ಪುಟಿನ್‌ ಬಾಣಸಿಗ ಪ್ರಿಗೋಷಿನ್ ಯಾರು? ಪುಟಿನ್ ವಿರುದ್ಧವೇ ಬಂಡಾಯವೆದ್ದಿದ್ದೇಕೆ?

Date:

Advertisements

ವಿಶ್ವದ ಬಲಿಷ್ಠ ರಾಷ್ಟ್ರ ಹಾಗೂ ಅತೀ ಹೆಚ್ಚು ಅಣ್ವಸ್ತ್ರಗಳೊಂದಿಗೆ ಅತಿದೊಡ್ಡ ಸೇನಾಪಡೆಯನ್ನು ಹೊಂದಿರುವ ರಷ್ಯಾ ಕೇವಲ ಒಂದು ದಿನದಲ್ಲಿ ನಡೆದ ಆಂತರಿಕ ದಂಗೆಯಿಂದಾಗಿ ಬೆಚ್ಚಿ ಬೆದರಿತ್ತು. ಸ್ವತಃ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ತಾನು ಅಧಿಕಾರ ಕಳೆದುಕೊಳ್ಳುತ್ತೇನೆಂಬ ಆತಂಕ ಶುರುವಾಗಿತ್ತು. ಇವೆಲ್ಲದಕ್ಕೂ ಕಾರಣವಾಗಿದ್ದು ವ್ಯಾಗ್ನರ್ ಎಂಬ ಖಾಸಗಿ ಸೇನಾಪಡೆಯ ಮುಖ್ಯಸ್ಥ 62 ವಯಸ್ಸಿನ ಯೆವ್ಗೆನಿ ಪ್ರಿಗೋಷಿನ್.

ಅಸಲಿಗೆ ಯೆವ್ಗೆನಿ ಪ್ರಿಗೋಷಿನ್ ಯಾರು? ಹಿನ್ನೆಲೆ ಕೆದಕಿದರೆ ಸಣ್ಣ ವಯಸ್ಸಿನಲ್ಲಿಯೇ ಅಪರಾಧಿ, 12 ವರ್ಷಗಳ ಜೈಲು ಶಿಕ್ಷೆ, ಅಮೆರಿಕಕ್ಕೆ ವಂಚನೆ ಮುಂತಾದ ವಿಲಕ್ಷಣ ಕಾರಣಗಳೊಂದಿಗೆ ಬಿಚ್ಚಿಕೊಳ್ಳುವ ಈತನ ಬದುಕಿನ ಹಾದಿಯೇ ರೋಚಕವಾಗಿದೆ.

yevgeny prigozhin 2

ಬಾಲ್ಯದಲ್ಲಿಯೇ ಅಪರಾಧಿ

Advertisements

1961 ಜೂನ್‌ 1ರಂದು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಜನಿಸಿದ ಯೆವ್ಗೆನಿ ಪ್ರಿಗೋಷಿನ್ ಕೆಲವೇ ವರ್ಷಗಳಲ್ಲಿ ತಂದೆಯನ್ನು ಕಳೆದುಕೊಂಡು ತಾಯಿ ಹಾಗೂ ಅಜ್ಜಿಯ ಆರೈಕೆಯಲ್ಲಿ ಬೆಳೆಯಬೇಕಾಯಿತು. ಸ್ಥಳೀಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಈತನ ತಾಯಿ ಮತ್ತೊಂದು ಮದುವೆಯಾದ ಕಾರಣ ಮಲತಂದೆಯ ಆಶ್ರಯ ಪ್ರಿಗೋಷಿನ್‌ಗೆ ದೊರಕಿತು. ಈತನ ತಂದೆ ಹಾಗೂ ಮಲತಂದೆ ಯಹೂದಿ ಮೂಲದವರು. ತನ್ನ ಶಾಲಾ ದಿನಗಳಲ್ಲಿ ಪ್ರಿಗೋಷಿನ್‌ ಮರಳುಗಾಡಿನ ಸ್ಕೇಟಿಂಗ್‌ ಆಟಗಾರನಾಗಬೇಕೆಂಬ ಬಯಕೆ ಹೊಂದಿದ್ದ. ದೈಹಿಕ ಶಿಕ್ಷಣ ಬೋಧಕರಾಗಿದ್ದ ಈತನ ಮಲತಂದೆಯಿಂದ ತರಬೇತಿ ಕೂಡ ಪಡೆದುಕೊಂಡಿದ್ದ. ಆದರೆ ಕಾಲಾನಂತರದಲ್ಲಿ ಇದ್ಯಾವುದು ನೆರವೇರಲಿಲ್ಲ. ಪ್ರತಿಷ್ಠಿತ ಅಥ್ಲೆಟಿಕ್ಸ್ ಬೋರ್ಡಿಂಗ್ ಶಾಲೆಯಲ್ಲಿ ಈತ 1977 ರಲ್ಲಿ ಪದವಿ ಪಡೆದ.

ಆದರೆ ಚಿಕ್ಕವನಿರುವಾಗಲೇ ಬಾಲಪರಾಧಿಗಳೊಂದಿಗೆ ಗೆಳೆತನ ಬೆಳೆಸಿಕೊಂಡಿದ್ದ. 1980 ರಲ್ಲಿ ಹಲವಾರು ಹಿಂಸಾತ್ಮಕ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅದೇ ಕಾರಣಕ್ಕೆ ಯೆವ್ಗೆನಿ ಪ್ರಿಗೋಷಿನ್ ಗೆ 12 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲಿಗೆ ಹೋದಾಗ ಆತನಿಗೆ 20ರ ಹರೆಯ. ಯೌವನದ ಬಹುಪಾಲು ಸಮಯವನ್ನು ಜೈಲಿನಲ್ಲಿಯೇ ಕಳೆದು 1990 ರಲ್ಲಿ ಸೆರೆಮನೆಯಿಂದ ಬಿಡುಗಡೆಯಾದ.

ಯೆವ್ಗೆನಿ ಪ್ರಿಗೋಷಿನ್ ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟ ಛಿದ್ರವಾಗುವ ಹಂತದಲ್ಲಿತ್ತು. ಆ ಸಂದರ್ಭದಲ್ಲಿ ಆತ ತನ್ನ ತಾಯಿ ಮತ್ತು ಮಲತಂದೆಯೊಂದಿಗೆ ಸಣ್ಣ ಪ್ರಮಾಣದಲ್ಲಿ ತಿಂಡಿ ತಿನಿಸು ಮಾರಾಟ ಮಾಡುವ ವೃತ್ತಿಯನ್ನು ಪ್ರಾರಂಭಿಸಿದ. ತುಂಬಾ ಕಡಿಮೆ ಸಮಯದಲ್ಲಿಯೇ, ತನ್ನ ತವರು ನಗರ ಪೀಟರ್ಸ್‌ಬರ್ಗ್‌ನಲ್ಲಿ ಅಂದಿನ ಕಾಲಕ್ಕೆ ಅತ್ಯುತ್ತಮ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಸೂಪರ್‌ಮಾರ್ಕೆಟ್ ಘಟಕಗಳ ಪಾಲು ಪಡೆದುಕೊಂಡ.

yevgeny prigozhin 4

ಈ ಸುದ್ದಿ ಓದಿದ್ದೀರಾ? ರಷ್ಯಾದ ಆಂತರಿಕ ಬಂಡಾಯ ಶಮನ; ಬೆಲಾರಸ್ ಅಧ್ಯಕ್ಷನ ಮಧ್ಯಸ್ಥಿಕೆಯಿಂದ ಹೋರಾಟ ಕೈಬಿಟ್ಟ ಪ್ರಿಗೋಷಿನ್

ಪುಟಿನ್ ಸ್ನೇಹ, ಜಾರ್ಜ್ ಬುಷ್‌ಗೂ ಆತಿಥ್ಯ

ಯೆವ್ಗೆನಿ ಪ್ರಿಗೋಷಿನ್ ಸೂಪರ್‌ಮಾರ್ಕೆಟ್ ಘಟಕಗಳ ಜೊತೆ, ಜೂಜಿನ ವ್ಯವಹಾರ, ಮಾರುಕಟ್ಟೆ ಸಂಶೋಧನೆ ಮತ್ತು ವಿದೇಶಿ ವ್ಯಾಪಾರ ಸೇರಿದಂತೆ ವಿವಿಧ ವ್ಯವಹಾರಗಳಲ್ಲಿ ಕೂಡ ತೊಡಗಿಸಿಕೊಂಡಿದ್ದ. ಆಗಲೇ ಆತ ವ್ಲಾಡಿಮಿರ್ ಪುಟಿನ್ ಸೇರಿದಂತೆ ದೊಡ್ಡ ದೊಡ್ಡ ವ್ಯಕ್ತಿಗಳ ವಿಶ್ವಾಸ ಗಳಿಸಿಕೊಂಡು ಅವರಿಗಾಗಿ ಕೆಲಸ ಮಾಡತೊಡಗಿದ್ದ. ಪ್ರಿಗೋಷಿನ್‌ನ ಹಲವು ವ್ಯವಹಾರಗಳ ಏಳುಬೀಳುಗಳು ಒಂದು ದಶಕಕ್ಕೂ ಹೆಚ್ಚು ಕಾಲ ನಡೆಯಿತು. ಈತನ ವ್ಯವಹಾರ ಪ್ರಿನ್ಸ್ ಚಾರ್ಲ್ಸ್ ಮತ್ತು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರಿಗೆ ಆತಿಥ್ಯ ನೀಡುವಷ್ಟು ದೊಡ್ಡದಾಗಿ ಬೆಳೆಯಿತು. ಸರ್ಕಾರದ ಪ್ರಮುಖ ನಾಯಕರ ಬೆಂಬಲವಿರುವ ಕಾರಣ ದೊಡ್ಡ ದೊಡ್ಡ ಗುತ್ತಿಗೆಗಳಿಂದ ಈತ ಅತಿ ಬೇಗನೆ ಭಾರೀ ಪ್ರಮಾಣದ ಆಸ್ತಿ ಸಂಪಾದಿಸಿದ. ಈ ನಡುವೆಯಲ್ಲಿಯೇ ಸೇಂಟ್ ಪೀಟರ್ಸ್‌ಬರ್ಗ್‌ ಮೇಯರ್‌ ಸೇರಿದಂತೆ ಕೆಲವು ರಾಜಕೀಯ ಹುದ್ದೆಗಳನ್ನು ನಿಭಾಯಿಸಿದ.

yevgeny prigozhin 5

ಪುಟಿನ್‌ ಬೆಂಬಲದಿಂದ ವ್ಯಾಗ್ನರ್ ಪಡೆ

2000ರಲ್ಲಿ ವ್ಲಾಡಿಮಿರ್ ಪುಟಿನ್ ರಷ್ಯಾದ ಅಧ್ಯಕ್ಷರಾದ ನಂತರ ಪ್ರಿಗೋಷಿನ್‌ ವ್ಯವಹಾರಗಳು ಮತ್ತಷ್ಟು ಹೆಚ್ಚಾದವು. ರಷ್ಯಾ ಸರ್ಕಾರದ ಮಿಲಿಟರಿ ಮತ್ತು ಶಾಲಾ ಆಹಾರ ಒಪ್ಪಂದಗಳು ಈತನಿಗೆ ಸುಲಭವಾಗಿ ಸಿಗತೊಡಗಿದವು. ಇನ್ನೊಂದು ಪ್ರಮುಖ ವಿಚಾರವೆಂದರೆ ರಷ್ಯಾದಲ್ಲಿ ಪ್ರಸ್ತುತ ನಡೆಯುತ್ತಿರುವ ದಂಗೆಯ ಮೂಲ ಒಂದು ದಶಕದ ಹಿಂದಿನ ಘಟನಾವಳಿಗಳಿಗೆ ಬೆಸೆದುಕೊಂಡಿದೆ. ದಶಕದ ಹಿಂದೆ 2014ರಲ್ಲಿ ರಷ್ಯಾ ಅಕ್ರಮವಾಗಿ ಕ್ರಿಮಿಯನ್ ಪರ್ಯಾಯ ದ್ವೀಪವನ್ನು ಸ್ವಾಧೀನಪಡಿಸಿಕೊಂಡಿತ್ತು ಮತ್ತು ಪೂರ್ವ ಉಕ್ರೇನ್‌ಗೆ ಅನಾಮಧೇಯ ಸೇನಾ ಪಡೆಗಳನ್ನು ಕಳುಹಿಸಿತ್ತು.

ಆಗಲೇ ಪ್ರಿಗೋಷಿನ್‌ 2014ರಲ್ಲಿ ವ್ಯಾಗ್ನರ್​ ಎಂಬ ಖಾಸಗಿ ಸೇನೆಯನ್ನು ಪುಟಿನ್‌ ಬೆಂಬಲದಿಂದಲೇ ಸ್ಥಾಪಿಸಿ, ಆತನ ಪರವಾಗಿ ಹೋರಾಡಿದ್ದ. ಅನಂತರ ಸಿರಿಯಾದಲ್ಲಿ ಅಪ್ರತಿಮ ಹೋರಾಟ ನಡೆಸಿದ ವ್ಯಾಗ್ನರ್ ಪಡೆಗಳು ಪ್ರಥಮ ಬಾರಿಗೆ ತಮ್ಮ ಶಕ್ತಿ ಸಾಮರ್ಥ್ಯ ತೋರಿದವು. ಪ್ರಿಗೋಷಿನ್‌ ಕೆಲ ವರ್ಷಗಳಲ್ಲಿ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಉಕ್ರೇನಿನಾದ್ಯಂತ ವ್ಯಾಗ್ನರ್ ಪಡೆಯನ್ನು ಪ್ರಬಲ ಶಕ್ತಿಯಾಗಿ ನಿರ್ಮಿಸಿದ. 50 ಸಾವಿರಕ್ಕೂ ಹೆಚ್ಚು ಯೋಧರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವ್ಯಾಗ್ನರ್​ ಗುಂಪನ್ನು ಅಧಿಕೃತವಾಗಿ ಪ್ಯಾರಾ ಮಿಲಿಟರಿ ಪಡೆ ಎಂದು ಕರೆಯಲಾಗುತ್ತದೆ.

Yevgeny Prigozhin 1

ಹಲವು ದೇಶಗಳಿಗೆ ರಕ್ಷಣೆ

ಇದು ರಷ್ಯಾದ ಖಾಸಗಿ ಅರೆಕಾಲಿಕ ಸಂಸ್ಥೆ. ಮೂಲತಃ ಖಾಸಗಿ ಮಿಲಿಟರಿ ಕಂಪನಿ ಮತ್ತು ಕೂಲಿ ಕಾರ್ಮಿಕರ ಜಾಲ. ವಾಸ್ತವವಾಗಿ ಈ ಹೆಸರಿನಲ್ಲಿ ಯಾವುದೇ ಕಂಪನಿ ನೋಂದಣಿಯಾಗಿಲ್ಲ. ಅಲ್ಲದೆ ಖಾಸಗಿ ಸೈನ್ಯವನ್ನು ನಡೆಸುವುದು ಕಾನೂನಿನ ಅಡಿಯಲ್ಲಿ ರಷ್ಯಾದಲ್ಲಿ ಅಪರಾಧವಾಗಿದೆ. ಆದರೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೆಚ್ಚು ಆಪ್ತವಾಗಿರುವ ಕಾರಣ ಆತನ ತಾಳಕ್ಕೆ ತಕ್ಕಂತೆ ಕುಣಿಯುತ್ತಿತ್ತು.

ವ್ಯಾಗ್ನರ್ ಪಡೆ ಲಿಬಿಯಾ ಅಂತರ್ಯುದ್ಧ, ಮೊಜಾಂಬಿಕ್, ಮಾಲಿ, ಸುಡಾನ್, ಆಫ್ರಿಕನ್ ರಿಪಬ್ಲಿಕ್ ಮತ್ತು ವೆನಿಜುವೆಲಾದಂತಹ ದೇಶಗಳಲ್ಲಿ ಕಾರ್ಯಾಚರಣೆ ನಡೆಸಿದೆ. ಉಕ್ರೇನ್‌ ಯುದ್ಧದಲ್ಲಿ ಈ ಪಡೆಯ ಯೋಧರು ಹೆಚ್ಚು ಪರಾಕ್ರಮ ತೋರಿದ್ದಾರೆ. ಹಲವು ಪ್ರದೇಶಗಳು ವಶವಾಗಲು ಈ ಸೇನೆ ತೋರಿದ ಸಾಹಸವೆ ಕಾರಣ ಎನ್ನಲಾಗುತ್ತದೆ. ಇದಲ್ಲದೆ ರಷ್ಯಾದ ತೈಲ ಕ್ಷೇತ್ರಗಳನ್ನು ಈ ಗುಂಪು ಕಾವಲು ಕಾಯುತ್ತಿದೆ. ಲಿಬಿಯಾದಲ್ಲಿ ಜನರಲ್ ಖಲೀಫಾ ಹಫ್ತಾರ್‌ಗೆ ನಿಷ್ಠರಾಗಿರುವ ಪಡೆಗಳಿಗೆ ಬೆಂಬಲಿಸುತ್ತಿದೆ. ಮಧ್ಯ ಆಫ್ರಿಕನ್ ರಿಪಬ್ಲಿಕ್ ವಜ್ರದ ಗಣಿಗಳಿಗೆ, ಸುಡಾನ್‌ನಲ್ಲಿ ಚಿನ್ನದ ಗಣಿಗಳಿಗೆ ರಕ್ಷಣೆ ಕೂಡ ನೀಡುತ್ತಿದೆ.

putin and yevg

ಈ ಸುದ್ದಿ ಓದಿದ್ದೀರಾ? ಮೋದಿಯನ್ನು ಹೊಗಳುವ ಅಮೆರಿಕ ಅಧ್ಯಕ್ಷರ ಅಸಲಿಯತ್ತೇನು? ಇಲ್ಲಿದೆ ನೋಡಿ…

ಅಮೆರಿಕದ ಎಫ್‌ಬಿಐಗೆ ಬೇಕಾಗಿರುವ ವ್ಯಕ್ತಿ

ಪಿತೂರಿ ನಡೆಸಿರುವ ಕಾರಣಕ್ಕಾಗಿ ಅಮೆರಿಕದ ಗುಪ್ತಚರ ಸಂಸ್ಥೆ ಎಫ್‌ಬಿಐಗೆ ಕೂಡ ಪ್ರಿಗೋಷಿನ್‌ ಬೇಕಾಗಿದ್ದಾನೆ. 2014 ರಿಂದ 2018 ರವರೆಗೆ ಸೇಂಟ್ ಪೀಟರ್ಸ್‌ಬರ್ಗ್ ಮತ್ತು ಫ್ಲೋರಿಡಾ ಮೂಲದ ಪ್ರಿಗೋಷಿನ್‌ ಮಾಲೀಕತ್ವದ ಇಂಟರ್ನೆಟ್ ರಿಸರ್ಚ್ ಏಜೆನ್ಸಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರವಾಗಿ ಪ್ರಚಾರ ಮಾಡಿತ್ತು. ಅಲ್ಲದೆ ‘ಡೆಬಾಲ್ಟ್ಸೆವ್ ಕದನ’ದಲ್ಲಿ ಈತನ ಕೈವಾಡವೂ ಇತ್ತು. ಈ ಆರೋಪಗಳಿಗಾಗಿ ಎಫ್‌ಬಿಐ ಈತನ ಮೇಲೆ 2,50,000 ಡಾಲರ್ ಬಹುಮಾನ ಘೋಷಿಸಿದೆ.

Putin 1 1

ಪುಟಿನ್‌ ವಿರುದ್ಧ ಬಂಡಾಯವೆದ್ದಿದ್ದೇಕೆ?

ಸಾಮಾನ್ಯ ಉದ್ಯಮಿಯಾಗಿದ್ದ ಪ್ರಿಗೋಷಿನ್‌ ತಾನು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ಬೆನ್ನೆಲುಬಾಗಿದ್ದ ವ್ಲಾಡಿಮಿರ್ ಪುಟಿನ್ ವಿರುದ್ಧವೇ ತಿರುಗಿ ಬೀಳಲು ಕಾರಣವೇನು ಎಂಬುದಕ್ಕೆ ಪ್ರಮುಖ ವಿಷಯಗಳು ತೆರೆದುಕೊಳ್ಳುತ್ತವೆ.

ವ್ಯಾಗ್ನರ್ ಗುಂಪು ಒಂದು ದಶಕದಿಂದಲೂ ರಷ್ಯಾ ಪರವಾಗಿ ಉಕ್ರೇನ್ ಸೇರಿದಂತೆ ಹಲವು ದೇಶಗಳಲ್ಲಿ ಮುಂಚೂಣಿಯಲ್ಲಿ ಹೋರಾಟ ನಡೆಸುತ್ತಿದೆ. ಆದರೆ ಕೆಲವು ವಿಚಾರಗಳಲ್ಲಿ ವ್ಯಾಗ್ನರ್ ಗುಂಪು ರಷ್ಯಾ ಸೇನೆ ವಿರುದ್ಧ ಅಸಮಾಧಾನಗೊಂಡಿತ್ತು. ಕೆಲವು ವರ್ಷಗಳಿಂದ ತಮ್ಮ ಸೈನಿಕರಿಗೆ ಸಾಕಷ್ಟು ಶಸ್ತ್ರಾಸ್ತ್ರಗಳು ಮತ್ತು ಸಂಪನ್ಮೂಲಗಳನ್ನು ಒದಗಿಸಿಲ್ಲ ಹಾಗೂ ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರು ಮಿಲಿಟರಿ ಜನರಲ್‌ಗಳೊಂದಿಗೆ ಸೇರಿ ವ್ಯಾಗ್ನರ್ ಗುಂಪನ್ನು ನಾಶಮಾಡಲು ಬಯಸುತ್ತಿದ್ದಾರೆ ಎನ್ನುವುದು ಪ್ರಿಗೋಷಿನ್‌ ಆರೋಪ.

ರಷ್ಯಾ ಸೇನೆ, ವ್ಯಾಗ್ನರ್ ನಡುವಿನ ಸಮರದಲ್ಲಿ ವ್ಯಾಗ್ನರ್ ಗುಂಪನ್ನೇ ತಮ್ಮ ನೇರ ಸುಪರ್ದಿಗೆ ಪಡೆಯಲು ರಷ್ಯಾ ಸೇನೆ ಯತ್ನಿಸಿತ್ತು. ಕೆಲವು ಒಪ್ಪಂದಗಳಿಗೆ ಸಹಿ ಹಾಕಿಸಿಕೊಳ್ಳಲು ಮುಂದಾಗಿತ್ತು ಎಂಬ ಕಾರಣದಿಂದ ಸರ್ಕಾರವನ್ನೇ ವಶಪಡಿಸಿಕೊಳ್ಳಲು ಯತ್ನಿಸಿತ್ತು.

ಇವೆಲ್ಲ ಕಾರಣಗಳಿಂದ ಇಂದು ಜಾಗತಿಕ ಮಟ್ಟದಲ್ಲಿ ಪುಟಿನ್ ಎಷ್ಟು ಸುದ್ದಿಯಲ್ಲಿದ್ದಾರೋ, ಅಷ್ಟೇ ಪ್ರಮಾಣದಲ್ಲಿ ಪುಟಿನ್‌ನ ಒಂದು ಕಾಲದ ಬಾಣಸಿಗ ಪ್ರಿಗೋಷಿನ್ ಸುದ್ದಿಯಲ್ಲಿದ್ದಾನೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X