“ಭಾರತದ 7% ಜನರ ಕೈಯಲ್ಲಿ 47% ಭೂಮಿ ಇದೆ. ಉತ್ತರ ಪ್ರದೇಶ, ಬಿಹಾರ್, ಮಧ್ಯಪ್ರದೇಶ ಸೇರಿದಂತೆ ಬಹಳ ದೊಡ್ಡ ರಾಜ್ಯಗಳಲ್ಲಿ ಇನ್ನೂ ಕೂಡ ಭೂ ಮಸೂದೆ ಜಾರಿಗೆ ಬಂದಿಲ್ಲ. ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸುಮಾರು 68% ಭೂ ಮಸೂದೆ ಜಾರಿಗೆ ಬಂದಿದೆ. ಆದರೆ, ಉಳಿದವರಿಗೆ ಏನಾಗಿದೆ ಎಂಬುದು ಪ್ರಶ್ನೆ. ಅರ್ಜಿ ಹಾಕಿದವರು ಮತ್ತು ಎಷ್ಟು ಜನಕ್ಕೆ ಭೂಮಿ ಸಿಕ್ಕಿದೆ ಎಂಬ ಬಗ್ಗೆ ಲೆಕ್ಕ ಇದೆ. ಆದರೆ, ಅರ್ಜಿ ಹಾಕುವುದಕ್ಕೆ ಬಿಡದೆ, ಊರು ಬಿಟ್ಟು ಓಡಿಸಿದರ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ, ಪ್ರಜಾ ಪ್ರಭುತ್ವದ ಮಾದರಿಯಲ್ಲಿ ಭೂಮಿಯ ಪುನರ್ ವಿತರಣೆ ಬಗ್ಗೆ ಮತ್ತೆ ಗಂಭೀರವಾದ ಹೋರಾಟ ಮಾಡಬೇಕಿದೆ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ಬೆಂಗಳೂರಿನ ಗಾಂಧಿಭವನದಲ್ಲಿ ಶೋಷಿತ ಸಮುದಾಯಗಳ ಮಂಥನಾ ಸಮಾವೇಶವನ್ನು ಪೀಠಿಕೆ ಓದುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು, “2024ನೇ ಇಸವಿಯಲ್ಲಿ ಇರುವ ನಾವು ಭಾರತೀಯರು. ಇಲ್ಲಿರುವ ಶೋಷಿತರು ಅನುಭವಿಸುತ್ತಿರುವ ಬಿಕ್ಕಟ್ಟುಗಳು ಈಗ ಹಿಂದಿನಂತಿಲ್ಲ. ಹೊಸ ರೂಪವನ್ನ ಪಡೆದುಕೊಳ್ಳುತ್ತಿವೆ. ಹೊಸರೂಪವನ್ನ ಪಡೆದುಕೊಳ್ಳುತ್ತಿರುವ ಶೋಷಣೆಯ ಸ್ವರೂಪಗಳ ಬಗ್ಗೆ ಹೆಚ್ಚು ಹೆಚ್ಚು ಎಚ್ಚರದಿಂದ ಅಭ್ಯಾಸ ಮಾಡಿ, ವೈರಿಗಳ ಹುನ್ನಾರವನ್ನ ಬಯಲು ಮಾಡುತ್ತ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ. ಆದರೆ, ಹೊಸ ಶೋಷಣೆಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದು ನಮ್ಮ ಮುಂದೆ ಇರುವ ಬಹುದೊಡ್ಡ ಸವಾಲು. ಹಾಗಾಗಿ, ಇಂತಹ ಚಿಂತನ-ಮಂಥನ ಸಮಾವೇಶಗಳು ಇನ್ನೂ ಹೆಚ್ಚು ನಡೆಯಬೇಕಿದೆ” ಎಂದರು.
“ನಮ್ಮ ದೇಶದಲ್ಲಿ 13% ಮಹಿಳೆಯರು ಮಾತ್ರ ಭೂಮಿ ಹೊಂದಿದ್ದಾರೆ. ಹಾಗಿದ್ದರೆ, ಮಹಿಳಾ ಪರ ಕಾನೂನುಗಳು ಏನಾದವು? ನಮ್ಮ ದೇಶದಲ್ಲಿ ಶೇ.73 ಮಹಿಳೆಯರು ತಮ್ಮನ್ನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಶೇ.54 ಮಹಿಳೆಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಎರಡು ಅಂಕಿ ಅಂಶಗಳಿಂದ ದುಡಿಯುವವರಿಗೆ ದುಡಿಮೆಯ ಪ್ರತಿಫಲ ಸಿಗುವುದಿಲ್ಲ. ಸಿಗುತ್ತಿಲ್ಲ ಎಂಬುದು ಗೊತ್ತಾಗುತ್ತದೆ” ಎಂದು ತಿಳಿಸಿದರು.
“ಉಪಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ವಕ್ಫ್ ವಿಚಾರ ಮುನ್ನೆಲೆಗೆ ಬಂದಿತು. ವಕ್ಫ್ ಬಗ್ಗೆ ಇಷ್ಟು ಧೀರ್ಘವಾಗಿ ಮಾತನಾಡುವ ನಾವು ಸುಮಾರು 57% ಶೋಷಿತರಲ್ಲಿ ಜಮೀನು ಇಲ್ಲ ಎಂಬ ಬಗ್ಗೆ ನಾವೇಕೆ ಮಾತಾಡುವುದಿಲ್ಲ. 2014ರಿಂದ ಈ ದೇಶದಲ್ಲಿ 23 ಹೆಸರುಗಳಿಂದ ಆರ್ಎಸ್ಎಸ್ನವರು ಕೆಲಸ ಮಾಡುತ್ತಿದ್ದಾರೆ. ಇವರು ಹೊಂದಿರುವ ಜಮೀನು ಎಷ್ಟು ಎಂಬ ಬಗ್ಗೆ ಯಾಕೆ ನಾವು ಪ್ರಶ್ನೆ ಮಾಡುವುದಿಲ್ಲ” ಎಂದು ಕೇಳಿದರು.
“ಆರ್ಎಸ್ಎಸ್ ಹೊಂದಿರುವ ಜಮೀನು ಬಗ್ಗೆ ನಾಗರಿಕರಾಗಿ ನಾವೆಲ್ಲರೂ ಕೇಳಲೇಬೇಕಾದ ಪ್ರಶ್ನೆ. ಈ ಹಿಂದೆ ದೇಶದಲ್ಲಿ ಜಮೀನ್ದಾರರು ಮತ್ತು ಒಕ್ಕಲಿಗರ ಮಧ್ಯೆ ಸಂಬಂಧ ಇತ್ತು. ಆದರೆ, ಈಗ ಧರ್ಮ ಮತ್ತು ಒಕ್ಕಲಿಗರ ಸಂಬಂಧ ಇದೆ. ಭಾರತದ ಅತಿ ದೊಡ್ಡ ಸಮಸ್ಯೆ ಭೂಮಿಯ ಹಂಚುವಿಕೆ. ಇದು ಹೋರಾಟದ ರೂಪದಲ್ಲಿ ಬರಬೇಕಿದೆ. ಯಾರಾದರೂ ಈ ಬಗ್ಗೆ ಮಾತೆತ್ತಿದರೆ, ಅವರನ್ನು ನಕ್ಸಲರು ಎಂದು ಅವರನ್ನು ಕೊಲ್ಲಲಾಗುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ | ದಕ್ಕದ ಸಚಿವ ಸ್ಥಾನ; ಶಿವಸೇನೆ ಶಾಸಕ ರಾಜೀನಾಮೆ
“1992 ನಂತರ ಬಂದ ಜಾಗತೀಕರಣ, 2008ರ ನಂತರ ಜಾರಿಗೆ ಬಂದ ಭೂಷಣ ಪಟ್ಟವರ್ಧಿ ಕಮಿಟಿ, 2022ರ ನಂತರ ಜಾರಿಗೆ ಬಂದ ಎನ್ಇಪಿಯಲ್ಲಿ ಸಾಮಾಜಿಕ ನ್ಯಾಯ ಎನ್ನುವುದು ಸಂಪೂರ್ಣ ಅಪ್ರಸ್ತುತವಾಗಿದೆ. ಹಾಗಾಗಿ, ನಮ್ಮ ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯ ತರುವ ಬಗೆ ಹೇಗೆ? ಶೋಷಿತ ಸಮುದಾಯ ಶಿಕ್ಷಣ ಕ್ರಮದಿಂದ ಸಂಪೂರ್ಣ ದೂರವಾಗಿದೆ. ಇದಕ್ಕೆ ಪೂರಕವಾಗಿರುವುದು ಇನ್ನೊಂದು ಮೀಸಲಾತಿ ಸಮಸ್ಯೆ” ಎಂದು ತಿಳಿಸಿದರು.