ನೈಸ್ ಕಂಪನಿಗೆ ಪಾಲುದಾರಿಕೆ ನೀಡಿರುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸುವ ಮತ್ತು ನೈಸ್ ಕಂಪನಿಯು ಯಾವುದೇ ರೀತಿಯಲ್ಲೂ ಕಾಮಗಾರಿ ನಡೆಸದಂತೆ ನಿರ್ಬಂಧ ಹೇರುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೈಸ್ ಭೂ ಸಂತ್ರಸ್ತ ರೈತರು ಇಂದು (ಆ.21) ಪ್ರತಿಭಟನೆ ನಡೆಸಿದರು..
ನೈಸ್ ಕಂಪನಿಗೆ ನೀಡಿರುವ ಬಿಎಂಐಸಿ ಯೋಜನೆಯ ಪಾಲುದಾರಿಕೆಯನ್ನು ರದ್ದುಗೊಳಿಸಬೇಕು. ಭೂ ಸ್ವಾಧೀನ ಹಾಗೂ ರಸ್ತೆ ನಿರ್ಮಾಣದಲ್ಲಿ ನೈಸ್ ಕಂಪನಿಯ ಹಗರಣವನ್ನು ತನಿಖೆಗೆ ಒಳಪಡಿಸಿ ನ್ಯಾಯ ನೀಡಬೇಕು ಹಾಗೂ ರೈತರ ಗಮನಕ್ಕೆ ಬಾರದೆ ಅಥವಾ ಒತ್ತಾಯ ಪೂರ್ವಕವಾಗಿ ಜಮೀನುಗಳನ್ನು ಭೂಸ್ವಾಧೀನ ಮಾಡಿರುವ ಎಲ್ಲಾ ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು ರೈತ ಹೋರಾಟಗಾರರು ಆಗ್ರಹಿಸಿದರು.
ಭೂ ಸ್ವಾಧೀನ ಪ್ರಕಟಣೆ ಮತ್ತು ಕೋರ್ಟ್ ತೀರ್ಪುಗಳ ಹೆಸರಿನಲ್ಲಿ ಕಂಪನಿಯು ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ ದಬ್ಬಾಳಿಕೆಗಳನ್ನು ಈ ಕೂಡಲೇ ನಿಲ್ಲಿಸಬೇಕು. ನೈಸ್ ಕಂಪನಿಯು ಕೆಐಎಡಿಬಿಯ ಜೊತೆ ಜಂಟಿಯಾಗಿ ಅಕ್ರಮ ಮೈತ್ರಿಯಿಂದ ಹಗಲು ದರೋಡೆ ನಡೆಸಿರುವ ಹೆಚ್ಚುವರಿ ಭೂಮಿಯನ್ನು ಹಿಂತಿರುಗಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಟೋಲ್ ಸಂಗ್ರಹಿಸುತ್ತಿರುವ ರಸ್ತೆಯಲ್ಲಿ ತಮ್ಮ ಭೂಮಿ ಕಳೆದುಕೊಂಡ ರೈತರಿಗೆ ಮೊದಲೇ ನೀಡಿರುವ ಒಪ್ಪಂದದಂತೆ ಹೆಚ್ಚಿನ ಪರಿಹಾರ ಮತ್ತು ನಿವೇಶನ ನೀಡುವಲ್ಲಿ ಸರ್ಕಾರವು ವಿಫಲವಾಗಿದೆ. ಬಿಎಂಐಸಿ ಯೋಜನೆಯ ನೆಪದಲ್ಲಿ ನೈಸ್ ಕಂಪನಿಯು ನಡೆಸುತ್ತಿರುವ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಿರ್ಬಂಧಿಸಬೇಕು. ಕಂಪನಿಗೆ ಗುತ್ತಿಗೆಗೆ ನೀಡಿರುವ ಎಲ್ಲಾ ಸರ್ಕಾರಿ ಜಾಗವನ್ನು ಹಿಂಪಡೆದು ಮನೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ಎಲ್ಲ ವಸತಿ ರಹಿತರಿಗೆ ಮನೆ, ನಿವೇಶನ ನೀಡಬೇಕು ಜೊತೆಗೆ ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಎಲ್ಲಾ ಬಡವರಿಗೂ ಹಕ್ಕು ಪತ್ರ ನೀಡಬೇಕು ಎಂದು ಪ್ರತಿಭಟನೆಯ ವೇಳೆ ತಮ್ಮ ಬೇಡಿಕೆಗಳನ್ನು ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ಪಿಡಬ್ಲ್ಯೂಡಿ ಕರ್ನಾಟಕ ಮುಖ್ಯ ಎಂಜಿನಿಯರ್ ಮಂಜಪ್ಪ ಅವರು ಬೇಡಿಕೆ ಪತ್ರವನ್ನು ಸ್ವೀಕರಿಸಿ, ರೈತರ ಸಮಸ್ಯೆಯ ಬಗ್ಗೆ ಸಚಿವರ ಜೊತೆಗೆ ಚರ್ಚೆ ನಡೆಸಿ, ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಇದನ್ನು ಓದಿದ್ದೀರಾ? ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ ಎ ಮುರಿಗೆಪ್ಪ
ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೈಸ್ ಭೂ ಸಂತ್ರಸ್ತ ರೈತ ಸಮಿತಿಯ ರಾಜ್ಯ ಉಪಾದ್ಯಕ್ಷ ಎನ್ ವೆಂಕಟಾಚಲಯ್ಯ, ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ರಾಜ್ಯ ಸಮಿತಿ ಸದಸ್ಯೆ ಗಾಯತ್ರಿ ಜೆ, ಜಿಲ್ಲಾ ಕಾರ್ಯದರ್ಶಿ ವೆಂಕಟಚಲಪ್ಪ ಸೇರಿದಂತೆ ಮೊದಲಾದವರು ಪ್ರತಿಭಟನೆಯಲ್ಲಿದ್ದರು.
