ಯೆಮನ್ ಮೂಲಕ ಗಡಿ ದಾಟಲು ಪ್ರಯತ್ನಿಸುತ್ತಿದ್ದ ನೂರಾರು ಇಥಿಯೋಪಿಯನ್ ವಲಸಿಗರನ್ನು ಸೌದಿ ಅರೇಬಿಯಾ ಯೋಧರು ಅಮಾನುಷವಾಗಿ ಕೊಂದಿದ್ದಾರೆ ಎಂದು ನ್ಯೂಯಾರ್ಕ್ ಮೂಲದ ಮಾನವ ಹಕ್ಕುಗಳ ಕಾವಲು ಪಡೆ(HRW) ಆರೋಪಿಸಿದೆ.
73 ಪುಟಗಳ ಮಾನವ ಹಕ್ಕುಗಳ ಕಾವಲು ಪಡೆ ತನ್ನ ವರದಿಯಲ್ಲಿ, ಹತ್ಯೆಗೀಡಾದ ಇಥಿಯೋಪಿಯನ್ ವಲಸಿಗರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ವಲಸಿಗರನ್ನು ಕೊಲ್ಲಲು ಸ್ಫೋಟಕ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಮತ್ತು ಕೆಲವರನ್ನು ಹತ್ತಿರದಿಂದ ಗುಂಡು ಹಾರಿಸಲಾಗಿದೆ ಎಂದು ತಿಳಿಸಿದೆ.
ಮಾರ್ಚ್ 2022 ಮತ್ತು ಜೂನ್ 2023ರ ನಡುವೆ ಯೆಮೆನ್ ಗಡಿ ಮೂಲಕ ಸೌದಿ ಅರೇಬಿಯಾವನ್ನು ದಾಟಲು ಪ್ರಯತ್ನಿಸಿದ 38 ಇಥಿಯೋಪಿಯನ್ನರು ಮತ್ತು ವಲಸಿಗರ ನಾಲ್ಕು ಸಂಬಂಧಿಕರು ಅಥವಾ ಸ್ನೇಹಿತರಿಂದ ಮಾನವ ಹಕ್ಕುಗಳ ಕಾವಲು ಪಡೆ ಸಾಕ್ಷ್ಯವನ್ನು ಸಂಗ್ರಹಿಸಿದೆ.
ಸೌದಿ ಅರೇಬಿಯಾವನ್ನು ಕಾಲ್ನಡಿಗೆಯ ಮೂಲಕ ದಾಟಲು ದೂರದ ಪರ್ವತಗಳ ಮೂಲಕ ಬಂದ ವಲಸಿಗರ ಗುಂಪುಗಳ ವಿರುದ್ಧ ನಡೆದ ದಾಳಿಗಳು ವ್ಯಾಪಕ ಹಾಗೂ ವ್ಯವಸ್ಥಿತವಾಗಿದ್ದು ಹತ್ಯೆಗಳು ಮುಂದುವರಿಯುತ್ತಿವೆ ಎಂದು ಕಾವಲುಪಡೆ ಹೇಳಿದೆ.
ಸಾಕ್ಷಿಗಳ ಸಾಕ್ಷ್ಯ ಮತ್ತು 350 ವಿಡಿಯೋಗಳು ಮತ್ತು ಗಾಯಗೊಂಡ ಮತ್ತು ಕೊಲ್ಲಲ್ಪಟ್ಟ ವಲಸಿಗರ ಫೋಟೋಗಳು ಮತ್ತು ಸೌದಿ ಅರೇಬಿಯನ್ ಯೋಧರು ಇರುವ ಸ್ಥಳವನ್ನು ತೋರಿಸುವ ಉಪಗ್ರಹ ಚಿತ್ರಣವನ್ನು ವರದಿಯು ಆಧರಿಸಿದೆ.
ಈ ಸುದ್ದಿ ಓದಿದ್ದೀರಾ? ಈರುಳ್ಳಿ ಕೊಂಡುಕೊಳ್ಳುವ ಸಾಮರ್ಥ್ಯವಿಲ್ಲದವರು ಕೆಲ ತಿಂಗಳು ತಿನ್ನಬೇಡಿ ಎಂದ ಮಹಾ ಸಚಿವ
ಶವಗಳು, ಗಾಯಗೊಂಡ ಜನರು, ಸಮಾಧಿಗಳನ್ನು ಅಗೆಯುವುದು ಮತ್ತು ಪರ್ವತದ ಹಾದಿಗಳಲ್ಲಿ ಸಂಚರಿಸುವ ಜನರ ಗುಂಪುಗಳನ್ನು ತೋರಿಸುವ ಕಾವಲು ಪಡೆ ಒದಗಿಸಿದ ವಿಡಿಯೋ ತುಣುಕುಗಳನ್ನು ಸುದ್ದಿ ಸಂಸ್ಥೆಯೊಂದು ಸ್ವತಂತ್ರವಾಗಿ ವಿಶ್ಲೇಷಿಸಿದೆ.
ರಸ್ತೆಗಳು, ಕಟ್ಟಡಗಳು ಮತ್ತು ಪರ್ವತಗಳ ಆಕಾರವು ಉಪಗ್ರಹ ಮತ್ತು ಭೂಪ್ರದೇಶದ ಚಿತ್ರಣವನ್ನು ಹೊಂದಿದ್ದು, ವಿಡಿಯೋಗಳನ್ನು ಯೆಮೆನ್-ಸೌದಿ ಗಡಿಯಲ್ಲಿ ಚಿತ್ರೀಕರಿಸಲಾಗಿದೆ.
ಸೌದಿ ಅರೇಬಿಯಾದ ದಕ್ಷಿಣ ಮತ್ತು ಯೆಮನ್ ಉತ್ತರ ಗಡಿ ಪ್ರದೇಶದಲ್ಲಿ ಸೌದಿ ರಕ್ಷಣಾ ಪಡೆಗಳು ನಡೆಸಿದ ಶೆಲ್ ಹಾಗೂ ಲಘು ಶಸ್ತ್ರಾಸ್ತ್ರ ದಾಳಿಯಿಂದಾಗಿ ಸುಮಾರು 430 ವಲಸಿಗರು ಮೃತಪಟ್ಟಿದ್ದಾರೆ ಎಂದು ಕಳೆದ ವರ್ಷ ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿತ್ತು.
ತಮ್ಮ ಹೆಸರನ್ನು ಹೇಳಲು ನಿರಾಕರಿಸಿರುವ ಸೌದಿ ಅಧಿಕಾರಿಯೊಬ್ಬರು, ಮಾನವ ಹಕ್ಕುಗಳ ಕಾವಲು ಪಡೆಯ ಆರೋಪಗಳು “ಆಧಾರರಹಿತ ಮತ್ತು ವಿಶ್ವಾಸಾರ್ಹ ಮೂಲಗಳನ್ನು ಆಧರಿಸಿಲ್ಲ” ಎಂದು ಸರ್ಕಾರದ ಮಾಧ್ಯಮ ಕಚೇರಿಯ ಪ್ರಶ್ನೆಗಳಿಗೆ ಇಮೇಲ್ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಯೋಧರು ವ್ಯವಸ್ಥಿತವಾಗಿ ವಲಸಿಗರನ್ನು ಕೊಂದಿದ್ದಾರೆ ಎಂದು 2022 ರಲ್ಲಿ ವಿಶ್ವಸಂಸ್ಥೆ ಅಧಿಕಾರಿಗಳು ಮಾಡಿದ ಆರೋಪಗಳನ್ನು ಸೌದಿ ಅಧಿಕಾರಿಗಳು ಬಲವಾಗಿ ನಿರಾಕರಿಸಿದ್ದಾರೆ.
ವಿಶ್ವಸಂಸ್ಥೆ ಅಧ್ಯಯನಗಳ ಪ್ರಕಾರ ಸೌದಿ ಅರೇಬಿಯಾದಲ್ಲಿ ಅಂದಾಜು 750,000 ಇಥಿಯೋಪಿಯನ್ ನಾಗರಿಕರು ವಾಸಿಸುತ್ತಿದ್ದಾರೆ. ಇಥಿಯೋಪಿಯಾದಲ್ಲಿ ಅನೇಕರು ಆರ್ಥಿಕ ಸಂಕಷ್ಟದಿಂದ ಸೌದಿ ಸೇರಿದಂತೆ ಅಕ್ಕಪಕ್ಕದ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ.