ರಾಜ್ಯಸಭಾ ಸದಸ್ಯರಾಗಿದ್ದ ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ನಾಯಕ ವಿ ವಿಜಯಸಾಯಿ ರೆಡ್ಡಿ ಅವರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ರಾಜೀನಾಮೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.
ಶನಿವಾರ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರನ್ನು ಭೇಟಿ ಮಾಡಿದ ವಿಜಯಸಾಯಿ ರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆಯನ್ನು ಧನಕರ್ ಅಂಗೀಕರಿಸಿದ್ದಾರೆ.
“ನಾನು ರಾಜಕೀಯ ತೊರೆಯುತ್ತಿದ್ದೇನೆ. ಹೀಗಾಗಿ, ರಾಜೀನಾಮೆ ನೀಡಿದ್ದೇನೆ. ಬೇರೆ ಯಾವ ಪಕ್ಷಕ್ಕೆ ಸೇರುವುದಿಲ್ಲ. ಯಾವುದೇ ಸ್ಥಾನ, ಲಾಭದ ಆಮಿಷಕ್ಕೂ ಒಳಗಾಗಿ ರಾಜೀನಾಮೆ ನೀಡಿಲ್ಲ. ವೈಯಕ್ತಿಕ ನಿರ್ಧಾರದಿಂದ ರಾಜೀನಾಮೆ ನೀಡಿದ್ದೇನೆ” ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಪಕ್ಷದ ಏಕತೆಗಾಗಿ ರಾಜಕೀಯದಲ್ಲಿ ಉಳಿಯುವಂತೆ ಮತ್ತು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ವಿಜಯಸಾಯಿ ರೆಡ್ಡಿ ಅವರನ್ನು ಮನವೊಲಿಸಲು ವೈಎಸ್‌ಆರ್ ಕಾಂಗ್ರೆಸ್‌ನ ನಾಯಕರು ಮುಂದಾಗಿದ್ದರು. ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಕ್ಷದ ನಾಯಕಿ ಮಡ್ಡಿಲ ಗುರುಮೂರ್ತಿ ಮನವಿ ಮಾಡಿದ್ದರು. ಆದರೂ, ವಿಜಯಸಾಯಿ ಅವರು ತಮ್ಮ ನಿರ್ಧಾರವನ್ನು ಬದಲಿಸಿಲ್ಲ. ರಾಜೀನಾಮೆ ನೀಡಿದ್ದಾರೆ.
ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್‌ನಲ್ಲಿ ಯಾವುದೇ ಆಂತರಿಕ ಸಮಸ್ಯೆಗಳಿಲ್ಲ ಎಂದು ಮಡ್ಡಿಲ ಅವರು ಸ್ಪಷ್ಟಪಡಿಸಿದ್ದಾರೆ.