ವಿರೋಧ ಪಕ್ಷಗಳನ್ನು ಬಾಯಿಮುಚ್ಚಿಸುವ ಮೂಲಕ ಓಂ ಬಿರ್ಲಾ ಹಾಗೂ ಜಗದೀಪ್ ಧನಕರ್ ಅವರು ರಾಷ್ಟ್ರದ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದ ಹೃದಯದಂತಿರುವ ಸಂಸತ್ತಿನಲ್ಲಿ ಈ ದೇಶದ ಜನರ ನೋವುಗಳನ್ನು ಕೇಳಿಸದ ಹಾಗೆ ಇವರಿಬ್ಬರು ಮಾಡುತ್ತಿದ್ದಾರೆ. ವಿಪಕ್ಷ ಸದಸ್ಯರನ್ನು ನಿಂದಿಸುವ ಧನಕರ್ ಸಭಾಧ್ಯಕ್ಷರ ಪೀಠದಲ್ಲಿ ಕುಳಿತು ಆರ್‌ಎಸ್‌ಎಸ್‌ಅನ್ನು ಹಾಡಿಹೊಗಳುತ್ತಾರೆ
ಸಂಸತ್ತಿನಲ್ಲಿ ಲೋಕಸಭೆ ಸ್ಪೀಕರ್ ಹಾಗೂ ರಾಜ್ಯಸಭೆ ಅಧ್ಯಕ್ಷರೆಂದರೆ ಸರ್ಕಾರದ ಹಂಗಿಲ್ಲದೆ ಹಾಗೂ ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕು ಎಂದು ಭಾರತ ಸಂವಿಧಾನದ 89ನೇ ಹಾಗೂ 95ನೇ ವಿಧಿಗಳು ತಿಳಿಸುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಲೋಕಸಭೆ ಸ್ಪೀಕರ್ ಹಾಗೂ ರಾಜ್ಯಸಭೆ ಅಧ್ಯಕ್ಷರು ತಾವು ಒಂದು ಪಕ್ಷದ ಪರವಾಗಿ ವರ್ತಿಸುವುದಲ್ಲದೆ, ಸಂಸತ್ತಿನ ಘನತೆಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರ ಪದಚ್ಯುತಿಗೆ ಒತ್ತಾಯಿಸಿ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಕಾಂಗ್ರೆಸ್, ಆರ್‌ಜೆಡಿ, ಟಿಎಂಸಿ, ಸಿಪಿಐ, ಸಿಪಿಐಎಂ, ಜೆಎಂಎಂ, ಎಎಪಿ, ಸಮಾಜವಾಧಿ ಪಕ್ಷಗಳ ಸುಮಾರು 60 ಸದಸ್ಯರು ಸಹಿ ಹಾಕಿದ್ದ ನೋಟಿಸ್‌ಅನ್ನು ವಿಪಕ್ಷಗಳ ಪರವಾಗಿ ಕಾಂಗ್ರೆಸ್ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಗೆ ನೀಡಿತ್ತು. ಜಗದೀಪ್ ಧನಕರ್ ಅವರು ಪಕ್ಷಪಾತಿಯಾಗಿ ವ್ಯವಹರಿಸುತ್ತಿದ್ದಾರೆ, ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುತ್ತಿದ್ದು, ಸಂಸದೀಯ ಪ್ರಜಾಪ್ರಭುತ್ವದ ಹಿತಾಸಕ್ತಿಯಿಂದ ಪದಚ್ಯುತಿಗೊಳಿಸಬೇಕೆಂದು ಆರೋಪಿಸಲಾಗಿತ್ತು. ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದವು. ಹಾಗೆ ನೋಡಿದರೆ ಭಾರತದ ರಾಜಕೀಯ ಇತಿಹಾಸದಲ್ಲಿ ರಾಜ್ಯಸಭೆಯ ಅಧ್ಯಕ್ಷರ ಪದಚ್ಯುತಿಗೆ ಪ್ರಸ್ತಾವನೆ ತರಲು ನೋಟಿಸ್ ಮಂಡನೆಯಾಗುತ್ತಿರುವುದು ಇದೇ ಮೊದಲು. ಈ ಮೊದಲು ಲೋಕಸಭೆಯ ಸ್ಪೀಕರ್ ಪದಚ್ಯುತಿಗೆ ಮೂರು ಬಾರಿ ಅವಿಶ್ವಾಸ ನಿರ್ಣಯ ಮಂಡನೆ ಆಗಿತ್ತು. 1954ರ ಡಿ.18ರಂದು ಜಿ ವಿ ಮಾವಲಂಕರ್, 1966ರ ನ.24ರಂದು ಹುಕಮ್ ಸಿಂಗ್ ಹಾಗೂ 1987ರ ಏಪ್ರಿಲ್ 15 ರಂದು ಬಲರಾಮ್ ಜಖರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಆದರೆ ರಾಜ್ಯಸಭೆ ಸಭಾಪತಿ ವಿರುದ್ಧ ಇದೇ ಮೊದಲ ಬಾರಿಗೆ ನಿರ್ಣಯ ಮಂಡಿಸಲಾಗಿತ್ತು.
ಇನ್ನೊಂದು ಸಣ್ಣ ನಿದರ್ಶನ ನೀಡಬೇಕೆಂದರೆ ಎರಡು ದಿನಗಳ ಹಿಂದಷ್ಟೆ ಲೋಕಸಭೆಯ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಓಂ ಬಿರ್ಲಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. “ವಿಪಕ್ಷಗಳಿಗೆ ಸದನದಲ್ಲಿ ಮಾತನಾಡಲು ಸ್ಪೀಕರ್ ಅವಕಾಶ ಕೊಡುತ್ತಿಲ್ಲ. ನನಗೆ ಮಾತನಾಡಲು ಅವಕಾಶ ಕೊಡಬೇಕೆಂದು ಕೇಳಿದರೆ, ಅವರು ಓಡಿಹೋದರು. ಇದು ಸದನ ನಡೆಸುವ ಮಾರ್ಗವಲ್ಲ. ವಿಪಕ್ಷ ನಾಯಕನಾಗಿ ನಾನು ಮಾತನಾಡಲು ಕಳೆದ ವಾರವೂ ನನಗೆ ಅವಕಾಶ ಕೊಡಲಿಲ್ಲ. ಈ ವಾರವೂ ಅವಕಾಶ ಅವಕಾಶ ನೀಡಲಿಲ್ಲ. ನನ್ನ ಬಗ್ಗೆ ಆಧಾರವಿಲ್ಲದ ಹೇಳಿಕೆ ನೀಡಿ, ಅನಗತ್ಯವಾಗಿ ಸದನ ಮುಂದೂಡಿದರು’ಎಂದು ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಓಂ ಬಿರ್ಲಾ ಅವರು ಸ್ಪೀಕರ್ ಆಗಿ ನೇಮಕವಾದಾಗಿನಿಂದಲೂ ಪರೋಕ್ಷವಾಗಿ ಸರ್ಕಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಸದನವನ್ನು ನಡೆಸುತ್ತಿರುವುದು ಸಾರ್ವಜನಿಕವಾಗಿಯೆ ತಿಳಿಯುತ್ತಿದೆ. ರಾಹುಲ್ ಗಾಂಧಿ ವಿಚಾರ ಮಾತ್ರವಲ್ಲ ಪ್ರತಿಪಕ್ಷದ ಇತರ ಸದಸ್ಯರ ವಿಷಯದಲ್ಲೂ ಓಂ ಬಿರ್ಲಾ ಅವರ ನಡೆ ಇದೇ ರೀತಿ ವ್ಯಕ್ತವಾಗುತ್ತಿದೆ.
ರಾಜ್ಯಸಭೆಯಲ್ಲಿ ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, …. ಎನ್ನುವುದು ಈಗ ಫ್ಯಾಷನ್ ಆಗಿಬಿಟ್ಟಿದೆ. ನೀವೇನಾದರೂ ಇಷ್ಟು ಬಾರಿ ದೇವರ ಹೆಸರನ್ನು ಹೇಳಿದ್ದರೆ 7 ಜನ್ಮದಲ್ಲಿ ನಿಮಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು’ ಎಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅಪಮಾನಿಸಿದ ರೀತಿಯಲ್ಲಿ ಮಾತನಾಡಿದ್ದರು. ಆದರೆ ಅಮಿತ್ ಶಾ ವಿರುದ್ಧ ಸಭಾಧ್ಯಕ್ಷ ಜಗದೀಪ್ ಧನಕರ್ ಕ್ರಮ ಜರುಗಿಸುವುದಿರಲಿ, ಕನಿಷ್ಠ ಎಚ್ಚರಿಕೆ ಕೊಡುವ ಕೆಲಸ ಮಾಡಲಿಲ್ಲ. ಆದರೆ ಸರ್ಕಾರಿ ವಿರೋಧಿ ನೀತಿಯ ಬಗ್ಗೆ ಹಾಗೂ ದೇಶದ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಪಕ್ಷಗಳ ಸಂಸದರು ಅನುಮತಿ ಕೇಳಿದರೆ ಧನಕರ್ ಅವರು ಕೆಂಡಮಂಡಲವಾಗುತ್ತಾರೆ.
ಈ ಸುದ್ದಿ ಓದಿದ್ದೀರಾ? ಕುನಾಲ್ ಕಾಮ್ರಾ ಹಾಸ್ಯ ಹಚ್ಚಿದ ಕಿಚ್ಚು: ಪ್ರಭುತ್ವಕ್ಕೆ ಎದೆಯೊಡ್ಡಿದ್ದು ಇದೇ ಮೊದಲೇನೂ ಅಲ್ಲ
ಲೋಕಸಭೆಯಲ್ಲಿ ಸ್ಪೀಕರ್ ಹಾಗೂ ರಾಜ್ಯಸಭೆಯಲ್ಲಿ ಸಭಾಧ್ಯಕ್ಷರು ಆಡಳಿತ ಪಕ್ಷದ ರಕ್ಷಣೆಗೆ ಟೊಂಕ ಕಟ್ಟಿ ನಿಂತವರ ಹಾಗೆ ವರ್ತಿಸುತ್ತಿದ್ದಾರೆ. ಈ ದೇಶದ ರೈತರು, ಕಾರ್ಮಿಕರು, ಬಡವರು, ಶೋಷಿತರ ಬಗ್ಗೆ ಸಂಸದರು ಧ್ವನಿಯಾಗಬೇಕು. ಮುಖ್ಯವಾಗಿ ಆಡಳಿತ ಪಕ್ಷದ ಸದಸ್ಯರೆ ಈ ಕೆಲಸವನ್ನು ಮಾಡಬೇಕು. ವಿಪಕ್ಷ ಸದಸ್ಯರು ಈ ಕೆಲಸ ಮಾಡಲು ಹೊರಟರೆ ಅದಕ್ಕೆ ಬೆಂಬಲ ವ್ಯಕ್ತಪಡಿಸಬೇಕು. ಆದರೆ ಅವರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ವಿರೋಧ ಪಕ್ಷದ ನಾಯಕರಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ವಿಪಕ್ಷಗಳ ಸಂಸದರನ್ನು ಅವಮಾನಿಸುವುದು, ಅವರ ಮಾತನ್ನು ಆಲಿಸುವ ಸಹನೆಯನ್ನು ತೋರಿಸದೆ ಇರುವುದು ಪದೇಪದೆ ಅನಾವರಣಗೊಳ್ಳುತ್ತಲೇ ಇದೆ.
ವಿಪಕ್ಷಗಳ ಮಾತಿಗೆ ಸದನದಲ್ಲಿ ಅವಕಾಶವಿರಕೂಡದು ಎಂಬುದು ಆಡಳಿತಾರೂಢ ಬಿಜೆಪಿಯ ಧೋರಣೆಯಾಗಿದೆ. ಭಾರತೀಯ ಜನತಾ ಪಕ್ಷದ ಧೋರಣೆಯನ್ನೇ ಪಾಲಿಸುವ ಕೆಲಸವನ್ನು ಲೋಕಸಭೆಯಲ್ಲಿ ಸ್ಪೀಕರ್, ರಾಜ್ಯಸಭೆಯಲ್ಲಿ ಸಭಾಧ್ಯಕ್ಷರು ಮಾಡುತ್ತಿದ್ದಾರೆ. ಇವರಿಬ್ಬರ ನಡವಳಿಕೆಯಿಂದ ಈ ದೇಶದಲ್ಲಿ ನಿಜವಾಗಿಯೂ ಕಾಡುತ್ತಿರುವ ಸಮಸ್ಯೆಗಳು ಚರ್ಚೆಗೇ ಬರದಂತಾಗಿದೆ. ಅದರ ಬಗ್ಗೆ ಮಾತಾಡುವ ಮತ್ತು ಪ್ರಶ್ನಿಸುವ ಪ್ರತಿಪಕ್ಷಗಳನ್ನು ಸಂಪೂರ್ಣವಾಗಿ ನಿಲ್ಲಿಸುವ ಯತ್ನವನ್ನೇ ಸ್ಪೀಕರ್ ಮತ್ತು ಸಭಾಪತಿ ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಸದಸ್ಯರು ಏನಾದರೂ ಪ್ರಶ್ನಿಸಿದರೆ ಅಥವಾ ಇಲ್ಲಸಲ್ಲದ ಮಾತುಗಳನ್ನು ಆಡಿದರೆ ಅವರನ್ನು ತಿದ್ದಿ ಬುದ್ದಿ ಹೇಳುವುದರ ಜೊತೆ ಎಚ್ಚರಿಕೆ ಕೊಡುವ ಕೆಲಸವನ್ನು ಸ್ಪೀಕರ್ ಹಾಗೂ ಸಭಾಧ್ಯಕ್ಷರು ಮಾಡಬೇಕು. ಆದರೆ ಇವರಿಬ್ಬರ ಕೆಂಗಣ್ಣು ಪ್ರತಿಪಕ್ಷದ ಸದಸ್ಯರ ಮಾತ್ರವೆ ಇದೆಯೇ ಹೊರತು ಆಡಳಿತ ಪಕ್ಷದ ಸದಸ್ಯರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಾರೆ. ವಿಪಕ್ಷಗಳ ಯಾವ ಸದಸ್ಯರು ಇವರಿಗೆ ಇಷ್ಟವಿಲ್ಲವೋ, ಯಾರು ಪ್ರಶ್ನಿಸುವುದು ಇವರಿಗೆ ಸರಿಬರುವುದಿಲ್ಲವೋ ಅವರೆಲ್ಲ ಇವರಿಬ್ಬರ ದೃಷ್ಟಿಯಲ್ಲಿ ದೇಶ ದ್ರೋಹಿಗಳಾಗಿಬಿಡುತ್ತಾರೆ.
ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಗಂಭೀರವಾದ ವಿಷಯಗಳನ್ನು ಚರ್ಚಿಸಿದರೆ ಇಲ್ಲವೇ ಸರ್ಕಾರದ ವಿರುದ್ಧ ಮಾತನಾಡಲು ಹೊರಟರೆ ಅವರ ಮೈಕ್ ಸ್ವಿಚ್ ಆಫ್ ಮಾಡಲಾಗುತ್ತದೆ. ಸಭಾಧ್ಯಕ್ಷರಾದವರು ವಿಪಕ್ಷ ನಾಯಕರಿಗೆ ಮಾತಾಡಲು ಅವಕಾಶ ಕೊಡಬೇಕಾಗಿರುವುದು ಸದನದ ನಿಯಮ. ಆದರೆ ಅವಕಾಶವನ್ನೇ ನೀಡುವುದು ಮಾತ್ರವಲ್ಲ, ಅವರೇನು ಮಾತಾಡುತ್ತಿದ್ದಾರೆ ಎಂಬುದನ್ನು ಕೇಳಿಸದ ಹಾಗೆ ಮಾಡಲಾಗುತ್ತಿದೆ. ಮೈಕ್ ಆಫ್ ಮಾಡುವ ನಡೆ ಕೂಡ ಸದನದ ಪರಂಪರೆಗೆ ವಿರುದ್ಧವಾದದ್ದು. ಸಭಾಧ್ಯಕ್ಷರು ಬುದ್ಧಿಹೀನರು ಇತ್ಯಾದಿ ಅಸಂಸದೀಯ ಪದಗಳನ್ನೇ ಆಗಾಗ ಬಳಸುವ ಬಗ್ಗೆಯೂ ಸಂಸದರು ರಾಜ್ಯಸಭೆಯಲ್ಲಿ ಆಕ್ಷೇಪವೆತ್ತಿದ್ದರು.
ಹಿಂದೆ ಕೂಡ ಅನೇಕರು ಸ್ಪೀಕರ್ ಹಾಗೂ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ್ಯಾರು ಇಷ್ಟು ಕಠೋರವಾಗಿ ವರ್ತಿಸಿದ ಉದಾಹರಣೆಯಿಲ್ಲ. ಆಡಳಿತ ಹಾಗೂ ವಿಪಕ್ಷದವರನ್ನು ಸಮನಾಗಿ ಕರೆದುಕೊಂಡು ಹೋಗುವ ಕೆಲಸವಾಗುತ್ತಿತ್ತು. ಮನ್‌ಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಕಾಲದಲ್ಲಿ ಸಿಪಿಐಎಂನ ಸೋಮನಾಥ್ ಚಟರ್ಜಿ ಲೋಕಸಭೆ ಸ್ಪೀಕರ್ ಆಗಿದ್ದರು. ಅವರ ವಿರುದ್ಧವೂ ತಕರಾರುಗಳಿರಲಿಲ್ಲ. ಚಟರ್ಜಿ ಎಷ್ಟೋ ಸಲ ತಮ್ಮ ಪಕ್ಷದವರನ್ನೇ ತರಾಟೆಗೆ ತೆಗೆದುಕೊಂಡದ್ದಿತ್ತು. ಆ ರೀತಿಯಲ್ಲಿ ಅವರು ಸ್ಪೀಕರ್ ಪೀಠದಲ್ಲಿ ಕುಳಿತಾಗ ನಿಷ್ಪಕ್ಷವಾಗಿ ವರ್ತಿಸಿದ್ದರು. ಅಟಲ್ ವಾಜಪೇಯಿ ಅವರ ಕಾಲದಲ್ಲಿ ಲೋಕಸಭೆ ಸ್ಪೀಕರ್ ಆಗಿದ್ದ ಶಿವಸೇನೆಯ ಮನೋಹರ್ ಜೋಷಿ, ಜಿಎಂಸಿ ಬಾಲಯೋಗಿ ವಿರುದ್ಧ ಕೂಡ ವಿಪಕ್ಷಗಳು ಎಂದು ಆರೋಪ ಮಾಡುವ ಸಂದರ್ಭವೇ ಬಂದಿರಲಿಲ್ಲ. ಆದರೆ ಈಗ ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭೆ ಸಭಾಪತಿ ಇಬ್ಬರು ಭಾರತೀಯ ಜನತಾ ಪಕ್ಷದ ಸದಸ್ಯರ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ನಿತ್ಯವೂ ಆರೋಪ ಕೇಳಿಬರುತ್ತಿದೆ. ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಕೆಟ್ಟ ರೀತಿಯಲ್ಲಿ ಮಾತಾಡುವ ಧನಕರ್, ಅದೇ ಬಿಜೆಪಿಯ ಜೆ ಪಿ ನಡ್ಡಾ, ಅಮಿತ್ ಶಾ, ನರೇಂದ್ರ ಮೋದಿ ಜೊತೆ ವಿನಯ ರೀತಿಯಲ್ಲಿ ಮಾತಾಡುವಾಗ ತಾವು ಸ್ಪೀಕರ್ ಪೀಠದಲ್ಲಿದ್ದೇನೆ ಎಂಬುದನ್ನೂ ಮರೆಯುತ್ತಾರೆ.
ವಿರೋಧ ಪಕ್ಷಗಳನ್ನು ಬಾಯಿಮುಚ್ಚಿಸುವ ಮೂಲಕ ಓಂ ಬಿರ್ಲಾ ಹಾಗೂ ಜಗದೀಪ್ ಧನಕರ್ ಅವರು ರಾಷ್ಟ್ರದ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದ ಹೃದಯದಂತಿರುವ ಸಂಸತ್ತಿನಲ್ಲಿ ಈ ದೇಶದ ಜನರ ನೋವುಗಳನ್ನು ಕೇಳಿಸದ ಹಾಗೆ ಇವರಿಬ್ಬರು ಮಾಡುತ್ತಿದ್ದಾರೆ. ವಿಪಕ್ಷ ಸದಸ್ಯರನ್ನು ನಿಂದಿಸುವ ಧನಕರ್ ಸಭಾಧ್ಯಕ್ಷರ ಪೀಠದಲ್ಲಿ ಕುಳಿತು ಆರ್‌ಎಸ್‌ಎಸ್‌ಅನ್ನು ಹಾಡಿಹೊಗಳುತ್ತಾರೆ. ದೇಶದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಿ ಎಂದು ವಿಪಕ್ಷಗಳ ವಿನಂತಿಯನ್ನು ಕೇಳಿಸಿಕೊಳ್ಳದೆ ಆಡಳಿತ ಪಕ್ಷವನ್ನು ರಕ್ಷಿಸಲು ಸದಾಕಾಲ ಮುಂದಾಗುತ್ತಾರೆ. ಇವರಿಬ್ಬರ ನಡೆ ದೇಶದ ಹಿತದೃಷ್ಟಿಯಿಂದ ಅಪಾಯಕಾರಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶದ ಮಾನ ಹರಾಜಾಗುತ್ತಿದೆ.
ಬಿಜೆಪಿಯ ಸಕ್ರಿಯ ಕಾರ್ಯಕರ್ತರಂತೆ ವರ್ತನೆ,, ಬಹುಶಃ ಈ ದೇಶದ ಸಂಸದೀಯ ಇತಿಹಾಸದಲ್ಲಿ ಆ ಎರಡೂ ಕುರ್ಚಿಗಳನ್ನು ಒಂದು ಪಕ್ಷಕ್ಕಾಗಿ ಮೀಸಲಿನಂತೆ ಮಾಡಿದ್ದು ಇದೇ ಮೊದಲ ಬಾರಿ ಇರಬಹುದು