್ಳಿ, ಹಸನ್ ಕಲಕಬಂಡಿ ಹಾಗೂ ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.