ಸೆನೆಗಲ್‌ ಪ್ರಕರಣ | ಯಾವ ಪರಿಸ್ಥಿತಿ ತಾಯಿಯೊಬ್ಬಳನ್ನು ʼಅಂತಹʼ ನಿರ್ಧಾರಕ್ಕೆ ತಳ್ಳಿರಬಹುದು?

Date:

20 ವರ್ಷದ ಹೆಣ್ಣುಮಗಳೊಬ್ಬಳು ದೂರದ ದೇಶದಲ್ಲಿ ಸಂತ್ರಸ್ತೆ ಜಾಗದಲ್ಲಿ ನಿಂತಿದ್ದಾಳೆ, ತನ್ನ ಮೇಲಿನ ದೌರ್ಜನ್ಯವನ್ನು ವಿಡಿಯೊ ಮಾಡಿ “ನನ್ನನ್ನು ರಕ್ಷಿಸಿ” ಎಂದು ಮೊರೆಯಿಡುತ್ತಿದ್ದಾಳೆ. ಇತ್ತ ಕರ್ನಾಟಕದಲ್ಲಿ ಆಕೆಯನ್ನು ಹಣಕ್ಕಾಗಿ ಹೆತ್ತವರೇ ಮಾರಾಟ ಮಾಡಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಗಳು ಸಾಬೀತಾಗಬೇಕಾಗಿವೆ. ಆದರೆ ಈ ಪ್ರಕರಣವನ್ನು ಒಂದು ಕುಟುಂಬದ ಮಿತಿ ದಾಟಿ ʼಹೆತ್ತ ಮಗಳನ್ನೇ ಮಾರಾಟ ಮಾಡುವಂತಹ ಅಸಹಾಯಕತೆ ನಿಜಕ್ಕೂ ಇತ್ತೇ? ಎಂಬ ಮಾನವೀಯ ದೃಷ್ಟಿಕೋನದಿಂದಲೂ ನೋಡುವ ಅಗತ್ಯವಿದೆ.

- Advertisement -

ಏನಿದು ಘಟನೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ಸಾಂಪ್ರದಾಯಿಕ ಗಿಡಮೂಲಿಕೆ ಉತ್ಪನ್ನಗಳ ಮಾರಾಟಕ್ಕಾಗಿ ಆಗಾಗ್ಗೆ ಆಫ್ರಿಕಾಕ್ಕೆ ತೆರಳುತ್ತಿದ್ದ ಹಕ್ಕಿಪಿಕ್ಕಿ ಸಮುದಾಯದ ಕುಟುಂಬವೊಂದು, ಈ ಬಾರಿ ತಮ್ಮ ಮಗಳನ್ನೂ ಜೊತೆಗೆ ಕರೆದೊಯ್ದಿತ್ತು. ಈ ಬಾರಿಯ ಪ್ರವಾಸದಲ್ಲಿ ಮಗಳನ್ನೇ ಪೋಷಕರು ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದೆ.

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಮಹಿಳೆಯೊಬ್ಬರು ಹಣಕ್ಕಾಗಿ ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್‌ನ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆ ಆರೋಪಿಸಿದೆ. ಪೋಷಕರು ಭಾರತಕ್ಕೆ ಮರಳಿದ ಬಳಿಕ ಯುವತಿಯನ್ನು ಅಲ್ಲೇ ಬಂಧಿಸಿ ಚಿತ್ರಹಿಂಸೆ ನೀಡಲಾಗುತ್ತಿತ್ತು ಎನ್ನಲಾಗಿದೆ. ತನ್ನ ಮೇಲಿನ ದೌರ್ಜನ್ಯವನ್ನು ವಿವರಿಸಿ ಯುವತಿ ಕುಟುಂಬಕ್ಕೆ ಕಳುಹಿಸಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಭಾರತೀಯ ರಾಯಭಾರ ಕಚೇರಿಯ ನೆರವಿನಿಂದ ಸೆನೆಗಲ್‌ನ ಸ್ಥಳೀಯ ಪೊಲೀಸರು ಯುವತಿಯನ್ನು ರಕ್ಷಿಸಿದ್ದು, ಆಕೆ ಶೀಘ್ರದಲ್ಲೇ ಭಾರತಕ್ಕೆ ಮರಳುವ ನಿರೀಕ್ಷೆಯಿದೆ. ಈ ನಡುವೆ, ಸಂಘಟನೆಯ ದೂರಿನ ಮೇರೆಗೆ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿತ ಮಹಿಳೆಯನ್ನು ವಿಚಾರಣೆ ನಡೆಸಲಾಗುತ್ತಿದೆ. ಭಾರತಕ್ಕೆ ಮರಳಿದ ಬಳಿಕ ಯುವತಿಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಎದುರು ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

WhatsApp Image 2026 07 18 at 8.05.26 PM

ಈ ಘಟನೆಯನ್ನು ಕೇವಲ ಒಂದು ಅಪರಾಧ ಪ್ರಕರಣವಾಗಿ ನೋಡುವುದು ಸುಲಭ. ಆದರೆ ಇದರ ಹಿಂದಿರುವ ಸಾಮಾಜಿಕ ಪದರಗಳನ್ನು ತೆರೆದರೆ, ಅದು ಒಂದು ಕುಟುಂಬದ ಕಥೆಯಾಗಿಯೇ ಉಳಿಯುವುದಿಲ್ಲ. ಬಡತನ, ಅಂಚಿನ ಬದುಕು, ಲಿಂಗ ಅಸಮಾನತೆ, ಮಾನವ ಕಳ್ಳಸಾಗಣೆ, ವಲಸೆ ಮತ್ತು ಹೆಣ್ಣಿನ ಮೇಲಿನ ನಿಯಂತ್ರಣ.. ಹೀಗೆ ಹಲವು ಆಯಾಮಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಆರೋಪಗಳು ಇನ್ನೂ ತನಿಖೆಯ ಹಂತದಲ್ಲಿರುವಾಗಲೇ ತೀರ್ಪು ನೀಡುವುದೂ ಸರಿಯಲ್ಲ. ಈ ಪ್ರಕರಣವನ್ನು ವಾಸ್ತವ ಮತ್ತು ಸಾಮಾಜಿಕ ಹಿನ್ನೆಲೆಯೊಂದಿಗೆ ನೋಡುವ ಅಗತ್ಯವಿದೆ.

ತಾಯಿ ಮಗಳನ್ನು ಮಾರುವುದು ತಪ್ಪೇ, ಅಪರಾಧವೇ. ಆದರೆ ಅದರಾಚೆಗೆ ಕೆಲವು ಪ್ರಶ್ನೆಗಳೂ ಉತ್ತರ ಕೇಳುತ್ತವೆ. ಯಾವ ಪರಿಸ್ಥಿತಿ ತಾಯಿಯೊಬ್ಬಳನ್ನು ಅಂತಹ ನಿರ್ಧಾರಕ್ಕೆ ತಳ್ಳಿರಬಹುದು? ನಿಜವಾಗಿಯೂ ಹಣದ ಆಮಿಷವೇ ಕಾರಣವೇ? ಎಂಬ ಪ್ರಶ್ನೆಗಳಿಗೆ ಉತ್ತರವನ್ನು ತನಿಖೆಯೇ ನೀಡಬೇಕು. ಏಕೆಂದರೆ ಯಾವುದೇ ಘಟನೆಯನ್ನು ಅದರ ಸಾಮಾಜಿಕ ಹಿನ್ನೆಲೆಯಿಂದ ಬೇರ್ಪಡಿಸಿ ನೋಡುವುದು ಸತ್ಯದ ಒಂದು ಭಾಗವನ್ನಷ್ಟೇ ಕಾಣುವಂತಾಗುತ್ತದೆ.

ಹಕ್ಕಿಪಿಕ್ಕಿ ಸಮುದಾಯದಂತಹ ಬುಡಕಟ್ಟು ಸಮುದಾಯಗಳು ಜೀವನೋಪಾಯಕ್ಕಾಗಿ ದೇಶ-ವಿದೇಶ ಸುತ್ತುವುದು ಹೊಸ ವಿಷಯವಲ್ಲ. ಗಿಡಮೂಲಿಕೆ ಉತ್ಪನ್ನಗಳ ವ್ಯಾಪಾರ ಅವರ ಬದುಕಿನ ಒಂದು ಭಾಗ. ಆದರೆ ಇದೇ ಬದುಕಿನ ಹಾದಿ ಕೆಲವೊಮ್ಮೆ ಮಹಿಳೆಯರನ್ನು ಅಪಾಯದ ಸುಳಿಗೆ ತಳ್ಳುವ ಸಾಧ್ಯತೆಯನ್ನೂ ನಿರಾಕರಿಸಲಾಗದು. ವಿದೇಶಿ ನೆಲ, ಅಪರಿಚಿತ ಭಾಷೆ, ಕಾನೂನು ಅರಿವಿನ ಕೊರತೆ ಮತ್ತು ಆರ್ಥಿಕ ಅಸಹಾಯಕತೆ ಅವರನ್ನು ಶೋಷಣೆಗೆ ಹೆಚ್ಚು ಗುರಿಯಾಗುವಂತೆ ಮಾಡಬಹುದು. ಅಂಚಿನ ಸಮುದಾಯಗಳ ಮಹಿಳೆಯರಿಗೆ ಸುರಕ್ಷಿತ ವಲಸೆ ಮತ್ತು ಕಾನೂನು ರಕ್ಷಣೆ ಇನ್ನೂ ದೊಡ್ಡ ಸವಾಲಾಗಿಯೇ ಉಳಿದಿದೆ.

ಸಮಾಜದಲ್ಲಿ ಹೆಣ್ಣಿನ ದೇಹ ಮತ್ತು ಬದುಕಿನ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಬಹುತೇಕ ಸಂದರ್ಭಗಳಲ್ಲಿ ಆಕೆಯ ಕೈಯಲ್ಲಿರುವುದಿಲ್ಲ. ಬಾಲ್ಯದಲ್ಲಿ ತಂದೆ, ನಂತರ ಕುಟುಂಬ, ಮದುವೆಯಾದರೆ ಪತಿ. ಹೆಣ್ಣಿನ ಬದುಕನ್ನು ಗಂಡು ನಿರ್ಧರಿಸುವ ಪಿತೃಪ್ರಭುತ್ವದ ಸಂಸ್ಕೃತಿ ಸಂಪೂರ್ಣವಾಗಿ ಕಳಚಿಲ್ಲ. ಇದೇ ಮನಸ್ಥಿತಿ ತೀವ್ರ ರೂಪ ಪಡೆದಾಗ ಹೆಣ್ಣುಮಕ್ಕಳನ್ನು ವಸ್ತುವಿನಂತೆ ನೋಡುವ ಕ್ರೌರ್ಯಕ್ಕೂ ದಾರಿ ಮಾಡಿಕೊಡುತ್ತದೆ.

ಈ ಪ್ರಕರಣದಲ್ಲಿ ಆರೋಪ ಸಾಬೀತಾದರೆ, ಅದರ ಹೊಣೆ ಕೇವಲ ಮಗಳನ್ನು ಮಾರಾಟ ಮಾಡಿದ ಆರೋಪ ಹೊತ್ತಿರುವ ತಾಯಿಯ ಮೇಲಷ್ಟೇ ಅಲ್ಲ; ಯುವತಿಯನ್ನು ಕೊಂಡುಕೊಂಡ ವ್ಯಕ್ತಿಯ ಮೇಲೂ, ಆಕೆಯನ್ನು ಶೋಷಿಸಲು ಅವಕಾಶ ಮಾಡಿಕೊಟ್ಟ ವ್ಯವಸ್ಥೆಯ ಮೇಲೂ, ಅಂತಹ ಅಪರಾಧಗಳಿಗೆ ಮಾರುಕಟ್ಟೆ ನಿರ್ಮಿಸಿರುವ ಸಮಾಜದ ಮೇಲೂ ಇರುತ್ತದೆ. ಒಬ್ಬ ಹೆಣ್ಣುಮಗಳ ದೇಹ, ಜೀವ ಮತ್ತು ಬದುಕಿಗೆ ಹಣದಿಂದ ಬೆಲೆ ಕಟ್ಟಬಹುದೆಂಬ ಮನೋಭಾವವೇ ಈ ರೀತಿಯ ಅಪರಾಧಗಳ ಮೂಲ.

ಭಾರತದಲ್ಲಿ ಮಹಿಳೆಯರು ಮತ್ತು ಯುವತಿಯರನ್ನು ಉದ್ಯೋಗ, ಮದುವೆ ಅಥವಾ ಉತ್ತಮ ಬದುಕಿನ ಭರವಸೆ ನೀಡಿ ವಿದೇಶಗಳಿಗೆ ಕರೆದೊಯ್ದು ಶೋಷಿಸುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದು ಆರ್ಥಿಕ ಅಸಮಾನತೆ, ಸಾಮಾಜಿಕ ಅಸುರಕ್ಷತೆ ಮತ್ತು ದುರ್ಬಲ ಕಾನೂನು ಜಾರಿಯ ಪರಿಣಾಮವೂ ಹೌದು. ವಿಶೇಷವಾಗಿ ಬುಡಕಟ್ಟು, ದಲಿತ, ಬಡ ಮತ್ತು ಅಂಚಿನ ಸಮುದಾಯಗಳ ಮಹಿಳೆಯರು ಇಂತಹ ಜಾಲಗಳಿಗೆ ಸುಲಭವಾಗಿ ಬಲಿಯಾಗುವ ಅಪಾಯ ಹೆಚ್ಚು.

ಈ ಹಿನ್ನೆಲೆಯಲ್ಲಿ ವಿದೇಶಗಳಿಗೆ ತೆರಳುವ ಅಸಂಘಟಿತ ಕಾರ್ಮಿಕರ ಮಾಹಿತಿ ವ್ಯವಸ್ಥೆ ಎಷ್ಟು ಬಲವಾಗಿದೆ? ಬುಡಕಟ್ಟು ಸಮುದಾಯಗಳ ಮಹಿಳೆಯರಿಗೆ ಸುರಕ್ಷಿತ ವಲಸೆ ಮತ್ತು ಕಾನೂನು ನೆರವಿನ ವ್ಯವಸ್ಥೆ ಸಮರ್ಪಕವಾಗಿದೆಯೇ? ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಮಹಿಳೆಯರನ್ನು ತ್ವರಿತವಾಗಿ ಗುರುತಿಸಿ ರಕ್ಷಿಸುವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆಯೇ? ಎನ್ನುವ ಪ್ರಶ್ನೆಗಳಿಗೆ ಸರ್ಕಾರವೂ ಉತ್ತರಿಸಬೇಕಾಗಿದೆ.

WhatsApp Image 2026 07 18 at 8.06.39 PM

ಇದನ್ನೂ ಓದಿ: ಸೆನೆಗಲ್‌ನಲ್ಲಿ ಮಗಳ ಮಾರಾಟ ಆರೋಪ: ಹಕ್ಕಿಪಿಕ್ಕಿ ಸಮುದಾಯದ ಮಹಿಳೆ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು

ಅತ್ಯಾಚಾರವಾಗಲಿ, ಮಾನವ ಕಳ್ಳಸಾಗಣೆಯಾಗಲಿ, ವೇಶ್ಯಾವಾಟಿಕೆಯಾಗಲಿ, ಎಲ್ಲ ಅಪರಾಧಗಳ ಕೇಂದ್ರದಲ್ಲಿ ಮಹಿಳೆಯರ ಮೇಲಿನ ಬೇಡಿಕೆ ಸೃಷ್ಟಿಸುವ ಪುರುಷಾಧಿಪತ್ಯದ ಮನಸ್ಥಿತಿಯೇ ಇರುತ್ತದೆ. ಮಹಿಳೆಯರನ್ನು ಖರೀದಿಸುವವರು, ಶೋಷಿಸುವವರು, ಅವರ ದೇಹವನ್ನು ಲಾಭದ, ಮೋಹದ ವಸ್ತುವಾಗಿ ಪರಿವರ್ತಿಸುವ ಜಾಲಗಳನ್ನು ನಡೆಸುವವರು ಬಹುತೇಕ ಪುರುಷರೇ ಎಂಬುದು ಹಲವು ಅಧ್ಯಯನಗಳು ಮತ್ತು ಅಪರಾಧ ಪ್ರಕರಣಗಳಲ್ಲಿ ಕಂಡುಬಂದಿರುವ ಸಂಗತಿ. ಆದರೆ ಇಂತಹ ಘಟನೆ ಬೆಳಕಿಗೆ ಬಂದಾಗ ಸಾರ್ವಜನಿಕ ಚರ್ಚೆಯ ಕೇಂದ್ರದಲ್ಲಿ ನಿಲ್ಲುವುದು ಮಹಿಳೆಯೇ. ಮಹಿಳೆಯನ್ನು ಆರೈಕೆ, ತ್ಯಾಗ ಮತ್ತು ಮಮತೆಯ ಸಂಕೇತವಾಗಿ ಕಟ್ಟಿಕೊಟ್ಟಿರುವ ಸಮಾಜ, ಆ ಚಿತ್ರಣಕ್ಕೆ ವಿರುದ್ಧವಾದ ಆರೋಪ ಕೇಳಿಬಂದಾಗ ಆಕೆಯನ್ನೇ ತಕ್ಷಣ ನೈತಿಕ ತೀರ್ಪಿನ ಮುಂದೆ ನಿಲ್ಲಿಸುತ್ತದೆ. ಆದರೆ ಮಹಿಳೆಯರನ್ನು ಶೋಷಿಸುವ ಪುರುಷಾಧಿಪತ್ಯದ ವ್ಯವಸ್ಥೆ, ಅದರ ಹಿಂದೆ ಇರುವ ಬೇಡಿಕೆ ಮತ್ತು ಅಪರಾಧ ಜಾಲಗಳ ಬಗ್ಗೆ ಅಷ್ಟೇ ತೀವ್ರವಾಗಿ ಪ್ರಶ್ನಿಸುವುದಿಲ್ಲ.

ಇದರರ್ಥ ಮಹಿಳೆಯೊಬ್ಬಳು ಅಪರಾಧ ಎಸಗಿದ್ದರೆ ಅದನ್ನು ಸಮರ್ಥಿಸಬೇಕು ಎಂಬುದಲ್ಲ. ತಪ್ಪು ಯಾರದ್ದೇ ಆಗಿರಲಿ, ಕಾನೂನಿನ ಮುಂದೆ ಉತ್ತರಿಸಲೇಬೇಕು. ಆದರೆ ಸಮಾಜದ ದೃಷ್ಟಿಕೋನ ಒಂದೇ ತೂಕದಲ್ಲಿ ಕೆಲಸ ಮಾಡುತ್ತಿದೆಯೇ ಎಂಬ ಪ್ರಶ್ನೆ ಇಲ್ಲಿ ಮುಖ್ಯ. ಹೆಣ್ಣನ್ನು ತಪ್ಪಿತಸ್ಥಳನ್ನಾಗಿ ಮಾಡುವ ಕಥೆಗಳು ಕ್ಷಣಾರ್ಧದಲ್ಲಿ ವೈರಲ್ ಆಗುತ್ತವೆ; ಆದರೆ ಹೆಣ್ಣಿನ ಮೇಲೆ ಹಿಂಸೆ ನಡೆಸುವ ವ್ಯವಸ್ಥೆಯ ಬೇರುಗಳನ್ನು ಪ್ರಶ್ನಿಸುವ ಚರ್ಚೆಗಳು ಅಷ್ಟೇ ವೇಗವಾಗಿ ನಡೆಯುವುದಿಲ್ಲ.

ಈ ಪ್ರಕರಣದಲ್ಲಿ ಆರೋಪ ಯಾರ ಮೇಲಿದ್ದರೂ, ಅಂತಿಮ ಸತ್ಯವನ್ನು ನ್ಯಾಯಾಲಯವೇ ನಿರ್ಧರಿಸಲಿದೆ. ಆದರೆ ಈ ಘಟನೆಯಿಂದ ಹೆಣ್ಣುಮಗಳು ಯಾರ ಆಸ್ತಿಯೂ ಅಲ್ಲ. ಅವಳು ಸ್ವತಂತ್ರ ವ್ಯಕ್ತಿ. ಅವಳ ಜೀವನಕ್ಕೆ ಬೆಲೆ ಕಟ್ಟುವ ಹಕ್ಕು ಯಾರಿಗೂ ಇಲ್ಲ ಎಂಬ ಪಾಠವನ್ನು ಸಮಾಜ ಕಲಿಯಬೇಕಿದೆ. ಯಾವುದೇ ಸಮಾಜದ ನಾಗರಿಕತೆಯನ್ನು ಅಳೆಯುವುದು ಅದರ ಮಹಿಳೆಯರು ಎಷ್ಟು ಸುರಕ್ಷಿತರಾಗಿದ್ದಾರೆ ಎಂಬುದರಿಂದ. ಆ ಅಳತೆಯಲ್ಲಿ ನಾವು ಇನ್ನೂ ಸಾಕಷ್ಟು ದೂರ ಸಾಗಬೇಕಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವಕಲ್ಯಾಣದಲ್ಲಿ ಅ.24ರಿಂದ ʼಕಲ್ಯಾಣ ಪರ್ವʼ ರಜತ ಮಹೋತ್ಸವ

ವಿಶ್ವಗುರು ಬಸವಣ್ಣನವರ ತತ್ವ-ಸಿದ್ಧಾಂತಗಳು, ವಚನ ಸಾಹಿತ್ಯದ ಸಂದೇಶ ಹಾಗೂ ಶರಣರ ಸಮಾನತೆಯ...

‘ನೆಹರೂ–ಗಾಂಧಿ, ಯಾದವ್ ಕುಟುಂಬಗಳ ನಾಯಕತ್ವ ಬೇಡ’: ಒವೈಸಿ ಹೇಳಿಕೆಗೆ ವಿಪಕ್ಷಗಳ ತೀವ್ರ ಆಕ್ರೋಶ

ಮುಸ್ಲಿಂ ಯುವಕರು ನೆಹರೂ–ಗಾಂಧಿ ಮತ್ತು ಯಾದವ್ ಕುಟುಂಬಗಳ ರಾಜಕೀಯ ನಾಯಕತ್ವವನ್ನು ಅನುಸರಿಸುವುದನ್ನು...

ಬೀದರ್‌ | ಗಾಯಕ ದೇವದಾಸಗೆ ಒಲಿದ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ

ಕರ್ನಾಟಕ ಜಾನಪದ ಅಕಾಡೆಮಿಯು 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿದ್ದು,...

ಬಡತನ ಮೆಟ್ಟಿ ಬಿಲ್ಲುಗಾರಿಕೆ ಒಲಿಸಿಕೊಂಡ ದೇವಮ್ಮ: ಒಲಂಪಿಕ್ಸ್‌ ಕನಸಿಗೆ ಸ್ಪೂರ್ತಿ ತುಂಬಿದ ಎಂ.ಬಿ ಪಾಟೀಲ್‌

ಬಡತನದ ನಡುವೆಯೂ ಬಿಲ್ಲುಗಾರಿಕೆಯಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಲ್ಯಾಣ ಕರ್ನಾಟಕದ ಪ್ರತಿಭೆ...