ಮಂಗಳೂರು ವಿಮಾನ ದುರಂತ, ಬೋಯಿಂಗ್ 747 ಏರ್‌ಇಂಡಿಯಾ ವಿಮಾನ ದುರಂತದಂತಹ ಭೀಕರ ಅಪಘಾತಗಳ ಪಟ್ಟಿಗೆ ಗುಜರಾತ್ ವಿಮಾನ ದುರಂತವೂ ಸೇರಿದೆ.
ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾದ ಬೋಯಿಂಗ್ 787 ವಿಮಾನ(AI 171) ವಿಮಾನ ಗುರುವಾರ(ಜೂನ್ 12) ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದೆ. ಈ ವಿಮಾನ ದುರಂತದಲ್ಲಿ 230 ಮಂದಿ ಪ್ರಯಾಣಿಕರು ಮತ್ತು 12 ಸಿಬ್ಬಂದಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಇದೇ ಹೊತ್ತಿನಲ್ಲಿ, ಮಂಗಳೂರು ವಿಮಾನ ದುರಂತ ಸೇರಿದಂತೆ ಹಲವು ವಿಮಾನ ದುರಂತಗಳ ಕರಾಳ ನೆನಪು ಕಾಡುತ್ತಿದೆ. 2010ರ ಮೇ 22ರಂದು ಮುಂಜಾನೆ ಸುಮಾರು 6.03ಕ್ಕೆ ದುಬೈನಿಂದ ಮಂಗಳೂರಿಗೆ ಒಟ್ಟು 166 ಪ್ರಯಾಣಿಕರನ್ನು ಕರೆತಂದಿದ್ದ ‘ಏರ್ ಇಂಡಿಯಾ ಎಕ್ಸ್‌ಪ್ರೆಸ್ 812’ ವಿಮಾನ ದುರಂತದಲ್ಲಿ 158 ಪ್ರಯಾಣಿಕರು ಮೃತಪಟ್ಟಿದ್ದರು. 1978ರಲ್ಲಿಯೂ ಬೋಯಿಂಗ್ ವಿಮಾನ ಅಪಘಾತವಾಗಿತ್ತು. ಬೋಯಿಂಗ್ 747 ಏರ್‌ಇಂಡಿಯಾ ವಿಮಾನ ಅರಬ್ಬಿ ಸಮುದ್ರಕ್ಕೆ ಅಪ್ಪಳಿಸಿ ವಿಮಾನದಲ್ಲಿದ್ದ 213 ಮಂದಿಯೂ ಮೃತಪಟ್ಟಿದ್ದರು. ಈ ಭೀಕರ ಅಪಘಾತಗಳ ಪಟ್ಟಿಗೆ ಗುಜರಾತ್ ವಿಮಾನ ದುರಂತ ಸೇರಿದೆ.
ಇದನ್ನು ಓದಿದ್ದೀರಾ? ಬೋಯಿಂಗ್ 787 ವಿಮಾನಗಳ ತಾಂತ್ರಿಕ ದೋಷಗಳ ಬಗ್ಗೆ ಎಚ್ಚರಿಸಿದ್ದ ಎಂಜಿನಿಯರ್ ನಿಗೂಢ ಸಾವು; ಮತ್ತೆ ಮುನ್ನೆಲೆಗೆ
ಕಳೆದ ಐದು ವರ್ಷಗಳ ವಿಮಾನಗಳಲ್ಲಿ ದುರಂತಗಳು
2025 ಮತ್ತು ಕಳೆದ ಐದು ವರ್ಷಗಳ ಅವಧಿಯಲ್ಲಿ ವಿಶ್ವದಲ್ಲಿ ಹಲವು ವಿಮಾನ ಅಪಘಾತಗಳು ಸಂಭವಿಸಿವೆ. ಅದರಲ್ಲೂ ಮುಖ್ಯವಾಗಿ ಕಳೆದ ವರ್ಷ(2024) ಹಲವು ಅವಘಡಗಳು ಘಟಿಸಿವೆ. ಮೂರು ಭೀಕರ ವಿಮಾನ ದುರಂತಗಳು ಕಳೆದ ವರ್ಷವೇ ಸಂಭವಿಸಿವೆ. ಕೆಲವು ವಿಮಾನ ಅಪಘಾತದಲ್ಲಿ ಪ್ರಯಾಣಿಕರು ಕೊಂಚದುರಲ್ಲೇ ಪಾರಾದರೆ, ಇನ್ನೂ ಕೆಲವು ಭೀಕರ ಅಪಘಾತಗಳ ಪುಟಕ್ಕೆ ಸೇರಿ ಇಡೀ ವಿಶ್ವವೇ ಮರೆಯಲಾರದ ಸಾವು ನೋವಿಗೆ ಕಾರಣವಾಗಿವೆ.
2020ರಲ್ಲಿ ನಡೆದ ಭೀಕರ ಅಪಘಾತಗಳು
2020ರ ಜನವರಿ 8ರಂದು ಇರಾನ್‌ನ ಟೆಹ್ರಾನ್‌ನಲ್ಲಿರುವ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉಕ್ರೇನ್‌ನ ಕೀವ್‌ಗೆ ಹೊರಟ ‘ಉಕ್ರೇನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ 752 ಬೋಯಿಂಗ್ 737-800’ ವಿಮಾನವನ್ನು ಹಾರಿದ ಸ್ವಲ್ಪ ಸಮಯದಲ್ಲೇ ಇರಾನ್ ಕ್ಷಿಪಣಿಯು ಹೊಡೆದುರುಳಿಸಿತ್ತು. ಇದರಿಂದಾಗಿ ಪ್ರಯಾಣಿಕರು, ಸಿಬ್ಬಂದಿ ಸೇರಿ 176 ಮಂದಿ ಸಾವನ್ನಪ್ಪಿದ್ದರು.
2020ರ ಮೇ 22ರಂದು ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಫ್ಲೈಟ್ 8303, ಏರ್‌ಬಸ್ ಎ 320 ವಿಮಾನವು ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಬಾರಿ ಲ್ಯಾಂಡ್ ಆಗಲು ಪ್ರಯತ್ನಿಸುತ್ತಿರುವಾಗ ಕರಾಚಿಯ ವಸತಿ ಪ್ರದೇಶದಲ್ಲಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ 99 ಪ್ರಯಾಣಿಕರಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಬದುಕುಳಿದಿದ್ದರು. ಆ ಪ್ರದೇಶದಲ್ಲೇ ಇದ್ದ ಓರ್ವ ವ್ಯಕ್ತಿಯೂ ಸಾವನ್ನಪ್ಪಿದ್ದನು.
ಇದನ್ನು ಓದಿದ್ದೀರಾ? ಏರ್ ಇಂಡಿಯಾ ವಿಮಾನ ದುರಂತ: ಉನ್ನತ ಮಟ್ಟದ ತನಿಖೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ
2021ರಲ್ಲಿ ನಡೆದ ವಿಮಾನ ದುರಂತಗಳು
2021ರ ಜನವರಿ 9ರಂದು ಇಂಡೋನೇಷ್ಯಾದ ಪೊಂಟಿಯಾನಕ್‌ನ ದೇಶೀಯ ವಿಮಾನ ಶ್ರೀವಿಜಯ ಏರ್ ಫ್ಲೈಟ್ 182 ಜಕಾರ್ತಾದ ಸೋಕರ್ನೊ-ಹಟ್ಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ ಎಲ್ಲ 62 ಪ್ರಯಾಣಿಕರು ಮತ್ತು ಸಿಬ್ಬಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದರು.
2021ರ ಜುಲೈ 6ರಂದು ಪೆಟ್ರೋಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿಯಿಂದ ರಷ್ಯಾದ ಪಲಾನಾಗೆ ಹೊರ ದೇಶೀಯ ವಿಮಾನ ರಷ್ಯಾ ಸಮೀಪಿಸುತ್ತಿರುವಾಗ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲ 22 ಪ್ರಯಾಣಿಕರು, ಆರು ಮಂದಿ ಸಿಬ್ಬಂದಿ ಸಾವನ್ನಪ್ಪಿದ್ದರು.
2022ರಲ್ಲಿ ನಡೆದ ಭೀಕರ ವಿಮಾನ ಅವಘಡಗಳು
ಚೀನಾ ಈಸ್ಟರ್ನ್ ಏರ್‌ಲೈನ್ಸ್‌ನ ಬೋಯಿಂಗ್ 737-800 ವಿಮಾನವು 2022ರ ಮಾರ್ಚ್ 21ರಂದು ನೈಋತ್ಯ ಗುವಾಂಗ್ಕ್ಸಿ ಪ್ರದೇಶದ ಪರ್ವತ ಪ್ರದೇಶಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ ಎಲ್ಲ 132 ಮಂದಿಯೂ ಸಾವನ್ನಪ್ಪಿದ್ದರು. ಇದು 28 ವರ್ಷಗಳಲ್ಲಿ ಚೀನಾ ಕಂಡ ಭೀಕರ ವಿಮಾನ ದುರಂತವಾಗಿದೆ.
2022ರ ನವೆಂಬರ್ 6ರಂದು ಡಾರ್ ಎಸ್ ಸಲಾಮ್‌ನಿಂದ ಹೊರಟಿದ್ದ ದೇಶೀಯ ವಿಮಾನ ಪ್ರಿಸಿಶನ್ ಏರ್ ಫ್ಲೈಟ್ 494 ATR 42-500, ಟಾಂಜಾನಿಯಾದ ಬುಕೊಬಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ವಿಕ್ಟೋರಿಯಾ ಸರೋವರಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ 43 ಮಂದಿಯಲ್ಲಿ 19 ಮಂದಿ ಮೃತಪಟ್ಟಿದ್ದರು.
Here is cctv footage from airport area ,which conclude whole travel of crashed AIR INDIA boing-787 plane clearly a tragic incident.#ahemdabad #modi pic.twitter.com/tUcfc8xQJf
— Shawn Charlie 🇬🇧🇺🇸 (@SharanAnupam) June 12, 2025
2023ರಲ್ಲಿ ಘಟಿಸಿದ ವಿಮಾನ ದುರಂತಗಳು
2023ರ ಜನವರಿ 15ರಂದು ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರಾಟ ನಡೆಸುತ್ತಿದ್ದ ದೇಶೀಯ ವಿಮಾನ ಯೇಟಿ ಏರ್‌ಲೈನ್ಸ್ ವಿಮಾನ 691 ಎಟಿಆರ್ 72-500 ನೇಪಾಳದ ಪೋಖರಾದಲ್ಲಿರುವ ಸೇತಿ ಗಂಡಕಿ ನದಿಯ ಕಮರಿಗೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ ಎಲ್ಲಾ 72 ಮಂದಿ ಸಾವನ್ನಪ್ಪಿದ್ದರು. ಎಟಿಆರ್ 72ರ ಅತಿ ಭೀಕರ ಅಪಘಾತ ಇದಾಗಿದೆ.
ಕಳೆದ ವರ್ಷ(2024) ನಡೆದ ಭೀಕರ ವಿಮಾನ ಅಪಘಾತಗಳು
2024ರ ಡಿಸೆಂಬರ್ 29ರಂದು ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೆಜು ಏರ್ ಅಂತಾರಾಷ್ಟ್ರೀಯ ವಿಮಾನ 7C2216 ಅಪಘಾತಕ್ಕೀಡಾಗಿದ್ದು, ಎಲ್ಲಾ 175 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಗಳಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಇದು ದಕ್ಷಿಣ ಕೊರಿಯಾದ ನೆಲದಲ್ಲಿ ನಡೆದ ಅತ್ಯಂತ ಭೀಕರ ವಿಮಾನ ದುರಂತವಾಗಿದೆ.
2024ರ ಡಿಸೆಂಬರ್ 25ರಂದು ಅಜೆರ್‌ಬಯ್‌ಜಾನ್ ಏರ್‌ಲೈನ್ಸ್ ಅಂತಾರಾಷ್ಟ್ರೀಯ ವಿಮಾನ J2-8243, ಎಂಬ್ರೇರ್ E190 ರಷ್ಯಾದಿಂದ ಕಝಾಕಿಸ್ತಾನ್‌ಗೆ ಹಾರುತ್ತಿದ್ದಾಗ ಅಪಘಾತಕ್ಕೀಡಾಗಿದ್ದು 38 ಮಂದಿ ಸಾವನ್ನಪ್ಪಿದರು. ರಷ್ಯಾದಲ್ಲಿ ಗುಂಡು ಹಾರಿಸಿದ ಕಾರಣದಿಂದಾಗಿ ವಿಮಾನಕ್ಕೆ ಹಾನಿಯಾಗಿ ಈ ಅವಘಡ ಸಂಭವಿಸಿದೆ ಎಂದು ಅಜೆರ್‌ಬಯ್‌ಜಾನ್ ಏರ್‌ಲೈನ್ಸ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಹೇಳಿದ್ದರು. ಆದರೆ ಮಾಸ್ಕೋ ಮಾತ್ರ ಈ ಆರೋಪವನ್ನು ದೃಢಪಡಿಸಿಲ್ಲ.
ಹೀಗೆ ಅದೆಷ್ಟೋ ವಿಮಾನ ಅಪಘಾತಗಳು ಇತಿಹಾಸದ ಪುಟ ಸೇರುತ್ತಲೇ ಇವೆ. ಕೆಲವು ಅಚಾನಕ್ ಆಗಿ ನಡೆದಿದ್ದರೆ ಗುಜರಾತ್ ವಿಮಾನ ದುರಂತವನ್ನು ಮಾತ್ರ ಅನಿರೀಕ್ಷಿತ ಎನ್ನಲಾಗದು. ಬೋಯಿಂಗ್ 787 ವಿಮಾನದಲ್ಲಿರುವ ಹಲವು ತಾಂತ್ರಿಕ ದೋಷಗಳನ್ನು ಹಲವು ಎಂಜಿನಿಯರ್‌ಗಳು ಬೊಟ್ಟು ಮಾಡಿದ್ದರು. ಸಮಸ್ಯೆ ತಿಳಿಸಿ ವಿಮಾನ ದುರಂತವನ್ನು ತಡೆಯಲು ಯತ್ನಿಸಿದವರಲ್ಲಿ ಎಂಜಿನಿಯರ್ ಜಾನ್ ಬರ್ನೆಟ್ ಶವವಾಗಿ ಪತ್ತೆಯಾದರು. ಈ ಸಾವು ದೋಷಗಳನ್ನು ಎತ್ತಿ ತೋರಿಸುವವರ ಬಾಯಿಗೆ ಬೀಗ ಜಡಿಯಿತು, ಕುಗ್ಗಿಸಿತು. ಆದರೆ ಕೊನೆಗೆ ಜನರ ಮಾರಣಹೋಮವಾಯಿತು.
ಇತರೆ ದೇಶಗಳಲ್ಲಿ ಮಾತ್ರವಲ್ಲದೇ ಭಾರತದಲ್ಲಿ ಬೋಯಿಂಗ್ 787 ಹಾರಲು ಆರಂಭವಾದಾಗಿನಿಂದ ಬೆರಳೆಣಿಕೆಗೂ ಮೀರಿ ಹಲವು ಸಮಸ್ಯೆಗಳು ಕಣ್ಣಿಗೆ ರಾಚುವಂತೆ ಕಂಡುಬಂದಿವೆ, ವರದಿಯಾಗಿವೆ. ಅದೆಷ್ಟೋ ಬಾರಿ ಪ್ರಯಾಣಿಕರು ಭೀಕರ ಅಪಾಯದಿಂದ ಕೊಂಚದುರಲ್ಲೇ ಪಾರಾಗಿದ್ದಾರೆ. ಅಪಾಯಗಳ ಮುನ್ಸೂಚನೆ ಇದ್ದರೂ ಬೋಯಿಂಗ್ 787 ವಿಮಾನ ಹಾರಾಟವನ್ನು ಏರ್ ಇಂಡಿಯಾ ಯಾಕೆ ನಿಲ್ಲಿಸಿಲ್ಲ? ಬೋಯಿಂಗ್ 787ನಲ್ಲಿ ಇಷ್ಟೊಂದು ಸಮಸ್ಯೆಗಳಿದ್ದರೂ ಕೇಂದ್ರ ವಿಮಾನಯಾನ ಸಚಿವಾಲಯದ ಗಮನಕ್ಕೆ ಯಾಕೆ ಬಂದಿಲ್ಲ? ಈ ದುರಂತದ ಹೊಣೆ ಯಾರದ್ದು? – ಹೀಗೆ ಹಲವು ಪ್ರಶ್ನೆಗಳನ್ನು ನಾವು ಕೇಂದ್ರ ಸರ್ಕಾರದ ಮುಂದಿಡಬೇಕಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.