ಅಮೆರಿಕದ ಅಧ್ಯಕ್ಷ ಟ್ರಂಪ್, ತನ್ನ ಹೊಸ ನೀತಿಗಳ ಮೂಲಕವೇ ಭಾರತಕ್ಕೆ ಏಟು ನೀಡುವ ಯತ್ನ ಮಾಡುತ್ತಿರುವಂತಿದೆ. ತನ್ನ ಸ್ನೇಹಿತ ಮೋದಿ ಈಗ ಟ್ರಂಪ್ ಪಾಲಿಗೆ ಬರೀ ಭಾರತದ ಪ್ರಧಾನಿಯಷ್ಟೇ. ಈಗಾಗಲೇ ದೇಶದ ಆರ್ಥಿಕತೆಯನ್ನು ಅಧಃಪತನಕ್ಕೆ ಕೊಂಡ್ಯೊಯ್ದಿರುವ ಮೋದಿ, ಟ್ರಂಪ್ ನೀತಿಯ ಹೊಡೆತದಿಂದ ಭಾರತದ ಆರ್ಥಿಕತೆಯನ್ನು ಕಾಪಾಡುವರೇ?
ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಟೆಸ್ಲಾ ಒಡೆಯ ಎಲಾನ್ ಮಸ್ಕ್ ಸಹಾಯದಿಂದ ಡೊನಾಲ್ಡ್ ಟ್ರಂಪ್ ಮಗದೊಮ್ಮೆ ಅಮೆರಿಕದ ಅಧ್ಯಕ್ಷರಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಟ್ರಂಪ್ ಯುನೈಟೆಡ್ ಸ್ಟೇಟ್ಸ್ನ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಮೂಲಕ ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿಗೆ ‘ಅಪರಾಧಿ ಕಮ್ ಅಧ್ಯಕ್ಷ / ಮಾಜಿ ಅಧ್ಯಕ್ಷ’ ಎನಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಡೊನಾಲ್ಡ್ ಟ್ರಂಪ್ ಮೇಲಿರುವ ಆರೋಪಕ್ಕೆ ಟ್ರಂಪ್ ಜೈಲು ಸೇರಬೇಕಾಗಿತ್ತು. ಕಡೆ ಪಕ್ಷ ಭಾರೀ ದಂಡವನ್ನು ತೆರಬೇಕಾಗಿತ್ತು. ಆದರೆ ಟ್ರಂಪ್ ಮಾಜಿ ಅಧ್ಯಕ್ಷ ಮತ್ತು ಭಾವಿ ಅಧ್ಯಕ್ಷರಾಗಿದ್ದ ಕಾರಣ ನ್ಯಾಯಾಧೀಶರು ಜೈಲು ಶಿಕ್ಷೆಯಿಂದ ಪಾರು ಮಾಡಿದರು. ಬೇಷರತ್ತಾಗಿ ಅಪರಾಧಿ ಸ್ಥಾನದಿಂದ ಕೆಳಕ್ಕಿಳಿಸಿ ಅಧ್ಯಕ್ಷರಾಗಲು ದಾರಿ ಮಾಡಿಕೊಟ್ಟರು.
ಇದನ್ನು ಓದಿದ್ದೀರಾ? ಟ್ರಂಪ್ 2ನೇ ವರಸೆ | ಇಸ್ರೇಲ್, ಭಾರತದ ವಿಚಾರದಲ್ಲಿ ಅಮೆರಿಕದ ನಡೆಯೇನು?
ಅಷ್ಟಕ್ಕೂ ಡೊನಾಲ್ಡ್ ಟ್ರಂಪ್ ವಿರುದ್ಧ ಇರುವ ಒಂದೇ ಒಂದು ಆರೋಪವೇನಲ್ಲ. ಟ್ರಂಪ್ ವಿರುದ್ಧ ಇನ್ನೂ ಮೂರು ಕ್ರಿಮಿನಲ್ ಪ್ರಕರಣಗಳಿವೆ. ಶೀಘ್ರವೇ ಈ ಪ್ರಕರಣಗಳ ವಿಚಾರಣೆ ನಡೆಯಲೂಬಹುದು ಅಥವಾ ನಡೆಯದಿರಲೂಬಹುದು. ಅಪರಾಧಿ ಸ್ಥಾನದಲ್ಲಿರುವ ಟ್ರಂಪ್ ಈಗ ಹಲವು ದೇಶಗಳಿಗೆ ಸುಲಭವಾಗಿ ಪ್ರಯಾಣಿಸುವಂತಿಲ್ಲ, ನಿರ್ಬಂಧವನ್ನು ಹೊಂದಿದ್ದಾರೆ. ಭಾರತವೂ ಕೂಡಾ ಸಾಮಾನ್ಯವಾಗಿ ಅಪರಾಧಿಗಳಿಗೆ ವೀಸಾ ನೀಡುವುದಿಲ್ಲ. ಇದರಿಂದಾಗಿ ಟ್ರಂಪ್ನ ಈ ಅಧಿಕಾರಾವಧಿ ಈ ಹಿಂದಿನಂತೆ ಇರಲಾರದು. ಟ್ರಂಪ್ ಹಲವು ದೇಶಗಳಿಗೆ ಪ್ರಯಾಣಿಸಲು ಈ ಆರೋಪ/ಅಪರಾಧಗಳೇ ಅಡ್ಡಿಯಾಗಬಹುದು.
ಇದು ನಾವು ಹಿಂದೆಂದೂ ಕಂಡಿರದ ಅಮೆರಿಕ ಅಧ್ಯಕ್ಷತೆಯ ಆರಂಭವಷ್ಟೆ. ಅದರಲ್ಲೂ ಟ್ರಂಪ್ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಜನರಿಗೆ ತಿಳಿದಿದ್ದರೂ ಕೂಡಾ ಟ್ರಂಪ್ ನಿರ್ಣಾಯಕ ಮತಗಳನ್ನು ಬಾಚಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಟ್ರಂಪ್ ಘೋಷಿಸಿದ ನೀತಿಗಳು ಇನ್ನೂ ಜನಪ್ರಿಯವಾಗಿದೆ. ಅಕ್ರಮ ನಿವಾಸಿಗಳ ವಿರುದ್ಧ ಕ್ರಮ, ಎಚ್-1ಬಿ ವೀಸಾ ಅಡಿಯಲ್ಲಿ ನೆಲೆಸಿರುವವರಿಗೆ ನಿರ್ಬಂಧ, ಆಮದು ಸುಂಕ ಏರಿಕೆ, ಅದರಲ್ಲೂ ಮುಖ್ಯವಾಗಿ ಮೆಕ್ಸಿಕೋ, ಚೀನಾ, ಕೆನಡಾದಿಂದ ಆಮದು ಮಾಡುವ ಸರಕುಗಳಿಗೆ ಹೆಚ್ಚುವರಿ ಸುಂಕ ವಿಧಿಸುವುದು- ಹೀಗೆ ಟ್ರಂಪ್ ತಾನು ಅಧಿಕಾರಕ್ಕೆ ಏರುವ ಮುನ್ನವೇ ಹಲವು ನೀತಿಗಳನ್ನು ಘೋಷಿಸಿದ್ದರು, ಈ ಮೂಲಕ ಇತರೆ ದೇಶಗಳಲ್ಲಿ ಚರ್ಚೆಗೆ ಗ್ರಾಸವಾದರು, ವಿರೋಧಕ್ಕೆ ಒಳಗಾದರು.
ಟ್ರಂಪ್ ವಾಕ್ಚಾತುರ್ಯಕ್ಕೆ ಬೆಂಬಲಿಗರು ಮಾತ್ರವಲ್ಲ ಇತರರು ಕೂಡಾ ವಾಲಿದ್ದಾರೆ. ಅದೆಷ್ಟೋ ಅಮೆರಿಕನ್ನರ ತಲೆಯಲ್ಲಿ ವಿದೇಶಿಗರು ಅಮೆರಿಕದಲ್ಲಿರುವ ಉದ್ಯೋಗವನ್ನು ದೋಚುತ್ತಾರೆ, ಗ್ರಾಹಕ ಮಾರುಕಟ್ಟೆಯನ್ನು ತಮ್ಮ ಹಿಡಿತಕ್ಕೆ ಪಡೆಯುತ್ತಾರೆ ಎಂಬ ಆತಂಕವನ್ನು ಬಿತ್ತಿದವರು ಟ್ರಂಪ್. ಆ ಮೂಲಕ ತನ್ನ ನೀತಿಗಳಿಗೆ ಜನರ ಬೆಂಬಲವನ್ನೂ ಪಡೆದಿದ್ದಾರೆ. ಟ್ರಂಪ್ ಆಮದು ಸುಂಕ ಹೆಚ್ಚಿಸಿರುವುದು ಇದೇ ಮೊದಲೇನಲ್ಲ. ತಾನು ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿಯೂ 2016-2020 ಅವಧಿಯಲ್ಲಿ ಆಮದಿನ ಮೇಲೆ ಅಧಿಕ ಸುಂಕವನ್ನು ವಿಧಿಸಿದ್ದರು. ಈಗ ಆ ಆಮದು ಸುಂಕ ಇನ್ನಷ್ಟು ಹೆಚ್ಚಾಗಲಿದೆ.
ಇದನ್ನು ಓದಿದ್ದೀರಾ? ಟ್ರಂಪ್ ಪದಗ್ರಹಣಕ್ಕೆ ಗೆಳೆಯ ಮೋದಿಗಿಲ್ಲ ಆಹ್ವಾನ; ಚೀನಾದತ್ತ ವಾಲುತ್ತಿದೆಯೇ ಅಮೆರಿಕ?
ನಿಮ್ಮ ಜೇಬಿಗೆ ಕತ್ತರಿ ಹಾಕುವ ಬದಲಾಗಿ ನಮ್ಮ ಮಾರುಕಟ್ಟೆಯ ಉಚಿತ ಲಾಭವನ್ನು ಪಡೆಯುವ ಕೊಳಕು ವಿದೇಶಿಗರ ಜೇಬಿಗೆ ಕತ್ತರಿ ಹಾಕುತ್ತೇವೆ ಎಂಬಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡಿಯೇ ಜನರನ್ನು ತನ್ನತ್ತ ಸೆಳೆದುಕೊಂಡವರು ಟ್ರಂಪ್.
ಟ್ರಂಪ್ ನೀತಿಗಳು ಮತ್ತು ಭಾರತದ ಸ್ಥಿತಿಗತಿ
ಟ್ರಂಪ್ನ ಎರಡನೇ ಅವಧಿಗಳು ಭಾರತಕ್ಕೆ ಕೆಟ್ಟ ಪರಿಣಾಮ ಬೀರುವುದನ್ನು ಅಲ್ಲಗಳೆಯುವಂತಿಲ್ಲ. ಮೊದಲನೆಯದಾಗಿ ಅಮೆರಿಕಕ್ಕೆ ಬರುವ ಚೀನೀ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸಿರುವುದರಿಂದಾಗಿ ಚೀನಾ ಸಾಮಾನ್ಯವಾಗಿಯೇ ಎಲ್ಲಿ ಕಡಿಮೆ ಆಮದು ಸುಂಕ ಇರುತ್ತದೆಯೋ ಆ ದೇಶಗಳೆಡೆ ವಾಲುತ್ತದೆ. ಈಗಾಗಲೇ ಆರ್ಥಿಕ ಮಂದಗತಿಯನ್ನು ಎದುರಿಸುತ್ತಿರುವ ಚೀನಾ ಕಡಿಮೆ ವೆಚ್ಚದಲ್ಲಿ ಇತರೆ ದೇಶಗಳಿಗೆ ತನ್ನ ಸರಕನ್ನು ಆಮದು ಮಾಡಿಬಿಟ್ಟರೆ ಸಾಕಪ್ಪ ಎಂದುಕೊಳ್ಳುತ್ತದೆ. ಅದರಲ್ಲೂ ಮುಖ್ಯವಾಗಿ ಉಕ್ಕು, ಲೋಹಗಳು ಮೊದಲಾದವು. ಈಗಾಗಲೇ ಚೀನಾದೊಂದಿಗೆ ಭಾರತ 100 ಬಿಲಿಯನ್ ಡಾಲರ್ಗಳ ಬೃಹತ್ ದ್ವಿಪಕ್ಷೀಯ ವ್ಯಾಪಾರ ಕೊರತೆಯನ್ನು ಹೊಂದಿದೆ. ಈ ಕೊರತೆ ಕಡಿಮೆ ಮಾಡುವುದು ಕಷ್ಟವೆಂದು ನಂಬಲಾಗಿರುವಾಗ ಅಮೆರಿಕದ ನೀತಿಯು ಭಾರತದಲ್ಲಿ ವ್ಯಾಪಾರ ಕೊರತೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
ರಷ್ಯಾದ ಕಡಿಮೆ ವೆಚ್ಚದ ಕಚ್ಚಾ ತೈಲಗಳ ಮೇಲೆ ನಿರ್ಬಂಧ ವಿಧಿಸಿರುವುದು ಕೂಡಾ ಭಾರತದ ಮೇಲೆಯೇ ಪ್ರಭಾವ ಬೀರಲಿದೆ. ಭಾರತವು ಕಡಿಮೆ ವೆಚ್ಚಕ್ಕೆ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು ಸಂಸ್ಕರಿಸಿದ ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಯುಎಸ್, ಯುರೋಪ್ಗೆ ರಫ್ತು ಮಾಡುತ್ತದೆ. ಅದೀಗ ತೀವ್ರ ಪರಿಶೀಲನೆಗೆ ಒಳಗಾಗಲಿದೆ. ಭಾರತಕ್ಕೆ ತಾಪತ್ರಯವಾಗುವ ಸಾಧ್ಯತೆಯಿದೆ.
ಇನ್ನೊಂದೆಡೆ ಡಾಲರ್ ಮೌಲ್ಯ ಅಧಿಕವಾಗುತ್ತಿದೆ. ಇದರಿಂದಾಗಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಗ್ಗುತ್ತಿದೆ. ಇದರಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರ ಪ್ರಮಾಣ ಕಡಿಮೆಯಾಗುತ್ತದೆ. ಅದರ ಪ್ರಭಾವ ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದೆ.
ಇದನ್ನು ಓದಿದ್ದೀರಾ? ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರ ಬರುವ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ
ಈ ತಿಂಗಳ ಜನವರಿ 17ರವರೆಗೆ ವಿದೇಶಿ ಹೂಡಿಕೆದಾರರು ಸುಮಾರು 47,000 ಕೋಟಿ ರೂಪಾಯಿ ಅಥವಾ 6 ಬಿಲಿಯನ್ ಡಾಲರ್ನಷ್ಟು ಹೂಡಿಕೆ ಹಿಂಪಡೆದಿದ್ದಾರೆ. ಇದು ಷೇರು ಮಾರುಕಟ್ಟೆ ಮೌಲ್ಯದಲ್ಲಿ ಭಾರೀ ಕುಸಿತಕ್ಕೆ ಕಾರಣವಾಗಿದೆ. ಅದರಲ್ಲೂ 2008ರ ಬಳಿಕ ಮೊದಲ ಬಾರಿಗೆ ಜನವರಿಯಲ್ಲಿ ಅಧಿಕ ಹೂಡಿಕೆ ಹಿಂಪಡೆಯಲಾಗಿದೆ. ಡಾಲರ್ ಹೂಡಿಕೆ ಹಿಂಪಡೆಯುತ್ತಿದ್ದಂತೆ ರೂಪಾಯಿ ಮೌಲ್ಯವೂ ಕೂಡಾ ಕುಗ್ಗುತ್ತಾ ಬರುತ್ತದೆ. ಸದ್ಯ ಡಾಲರ್ ಎದುರು ರೂಪಾಯಿ ಮೌಲ್ಯ 87ಕ್ಕೆ ಕುಸಿದಿದ್ದು, ಇನ್ನೂ ಇಳಿಯುವ ಸಾಧ್ಯತೆಯಿದೆ. ರೂಪಾಯಿ ಮೌಲ್ಯವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಡಾಲರ್ಗಳನ್ನು ಮಾರಾಟ ಮಾಡುತ್ತಿದೆ. ವಿದೇಶಿ ಹೂಡಿಕೆದಾರರು ಹೂಡಿಕೆ ಹಿಂಪಡೆಯುತ್ತಿದ್ದಂತೆ ಡಾಲರ್ಗಳ ಕೊರತೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಸಾಮಾನ್ಯವಾಗಿಯೇ ಡಾಲರ್ ಮೌಲ್ಯ ಹೆಚ್ಚಾಗುತ್ತದೆ, ರೂಪಾಯಿ ಮೌಲ್ಯ ಇಳಿಕೆಯಾಗುತ್ತದೆ.
ರೂಪಾಯಿ ಮೌಲ್ಯ ಕುಸಿಯುವುದನ್ನು ತಡೆಯಲು ಆರ್ಬಿಐ ಡಾಲರ್ಗಳನ್ನು ಮಾರಾಟ ಮಾಡುತ್ತದೆ. 2024ರ ಸೆಪ್ಟೆಂಬರ್ ವೇಳೆಗೆ ಆರ್ಬಿಐ ಸುಮಾರು 40 ಬಿಲಿಯನ್ ಡಾಲರ್ಗಳನ್ನು ಮಾರಾಟ ಮಾಡಿದೆ ಎಂದು ಅಂದಾಜಿಸಲಾಗಿದೆ. ಇವೆಲ್ಲವುದರ ನಡುವೆ ಬ್ಯಾಂಕ್ಗಳಲ್ಲಿ ದ್ರವ್ಯತೆ ಕೊರತೆ ಕಾಣಿಸಿಕೊಂಡಿದೆ. ಭಾರತದ ಆರ್ಥಿಕತೆಗೆ ಟ್ರಂಪ್ ನೀತಿಗಳು ತೂಗುಕತ್ತಿ ಎಂಬುದನ್ನು ನಾವು ನಿರ್ಲಕ್ಷಿಸುವಂತಿಲ್ಲ.
ವರಸೆ ಬದಲಾಯಿಸಿಕೊಂಡ ಟ್ರಂಪ್
ತನ್ನ ಮೊದಲ ಅಧಿಕಾರಾವಧಿಯಿಂದಲೇ ಡೊನಾಲ್ಡ್ ಟ್ರಂಪ್ ತನ್ನ ಜೀವದ ಗೆಳೆಯ ಪ್ರಧಾನಿ ನರೇಂದ್ರ ಮೋದಿಯೊಡನೆ ಉತ್ತಮ ನಂಟು ಇರಿಸಿಕೊಂಡಿದ್ದರು. ಆದರೆ ಈಗ ವರಸೆ ಬದಲಾಗಿದೆ. ಪ್ರಧಾನಿ ಮೋದಿಗೆ ಟ್ರಂಪ್ ಪದಗ್ರಹಣಕ್ಕೆ ಆಹ್ವಾನವೂ ನೀಡಿಲ್ಲ. ಗೆಳೆಯನನ್ನೇ ಮರೆತ ಟ್ರಂಪ್ ಚೀನಾದ ಅಧ್ಯಕ್ಷ ಕ್ಸಿ- ಜಿನ್ಪಿಂಗ್ಗೆ ಆಹ್ವಾನವನ್ನು ನೀಡಿದ್ದರು. ಚೀನಾದ ವಸ್ತುಗಳ ಆಮದಿನ ಮೇಲೆ ಅಧಿಕ ಸುಂಕ ವಿಧಿಸಿದ್ದರೂ ಕೂಡಾ ತಾನು ಅಧಿಕಾರಕ್ಕೆ ಬಂದ ಮೊದಲ ದಿನವೇ ಚೀನೀ ಆ್ಯಪ್ ಟಿಕ್ಟಾಕ್ ಅನ್ನು ಮತ್ತೆ ಜಾರಿಗೆ ತಂದರು.
ಇವೆಲ್ಲವುದರ ನಡುವೆ ಇದೀಗ ತನ್ನ ನೀತಿ ಮೂಲಕವೇ ಟ್ರಂಪ್ ಭಾರತಕ್ಕೆ ಏಟು ನೀಡುವ ಯತ್ನ ಮಾಡುತ್ತಿರುವಂತಿದೆ. ತನ್ನ ಸ್ನೇಹಿತ ಮೋದಿ ಈಗ ಟ್ರಂಪ್ ಪಾಲಿಗೆ ಬರೀ ಭಾರತದ ಪ್ರಧಾನಿಯಷ್ಟೇ. ಈಗಾಗಲೇ ದೇಶದ ಆರ್ಥಿಕತೆಯನ್ನು ಅಧಃಪತನಕ್ಕೆ ಕೊಂಡ್ಯೊಯ್ದಿರುವ ಮೋದಿ, ಟ್ರಂಪ್ ನೀತಿಯ ಹೊಡೆತದಿಂದ ಭಾರತದ ಆರ್ಥಿಕತೆಯನ್ನು ಕಾಪಾಡುವರೇ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.