ನಮ್ಮಿಂದಾಗಿಯೇ ಬಟ್ಟೆ, ಶೂ, ಮೊಬೈಲ್, ಯೋಜನೆಗಳ ಆರ್ಥಿಕ ಫಲಾನುಭವ ಹಾಗೂ ಬಿತ್ತನೆಗೆ ಧನಸಹಾಯ ಪಡೆದು, ನಮ್ಮನ್ನೇ ಟೀಕಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಶಾಸಕ, ಮಾಜಿ ಸಚಿವ ಬಬನ್‌ರಾಮ್ ಲೋನಿಕರ್ ಹೇಳಿಕೆ ನೀಡಿದ್ದಾರೆ. ವಿವಾದ ಸೃಷ್ಟಿಸಿ ಟೀಕೆ-ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅವರ ಹೇಳಿಕೆಯಿಂದ ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸಿವೆ.
ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ತಮ್ಮ ವಿಧಾನಸಭಾ ಕ್ಷೇತ್ರ ಪರ್ತೂರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲೋನಿಕರ್ ಮಾತನಾಡಿದ್ದು, ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಕೆಲವು ಜನರು ಮತ್ತು ವಿಶೇಷವಾಗಿ ಯುವಕರು ಸಾಮಾಜಿಕ ಮಾಧ್ಯಮದಲ್ಲಿ ನಮ್ಮನ್ನು ಮತ್ತು ನಮ್ಮ ಪಕ್ಷವನ್ನು ಟೀಕಿಸುತ್ತಾರೆ. ಅವರು ನಮ್ಮದೇ ಸರ್ಕಾರದಿಂದ ಬಟ್ಟೆ, ಶೂ, ಮೊಬೈಲ್ ಸೇರಿದಂತೆ ನಾನಾ ಪ್ರಯೋಜನೆಗಳನ್ನು ನಮ್ಮಿಂದಾಗಿಯೇ ಪಡೆಯುತ್ತಿದ್ದಾರೆ. ನಿಮ್ಮ ಗ್ರಾಮದಲ್ಲಿ ನಾವು ನೀರಿನ ಟ್ಯಾಂಕ್‌ಗಳು, ಕಾಂಕ್ರೀಟ್ ರಸ್ತೆಗಳು, ಫಂಕ್ಷನ್ ಹಾಲ್‌ಗಳನ್ನು ನಿರ್ಮಿಸಿದ್ದೇವೆ. ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಒದಗಿಸಿದ್ದೇವೆ. ನಮ್ಮ ಸರ್ಕಾರದ ಕಾರಣದಿಂದಾಗಿ ಅವರು ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ” ಎಂದು ಹೇಳಿದ್ದಾರೆ.
ಲೋನಿಕರ್ ಅವರ ಹೇಳಿಕೆಯನ್ನು ಸ್ವತಃ ಮಹಾರಾಷ್ಟ್ರ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಕೂಡ ಖಂಡಿಸಿದ್ದಾರೆ. “ಇಂತಹ ಹೇಳಿಕೆಗಳನ್ನು ನೀಡಬಾರದು” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ʼಮುಸ್ಲಿಮರು ಹೊಡಿಯಿರಿ’ ಎಂದ ಬಿಜೆಪಿಯ ಅನಂತಕುಮಾರ್ ಹೆಗಡೆಯನ್ನೇಕೆ ಬಂಧಿಸಿಲ್ಲ?
ಶಾಸಕ ಲೋನಿಕರ್ ಅವರು ವಿವಾದಾತ್ಮಕ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಹಂಚಿಕೊಂಡಿರುವ ಮಹಾರಾಷ್ಟ್ರ ವಿಧಾನ ಪರಿಷತ್ ವಿಪಕ್ಷ ನಾಯಕ ಅಂಬಾದಾಸ್ ದಾನ್ವೆ, “ಇದು ಬ್ರಿಟಿಷರ ಸ್ವದೇಶಿ ಆವೃತ್ತಿ. ಪ್ರಜಾಪ್ರಭುತ್ವದಲ್ಲಿ ಇಂತಹ ಭಾಷೆ ಬಳಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.
“ಶಾಸಕರಾಗಿರುವ ನಿಮ್ಮ ಈ ಹುದ್ದೆ ಮತ್ತು ಸ್ಥಾನಮಾನವು ಜನರಿಂದ ಬಂದದ್ದು. ನಿಮ್ಮ ಬಟ್ಟೆ, ಶೂ, ವಿಮಾನ ಟಿಕೆಟ್, ನಾಯಕತ್ವ ಹಾಗೂ ನಿಮ್ಮ ಕಾರಿನಲ್ಲಿರುವ ಡೀಸೆಲ್ ಕೂಡ ಜನರಿಂದಲೇ ಬಂದಿದೆ. ಲೋನಿಕರ್ ಅವರ ಮಾತನ್ನು ಜನರು ನೆನಪಿನಲ್ಲಿಟ್ಟುಕೊಳ್ಳಬೇಕು. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರುತ್ತಿವೆ. ಅದರಲ್ಲಿ ಸೂಕ್ತ ಉತ್ತರ ನೀಡಬೇಕು” ಎಂದು ಹೇಳಿದ್ದಾರೆ.