ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದುಂಡು ಮೇಜಿನ ಸಭೆಯ ಕಾರಣಕ್ಕಾಗಿ ಲಂಡನ್‌ನಲ್ಲಿದ್ದಾಗ 1930ರ ಡಿಸೆಂಬರ್ 30ರಂದು ತಮ್ಮ ಮಡದಿ ರಮಾಬಾಯಿ ಅವರಿಗೆ ಪತ್ರೆ ಬರೆದಿದ್ದರು. ತಮ್ಮ ಪ್ರೀತಿ, ಭಾವ, ದುಗುಡ, ಮರುಕ, ಆತಂಕ ಎಲ್ಲವನ್ನೂ ಹೇಳಿಕೊಂಡಿದ್ದರು. ಅಂಬೇಡ್ಕರ್ ಬರೆದಿದ್ದ ಪತ್ರವನ್ನು ವಿಕಾಸ್ ಆರ್ ಮೌರ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂದು ರಮಾಬಾಯಿ ಅವರ ಜನ್ಮದಿನ. ಈ ಸಂದರ್ಭದಲ್ಲಿ, ಆ ಪತ್ರವನ್ನು ಇಲ್ಲಿ ಪ್ರಕಟಿಸಲಾಗಿದೆ.
ಪತ್ರ ಹೀಗಿದೆ; ರಮಾ! ಹೇಗಿದ್ದೀಯ ರಮಾ?
ಇಂದೇಕೋ ನೀನು ಮತ್ತು ಯಶವಂತ ಬಿಡದೇ ಕಾಡುತ್ತಿದ್ದೀರಿ. ನಿನ್ನ ನೆನಪು ನನ್ನದೆಯನ್ನು ಭಾರವಾಗಿಸಿದೆ. ಕಳೆದ ಕೆಲವು ದಿನಗಳಲ್ಲಿ ನನ್ನ ಭಾಷಣಗಳು ಹೆಚ್ಚು ಚರ್ಚೆಗೊಳಗಾದವು. ಸಮ್ಮೇಳನದಲ್ಲಿ ಬಹಳ ಒಳ್ಳೆಯ ಹಾಗೂ ಫಲಪ್ರದ ಚರ್ಚೆಗಳಾದವು. ಇದನ್ನೇ ದಿನಪತ್ರಿಕೆಗಳು ನನ್ನ ಭಾಷಣದ ಬಗ್ಗೆ ಬರೆದಿರುವುದು. ಈ ಮೊದಲು ದುಂಡುಮೇಜಿನ ಪರಿಷತ್ತಿನಲ್ಲಿನ ನನ್ನ ಜವಾಬ್ದಾರಿಯ ಬಗ್ಗೆ ಯೋಚಿಸುತ್ತಿದ್ದೆ. ನನ್ನ ಕಣ್ಣ ಮುಂದೆ ನನ್ನ ದೇಶದ ಎಲ್ಲಾ ನೊಂದವರ ಚಿತ್ರಣ ಕಂಡುಬರುತ್ತಿತ್ತು. ಸಾವಿರಾರು ವರ್ಷಗಳಿಂದ ಈ ಜನ ದುಃಖದಲ್ಲಿಯೇ ಮುಳುಗಿದ್ದಾರೆ. ಈ ಧಮನಕ್ಕೆ ಚಿಕಿತ್ಸೆಯೇ ಇಲ್ಲವೆಂದು ಭಾವಿಸಿದ್ದಾರೆ. ನನಗೆ ಸಿಡಿಲು ಬಡಿದಂತಾಗುತ್ತದೆ ರಮಾ. ಆದರೂ ನಾನು ಹೋರಾಡುತ್ತೇನೆ.
ನನ್ನ ವಿಚಾರಶಕ್ತಿ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಬಹುಶಃ ನನ್ನ ಮನದಲ್ಲಿ ಅಗಾಧವಾದ ಸಂಗತಿಗಳು ಸ್ಪೋಟಿಸುತ್ತಿವೆ. ಹೃದಯ ಬಹಳ ಭಾವುಕವಾಗಿದೆ, ದಿಕ್ಕು ತೋಚದಂತಾಗಿದೆ. ನಿನ್ನ ಮತ್ತು ಮನೆಯವರ ನೆನಪು ಕಾಡಲಾರಂಭಿಸಿದೆ. ನಿನ್ನ ನೆನಪಾಗುತ್ತಲೇ ಇದೆ. ಯಶವಂತ ನೆನಪಾದ.
ಹಡಗು ಹತ್ತಿಸಲು ನೀನಲ್ಲಿಗೆ ಬಂದಿದ್ದೆ. ಅಲ್ಲಿಗೆ ಬರಬೇಡವೆಂದು ಪದೇ ಪದೇ ನಾ ಹೇಳಿದ್ದೆ. ಆದರೂ ನೀನು ನನ್ನ ಮಾತು ಕೇಳಲಿಲ್ಲ. ನನ್ನನ್ನು ಬೀಳ್ಗೊಡಲು ಬಂದೇಬಿಟ್ಟೆ. ನಾನು ದುಂಡು ಮೇಜಿನ ಪರಿಷತ್ತಿಗೆ ಹೊರಟಿದ್ದೆ. ನನ್ನನ್ನು ಜೈಕಾರದಿಂದ ಎಲ್ಲೆಡೆಯೂ ಬೀಳ್ಗೊಡಲಾಗುತ್ತಿತ್ತು. ನೀನದೆಲ್ಲವನ್ನೂ ನೋಡುತ್ತಲೇ ಇದ್ದೆ. ನಿನ್ನೆದೆ ಭಾವಪರವಶವಾಗಿತ್ತು. ನೀನು ನನ್ನನ್ನು ಬೀಳ್ಗೊಡುವಾಗ ನಿನ್ನಲ್ಲಿ ಧನ್ಯತೆ ತುಂಬಿತ್ತು. ನಿನಗೆ ಮಾತೇ ಬರುತ್ತಿರಲಿಲ್ಲ. ಆದರೆ, ನಿನ್ನ ತುಟಿಗಳಿಂದ ಏನನ್ನು ಹೇಳಲಾಗುತ್ತಿರಲಿಲ್ಲವೋ ಅದೆಲ್ಲವನ್ನೂ ನಿನ್ನ ಕಂಗಳು ಹೇಳುತ್ತಿದ್ದವು. ನಿನ್ನ ಮೌನ ಹೆಚ್ಚು ಮಾತನಾಡುತ್ತಿತ್ತು. ನಿನ್ನ ತುಟಿ ಮತ್ತು ಗಂಟಲು ಯುದ್ದಕ್ಕಿಳಿದಿದ್ದವು. ನಿನ್ನ ತುಟಿಗಳಿಂದ ಹೊರಹೊಮ್ಮುವ ನುಡಿಗಳಿಗಿಂತಲೂ ನಿನ್ನ ಕಣ್ಣಿನಿಂದ ಜಾರುತ್ತಿದ್ದ ಹನಿಗಳು ನಿನ್ನ ಬೆನ್ನಿಗೆ ನಿಂತಿದ್ದವು.
ಇಲ್ಲಿ ಲಂಡನ್ನಿನಲ್ಲಿ ಈ ಮುಂಜಾನೆಯಲ್ಲಿ ಎಲ್ಲವೂ ನನ್ನೆದೆಯನ್ನು ಇರಿಯುತ್ತಿವೆ. ನನ್ನ ಹೃದಯ ಭಾರವಾಗುತ್ತಿದೆ. ನನ್ನೆದೆ ತಲ್ಲಣಿಸುತ್ತಿದೆ. ಹೇಗಿದ್ದೀಯ ರಮಾ? ಯಶವಂತ ಚನ್ನಾಗಿದ್ದಾನ? ಅವನಿಗೆ ನನ್ನ ನೆನಪಾಗುತ್ತಿದೆಯೇ? ಅವನ ಸಂಧಿವಾತದ ಸಮಸ್ಯೆ ಹೇಗಿದೆ? ಅವನನ್ನು ಚನ್ನಾಗಿ ನೋಡಿಕೋ ರಮಾ. ನಮ್ಮ ನಾಲ್ಕು ಮಕ್ಕಳು ನಮ್ಮನ್ನಗಲಿದರು. ಈಗ ನಮಗೆ ಯಶವಂತನೊಬ್ಬನೇ ಉಳಿದಿದ್ದಾನೆ. ನಿನ್ನ ತಾಯ್ತನದ ಏಕೈಕ ಕುಡಿ ಅವನೊಬ್ಬನೇ. ನಾವು ಅವನನ್ನು ಉಳಿಸಿಕೊಳ್ಳಬೇಕಿದೆ ರಮಾ. ಯಶವಂತ ಜೋಪಾನ. ಅವನನ್ನು ಚನ್ನಾಗಿ ಓದಿಸು. ರಾತ್ರಿಯಿಡೀ ಎಚ್ಚರವಾಗಿ ಓದಲು ಹಚ್ಚು ರಮಾ. ನನ್ನ ತಂದೆ ರಾತ್ರಿ ಹೊತ್ತಲ್ಲಿ ಓದಲು ಎಬ್ಬಿಸುತ್ತಿದ್ದರು. ಅಲ್ಲಿಯವರೆಗೂ ಅವರು ಎಚ್ಚರವಾಗಿರುತ್ತಿದ್ದರು. ನನಗೆ ಶಿಸ್ತು ಕಲಿಸಿದ್ದೇ ನನ್ನಪ್ಪ. ನಾನು ಮೇಲೆದ್ದು ಓದಲು ಕುಳಿತಾಗಲೇ ಅವರು ಮಲಗುತ್ತಿದ್ದದ್ದು. ಆರಂಭದಲ್ಲಿ ರಾತ್ರಿ ಸಮಯ ಎದ್ದು ಓದಲು ಹಿಂದು ಮುಂದು ಯೋಚಿಸುತ್ತ ನಾನು ಸೋಮಾರಿಯಾಗಿದ್ದೆ. ಆ ಸಮಯದಲ್ಲಿ ಓದುವುದಕ್ಕಿಂತ ಮಲಗುವುದೇ ಹೆಚ್ಚು ಸುಖಕರವಾಗಿತ್ತು. ದಿನ ಕಳೆದಂತೆಲ್ಲ ಜೀವನದಲ್ಲಿ ಮಲಗುವುದಕ್ಕಿಂತ ಓದುವುದೇ ಹೆಚ್ಚಾಯಿತು.
ಇದರ ಶ್ರೇಯಸ್ಸು ನನ್ನಪ್ಪನಿಗೇ ಹೋಗಬೇಕು. ಹಾಗಾಗಿ ನನ್ನ ಜ್ಞಾನದ ಜ್ವಾಲೆ ಇಂದಿಗೂ ಉರಿಯುತ್ತಲೇ ಇದೆ. ನನ್ನಪ್ಪ ದೀಪದ ಎಣ್ಣೆಯಂತೆ ಸುಟ್ಟಿಕೊಳ್ಳುತ್ತಲೇ ಹೋದರು. ಅವರಿಂದ ಎಷ್ಟು ಸಾಧ್ಯವೋ ಅಷ್ಟು ಮಾಡಿದರು. ಕತ್ತಲನ್ನು ಬೆಳಕಾಗಿಸಿದರು. ನನ್ನಪ್ಪನ ಶ್ರಮ ಇಂದು ಫಲ ನೀಡುತ್ತಿದೆ. ನನಗಿಂದು ಹೆಚ್ಚು ಒಳ್ಳೆಯದಾಗುತ್ತಿದೆ ರಮಾ. ರಮಾ, ಯಶವಂತನೂ ಸಹ ಹಾಗೆಯೇ ಓದಿನಲ್ಲಿ ತಲ್ಲೀನನಾಗಬೇಕು.

ರಮಾ, ಐಷಾರಾಮಿ ಸಂಗತಿಗಳು ಉಪಯೋಗಕ್ಕೆ ಬಾರದವು. ನೀನು ನೀನಾಗಿರಬೇಕು. ಜನರು ಐಷಾರಾಮಿ ಜೀವನದ ಹಿಂದೆ ಓಡುತ್ತಲೇ ಇರುತ್ತಾರೆ. ಅವರ ಬದುಕು ಅಲ್ಲಿಂದಲೇ ಆರಂಭವಾಗಿ ಅಲ್ಲಿಗೇ ಕೊನೆಗಾಣುತ್ತದೆ. ಅವರ ಬದುಕು ಬದಲಾಗುವುದೇ ಇಲ್ಲ. ರಮಾ, ನಾವು ಅವರಂತೆ ಬದುಕಬಾರದು, ಬದುಕಲಾರೆವು. ದುಃಖವಲ್ಲದೆ ಬೇರೇನೂ ನಮಗೆ ಉಳಿದಿಲ್ಲ. ಬಡತನ ಮತ್ತು ದಾರಿದ್ರ್ಯವನ್ನು ಹೊರತುಪಡಿಸಿ ಬೇರೆ ಗೆಳೆತನ ನಮಗಿಲ್ಲ. ಕಷ್ಟ ಮತ್ತು ಸಂಕಷ್ಟಗಳು ನಮ್ಮನ್ನು ಬಿಟ್ಟು ತೊಲಗಲಾರವು. ಅವಮಾನ, ವಂಚನೆ, ಬಹಿಷ್ಕಾರಗಳು ನೆರಳಿನಂತೆ ನಮ್ಮನ್ನು ಬೆಂಬಿಡದೆ ಹಿಂಬಾಲಿಸುತ್ತವೆ. ನಮಗಾಗಿ ಕೇವಲ ಕತ್ತಲಿದೆ. ದುಃಖದ ಸಮುದ್ರವಿದೆ. ನಮಗಾಗಿ ನಾವೇ ಸೂರ್ಯನ ಉದಯಿಸಿಕೊಳ್ಳಬೇಕು ರಮಾ. ನಮ್ಮ ದಾರಿಯನ್ನು ನಾವೇ ಮಾಡಿಕೊಳ್ಳಬೇಕು. ನಮ್ಮ ದಾರಿಯಲ್ಲಿ ನಾವೇ ದೀಪದ ಹಾರವಾಗಬೇಕು. ಆ ದಾರಿಯಲ್ಲಿ ಚಲಿಸಿ ಜಯಗಳಿಸಬೇಕು. ನಮಗೆ ಯಾವ ಜಗತ್ತೂ ಇಲ್ಲ. ನಮ್ಮ ಜಗತ್ತನ್ನು ನಾವೇ ಕಟ್ಟಿಕೊಳ್ಳಬೇಕು.
ನಾವು ಹೀಗೆ ಬದುಕಬೇಕು ರಮಾ. ಅದಕ್ಕಾಗಿಯೇ ಯಶವಂತನನ್ನೂ ಚನ್ನಾಗಿ ಓದಿಸಬೇಕೆಂದು ಹೇಳಿದೆ. ಅವನ ಉಡುಗೆಯ ಬಗ್ಗೆ ಜಾಗರೂಕಳಾಗಿರು. ಎಲ್ಲ ಸಂಗತಿಯನ್ನು ಅರ್ಥಮಾಡಿಸು. ಅವನ ಮನದಲ್ಲಿ ಶ್ರದ್ದೆ ಮೂಡುವಂತೆ ಮಾಡು.
ನಿನ್ನ ನೆನಪು ಇನ್ನಿಲ್ಲದಂತೆ ಕಾಡುತ್ತಿದೆ. ಯಶವಂತನ ನೆನಪೂ ಕಾಡುತ್ತಿದೆ. ನನಗೊಂದೂ ಅರ್ಥವಾಗುತ್ತಿಲ್ಲ. ನಿನ್ನ ಪರಿಸ್ಥಿತಿ ನನಗರ್ಥವಾಗುತ್ತಿಲ್ಲವೆಂದಲ್ಲ ರಮಾ. ನೀನು ಬೆಂಕಿಯಲ್ಲಿ ಬೇಯುತ್ತಿರುವುದು ನನಗೆ ತಿಳಿಯುತ್ತಿದೆ. ನೀನು ಉದುರುತ್ತಿರುವ ಎಲೆಯಂತೆ ಜೀವನವನ್ನು ಕಳೆಯುತ್ತಿದ್ದೀಯೆ ಎಂಬುದು ನನಗರಿವಿದೆ. ಆದರೆ ನಾನೇನು ಮಾಡಲಿ ರಮಾ? ಒಂದು ಕಡೆ ದಟ್ಟ ದಾರಿದ್ರ್ಯ, ಮತ್ತೊಂದು ಕಡೆ ನನಗೆ ನಾನೇ ಹಠದಿಂದ ಮಾಡಿಕೊಂಡಿರುವ ಪ್ರತಿಜ್ಞೆ. ಜ್ಞಾನದ ಪ್ರತಿಜ್ಞೆ.
ಜ್ಞಾನವೆಂಬ ಸಮುದ್ರವನ್ನು ಹಿಂಡುತ್ತಿದ್ದೇನೆ. ಇನ್ನಾವುದರ ಬಗ್ಗೆಯೂ ನನಗೆ ಯೋಚನೆ ಇಲ್ಲ. ನಾನು ಪಡೆದಿರುವ ಈ ಸಾಮರ್ಥ್ಯದಲ್ಲಿ ನಿನ್ನದೂ ಪಾಲಿದೆ. ನೀನು ನನ್ನ ಪಕ್ಕ ಕುಳಿತು ನನ್ನ ಪ್ರಪಂಚವನ್ನು ಎತ್ತಿ ಹಿಡಿದಿರುವೆ. ನೀನು ನಿನ್ನ ಪವಿತ್ರ ಕಣ್ಣೀರನು ಚಿಮುಕಿಸುತ್ತಾ ನನ್ನ ಮನೋಬಲವನ್ನು ಉತ್ತೇಜಿಸುತ್ತಿರುವೆ. ಆದ್ದರಿಂದಲೇ ನಾನು ಅದಾವುದಕ್ಕೂ ಭಯಪಡದೇ ಜ್ಞಾನದ ಅನಂತ ಸಾಗರವನ್ನು ಹೀರಿಕೊಳ್ಳುವವನಾಗಿದ್ದೇನೆ.
ಸತ್ಯ ಹೇಳಬೇಕೆಂದರೆ ರಮಾ, ನಾನು ಕಠೋರಿಯಲ್ಲ. ಕೆಲವರು ಅದನ್ನು ಹಿಂಸೆಯೆಂದರೂ ಸಹ ದಾರಿದ್ರ್ಯದ ರೆಕ್ಕೆಗಳನ್ನು ಚಾಚುತ್ತಾ ಆಗಸದಲ್ಲಿ ಹಾರುತ್ತಿದ್ದೇನೆ. ನನ್ನ ಮನಸ್ಸೂ ಗಾಯಗೊಂಡಿದೆ. ನನ್ನ ಕೋಪವೂ ಕೆಂಡವಾಗಿದೆ. ನನಗೂ ಹೃದಯವಿದೆ ರಮಾ. ನಾನೂ ಮರುಗುತ್ತೇನೆ. ಆದರೆ ಬದಲಾವಣೆಯೆಂಬ ಕ್ರಾಂತಿಗೆ ಗಂಟು ಬಿದ್ದಿದ್ದೇನೆ. ಹಾಗಾಗಿ ನನ್ನ ಭಾವನೆಗಳನ್ನು ಚಿತೆಗೇರಿಸಬೇಕಿದೆ. ಅದರ ಬಿಸಿ ನಿನಗೂ ಮತ್ತು ಯಶವಂತನಿಗೂ ಕೆಲವೊಮ್ಮೆ ತಟ್ಟುತ್ತದೆ. ಇದು ಸತ್ಯ. ಆದರೆ ರಮಾ, ಈ ಬಾರಿ ನಾನು ಎಡಗೈಯಲ್ಲಿ ಬರೆಯುತ್ತಾ ಬಲಗೈಯಲ್ಲಿ ನನ್ನ ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದೇನೆ. ನಮ್ಮ ಸಣಕಲು ಮಗನನ್ನು ಚೆನ್ನಾಗಿ ನೋಡಿಕೋ ರಮಾ. ಅವನನ್ನು ಹೊಡೆಯಬೇಡ. ನಾನವನನ್ನು ಹೊಡೆದಿದ್ದೆ. ಅದನ್ನೆಂದಿಗೂ ಅವನಿಗೆ ನೆನಪಿಸಬೇಡ. ನಿನ್ನ ಹೃದಯದ ಏಕೈಕ ತುಣುಕವನು.
ಈ ವರದಿ ಓದಿದ್ದೀರಾ?: ಮೋದಿಯವರ ಸಾವರ್ಕರ್ ಪ್ರೇಮ: ಗಾಂಧಿ, ಸರ್ದಾರ್ ಪಟೇಲ್ ಮತ್ತು ಅಂಬೇಡ್ಕರ್‌ಗೆ ಅಪಚಾರ
ಧಾರ್ಮಿಕ ಗುಲಾಮಗಿರಿ, ಆರ್ಥಿಕ ಮತ್ತು ಸಾಮಾಜಿಕ ಯಾಜಮಾನ್ಯ ಹಾಗೂ ಮನುಷ್ಯರ ಮಾನಸಿಕ ಗುಲಾಮಗಿರಿಯ ಮೂಲವನ್ನು ನಾನು ಹುಡುಕಬೇಕಿದೆ. ಇವುಗಳು ಮಾನವರ ಜೀವನವನ್ನು ಬದಲಾಯಿಸುವುದಿಲ್ಲ. ಇವುಗಳನ್ನು ಸಂಪೂರ್ಣವಾಗಿ ಸುಟ್ಟು ಮಣ್ಣು ಮಾಡಬೇಕು. ಇವುಗಳನ್ನು ಸಮಾಜದ ಸ್ಮೃತಿಯಿಂದ ಹಾಗೂ ಆಚರಣೆಗಳಿಂದ ನಿರ್ಮೂಲನೆ ಮಾಡಬೇಕಾಗಿದೆ.
ರಮಾ, ನೀನು ಈ ಪತ್ರವನ್ನು ಓದುತ್ತಿರುವಾಗ ನಿನ್ನ ಕಣ್ಣಲ್ಲಿ ನೀರು ಜಿನುಗುತ್ತಿರುತ್ತದೆ. ಗಂಟಲು ಕಟ್ಟಿಕೊಂಡಿರುತ್ತದೆ. ನಿನ್ನೆದೆ ಬಡಿದುಕೊಳ್ಳುತ್ತಿರುತ್ತದೆ. ತುಟಿಗಳು ನಡುಗುತ್ತಿರುತ್ತವೆ. ಮನದಲ್ಲಿ ಮೂಡುವ ಮಾತು ತುಟಿಗೆ ಬಾರದಂತಾಗಿರುತ್ತದೆ. ನೀನು ತಳಮಳಗೊಂಡಿರುತ್ತೀಯೆ.
ರಮಾ, ನೀನು ನನ್ನ ಬಾಳಿನಲ್ಲಿ ಬರದಿದ್ದರೆ ಅದೇನಾಗುತ್ತಿತ್ತೋ? ನನ್ನ ಬಾಳ ಸಂಗಾತಿಯಾಗಿ ನಿನ್ನನ್ನು ಭೇಟಿಯಾಗದಿದ್ದರೇ, ಅದೇನಾಗುತ್ತಿತ್ತೋ ಕಾಣೆ? ಸುಖವನ್ನೇ ಬಯಸುವ ಮಹಿಳೆಯಾಗಿದ್ದರೆ ಅವಳು ನನ್ನನ್ನು ಬಿಟ್ಟು ಹೋಗುತ್ತಿದ್ದಳೇನೋ? ಅರೆ ಹೊಟ್ಟೆಯಲ್ಲಿ ಮಲಗಲು, ಹಸುವಿನ ಸಗಣಿಯನ್ನು ಹುಡುಕಲು ಅಥವಾ ಬೆರಣಿಯನ್ನು ತಟ್ಟಲು ಯಾರು ತಾನೆ ಇಷ್ಟ ಪಡುತ್ತಾರೆ. ಮುಂಬೈ ನಗರದಲ್ಲಿ ಒಲೆಗೆ ಬೆರಣಿ ತರಲು ಯಾರು ಬಯಸುತ್ತಾರೆ? ಹರಿದ ಬಟ್ಟೆಯನ್ನು ಹೊಲಿಯುತ್ತಾ, ಅಷ್ಟೇ ಅಲ್ಲಾ ಒಂದೇ ಒಂದು ಬೆಂಕಿ ಪೊಟ್ಟಣದಲ್ಲಿ ತಿಂಗಳಿಡೀ ಕಳೆಯುತ್ತಾ, ಒಂದಿಷ್ಟು ಎಣ್ಣೆ, ಕಾಳು, ಉಪ್ಪಿನೊಂದಿಗೆ ಜೀವನ ಸಾಗಿಸಲು ಯಾರು ತಾನೆ ಇಷ್ಟ ಪಡುತ್ತಾರೆ? ಅಂದರೆ, ಈ ಬಡತನದ ಬೇಗೆಯು ನಿನಗೆ ಹಿಡಿಸದಂತಾಗಿಬಿಟ್ಟಿದ್ದರೆ ಏನು ಕತೆ? ನಾನು ತುಂಡು ತುಂಡಾಗಿ ಹರಿದು ಹೋಗುತ್ತಿದ್ದೆ. ನನ್ನ ಗಟ್ಟಿತನ ಬಿರುಕು ಬಿಡುತ್ತಿತ್ತು. ನೀನಿಲ್ಲದಿದ್ದರೆ ನನ್ನ ಹೆಬ್ಬಯಕೆಯ ಉಬ್ಬರವಿಳಿತಗಳು ಸಣ್ಣ ಗಾಳಿಗೂ ಹಿಂದೆ ಸರಿದು ಕಣ್ಮರೆಯಾಗುತ್ತಿದ್ದವು. ನನ್ನ ಕನಸುಗಳ ಕ್ರೀಡಾಕೂಟ ಸಂಪೂರ್ಣವಾಗಿ ನಾಶವಾಗುತ್ತಿತ್ತು. ರಮಾ, ನನ್ನ ಜೀವನದ ರಾಗ ಲಯ ಕಳೆದುಕೊಳ್ಳುತ್ತಿತ್ತು. ಎಲ್ಲವೂ ಅದಲು ಬದಲಾಗುತ್ತಿತ್ತು. ಸರ್ವಸ್ವವೂ ದುಃಖಮಯವಾಗುತ್ತಿತ್ತು. ಬಹುಶಃ ನಾನು ಊನಗೊಂಡ ಸಸ್ಯವಾಗುತ್ತಿದ್ದೆ.
ನೀನು ನನ್ನನ್ನು ನೋಡಿಕೊಳ್ಳುವಂತೆ ನಿನ್ನನ್ನೂ ನೋಡಿಕೋ. ನಾನು ಶೀಘ್ರದಲ್ಲಿಯೇ ಹಿಂತಿರುಗಿ ಬರುತ್ತೇನೆ. ಚಿಂತಿಸಬೇಡ. ಎಲ್ಲರನ್ನೂ ಕೇಳಿದೆ ಎಂದು ತಿಳಿಸು.
ಮರಾಠಿಯಿಂದ ಇಂಗ್ಲೀಷಿಗೆ: ಪ್ರದೀಪ್ ಅತ್ರಿ
ಕನ್ನಡಕ್ಕೆ: ವಿಕಾಸ್ ಆರ್ ಮೌರ್ಯ
Iam unable to read this letter, why am crying i dont know Dr babasaheb and mother ramabai’s sacrifice cost we cannot pay back. Thank you sir
Really. Dr Ambedkar is one of the greatest person. Greatest man of India and greatest salutes to the greatest leader of India.