ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದವರ ವಿರುದ್ಧವೇ ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ವಿಜಯಪುರಕ್ಕೇ ಕರೆಸಿಕೊಂಡಿರುವ ಅವರ ಬೆಂಬಲಿಗರು, ಪರೋಕ್ಷವಾಗಿ ಯತ್ನಾಳ್ ಬಾಯಿ ಮುಚ್ಚಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷನಾದ ಬಳಿಕ ಮೊದಲ ಬಾರಿಗೆ ವಿಜಯಪುರಕ್ಕೆ ಆಗಮಿಸಿದ ಬಿ ವೈ ವಿಜಯೇಂದ್ರ ಅವರಿಗೆ ಕಾರ್ಯಕರ್ತರು ಹಾಗೂ ಬಿಜೆಪಿ ಅಭಿಮಾನಿಗಳು ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಆದರೆ ಈ ಸಮಾರಂಭದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗವಹಿಸಿಯೂ ಇರಲಿಲ್ಲ.
ವಿಜಯಪುರದಲ್ಲಿ ಇಂದು ನಿರೀಕ್ಷೆ ಮೀರಿ ಸಮಾವೇಶಗೊಂಡಿದ್ದ ಕಾರ್ಯಕರ್ತರು ಹಾಗೂ ಬಿಜೆಪಿ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಲಾಯಿತು.
ಕಾರ್ಯಕರ್ತರು ಹಾಗೂ ಮುಖಂಡರ ಪ್ರೀತಿಪೂರ್ವಕ ಅಭಿನಂದನೆ ಸ್ವೀಕರಿಸಿ, ಜ್ಞಾನ ಗುಮ್ಮಟವಾಗಿರುವ ವಿಜಯಪುರ ಜಿಲ್ಲೆಯು ಪಕ್ಷದ ಸುಭದ್ರ ಕೋಟೆಯಾಗಿದ್ದು, ಮುಂಬರುವ… pic.twitter.com/vCimrCJA4x— Vijayendra Yediyurappa (@BYVijayendra) December 30, 2023
ಈ ಸಮಾರಂಭದ ಬಳಿಕ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ಸಮಾರಂಭಕ್ಕೆ ಶಾಸಕ ಯತ್ನಾಳ್ ಗೈರು ವಿಚಾರದ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ವಿಜಯೇಂದ್ರ, “ಇಲ್ಲಿ ಸಂಸದ ರಮೇಶ್ ಜಿಗಜಿಣಗಿ, ಮುರುಗೇಶ್ ನಿರಾಣಿ, ಬೆಳ್ಳುಬ್ಬಿ ಮತ್ತಿತರರು ಇದ್ದಾರೆ. ಇರುವವರ ಬಗ್ಗೆ ಮಾತನಾಡೋಣ. ಇಲ್ಲದವರ ಬಗ್ಗೆ ಮಾತನಾಡೋದು ಬೇಡ” ಎಂದು ತಿಳಿಸಿದರು.
ಯತ್ನಾಳ್ 40 ಸಾವಿರ ಕೋಟಿ ಆರೋಪದ ಬಗ್ಗೆ ಕೇಳಿದಾಗ, “ಯತ್ನಾಳ್ ಆರೋಪಗಳು ಹುಡುಗಾಟಿಕೆಯದ್ದು” ಎಂದು ಜರೆದಿದ್ದಾರೆ.
“ಆರೋಪ ಮಾಡಿರುವವರ ಹೇಳಿಕೆಗಳಲ್ಲಿ ಗಂಭೀರತೆ ಇದ್ದಿದ್ದರೆ ಉತ್ತರವನ್ನು ಕೊಡಬಹುದು. ಸತ್ಯಾಂಶ, ಹುರುಳಿದ್ದರೆ ಉತ್ತರಿಸಬಹುದು. ಆದರೆ ಹುಡುಗಾಟಿಕೆಯ ಆರೋಪಗಳಿಗೆ ಉತ್ತರ ಕೊಡುವ ಅವಶ್ಯಕತೆ ನನಗಿಲ್ಲ” ಎಂದು ತಿಳಿಸಿದರು.
“ರಾಜ್ಯ ಸರ್ಕಾರವು ಯಡಿಯೂರಪ್ಪ ಮತ್ತು ಅವರ ಕುಟುಂಬದವರ ಮೇಲೆ ಯಾವುದೇ ಅನುಕಂಪ ತೋರುವ ಅವಶ್ಯಕತೆ ಇಲ್ಲ. 40 ಸಾವಿರ ಕೋಟಿ ಆರೋಪ ಮಾಡಿರುವವರಲ್ಲಿ ದಾಖಲೆಗಳಿದ್ದರೆ ಸರ್ಕಾರಕ್ಕೆ ನೀಡಲಿ. ಅದರ ಬಗ್ಗೆ ಏನು ಮಾಡಬೇಕೆಂದು ಸರ್ಕಾರ ತೀರ್ಮಾನ ಮಾಡಿಕೊಳ್ಳಲಿ. ಅದರ ಬಗ್ಗೆ ನನಗೇನೂ ಅಂಜಿಕೆ ಇಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳುವ ಮೂಲಕ ಯತ್ನಾಳ್‌ಗೆ ಟಾಂಗ್ ನೀಡಿದ್ದಾರೆ.