ಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ವಸೂಲಾಗದ ಸಾಲ(ಎನ್‌ಪಿಎ) 16.35 ಲಕ್ಷ ಕೋಟಿ ರೂ.ಗಳನ್ನು ರೈಟ್ ಆಫ್(ಬರ್ಖಾಸ್ತು) ಮಾಡಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚಿಗೆ ಸಂಸತ್ತಿಗೆ ಮಾಹಿತಿ ನೀಡಿದ್ದರು. 2023–24ರಲ್ಲಿ 1.70 ಲಕ್ಷ ಕೋಟಿ ರೂ., 2022–23ರಲ್ಲಿ 2.16 ಲಕ್ಷ ಕೋಟಿ ವಸೂಲಿಯಾಗದ ಸಾಲವನ್ನು ರೈಟ್ ಆಫ್ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದರು. ಹಾಗೆಯೇ ಆರ್‌ಬಿಐ ಮಾರ್ಗಸೂಚಿ ಹಾಗೂ ಆಡಳಿತ ಮಂಡಳಿ ಒಪ್ಪಿದ ನೀತಿಗೆ ಅನುಗುಣವಾಗಿ ಬ್ಯಾಂಕ್‌ಗಳು ತಾವು ನೀಡಿದ ಸಾಲವು ವಸೂಲಾಗದ ಸಾಲ ಎಂದು ವರ್ಗೀಕರಿಸಿದ 4 ವರ್ಷಗಳ ನಂತರ, ಆ ಸಾಲವನ್ನು ರೈಟ್ ಆಫ್ ಮಾಡುತ್ತವೆ ಎಂದಿದ್ದರು. ಸರ್ಕಾರವು ಬಡವರು ಮಾಡಿರುವ ಅಲ್ಪಸ್ವಲ್ಪ ಸಾಲವನ್ನು ಬಲವಂತವಾಗಿ ಕಸಿದುಕೊಳ್ಳುವ ಬ್ಯಾಂಕುಗಳು ಶ್ರೀಮಂತರ ಸಾಲಗಳನ್ನು ವಸೂಲಿ ಮಾಡಲಾಗದೆ ರೈಟ್‌ಆಫ್ ಮಾಡುತ್ತಿದೆ ಎಂದು ಸಾರ್ವಜನಿಕರ ಆಕ್ರೋಶವಾಗಿದೆ.
ರೈಟ್‌ಆಫ್ ಎಂದರೇನು?
ಆರ್‌ಬಿಐ ನಿಯಮದ ಪ್ರಕಾರ ರೈಟ್ ಆಫ್ ಎಂದರೆ ಬ್ಯಾಂಕುಗಳು ಸಾಲ ವಸೂಲಿ ಮಾಡುವ ಎಲ್ಲ ಮಾರ್ಗಗಳು ಕೊನೆಗೊಂಡಾಗ, ಬ್ಯಾಂಕ್ ಬ್ಯಾಲೆನ್ಸ್ ಶೀಟ್‌ಅನ್ನು ನವೀಕರಿಸುವ ಅನಿವಾರ್ಯತೆ ಎದುರಾದಾಗ, ಈ ಮಾರ್ಗವನ್ನು ಅನುಸರಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಸಾಲವನ್ನು ಮುಖ್ಯ ಸಾಲ ಪುಸ್ತಕದಿಂದ ಹೊರತೆಗೆದು ಬೇರೆ ಪುಸ್ತಕಕ್ಕೆ ವರ್ಗಾಯಿಸುತ್ತವೆ. ಅನುತ್ಪಾದಕ ಆಸ್ತಿಯ ಹೊರೆ ಬ್ಯಾಲೆನ್ಸ್ ಶೀಟ್‌ನಲ್ಲಿ ಕಡಿಮೆಯಾಗುತ್ತದೆ. ಆದರೆ, ಸಾಲಗಾರ ಸಾಲ ಮುಕ್ತನಾಗುವುದಿಲ್ಲ. ಬ್ಯಾಂಕುಗಳ ಪುಸ್ತಕದಲ್ಲಿ ಮತ್ತು ದಾಖಲೆಗಳಲ್ಲಿ ಅವನು ಸಾಲಗಾರನಾಗಿ ಮುಂದುವರೆಯುತ್ತಾನೆ. ಸಾಲ ಮರುಪಾವತಿ ಮಾಡುವ ಸಾಲಗಾರನ ಬಾಧ್ಯತೆ ಹಾಗೆಯೇ ಇರುತ್ತದೆ. ಅದೇ ರೀತಿ ಜಾಮೀನುದಾರನ ಬದ್ಧತೆಯೂ ಇದರಲ್ಲಿ ಸೇರುತ್ತದೆ. ಸಾಲಗಾರನು ನೀಡಿದ ಸೆಕ್ಯುರಿಟಿಗಳನ್ನು ಕೈಬಿಡುವಂತಿಲ್ಲ ಅಥವಾ ಹಿಂತಿರುಗಿಸುವಂತಿಲ್ಲ. ಸಾಲ ವಸೂಲಾತಿಯ ಎಲ್ಲ ಪ್ರಕ್ರಿಯೆಗಳು ನಿಲ್ಲದೇ ಎಂದಿನಂತೆ ಮುಂದುವರೆಯುತ್ತವೆ. ಸಾಲ ವಸೂಲಾತಿಯ ಬಗೆಗಿನ ಕಾನೂನಾತ್ಮಕ ಕ್ರಮಗಳಿಗೆ ಯಾವುದೇ ತೊಂದರೆ ಇರುವುದಿಲ್ಲ.
ಸಾಮಾನ್ಯವಾಗಿ ಬ್ಯಾಂಕುಗಳು ತಮ್ಮ ಬ್ಯಾಲೆನ್ಸ್ ಶೀಟ್ ಅನ್ನು ಸದೃಢವಾಗಿ ತೋರಿಸಲು ಮತ್ತು ಸರ್ಕಾರಕ್ಕೆ ನೀಡುವ ತೆರಿಗೆ ಹೊರೆಯನ್ನು ತಗ್ಗಿಸಿಕೊಳ್ಳಲು ರೈಟ್ಆಫ್ ಮಾಡಲು ಮುಂದಾಗುತ್ತವೆ. ಹಾಗೆಯೇ, ಅನುತ್ಪಾದಕ ಆಸ್ತಿಗಳ ಅವಧಿ ಹೆಚ್ಚಾದಂತೆ ಅದಕ್ಕೆ ಬ್ಯಾಂಕಿನ ಒಟ್ಟಾರೆ ಲಾಭದಿಂದ ವರ್ಗಾಯಿಸುವ ಆದ್ಯತೆ ಕೂಡ ಹೆಚ್ಚಾಗುತ್ತದೆ. ಬ್ಯಾಂಕುಗಳಲ್ಲಿ ಅನುತ್ಪಾದಕ ಆಸ್ತಿ ಹೆಚ್ಚಾದಂತೆ, ಸಾಲ ನೀಡಿದ ಬ್ಯಾಂಕ್, ಆರ್‌ಬಿಐನ ದಂಡನೆಗೆ ಒಳಗಾಗುವ ಸಾಧ್ಯತೆಯಿರುತ್ತದೆ. ಇದಕ್ಕಾಗಿ ಬ್ಯಾಂಕ್‌ಅನ್ನು ಆರ್ಥಿಕವಾಗಿ ಸದೃಢಗೊಳಿಸಲು ರಿಸರ್ವ್ ಬ್ಯಾಂಕ್ ಸಾಲ ನೀಡಿಕೆ, ಹೊಸ ನೇಮಕಾತಿ, ಸಿಬ್ಬಂದಿಗಳಿಗೆ ಬಡ್ತಿ, ಹೆಚ್ಚಿನ ಹಣಕಾಸು ಸೌಲಭ್ಯ ಅನುತ್ಪಾದಕ ಸಾಲ ಮತ್ತು ಸಾಲ ವಸೂಲಾತಿಯ ನಿಟ್ಟಿನಲ್ಲಿ ಹಲವಾರು ನಿರ್ದೇಶನ, ನಿಯಂತ್ರಣ ಮತ್ತು ಕಟ್ಟಳೆಗಳಿಗೆ ಒಳಪಡಿಸುತ್ತದೆ. ಅದೆ ರೀತಿ, ಬ್ಯಾಂಕುಗಳು ರೈಟ್ ಆಫ್‌ಗೆ ಕೂಡ ಮುಂದಾಗುತ್ತವೆ.
ಸಾಲಗಳನ್ನು ರೈಟ್ಆಪ್ ಮಾಡಿದ ನಂತರವೂ ಸಾಲ ವಸೂಲು ಮಾಡಬಹುದು, ಸಾಲಗಾರನಿಗೆ ಯಾವುದೇ ರೀತಿಯ ವಿನಾಯಿತಿ ನೀಡುವ ಸಾಧ್ಯತೆಗಳಿಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ ಸರ್ಕಾರವೇ ಪೋಷಿಸಿದ ಹಲವು ಉದ್ಯಮಿಗಳು ದೇಶಕ್ಕೆ ಸಾವಿರಾರು ಕೋಟಿ ವಂಚಿಸಿ ವಿದೇಶಗಳಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಇವರಲ್ಲಿ ಒಬ್ಬರನ್ನಾದರೂ ಕರೆತಂದು ಶಿಕ್ಷೆಯ ಜೊತೆಗೆ ದೇಶದ ಹಣವನ್ನು ವಸೂಲಿ ಮಾಡುವ ಕೆಲಸವನ್ನು ಮಾಡಲಾಗಿಲ್ಲ. ದೇಶದ ಜನರನ್ನು ಕೇವಲ ಬಾಯಿಮಾತಿನಲ್ಲಿಯೇ ಸುಮ್ಮನಿರಿಸಿಲಾಗುತ್ತಿದ್ದು, ಸಾಲದ ಪ್ರಮಾಣ ಮಾತ್ರ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೆ ಇದೆ. ಬ್ಯಾಂಕ್‌ಗಳಿಗೆ ಬಂದ ನಷ್ಟವು ಗ್ರಾಹಕರಿಗೆ ಆಗುವ ನಷ್ಟವೇ ಆಗಿದೆ. ಹೀಗೆ ವಸೂಲಾಗದ ಸಾಲಗಳನ್ನು ರೈಟ್ ಆಫ್ ಮಾಡಿದರೂ, ಅವುಗಳನ್ನು ಬ್ಯಾಂಕ್‌ಗಳು ವಸೂಲಿ ಮಾಡಬಹುದು. ಈ ರೀತಿ ವಸೂಲಿ ಮಾಡಲಾದ ರೈಟ್ -ಆಫ್ ಸಾಲಗಳನ್ನು ಬ್ಯಾಂಕ್‌ನ ಆದಾಯಕ್ಕೆ ಸೇರಿಸಲಾಗುತ್ತದೆ. ಆ ಸಾಲ ವಸೂಲಿ ಆಗದಿದ್ದರೆ ಅದು ಅಂತಿಮವಾಗಿ ನಷ್ಟ ಎಂದು ಸರ್ಕಾರ ನೇರವಾಗಿ ಹೇಳುವುದಿಲ್ಲ. ಮುಂದೆ ವಸೂಲಿ ಮಾಡುತ್ತೇವೆ ಎಂದು ಹೇಳುತ್ತದೆ. ಆದರೆ ಇಲ್ಲಿಯವರೆಗೂ ಗಣನೀಯ ಪ್ರಮಾಣದಲ್ಲಿ ಸಾಲ ವಸೂಲಾದ ನಿದರ್ಶನವಿಲ್ಲ.
ದೇಶ ಹಾಗೂ ವಿದೇಶದಲ್ಲಿರುವವರ ಸಾಲ
ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ, 2024ರ ಡಿಸೆಂಬರ್ 31ರವರೆಗೆ ವಾಣಿಜ್ಯ ಬ್ಯಾಂಕ್‌ಗಳಲ್ಲಿ ತಲಾ 1 ಸಾವಿರ ಕೋಟಿ ರೂ. ಗಿಂತ ಹೆಚ್ಚು ಸಾಲ ಪಡೆದು ಅದನ್ನು ಸರಿಯಾಗಿ ಮರಳಿಸದ 29 ಕಂಪನಿಗಳು ದೇಶದಲ್ಲಿವೆ. ಈ ಕಂಪನಿಗಳ ಸಾಲ ಖಾತೆಯನ್ನು ʼವಸೂಲಾಗದ ಸಾಲʼ ಎಂದು ವರ್ಗೀಕರಿಸಲಾಗಿದೆ. ಇಂತಹ ಕಂಪನಿಗಳಿಂದ 61,027 ಕೋಟಿ ರೂ. ಸಾಲ ಮರುಪಾವತಿ ಆಗಬೇಕಿದೆ. ನಾವು ಸಾಲ ಮನ್ನಾ ಮಾಡಿಲ್ಲ. ಬದಲಿಗೆ ವಸೂಲಾಗದ ಸಾಲವನ್ನು ರೈಟ್ ಆಫ್ ಮಾಡಲಾಗಿದೆ. ಅವನ್ನು ವಸೂಲಿ ಮಾಡಲಾಗುತ್ತದೆ. ಈ ಕ್ರಮದಿಂದ ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ರೈಟ್ ಆಫ್ ಮಾಡಲಾದ ಸಾಲಗಳು ನಿರೀಕ್ಷಿತ ಮಟ್ಟದಲ್ಲಿ ವಸೂಲಿ ಆಗುತ್ತಿಲ್ಲ. ವಸೂಲಾಗದ ಸಾಲದಲ್ಲಿ 16.35 ಲಕ್ಷ ಕೋಟಿ ಮೊತ್ತದಷ್ಟು ಸಾಲಗಳನ್ನು ತಮ್ಮ ಬ್ಯಾಲೆನ್ಸ್ ಶೀಟ್‌ನಿಂದ ಹೊರಗಿಟ್ಟಿದೆ. 2014-15ಕ್ಕೆ ಹೋಲಿಸಿದರೆ ಹೀಗೆ ರೈಟ್ ಆಫ್ ಮಾಡಲಾದ ಸಾಲದ ಮೊತ್ತ ಪ್ರತಿ ವರ್ಷ ಏರಿಕೆಯಾಗುತ್ತಲೇ ಇದೆ.
ಈ ವರದಿ ಓದಿದ್ದೀರಾ?: ರಷ್ಯಾದ ಶಸ್ತ್ರಾಸ್ತ್ರ ಖರೀದಿಸದಂತೆ ಭಾರತಕ್ಕೆ ಅಮೆರಿಕ ಒತ್ತಡ: ಏನಿದರ ಮರ್ಮ?
2014-15ನೇ ಸಾಲಿನಿಂದ 2022-23ನೇ ಸಾಲಿನ ಅಂತ್ಯದವರೆಗೆ ಸರ್ಕಾರಿ ಸ್ವಾಮ್ಯದ ವಾಣಿಜ್ಯ ಬ್ಯಾಂಕ್‌ಗಳು ಒಟ್ಟು 110,42 ಲಕ್ಷ ಕೋಟಿ ಮೊತ್ತದಷ್ಟು ಸಾಲಗಳನ್ನು ರೈಟ್ ಆಫ್ ಮಾಡಲಾಗಿದೆ. ಆದರೆ ಇದೇ ಅವಧಿಯಲ್ಲಿ ಈ ಬ್ಯಾಂಕ್‌ಗಳು ವಸೂಲಿ ಮಾಡಿದ ರೈಟ್ ಆಫ್ ಸಾಲಗಳ ಮೊತ್ತ 11.61 ಲಕ್ಷ ಕೋಟಿ ಮಾತ್ರ. ಅಂದರೆ ಒಟ್ಟು ಸಾಲದಲ್ಲಿ ವಸೂಲಾಗಿದ್ದು ಶೇ. 15ರಷ್ಟು ಮಾತ್ರ. ಸಾಲದ ಹೊರೆಯನ್ನು ಬ್ಯಾಂಕ್‌ಗಳು ಅಂತಿಮವಾಗಿ ಸಾಮಾನ್ಯ ಗ್ರಾಹಕರ ಮೇಲೆ ಹೊರಿಸುತ್ತವೆ. ಜನಸಾಮಾನ್ಯರೆ ಶ್ರೀಮಂತರ ಸಾಲಕ್ಕೆ ಹೊಣೆಯಾಗುತ್ತಾರೆ.
ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಸೇರಿದಂತೆ 50 ಸಾಲಗಾರರು 68,607 ಕೋಟಿ ರೂ. ಸಾಲವನ್ನು ಬಾಕಿ ಉಳಿಸಿಕೊಂಡಿದ್ದರು. ಕೇಂದ್ರ ಸರ್ಕಾರ ಇವರ ಸಾಲವನ್ನು ರೈಟ್ ಆಫ್ ಮಾಡಿತ್ತು. ಕೆಲವು ಪ್ರಮುಖರ ಸಾಲವನ್ನು ಲೆಕ್ಕ ಹಾಕಿದಾಗ ಮೆಹುಲ್ ಚೋಕ್ಸಿಯ ಗೀತಾಂಜಲಿ ಜೆಮ್ಸ್ ಲಿ.ನ 5,492 ಕೋಟಿ ರೂ, ವಿಜಯ್ ಮಲ್ಯನ ಕಿಂಗ್‌ಫಿಶರ್ ಏರ್‌ಲೈನ್ಸ್‌ನ 1,943 ಕೋಟಿ ರೂ, ಬಾಬಾ ರಾಮ್‌ದೇವ್ ಅವರ ಪತಂಜಲಿ ಗ್ರೂಪ್‌ನ ಭಾಗವಾದ ರುಚಿ ಸೋಯಾ ಇಂಡಸ್ಟ್ರೀಸ್‌ನ 2,212 ಕೋಟಿ ರೂ. ಸುಸ್ತಿ ಸಾಲ ತಾಂತ್ರಿಕವಾಗಿ ಕಡತದಿಂದ ಹೊರಗೆ ಹೋಗಿದೆ. ಈ ಪಟ್ಟಿಯಲ್ಲಿ, ಆರ್‌ಇಐ ಆಗ್ರೊ ಲಿಮಿಟೆಡ್‌ನ 4,314 ಕೋಟಿ ರೂ, ಜತಿನ್ ಮೆಹ್ತಾ ಅವರ ವಿನ್‌ಸಮ್ ಡೈಮಂಡ್ಸ್ ಆ್ಯಂಡ್ ಜ್ಯುವೆಲ್ಲರಿಯ 4,076 ಕೋಟಿ ರೂ. ಸಾಲವನ್ನೂ ತಾಂತ್ರಿಕವಾಗಿ ಬರ್ಖಾಸ್ತುಗೊಳಿಸಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಪೈಕಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಸ್‌ಬಿಐ ಅತ್ಯಂತ ಹೆಚ್ಚಿನ ಸಾಲಗಳನ್ನು ರೈಟ್ ಆಫ್ ಮಾಡಿದ್ದರೆ, ಖಾಸಗಿ ವಲಯದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ರೈಟ್ ಆಫ್ ಮಾಡಿದ ಪ್ರಮುಖ ಬ್ಯಾಂಕುಗಳಾಗಿವೆ.