ಎನ್‌ಸಿಇಆರ್‌ಟಿ ಪಠ್ಯದಿಂದ ‘ಇಂಡಿಯಾ’ ಪದ ಕೈಬಿಟ್ಟು ‘ಭಾರತ್’ ಪದ ಸೇರಿಸಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಇದು ರಾಜಕೀಯ ಪ್ರೇರಿತವಾಗಿದ್ದು, ಇದರ ಹಿಂದೆ ಚುನಾವಣಾ ಉದ್ದೇಶ ಇದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಮಧು ಬಂಗಾರಪ್ಪ, ಈ ಸಮಯದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ಆದರೆ, ಬಿಜೆಪಿ ಹೆಸರು ಬದಲಾವಣೆ ಬಗ್ಗೆ ಮಾತನಾಡುತ್ತಿದೆ. ಎಸ್ಇಪಿ (ರಾಜ್ಯ ಶಿಕ್ಷಣ ನೀತಿ) ಸಭೆ ಇದೆ. ಇದು ನಮ್ಮ ಅಡಿಯಲ್ಲೇ ಇರುತ್ತದೆ. ಕೇಂದ್ರ ಸರ್ಕಾರಕ್ಕೆ ಇದರಲ್ಲಿ ಸ್ವಾರ್ಥ ಇದೆ. ಈ ಬಗ್ಗೆ ಒಂದು ವೇಳೆ ನಮಗೆ ಶಿಫಾರಸು ಕಳಿಸಿದರೆ, ನಾವು ಎಸ್ಇಪಿ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) ಶಾಲಾ ಪಠ್ಯಕ್ರಮಗಳಲ್ಲಿ ‘ಇಂಡಿಯಾ’ ಬದಲು ‘ಭಾರತ್’ ಅನ್ನು ಬಳಸುವ ನಿರ್ಧಾರಕ್ಕೆ ಉನ್ನತ ಮಟ್ಟದ ಸಮಿತಿಯು ಇತ್ತೀಚೆಗೆ ಅನುಮೋದನೆ ನೀಡಿತ್ತು.
‘ಭಾರತ್ ಎಂಬುದು ಹಳೆಯ ಹೆಸರು. ಭಾರತ ಎಂಬ ಹೆಸರಿನ ಬಳಕೆಯು 7,000 ವರ್ಷಗಳಷ್ಟು ಹಳೆಯದು. ಅಂದರೆ ವಿಷ್ಣು ಪುರಾಣದಂತಹ ಪ್ರಾಚೀನ ಗ್ರಂಥಗಳಲ್ಲೂ ಕೂಡ ಅದರ ಉಲ್ಲೇಖವಿದೆ. ಹಾಗಾಗಿ, ಹೊಸ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಂಬಂಧಿಸಿ ನೇಮಕ ಮಾಡಲಾಗಿದ್ದ ಏಳು ಸದಸ್ಯರ ಸಮಿತಿಯು ಸರ್ವಾನುಮತದಿಂದ ಈ ಶಿಫಾರಸು ಮಾಡಿದೆ’ ಎಂದು ಸಮಿತಿಯ ಅಧ್ಯಕ್ಷ ಸಿಐ ಐಸಾಕ್ ಹೇಳಿಕೆ ನೀಡಿದ್ದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿತ್ತು. ಈ ವೇಳೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಅದನ್ನು ಜಾರಿಗೆ ತಂದಿತ್ತು. ಆದರೆ, ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕಾರಣ, ಎನ್‌ಇಪಿ ಬದಲಿಗೆ ರಾಜ್ಯದಲ್ಲಿ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಜಾರಿಗೆ ತಂದಿದೆ.
ಇದನ್ನು ಓದಿದ್ದೀರಾ? ಎನ್‌ಇಪಿ ಬದಲಿಗೆ ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಿದ ಸರ್ಕಾರ
‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಧಿಕ್ಕರಿಸಿದ್ದ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವು, ‘ರಾಜ್ಯ ಶಿಕ್ಷಣ ನೀತಿ’ ರೂಪಿಸಲು ಸಮಿತಿ ರಚಿಸಿ ಅಕ್ಟೋಬರ್ 11ರಂದು ಆದೇಶ ಹೊರಡಿಸಿತ್ತು.
ಶಿಕ್ಷಣ ತಜ್ಞ ಹಾಗೂ ಯುಜಿಸಿಯ ಮಾಜಿ ಅಧ್ಯಕ್ಷ ಪ್ರೊ.ಸುಖ್‌ದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ 15 ಮಂದಿಯನ್ನೊಳಗೊಂಡ ಸಮಿತಿಯನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಜೊತೆಗೆ ಎಂಟು ಮಂದಿ ವಿಷಯ ತಜ್ಞರ ಹೆಸರನ್ನೂ ಕೂಡ ಸರ್ಕಾರ ಪ್ರಕಟಿಸಿತ್ತು.