ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತವು 12 ವರ್ಷಗಳನ್ನು ಪೂರೈಸಿದೆ. ದೇಶಾದ್ಯಂತ ಸಂಭ್ರಮ, ಸ್ವಯಂ ಪ್ರಶಂಸೆ ಹಾಗೂ ತಮ್ಮ ಸಾಧನೆಗಳ ಪ್ರಚಾರಕ್ಕೆ ಬಿಜೆಪಿ ಭಾರೀ ಸಿದ್ಧತೆಗಳನ್ನು ನಡೆಸುತ್ತಿದೆ. ಆದರೆ, ಇದೇ ಅವಧಿಯಲ್ಲಿ ನಿರಂತರವಾಗಿ ಮೊಳಗಿದ ಹಿಂದುತ್ವದ ಡಂಗುರ ಮತ್ತು ವಿಕಾಸದ ಘೋಷಣೆಗಳು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಉಂಟುಮಾಡಿದೆ. ಒಂದೆಡೆ, ಅಲ್ಪಸಂಖ್ಯಾತರು ತಮ್ಮ ಸಾಂಸ್ಥಿಕ ಮತ್ತು ರಾಜಕೀಯ ಅಪ್ರಸ್ತುತತೆಗೆ ಹೊಂದಿಕೊಂಡು, ಹೇಗೋ ದಿನ ದೂಡುತ್ತಾ ಬದುಕಿದ್ದಾರೆ. ಆದರೆ, ಮತ್ತೊಂದೆಡೆ, ಮೋದಿ ಮತ್ತವರ ಪಕ್ಷದ ಮೇಲೆ ಭಾರೀ ವಿಶ್ವಾಸ ಇಟ್ಟಿದ್ದ ಹಿಂದುಗಳು ಮೋದಿ ಅವರ ಹಿಂದುತ್ವ ರಾಜಕಾರಣಕ್ಕೆ ಅತ್ಯಂತ ಹೆಚ್ಚಿನ ಬೆಲೆಯನ್ನೂ ತೆರುತ್ತಿದ್ದಾರೆ. ಆಡಳಿತಾತ್ಮಕ ವೈಫಲ್ಯಗಳ ಆರ್ಥಿಕ ಮತ್ತು ಸಾಮಾಜಿಕ ಹೊರೆಯನ್ನು ಹೊರುತ್ತಿದ್ದಾರೆ.
ಅಂದಹಾಗೆ, 2014ರಲ್ಲಿ ಮೋದಿ ಅವರು ದೇಶದ ಚುಕ್ಕಾಣಿ ಹಿಡಿದಾಗ ಭಾರತೀಯರಿಗೆ ಅಭೂತಪೂರ್ವ ಕನಸುಗಳನ್ನು ಮಾರಾಟ ಮಾಡಿದ್ದರು. ಒಬ್ಬ ಅತ್ಯಂತ ಪ್ರಭಾವಶಾಲಿ ಭಾಷಣಕಾರನಂತೆ ಮೋದಿ ಅವರು ದೇಶದ ಜನರಿಗೆ ‘ಅಚ್ಛೇ ದಿನ್’ (ಒಳ್ಳೆಯ ದಿನಗಳು), ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳು, ಕಪ್ಪು ಹಣದ ವಾಪಸಾತಿ ಹಾಗೂ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿಗಳ ಜಮೆಯಂತಹ ಆಕರ್ಷಕ ಭರವಸೆಗಳನ್ನು ನೀಡಿದ್ದರು. ಆದರೆ, 12 ವರ್ಷಗಳ ಸುದೀರ್ಘ ಆಡಳಿತದ ನಂತರ ತಿರುಗಿ ನೋಡಿದರೆ, ಈ ಭರವಸೆಗಳು ಕೇವಲ ಮುದ್ರಣ ಮಾಧ್ಯಮದಲ್ಲಿ ಹೊಳಪಿನ ಜಾಹೀರಾತುಗಳಿಗೆ ಮತ್ತು ದುಬಾರಿ ಟಿವಿ ಪ್ರಚಾರಗಳಿಗೆ ಮಾತ್ರ ಸೀಮಿತವಾಗಿವೆ ಎಂದು ಸ್ಪಷ್ಟವಾಗಿ ಕಾಣುತ್ತಿದೆ.
ಸರ್ವಾಧಿಕಾರಿ ಅಥವಾ ಏಕವ್ಯಕ್ತಿ ಕೇಂದ್ರಿತ ಆಡಳಿತದ ಪ್ರಮುಖ ಲಕ್ಷಣವೆಂದರೆ, ತಮ್ಮ ಇಂದಿನ ಎಲ್ಲ ವೈಫಲ್ಯಗಳು ಮತ್ತು ಆಡಳಿತಾತ್ಮಕ ದೋಷಗಳಿಗೆ ಹಿಂದಿನ ಸರ್ಕಾರಗಳನ್ನು ಅಥವಾ ಇತಿಹಾಸವನ್ನು ದೂಷಿಸುವುದು. ಆದರೆ, ಒಂದು ದಶಕಕ್ಕೂ ಹೆಚ್ಚು ಕಾಲ ಯಾವುದೇ ಸವಾಲಿಲ್ಲದ, ಸಂಪೂರ್ಣ ಬಹುಮತದ ಆಡಳಿತ ನಡೆಸಿದ ನಂತರವೂ ಯಾವುದೇ ಆಡಳಿತಗಾರ ಆಡಳಿತಾತ್ಮಕ ವೈಫಲ್ಯ, ಬೃಹತ್ ಮಟ್ಟದ ಸಾಂಸ್ಥಿಕ ಭ್ರಷ್ಟಾಚಾರ ಹಾಗೂ ತೀವ್ರ ಅಸಮರ್ಥತೆಯ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದಲೇ, ಮೋದಿ ಅವರ ಅಸಲಿ ಬಣ್ಣ ಬಯಲಿಗೆ ಬರುತ್ತಿದೆ.
ಉತ್ತಮ ಆಡಳಿತದ ನಿರ್ಲಕ್ಷ್ಯ ಮತ್ತು ಹಿಂದುತ್ವದ ರಕ್ಷಾಕವಚ
ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಬಹುಸಂಖ್ಯಾತ ಸಮುದಾಯದ ಭಾವನಾತ್ಮಕ ಬೆಂಬಲವನ್ನು ತಮ್ಮ ಶಾಶ್ವತ ಆಸ್ತಿ ಎಂದು ಭಾವಿಸಿವೆ. ‘ಹಿಂದು ಧರ್ಮ ಅಪಾಯದಲ್ಲಿದೆ’ ಮತ್ತು ‘ನಾವು ನಿಮ್ಮನ್ನು ಬಾಹ್ಯ ಹಾಗೂ ಆಂತರಿಕ ಶತ್ರುಗಳಿಂದ ರಕ್ಷಿಸುತ್ತಿದ್ದೇವೆ’ ಎಂಬ ನಿರಂತರ ಭಯದ ವಾತಾವರಣವನ್ನು ಸೃಷ್ಟಿಸುವ ಮೂಲಕ ಬಹುಸಂಖ್ಯಾತ ಸಮುದಾಯವನ್ನು ಕೇವಲ ಮತಬ್ಯಾಂಕ್ ಆಗಿ ಪರಿವರ್ತಿಸಿಕೊಂಡಿವೆ.
ಆ ಮೂಲಕ, ‘ತಾವು ಹಿಂದುತ್ವ ಮತ್ತು ಹಿಂದುಗಳನ್ನು ರಕ್ಷಿಸುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಲೇ ತಮ್ಮ ವೈಯಕ್ತಿಕ ತೀರ್ಮಾನಗಳು, ಆತುರದ ನಿರ್ಧಾರಗಳು ಹಾಗೂ ಜನವಿರೋಧಿ ನೀತಿಗಳನ್ನು ಜಾರಿಗೊಳಿಸಲು ಸ್ವತಂತ್ರರು’ ಎಂಬ ಹುನ್ನಾರ ಬಿಜೆಪಿ-ಆರ್ಎಸ್ಎಸ್ನದ್ದು. ಅದೇ ಅವರ ಹಿಡನ್ ಅಜೆಂಡಾ ಕೂಡ. ಇದರ ನೇರ ಪರಿಣಾಮವಾಗಿ ಇಂದು ಭಾರತದ ಬಹುಸಂಖ್ಯಾತರು (ಹಿಂದು) ವ್ಯಕ್ತಿ ಆರಾಧನೆ ಮತ್ತು ಆಡಳಿತಾತ್ಮಕ ವೈಫಲ್ಯಗಳ ಭಾರ ಹೊರುತ್ತಿದ್ದಾರೆ. ಭಾರತದ ಅಡಿಯಲ್ಲಿ ಸಿಕ್ಕು ನಲುಗುತ್ತಿದೆ.
ಮುಸ್ಲಿಮರ ರಾಜಕೀಯ ಅಪ್ರಸ್ತುತತೆ ಮತ್ತು ಹೊಣೆಗಾರಿಕೆಯ ಪ್ರಶ್ನೆ
ಕಳೆದ 12 ವರ್ಷಗಳ ದುರಾಡಳಿತ ಮತ್ತು ಅಸಮರ್ಥತೆಗೆ ಭಾರತದ ಮುಸ್ಲಿಮರನ್ನು ಯಾವುದೇ ಕಾರಣಕ್ಕೂ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಬಿಜೆಪಿ ತನ್ನ ರಾಜಕೀಯ ಕಾರ್ಯತಂತ್ರದಿಂದ ಮುಸ್ಲಿಮರನ್ನು ಸಂಪೂರ್ಣವಾಗಿ ದೂರ ಇಟ್ಟಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಚಿವರಿಲ್ಲದಿರುವುದು, ದೇಶದ ಅತ್ಯುನ್ನತ ಆಡಳಿತ ಸೇವೆಗಳಾದ ಐಎಎಸ್, ಐಪಿಎಸ್ ಹಾಗೂ ವಿದೇಶಾಂಗ ಸೇವೆಗಳ ಸೂಕ್ಷ್ಮ ವಿಭಾಗಗಳಲ್ಲಿ ಅವರ ಪ್ರಾತಿನಿಧ್ಯ ಗಣನೀಯವಾಗಿ ಕುಸಿದಿದೆ.
ದೇಶದ ಪ್ರಮುಖ ಉದ್ಯಮ ಸಂಸ್ಥೆಗಳು ಮತ್ತು ಆರ್ಥಿಕ ವಲಯಗಳು ಹಿಂದುಗಳಿಂದಲೇ ಮುನ್ನಡೆಸಲ್ಪಡುತ್ತಿವೆ. ಹಳೆಯ ಕಾಲದ ‘ಅಲ್ಪಸಂಖ್ಯಾತರ ಓಲೈಕೆ’ ರಾಜಕಾರಣವೂ ಈಗ ಇತಿಹಾಸದ ಪುಟ ಸೇರಿದೆ. ಹೈದರಾಬಾದ್ ಹೌಸ್ನಲ್ಲಿ ನಡೆಯುತ್ತಿದ್ದ ಅಧಿಕೃತ ಇಫ್ತಿಯಾರ್ ಕೂಟಗಳು ನಿಂತುಹೋಗಿವೆ. ಮುಸ್ಲಿಮರನ್ನು ರಾಷ್ಟ್ರೀಯ ಚಿತ್ರಪಟದಿಂದಲೇ ವ್ಯವಸ್ಥಿತವಾಗಿ ಬದಿಗೊತ್ತಲಾಗಿದೆ.
ಹೀಗಿರುವಾಗ, ದೇಶ ಎದುರಿಸುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ದುರಂತಗಳಿಗೆ ಯಾರನ್ನು ದೂಷಿಸಬೇಕು? ಪ್ರಸ್ತುತ ದೇಶದಲ್ಲಿರುವ ಆಡಳಿತಾತ್ಮಕ ಗೊಂದಲ ಮತ್ತು ಬಿಕ್ಕಟ್ಟುಗಳು ಸಂಪೂರ್ಣವಾಗಿ ಕೇಸರಿ ಪಾಳೆಯದ ತಪ್ಪು ನೀತಿಗಳ ಫಲಿತಾಂಶವೇ ಆಗಿದೆ.
ಆರ್ಥಿಕ ವೈಫಲ್ಯ ಮತ್ತು ಧರ್ಮಾತೀತ ಬೆಲೆ ಏರಿಕೆ
ದೇಶದ ಆರ್ಥಿಕತೆಯನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಇದಕ್ಕೆ, ಹಣಕಾಸು ಸಚಿವರು ಜಾಗತಿಕ ಪರಿಸ್ಥಿತಿಗಳನ್ನು ನೆಪವಾಗಿ ಮುಂದಿಡುತ್ತಿದ್ದಾರೆ. ಆದರೆ, ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ದೇಶದಲ್ಲಿ, ನಿರಂತರವಾಗಿ ಹೆಚ್ಚುತ್ತಿರುವ ಬೆಲೆ ಏರಿಕೆಯಿಂದ ಸಾಮಾನ್ಯ ಜನರನ್ನು ರಕ್ಷಿಸಲು ಸರ್ಕಾರ ವಿಫಲವಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಭಾರತವು 5ನೇ ದೊಡ್ಡ ಆರ್ಥಿಕತೆ ಎಂಬ ಪಟ್ಟವನ್ನೂ ಕಳೆದುಕೊಂಡಿದೆ.
ಹಿಂದುತ್ವ ಸರ್ಕಾರವು ಹಿಂದುಗಳಿಗೆ ಕಡಿಮೆ ಬೆಲೆಯಲ್ಲಿ ಮತ್ತು ಮುಸ್ಲಿಮರಿಗೆ ಹೆಚ್ಚಿನ ಬೆಲೆಯಲ್ಲಿ ಇಂಧನ ನೀಡುವ ಯಾವುದೇ ವಿಶೇಷ ತೆರಿಗೆಯನ್ನೇ ರೂಪಿಸಿಲ್ಲ. ಮಾರುಕಟ್ಟೆಯಲ್ಲಿ ಹಣದುಬ್ಬರ ಮತ್ತು ಬೆಲೆ ಏರಿಕೆಯು ಧರ್ಮವನ್ನು ನೋಡಿ ಬರುವುದಿಲ್ಲ. ಇದರ ನೇರ ಸಂಕಷ್ಟವನ್ನು ಅನುಭವಿಸುತ್ತಿರುವವರು ದೇಶದ 80%ರಷ್ಟಿರುವ ಹಿಂದುಗಳೇ ಆಗಿದ್ದಾರೆ. ಆರ್ಥಿಕತೆಯನ್ನು ನಿರ್ವಹಿಸುತ್ತಿರುವ ಹಿಂದು ಅಧಿಕಾರಿಗಳು ಮತ್ತು ರಾಜಕಾರಣಿಗಳ ಅಸಮರ್ಥತೆಯ ಬೆಲೆಯನ್ನು ಸಾಮಾನ್ಯ ಹಿಂದು ಕುಟುಂಬಗಳು ತಮ್ಮ ದೈನಂದಿನ ಬದುಕಿನಲ್ಲಿ ಪಾವತಿಸುತ್ತಿದ್ದಾರೆ.
ಶಿಕ್ಷಣ ವ್ಯವಸ್ಥೆಯ ಪತನ ಮತ್ತು ಯುವಜನತೆಯ ಭವಿಷ್ಯದ ಬಲಿ
ಇನ್ನು, ದೇಶದ ಶಿಕ್ಷಣ ಕ್ಷೇತ್ರ ಮತ್ತು ಉದ್ಯೋಗ ಮಾರುಕಟ್ಟೆಯ ಇಂದಿನ ಸ್ಥಿತಿ ಅತ್ಯಂತ ದಯನೀಯವಾಗಿದೆ. ರಾಷ್ಟ್ರೀಯ ಮಟ್ಟದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ನಿರಂತರವಾಗಿ ವರದಿಯಾಗುತ್ತಿದೆ. ಸಂಘಟಿತ ಆಸೆ, ಆಡಳಿತಾತ್ಮಕ ಭ್ರಷ್ಟಾಚಾರ ಹಾಗೂ ಕಳಪೆ ಮೇಲ್ವಿಚಾರಣೆಯಿಂದಾಗಿ ಪರೀಕ್ಷೆಗಳು ರದ್ದಾದಾಗ ಭವಿಷ್ಯ ಕಳೆದುಕೊಳ್ಳುವವರು ಯಾರು? ಲಕ್ಷಾಂತರ ಆಶಾವಾದಿ ಭಾರತೀಯ ವಿದ್ಯಾರ್ಥಿಗಳು, ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಮತ್ತು ಮಧ್ಯಮ ವರ್ಗದ ಹಿಂದು ಕುಟುಂಬಗಳ ಯುವಜನರು. ಈ ಯುವಜನರು ತಮ್ಮ ವರ್ಷಗಟ್ಟಲೆಯ ಪರಿಶ್ರಮವನ್ನು ಕ್ಷಣಾರ್ಧದಲ್ಲಿ ಕಳೆದುಕೊಳ್ಳುತ್ತಿದ್ದಾರೆ.
ಈ ಪರೀಕ್ಷಾ ಮಂಡಳಿಗಳನ್ನು ಮತ್ತು ಶಿಕ್ಷಣ ಇಲಾಖೆಗಳನ್ನು ಮುನ್ನಡೆಸುತ್ತಿರುವ ಅಸಮರ್ಥ ಸರ್ಕಾರ ಮತ್ತು ಅಧಿಕಾರಿಗಳು ಯಾರು? ಅವರಾರೂ ಮುಸ್ಲಿಮರಲ್ಲ, ಅವರೆಲ್ಲರೂ ಹಿಂದು ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಮತ ಚಲಾಯಿಸಿದ ಸಮಾಜಕ್ಕೆ ಪ್ರತಿಯಾಗಿ ಸಿಗುತ್ತಿರುವುದು ಯುವ ಪೀಳಿಗೆಯ ಭವಿಷ್ಯದ ಬಲಿ. ಆದರೂ, ಹಿಂದುಗಳ ರಕ್ಷಣೆಗಾಗಿ ಸದಾ ಜಾಗರೂಕರಾಗಿರುವ ಸರ್ಕಾರವು ಇವೆಲ್ಲವೂ ಸಣ್ಣ ತ್ಯಾಗಗಳು ಎಂದು ಬಿಂಬಿಸುತ್ತಿದೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುತ್ತಿದೆ.
ಕ್ರೋನಿ ಕ್ಯಾಪಿಟಲಿಸಂ ಮತ್ತು ನಿರುದ್ಯೋಗದ ಮಹಾ ಬಿಕ್ಕಟ್ಟು
ದೇಶದ ಇಂಧನ, ಬಂದರು, ವಿಮಾನ ನಿಲ್ದಾಣ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಕೇವಲ ಬೆರಳೆಣಿಕೆಯಷ್ಟು ಬಂಡವಾಳಶಾಹಿಗಳ (ಕ್ರೋನಿ ಕ್ಯಾಪಿಟಲಿಸ್ಟ್) ಕೈಗೆ ಒಪ್ಪಿಸಲಾಗುತ್ತಿದೆ. ಈ ಉದ್ಯಮಿಗಳು ಕೋಟ್ಯಂತರ ಗ್ರಾಹಕರನ್ನು ಹಿಂಡಿ-ಹೀರಿ ಭಾರೀ ಲಾಭ ಗಳಿಸುತ್ತಿದ್ದಾರೆ. ವಿಶೇಷವೆಂದರೆ, ಈ ಕ್ರೋನಿ ಉದ್ಯಮಿಗಳಲ್ಲಿ ಯಾರೊಬ್ಬರೂ ಮುಸ್ಲಿಮರಲ್ಲ. ಆದ್ದರಿಂದ, ಇವರ ವಿರುದ್ಧ ಧ್ವನಿ ಎತ್ತದಂತೆ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ಬಳಸಿ ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜವನ್ನು ಹತ್ತಿಕ್ಕಲಾಗುತ್ತಿದೆ.
ಈ ಲೇಖನ ಓದಿದ್ದೀರಾ?: ರಾಷ್ಟ್ರೀಯ ಬಿಕ್ಕಟ್ಟುಗಳಲ್ಲಿ ಮೋದಿ ‘ನಿಗೂಢ ಮೌನ’; ಮರ್ಮವೇನು?
ಮತ್ತೊಂದೆಡೆ, ದೇಶದಲ್ಲಿ ನಿರುದ್ಯೋಗದ ಪ್ರಮಾಣವು ಕಳೆದ ನಾಲ್ಕು ದಶಕಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಉದ್ಯೋಗವಿಲ್ಲದೆ ಅಲೆಯುತ್ತಿರುವ ಲಕ್ಷಾಂತರ ಯುವಕರಲ್ಲಿ ಬಹುಪಾಲು ಮಂದಿ ಹಿಂದುಗಳೇ ಆಗಿದ್ದಾರೆ. ಅದರಲ್ಲೂ ತೀವ್ರ ರಾಷ್ಟ್ರೀಯತಾವಾದವನ್ನು ಒಪ್ಪಿಕೊಂಡ ಮತ್ತು ಪ್ರಸ್ತುತ ಆಡಳಿತದ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೋರಾಡುವ ಯುವಜನರೇ ಈ ನಿರುದ್ಯೋಗದ ಕೂಪದಲ್ಲಿ ಬೇಯುತ್ತಿದ್ದಾರೆ. ಹಿಂದು-ಮುಸ್ಲಿಂ ದ್ವೇಷದ ಭಾಷಣಗಳನ್ನು ಕೇಳುತ್ತಾ ಕಾಲ ಕಳೆದ ಈ ಯುವ ಪೀಳಿಗೆಗೆ ಇಂದು ಬದುಕನ್ನು ಕಟ್ಟಿಕೊಳ್ಳಲು ಉದ್ಯೋಗವಿಲ್ಲದೆ ನರಳಾಡುತ್ತಿದೆ.
ನಾಗರಿಕ ಸೌಲಭ್ಯಗಳ ಕೊರತೆ ಮತ್ತು ಕೃತಕ ಭಯದ ಸೃಷ್ಟಿ
ಭಾರತದ ಪ್ರಮುಖ ನಗರಗಳಲ್ಲಿ ಕನಿಷ್ಠ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ನಿರಂತರ ವಿದ್ಯುತ್ ಸಂಪರ್ಕ ಹಾಗೂ ಉತ್ತಮ ರಸ್ತೆಗಳಂತಹ ಮೂಲಭೂತ ಸೌಲಭ್ಯಗಳ ಕೊರತೆ ಎದ್ದುಕಾಣುತ್ತಿದೆ. ಪ್ರತಿ ಮಳೆಗಾಲದಲ್ಲೂ ನಗರಗಳು ಮುಳುಗುತ್ತಿವೆ, ಬೇಸಿಗೆಯಲ್ಲಿ ನೀರಿನ ತತ್ವಾರ ಎದುರಾಗುತ್ತಿದೆ. ಈ ಬಿಕ್ಕಟ್ಟುಗಳನ್ನು ಪರಿಹರಿಸಬೇಕಾದ ಹಿಂದುತ್ವದ ಆಡಳಿತಗಾರರು ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಅತ್ಯಂತ ವ್ಯವಸ್ಥಿತವಾಗಿ ‘ಕೃತಕ ಭಯ’ (ಇಸ್ಲಾಮಾಫೋಬಿಯಾ ಸೃಷ್ಟಿಸುತ್ತಿದ್ದಾರೆ.
ಚುನಾವಣೆಗಳು ಬಂದಾಗಲೆಲ್ಲ ಪ್ರಧಾನಿ ಮೋದಿ ಸೇರಿದಂತೆ ಉನ್ನತ ನಾಯಕರು ಅಲ್ಪಸಂಖ್ಯಾತರ ವಿರುದ್ಧ ಪರೋಕ್ಷವಾಗಿ ಅಥವಾ ನೇರವಾಗಿ ದಾಳಿ ನಡೆಸುತ್ತಾರೆ. ಸೋಮನಾಥ ದೇವಾಲಯದ ಸಮಾರಂಭದಲ್ಲೂ ‘ಓಲೈಕೆ ರಾಜಕಾರಣದ ಶಕ್ತಿಗಳು ಇನ್ನೂ ಸಕ್ರಿಯವಾಗಿವೆ’ ಎಂದು ಮೋದಿ ಹೇಳಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ‘ಬಟೋಗೆ ತೋ ಕಟೋಗೆ’ (ವಿಭಜನೆಯಾದರೆ ನಾಶವಾಗುತ್ತೀರಿ) ಎಂಬ ಕ್ರೂರಾತಿಕ್ರೂರ ಹೇಳಿಕೆ ನೀಡಿದರು. ಈ ಹೇಳಿಕೆಗಳು ಸಮಾಜವನ್ನು ನಿರಂತರ ಆತಂಕದಲ್ಲಿ ಇಡುವ ತಂತ್ರದ ಭಾಗವಾಗಿದೆ. ಇದರೊಂದಿಗೆ ಸಮಾಜದಲ್ಲಿ ‘ಲವ್ ಜಿಹಾದ್’, ‘ಫರ್ಟಿಲೈಸರ್ ಜಿಹಾದ್’, ‘ಡ್ರಗ್ ಜಿಹಾದ್’ ಹಾಗೂ ‘ಕಾರ್ಪೊರೇಟ್ ಜಿಹಾದ್’ ನಂತಹ ಹೊಸ ಹೊಸ ಆತಂಕದ ಪರಿಕಲ್ಪನೆಗಳನ್ನು ಸೃಷ್ಟಿಸಲಾಗುತ್ತಿದೆ. ಪ್ರತಿ ಮೂಲೆಯಲ್ಲೂ ಒಬ್ಬ ಶತ್ರು ಇದ್ದಾನೆ ಎಂಬ ಭ್ರಮೆಯನ್ನು ಬಿತ್ತಲಾಗುತ್ತಿದೆ.
ಈ ಎಲ್ಲ ರೀತಿಯ ಭಯ, ದ್ವೇಷ, ಸಮರ್ಥನೆಗಳು ಮೋದಿ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಭಾಗಶಃ ಯಶಸ್ವಿಯಾಗಿವೆ. ಆದರೆ, ಈಗ ಜನರಿಗೆ ಹಂತ-ಹಂತವಾಗಿ ಮೋದಿ ಅವರ ವೈಫಲ್ಯತೆಗಳು ಅರ್ಥವಾಗಲಾರಂಭಿಸಿವೆ. ಕಳಪೆ ಆಡಳಿತ, ಆರ್ಥಿಕ ಅಸಮಾನತೆ, ಭ್ರಷ್ಟ ಶಿಕ್ಷಣ ವ್ಯವಸ್ಥೆ ಹಾಗೂ ಉದ್ಯೋಗ ನಷ್ಟದ ಕಹಿಗಳು ಮುನ್ನೆಲೆಗೆ ಬರುತ್ತಿವೆ. ಮೋದಿ ಸರ್ಕಾರದ ಈ 12 ವರ್ಷಗಳ ಆಡಳಿತವು ಭಾರತದ ಹಿಂದು ಸಮಾಜಕ್ಕೆ ಕೇವಲ ಭಾವನಾತ್ಮಕ ತೃಪ್ತಿಯನ್ನು ನೀಡಿದೆಯೇ ಹೊರತು ಬದುಕಿನ ಗುಣಮಟ್ಟವನ್ನು ಸುಧಾರಿಸಿಲ್ಲ ಎಂಬ ಸತ್ಯ ಅರಿವಾಗುತ್ತಿದೆ. ಪ್ರಚಾರದ ಹೊಳಪು ಮರೆಯಾಗುತ್ತಿರುವಂತೆ, ಮೋದಿ ಆಡಳಿತ ಮತ್ತು ಸಾಧನೆಯನ್ನು ದೇಶದ ಪ್ರಜ್ಞಾವಂತ ಮಧ್ಯಮ ವರ್ಗ ಮತ್ತು ಯುವಜನತೆ ಪ್ರಶ್ನಿಸುತ್ತಿದ್ದಾರೆ. ಇತ್ತೀಚಿನ ರಾಜಕೀಯ ಆಂದೋಲನಗಳು ಮತ್ತು ‘ಕಾಕ್ರೋಚ್ ಜನತಾ ಪಾರ್ಟಿ’ಯಂತಹ ವಿದ್ಯಮಾನಗಳು, ಮೋದಿ ಅವರ ವ್ಯವಸ್ಥಿತ ದುರಾಡಳಿತದ ವಿರುದ್ಧ ಬಹುಸಂಖ್ಯಾತ ಸಮಾಜವೇ ನಡೆಸುತ್ತಿರುವ ಮೂಕ ದಂಗೆಯ ಸಂಕೇತವಾಗಿ ಕಾಣುತ್ತಿವೆ.




