ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು... ಆಗಾಗ
ಧಾತು ಮಾತು ಪಲ್ಲಟಿಸಿದರೆ, ಗಮನವಿನ್ನೆಲ್ಲಿಯದೊ?
ಧ್ಯಾನ ಮೌನವೆಂಬುದು
ತನುಗುಣ ಸಂದೇಹವಯ್ಯಾ.
ಸುಜ್ಞಾನಭರಿತ, ಅನುಪಮಸುಖಿ
ಗುಹೇಶ್ವರಾ ನಿಮ್ಮ ಶರಣನು.
ಪದಾರ್ಥ:
ಧಾತು = ದೇಹ ಕ್ರಿಯೆ
ಪಲ್ಲಟ = ಬದಲಾಗು
ತನುಗುಣ = ದೇಹಗುಣ
ವಚನಾರ್ಥ:
ಧಾತು ಅಂದರೆ ನಡೆ ಮಾತು ಅಂದರೆ ನುಡಿ ಇವೆರಡರಲ್ಲಿ ಪಲ್ಲಟವಾದರೆ ಅಂದರೆ ವ್ಯತ್ಯಾಸವಾದರೆ ಗಮನ ಇನ್ನೆಲ್ಲಿಯದು ಅಂದರೆ ಅದು ಗುರಿಯಿರದ ಜೀವನಮಾರ್ಗ. ನುಡಿದಂತೆ ನಡೆಯದಿದ್ದರೆ ಕೂಡಲಸಂಗಯ್ಯ ಮೆಚ್ಚ ಕಾಣಿರಯ್ಯ ಎಂಬಂತೆ ಧಾತು ಮತ್ತು ಮಾತು ಒಂದಾಗಿ ಜೀವದಲ್ಲಿ ಮೇಳಯಿಸಬೇಕು. ದೇವ ಮೆಚ್ಚಬೇಕು. ನಡೆ ನುಡಿ ಒಂದಾಗದೆ ನಡೆಸುವ ಧ್ಯಾನ ಮೌನಗಳು ತನ್ನನ್ನು ತಾನೇ ಸಂದೇಹಿಸಿಕೊಳ್ಳುವ ವ್ಯಕ್ತಿತ್ವದ ತನುಗುಣವನ್ನು ತಂದೊಡ್ಡಬಲ್ಲವು. ಧಾತು ಮಾತು ಪಲ್ಲಟಗೊಳ್ಳದೆ ಮೌನದಲ್ಲಿ ಧ್ಯಾನಿಯಾಗಿ ನಿಜವನ್ನು ಅರಸುವ ದೇಹ ಗುಣವುಳ್ಳವ ಸದಾ ನಿಸ್ಸಂದೇಹಿ. ಅವನದು ಸುಜ್ಞಾನದಿಂದ ಭರಿತವಾದ ಬದುಕು. ಅಂತಹ ಸುಜ್ಞಾನದಿಂದ ಸಿದ್ದಿಸುವುದು ಅನುಪಮ ಸುಖ. ಅವನೇ ಶರಣ. ಅವನು ಅನುಗಾಲವೂ ಅನುಪಮಸುಖಿ.
ಪದ ಪ್ರಯೋಗಾರ್ಥ:
ಅನನ್ಯವಾದ ಅನುಪಮವಾದ ಸುಖವನ್ನು ಅನುಭವಿಸುವವನು ಅನುಪಮಸುಖಿ. ದೈಹಿಕ ಮಾನಸಿಕ ಸುಖವನ್ನು ಹೊಂದಲು ಹಲವು ಮಾರ್ಗಗಳಿವೆ. ನೀಚ ಮತ್ತು ಉಚ್ಚ ಮಾರ್ಗಗಳು. ಇಲ್ಲಿ ಅಲ್ಲಮ ಉದಹರಿಸಿರುವುದು ಸರ್ವೋಚ್ಚ ಮಾರ್ಗ. ಸುಜ್ಞಾನಭರಿತ ಮಾರ್ಗ. ಆ ಮಾರ್ಗದಲ್ಲಿ ಚಲಿಸುವ ಶರಣ ಅನುಪಮಸುಖಿ. ಆ ಸುಖ ಕ್ಷಣಿಕವಾದದ್ದಲ್ಲ. ಅದು ನಿರಂತರವಾಗಿ ಉಕ್ಕುವ ಸುಖಧಾರೆ. “ಅನುಪಮಸುಖಿ” ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಬಳಕೆಯಾಗಿರುವ ಅತ್ಯಪೂರ್ವವಾದ ಪದಪುಂಜ. ಇಂಥ ಪದಸೃಷ್ಟಿ ಮಾಡಿದ ಅಲ್ಲಮ ಅಭಿನಂದನಾರ್ಹ.

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.
ಧಾತು ಎಂದರೆ ನಡೆಯಲ್ಲ. ಅಂತಃಸತ್ವ ಅಥವಾ ಅಂತರಾಳ ಎಂಬುದನ್ನು ಧಾತು ಎಂದು ಅಲ್ಲಮ ಹೇಳಿದ್ದಾನೆ. ಒಳಗಿನದ್ದೇ ಹೊರಗಿನ ಮಾತಾಗಬೇಕು. ಹೊರಗೊಂದು ಒಳಗೊಂದು ಇರಬಾರದು. ಹಾಗಾದರೆ ಗಮನ ಎಲ್ಲಿರಲು ಸಾಧ್ಯ? ಅಲ್ಲಮ ಇಲ್ಲಿ ಧ್ಯಾನ ಮತ್ತು ಗಮನ ಎರಡನ್ನೂ ಬಳಸಿದ್ದಾನೆ. ಎರಡು ಸಮಾನಾರ್ಥಕ ಪದಗಳೇ ಆಗಿವೆ. ಅವನ ಈ ವಚನದಲ್ಲಿ. ಒಳ ಹೊರಗು ಎರಡೂ ಒಂದಾದಲ್ಲಿ ದಕ್ಕುವುದು ಮೌನ. ತನುಗುಣ ಸಂದೇಹವಯ್ಯ ಎಂದಾಗ ಭೌತಿಕ ಶರೀರದ ಸೆಳೆತಗಳ ಚಂಚಲತೆಯನ್ನು ಸೂಚಿಸುತ್ತಾನೆ. The spirit is willing but the flesh is weak ಅನ್ನುವುದನ್ನು ಇಲ್ಲಿ ದ್ವನಿಸುತ್ತಾನೆ. ಆ ತಿಳುವಳಿಕೆಯೇ ಪರಮ ಜ್ಞಾನ ಅಥವಾ ಸುಜ್ಞಾನ, ಆ ಅರಿವು ಒಯ್ಯುವುದು ನಿರಾಳಕ್ಕೆ. ಆ ಅರಿವು ನಿರಾಳವನ್ನು ಗುಹೇಶ್ವರನಿಗೆ attribute ಮಾಡುತ್ತಾನೆ.
ಅಲ್ಲಮನ ವಚನದ ಆಂತರ್ಯದ ಸೂಕ್ಷ್ಮತೆಯನ್ನು ತಿಳಿಸಿ ಹೇಳಿದ ಮೇಸ್ತ್ರಿಗೆ ನಮಸ್ಕಾರಗಳು
ನನ್ನ ಇತಿಮಿತಿಯಲ್ಲಿ ಗ್ರಹಿಸಿದ್ದೇನೆ. ಮನ್ನಿಪಿಗೆ ವಂದನೆಗಳು 🙏🏼🙏🏼
ನಿಮ್ಮ ಫೋನ್ ನಂಬರ್ ಕೊಡಿ ಸರ್
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com
ಅದ್ಭುತ ವಚನ ಪರಿಚಯಿಸಿದ್ದಕ್ಕೆ ಧನ್ಯವಾದಗಳು