ಭಾರತೀಯ ಉಪಖಂಡವನ್ನು ಹಲವು ತಲೆಮಾರುಗಳ ಕಾಲ ಉಲ್ಲಾಸಗೊಳಿಸಿದ, ಮೃದುಮಧುರ ಕಂಠದ ಒಡೆಯ ಅಮೀನ್ ಸಯಾನಿ ಕಣ್ಮರೆಯಾಗಿದ್ದಾರೆ.
ನಮ್ಮ ಯೌವನ ಕಾಲದ ಅತಿ ದೊಡ್ಡ ಆಕರ್ಷಣೆಗಳಲ್ಲಿ ಒಂದು ರೇಡಿಯೊ ಸಿಲೋನ್. ಅಲ್ಲಿಂದ ಕೇಳಿ ಬರುತ್ತಿದ್ದ ಗೋಲ್ಡನ್ ವಾಯ್ಸ್ ಅಮೀನ್ ಸಯಾನಿ ಅವರದ್ದು.
ರೇಡಿಯೊ ಕಾಲದಲ್ಲಿ ಭಾರತೀಯ ಉಪಖಂಡವನ್ನು ಒಂದಾಗಿ ಹಿಡಿದಿಟ್ಟ ಅಪೂರ್ವ ಸ್ವರವಿದು. ಟಿವಿಗಳು ಇನ್ನೂ ಸರಿಯಾಗಿ ಕಣ್ಣು ತೆರೆಯದಿದ್ದ ಕಾಲದಲ್ಲಿ ರೇಡಿಯೋಗಳೇ ಮನರಂಜನೆಯ ಮಾಧುರ್ಯ. ಅದರಲ್ಲೂ ಅಮೀನ್ ಸಯಾನಿ ಮಾತನಾಡಲು ತೊಡಗಿದರೆಂದರೆ ಅಲ್ಲಿ ಪ್ರಸಾರವಾಗುತ್ತಿದ್ದ ಹಾಡುಗಳು ಮಧುರಾತಿಮಧುರ!
ನನ್ನ ಸಮಕಾಲೀನರ ಬಾಲ್ಯದಲ್ಲಿ ನೆನಪಿನ ಕೋಶದಲ್ಲಿ ತಳವೂರಿದ್ದು ಎರಡೇ ಟೂತ್ ಪೇಸ್ಟ್‌ಗಳು. ಒಂದು ಕೋಲ್ಗೇಟ್, ಇನ್ನೊಂದು ಬಿನಾಕಾ. ಅತ್ಯಂತ ಜನಪ್ರಿಯವಾಗಿದ್ದ ಕೋಲ್ಗೇಟ್‌ಗೆ ಪ್ರತಿಸ್ಪರ್ಧೆ ಒಡ್ಡಲು ಬಿನಾಕಾ ಬಳಸಿಕೊಂಡದ್ದು ರೇಡಿಯೊ ಸಿಲೋನ್‌ನ ಗೀತ್ ಮಾಲಾ ಕಾರ್ಯಕ್ರಮವನ್ನು. ಅಮೀನ್ ಸಯಾನಿಯ ಮೃದುಮಧುರ ನಿರೂಪಣಾ ಧ್ವನಿಯಿಂದಾಗಿ ಆ ರೇಡಿಯೊ ಕಾರ್ಯಕ್ರಮ ಲೋಕಪ್ರಸಿದ್ಧವಾಯಿತು.
ಮೊದಲು ರೇಡಿಯೊ ಸಿಲೋನ್, ಆ ಬಳಿಕ ಆಲ್ ಇಂಡಿಯಾ ರೇಡಿಯೊ.
1952ರಿಂದ ಆರಂಭವಾದ ಅಮೀನ್ ಸಯಾನಿಯವರ ಪಯಣ 42 ವರ್ಷಗಳ ಕಾಲ ಮುಂದುವರಿಯಿತು.
ಟೂತ್ ಪೇಸ್ಟ್‌ನ ಹೆಸರು ಬಿನಾಕಾದಿಂದ ಸಿಬಾಕಾ ಆಯಿತು. ಆಮೇಲೆ ಕೋಲ್ಗೇಟ್ ಕಂಪೆನಿಯೇ ಅದನ್ನು ನುಂಗಿ ಹಾಕಿ, ಕೋಲ್ಗೇಟ್ ಸಿಬಾಕಾ ಗೀತ್ ಮಾಲಾ ಆಯಿತು.
54 ಸಾವಿರ ರೇಡಿಯೊ ಕಾರ್ಯಕ್ರಮಗಳು, 19 ಸಾವಿರ ಜಿಂಗಲ್ಸ್/ ಸ್ಪಾಟ್ಸ್… ನಿರ್ಮಾಣ ಮತ್ತು ಪ್ರಸ್ತುತಿಯ ಈ ಸಾಹಸ ಲಿಮ್ಕಾ ಬುಕ್‌ನಲ್ಲಿ ವಿಶ್ವ ದಾಖಲೆಯನ್ನೂ ಬರೆಯಿತು.
ಮುಂಬೈಯ ಆಲ್ ಇಂಡಿಯಾ ರೇಡಿಯೋದಲ್ಲಿ ಆರಂಭದಲ್ಲಿ ಅಮೀನ್ ಸಯಾನಿ ಇಂಗ್ಲಿಷ್ ಅನೌನ್ಸ್‌ಮೆಂಟ್ ಮಾಡುತ್ತಿದ್ದರು. ಅವರ ಅಣ್ಣ ಹಮೀದ್ ಸಯಾನಿ ತಮ್ಮನನ್ನು ಕರೆದೊಯ್ದು ಆಲ್ ಇಂಡಿಯಾ ರೇಡಿಯೋಗೆ ಪರಿಚಯಿಸಿದ್ದು. ಆದರೆ ಹಿಂದಿ ಉಚ್ಛಾರ ಸರಿ ಇರಲಿಲ್ಲವೆಂದು ಅಲ್ಲಿ ತಿರಸ್ಕೃತರಾದವರು ಅಮೀನ್.
2/3 ವರ್ಷಗಳ ಭಗೀರಥ ಯತ್ನದ ಬಳಿಕ ಆಲ್ ಇಂಡಿಯಾ ರೇಡಿಯೋದ ವಿವಿಧ ಭಾರತಿಯಲ್ಲಿ ಅಮೀನ್ ಹಿಂದಿ ಉದ್ಘೋಷಕರಾದರು. ಅದೇ ಒಂದು ದೊಡ್ಡ ಕಥೆ. ಅದೂ ಅವರ ಧ್ವನಿಯಲ್ಲೇ ಬಂದಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮುಸ್ಲಿಮರ ತುಷ್ಟೀಕರಣ, ಬಿಜೆಪಿ ಮತ್ತು ಗೋದಿ ಮೀಡಿಯಾ
ಮಧ್ಯಾಹ್ನ ಊಟದ ಬಳಿಕ ಮನೆಯೊಳಗೆ ಸಣ್ಣಗೆ ಕಣ್ಣು ಮುಚ್ಚಿ ವಿವಿಧ ಭಾರತಿಯ ಗೀತ್ ಮಾಲಾಗೆ ಕಿವಿಯಾಗುವ ಗೃಹಿಣಿ/ ಗೃಹಸ್ಥರ ಸಂಖ್ಯೆ ಆ ಕಾಲದಲ್ಲಿ ಬಹಳ ದೊಡ್ಡದಿತ್ತು. ಅದು ಮಾತ್ರವಲ್ಲ, ಕರಾವಳಿಯ ಹಳ್ಳಿಗಳಲ್ಲಿ ಮಧ್ಯಾಹ್ನದ ಬಳಿಕ ತೆಂಗಿನ ಮರದ ಬುಡದಲ್ಲಿ ಬಟ್ಟೆ ತೊಳೆಯುವ ಹೆಣ್ಣುಮಕ್ಕಳಿಂದ ಹಿಡಿದು, ಧಾರವಾಡದ ಹೊರವಲಯದ ಹೊಲಗಳಲ್ಲಿ ನೇಗಿಲಿಗೆ ಸಣ್ಣ ಟ್ರಾನ್ಸಿಸ್ಟರ್ ಕಟ್ಟಿಕೊಂಡು ಉಳುವ ರೈತರು ಕೂಡಾ ವಿವಿಧ ಭಾರತಿಯಲ್ಲಿ ಅಮೀನ್ ಸಯಾನಿ ಸ್ವರಕ್ಕೆ ತಲೆದೂಗುತ್ತಿದ್ದುದನ್ನು ನಾನು ನೋಡಿದ್ದೇನೆ.
ಬೆಹನೋಂ ಔರ್ ಭಾಯಿಯೋಂ… ಎಂದು ಶುರುವಾಗುವ ಈ ಮಧುರ ಕಂಠ ಹಿಂದೀ ಚಿತ್ರಗೀತೆಗಳ ಹಿಂದು ಮುಂದಿನ ಇತಿಹಾಸವನ್ನೆಲ್ಲ ಬಿಚ್ಚಿಡುತ್ತಾ ಕರ್ಣಮಧುರ ತರಂಗಗಳನ್ನು ಎಬ್ಬಿಸುತ್ತಿದ್ದುದು ಒಂದು ಕಾಲದ ಭಾರತೀಯ ಮನೋರಂಜನಾ ಯುಗದ ಬಹುದೊಡ್ಡ ಮೈಲಿಗಲ್ಲು.
ಆಹ್ಹಾ… ಆಪ್ ಕಾ ಜಾನಾ ಪಹಚಾನಾ ಸಂಗೀತ್ ಪೂಜಾ…. ಎಂದು ಅಮೀನ್ ಭಾಯಿ ಕಾರ್ಯಕ್ರಮ ಶುರು ಮಾಡಿದರೆ ಅದಕ್ಕೆ ಮನ ಸೋಲದವರು ಯಾರು?

ಬಿ ಎಂ ಹನೀಫ್
ಹಿರಿಯ ಪತ್ರಕರ್ತ, ಲೇಖಕ