ಸಮಾಜದ ಫತ್ವಾ ಎದುರಿಸಿ ʼಬೆಂಕಿಮಳೆʼಯೇ ಆಗಿದ್ದರು ಬಾನು

Date:

Advertisements

ಬಾನು ಅವರ ‘ಬೆಂಕಿಮಳೆ’ ಕೃತಿ ರಚನೆಯಾದಾಗ ಸಮಾಜದವರಿಂದ ಫತ್ವಾ ಎದುರಿಸಬೇಕಾಯಿತು. ಫತ್ವಾ ಹಿಂಪಡೆಯಬೇಕಾದರೆ, “ನಾನು ಇನ್ನು ಮೇಲೆ ಕಥೆಗಳನ್ನಾಗಲಿ, ಕಾದಂಬರಿಯನ್ನಾಗಲಿ ಪದ್ಯವನ್ನಾಗಲಿ, ಲೇಖನವನ್ನಾಗಲಿ, ಹನಿಗವನವಾಗಲಿ, ಪ್ರಬಂಧವನ್ನಾಗಲಿ ಏನನ್ನೂ ಏನನ್ನೂ ಒಂದಕ್ಷರವನ್ನಾಗಲಿ ಬರೆಯುವುದಿಲ್ಲವೆಂದು ಈ ಮೂಲಕ ಪ್ರಮಾಣ ಮಾಡಿ ಹೇಳುತ್ತೇನೆ” ಎಂಬ ಪತ್ರಕ್ಕೆ ಸಹಿ ಹಾಕಬೇಕಿತ್ತು. ಬಾನು ಏನು ಮಾಡಿದರು ಗೊತ್ತೇ?

ಬಾನು ಮುಷ್ತಾಕ್‌ರ ಕನ್ನಡ ಕಥಾ ಸಂಕಲನ ‘ಎದೆಯ ಹಣತೆ’ ಗೆ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಪ್ರತಿಷ್ಠಿತ ಜಾಗತಿಕ ಮಟ್ಟದ ಬೂಕರ್ ಪ್ರಶಸ್ತಿ ದೊರಕಿದೆ. ಈ ಕೃತಿಯನ್ನು ‘ಹಾರ್ಟ್‌ ಲ್ಯಾಂಪ್’ ಹೆಸರಿನಿಂದ ಇಂಗ್ಲಿಷ್‍ಗೆ ಅನುವಾದಿಸಿದ ದೀಪಾ ಭಾಸ್ತಿಯವರು ವಿಶ್ವದ ಪ್ರತಿಷ್ಟಿತ ‘ಬೂಕರ್’ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಈ ಸಂಭ್ರಮದ ಸಮಯದಲ್ಲಿ ಅವರಿಬ್ಬರೂ ಗೆಳತಿಯರನ್ನು ಅಭಿನಂದಿಸುವೆ. ಈ ಗೌರವ ಅವರಿಗೆ ಮಾತ್ರ ಸಂದ ಗೌರವವಲ್ಲ, ಬದಲಾಗಿ ಇದು ಕನ್ನಡಿಗರೆಲ್ಲರಿಗೂ ದೊರೆತ ಹೆಮ್ಮೆಯ ಗೌರವವಾಗಿದೆ.

ಪ್ರಶಸ್ತಿ ಸ್ವೀಕರಿಸುತ್ತ ಬಾನು ಹೇಳಿರುವ ಮಾತು ಬಹಳ ಮಹತ್ವದ್ದಾಗಿದೆ. “ಈ ಪ್ರಶಸ್ತಿ ನನ್ನ ವೈಯಕ್ತಿಕ ಗೆಲುವಲ್ಲ. ಇದು ಇಡೀ ಟೀಮ್‍ಗೆ ದೊರೆತ ಗೆಲುವು” ಎಂದಿದ್ದಾರೆ. ಕನ್ನಡಕ್ಕೆ ಈ ಗೌರವ ಸಂದಿರುವುದಕ್ಕೆ ಕರ್ನಾಟಕದ ಜನತೆ ಹೆಮ್ಮೆ ಪಡುತ್ತಿದ್ದಾರೆ. ಕನ್ನಡಕ್ಕೆ ಇದೊಂದು ವಿಶ್ವಮಾನ್ಯ ಗೆಲುವು, ಇದು ಬಾನುಗೆ ದೊರೆತ ವೈಯಕ್ತಿಕ ಗೆಲುವಲ್ಲ ಬದಲಾಗಿ ಅದು ಭಾರತೀಯರೆಲ್ಲರಿಗೂ ಸಂದ ಗೌರವವಾಗಿದೆ.

ಬಾನುರವರ ಬರಹಗಳಲ್ಲಿ ಮುಸ್ಲಿಂ ಸಮಾಜದ ಒಳಗಿನ ಓರೆ ಕೋರೆ, ಮೌಢ್ಯ, ಅನಕ್ಷರತೆ, ಬಡತನಗಳನ್ನು ಅತ್ಯಂತ ಸಮಂಜಸ ರೀತಿಯಲ್ಲಿ ತೆರೆದಿಡುತ್ತಾರೆ. ‘ಎದೆಯ ಹಣತೆ’ ಕಥಾ ಸಂಕಲನದಲ್ಲಿ ಬದುಕಿನ ಹಲವಾರು ಒಳ ಹೊರಗಿನ ವಿರೋಧಗಳ ನಡುವೆ ಬರಹಗಾರರು ಬರೆಯುತ್ತಿರುತ್ತಾರೆ. ರಹಮತ್‌ ತರಿಕೆರೆಯವರು ಹೇಳುವಂತೆ ‘ಒಂದು ಕತ್ತಿಯಲುಗಿನ ನಡೆ’ಯಾಗಿರುತ್ತದೆ. ಹಲವಾರು ಒಳ-ಹೊರಗಿನ ವಿರೋಧಗಳ ನಡುವೆ ಬದುಕು ಕಟ್ಟಿಕೊಂಡವರು ಬಾನು. ಅವರ ಪತಿ ಮುಷ್ತಾಕ್‌ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಬಂಡಾಯ ಸಾಹಿತ್ಯ, ಸಂಘಟನೆ, ಲಂಕೇಶರ ಬೆಂಬಲ ಮತ್ತು ಹೋರಾಟಗಳ ಮೂಲಕ ಬದುಕು ಕಟ್ಟಿಕೊಂಡವರು ಬಾನು. ಕನ್ನಡ ನೆಲದ, ಈ ಮಣ್ಣಿನ ಮಗಳು ಬಾನು. ಅವರಿಗೆ ಭಾರತೀಯರಲ್ಲರ ಬೆಂಬಲ ಸಂದಿದೆ. ಇಡೀ ದೇಶದ ಜನ ಸಂಭ್ರಮಿಸಿ ಅಭಿಮಾನದಿಂದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

ಬಾನುರವರು ಜಡ್ಡುಗಟ್ಟಿದ ತಮ್ಮ ಸಮಾಜದೊಳಗೆ ಬೆಳಕಿನ ದೀಪವನ್ನು ತಮ್ಮ ಕಥೆ, ಕಾದಂಬರಿ ಬರಹಗಳ ಮೂಲಕ ಹಚ್ಚಿದವರು. ಬರಹಗಾರ್ತಿ, ಹೋರಾಟಗಾರ್ತಿ, ವಕೀಲೆ, ಬಂಡಾಯ ಸಾಹಿತ್ಯ ಚಳವಳಿಯನ್ನು ಕಟ್ಟಿದವರು ಅವರು. ಅವರು ತಮಗೆ ಕಾಡಿದ ಪೀಡಿಸಿದ ವಿಷಯಗಳ ಕುರಿತು ಚಿಂತನ ಮಂಥನ ನಡೆಸಿ ಕಥಾ ಚೌಕಟ್ಟುಗಳನ್ನು ಹೆಣೆಯುತ್ತಿದ್ದರು. ಅವರು ‘ಹೆಜ್ಜೆ ಮೂಡಿದ ಹಾದಿ’ ‘ಬೆಂಕಿಮಳೆ’ ‘ಎದೆಯ ಹಣತೆ’ ‘ಸಫೀರಾ’ ‘ಬಡವರ ಮಗಳು ಹೆಣ್ಣಲ್ಲ’ ಮತ್ತು ‘ಹೆಣ್ಣು ಹದ್ದಿನ ಸ್ವಯಂವರ’ ಎಂಬ ಕಥಾ ಸಂಕಲಗಳನ್ನು ರಚಿಸಿದ್ದಾರೆ. ನನಗೆ ಇವರ ‘ದೇವರು ಮತ್ತು ಅಪಘಾತ’ ‘ಬೆಂಕಿಮಳೆ ಕಥೆಗಳು ಬಹಳಷ್ಟು ಕಾಡಿದ ಕಥೆಗಳು. ಅವುಗಳನ್ನು ಇಂದಿಗೂ ಮರೆಯಲಾಗದು. ಇವರ ಎಲ್ಲ ಕಥೆಗಳು ಬಹಳ ಸಶಕ್ತವಾಗಿ ಮೂಡಿ ಬರುತ್ತವೆ. ಅವರು ತಮ್ಮ ಬೆಂಕಿಮಳೆ ಕೃತಿಯಲ್ಲಿ ತಮ್ಮ ಮಾತುಗಳಲ್ಲಿ, “ಪುರುಷ ಪ್ರಧಾನ ಸಮಾಜದ ಮೌಲ್ಯಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಪ್ರಪಂಚದಾದ್ಯಂತ ಧರ್ಮ ಮತ್ತು ದೇವರುಗಳನ್ನು ನಿರಾಯಾಸವಾಗಿ ಬಳಸಿಕೊಳ್ಳುವ ಹಲವಾರು ಚಾರಿತ್ರಿಕ ಸನ್ನಿವೇಶಗಳನ್ನು ನೋಡಿದ್ದೇವೆ. ಮಹಿಳೆ ನನ್ನ ಮುಖ್ಯ ಕಾಳಜಿ ಹೀಗಾಗಿ ನನ್ನ ಎಲ್ಲಾ ಕಥೆಗಳಲ್ಲೂ ಅವಳು ವಿರಾಜಿಸಿದ್ದಾಳೆ” ಎನ್ನುತ್ತಾರೆ.

Advertisements
banu mishtak

ಆರಂಭದಲ್ಲಿ ಮುಸ್ಲಿಂ ಸಮಾಜದಿಂದ ಬರೆಯಲು ಪ್ರಾರಂಭಿಸಿದ ಬರಹಗಾರರಿಗೆ ಬಹಳಷ್ಟು ಪ್ರಶ್ನೆಗಳು ಎದುರಾದವು. ಕೆಲವರು ‘ಇವರು ನಮ್ಮ ಸಮಾಜದೊಳಕಿನ ಹುಳುಕನ್ನು ಹೊರಗೆ ಹಾಕುವ ಮೂಲಕ ಸಮಾಜದ ಮಾನ ಕಳೆಯುತ್ತಿದ್ದಾರೆಂದು’ ಹೇಳಿದರೆ ಇನ್ನೂ ಕೆಲವರ ಕಣ್ಣಲ್ಲಿ ಪ್ರಗತಿಪರರೆನಿಸಿಕೊಂಡರು. ರಚನೆಯಲ್ಲಿ ತೊಡಗಿಕೊಳ್ಳುತ್ತಲೇ ಲೋಕ ಒಡ್ಡುವ ಸವಾಲುಗಳನ್ನು ಎದುರಿಸುತ್ತಲೇ, ಸವಾಲುಗಳನ್ನು ಅರ್ಥೈಸಿಕೊಳ್ಳಲು ಬಾನು ಆರಂಭಿಸುತ್ತಾರೆ. ಇದೆ ಕಾಲಘಟ್ಟದಲ್ಲಿ ಅವರ ‘ಬೆಂಕಿಮಳೆ’ ಕೃತಿ ರಚನೆಯಾದಾಗ ಸಮಾಜದವರಿಂದ ಫತ್ವಾ ಎದುರಿಸಬೇಕಾಯಿತು. ಫತ್ವಾ ಹಿಂಪಡೆಯಬೇಕಾದರೆ ಅವರ ಹಿತೈಷಿಗಳು ‘ಈ ಪತ್ರಕ್ಕೆ ಸಹಿ ಹಾಕಿ ಕೊಟ್ಟುಬಿಡಿ ಫತ್ವಾ ವಾಪಸು ಪಡೆಯಲಾಗುತ್ತದೆ’ ಎಂದು ಹೇಳುತ್ತಾರೆ.

ಅದರ ಒಕ್ಕಣಿಕೆ ಈ ರೀತಿಯಿತ್ತು.“ನಾನು ಇನ್ನು ಮೇಲೆ ಕಥೆಗಳನ್ನಾಗಲಿ, ಕಾದಂಬರಿಯನ್ನಾಗಲಿ ಪದ್ಯವನ್ನಾಗಲಿ, ಲೇಖನವನ್ನಾಗಲಿ, ಹನಿಗವನವಾಗಲಿ, ಪ್ರಬಂಧವನ್ನಾಗಲಿ ಏನನ್ನೂ ಏನನ್ನೂ ಒಂದಕ್ಷರವನ್ನಾಗಲಿ ಬರೆಯುವುದಿಲ್ಲವೆಂದು ಈ ಮೂಲಕ ಪ್ರಮಾಣ ಮಾಡಿ ಹೇಳುತ್ತೇನೆ” ಎಂದು ಬರೆಯಲಾಗಿತ್ತು. ಅದಕ್ಕೆ ಬಾನುರವರು ಸಹಿ ಹಾಕಿ ಕೊಡಬೇಕಿತ್ತು ಮತ್ತು ಬರವಣಿಗೆಯನ್ನು ನಿಲ್ಲಿಸಬೇಕಿತ್ತು. ಆಗ ಬಾನು ಸಿಟ್ಟಿನಿಂದ ಹೇಳುತ್ತಾರೆ. “ನೋಡಿ ಅವರುಗಳು ನನ್ನನ್ನು ಬಿ.ಎಂ. ರಸ್ತೆಯ ಸರ್ಕಲ್ಲಿನಲ್ಲಿ ನಿಲ್ಲಿಸಿ ನೇಣು ಹಾಕುವ ಸಂದರ್ಭದಲ್ಲಿ ಕೂಡಾ ಈ ಪತ್ರಕ್ಕೆ ನಾನು ಸಹಿ ಹಾಕುವುದಿಲ್ಲವೆಂದು ಅವರಿಗೆ ಹೇಳಿರಿ” ಎಂದು ಆ ಪತ್ರವನ್ನು ಹರಿದು ಚೂರು ಚೂರು ಮಾಡಿ ಅವರ ಕೈಗೆ ಕೊಡುತ್ತಾರೆ.

ಮುಸ್ಲಿಂ ಸಮಾಜದ ಹೆಣ್ಣುಮಕ್ಕಳು ಓದಬೇಕೇ ವಿನಃ ಬರೆಯುವಂತಿಲ್ಲ. ಬರಹ ಕಾಲಕ್ಕೆ ಎದುರು ಬರುವ ಭಯಂಕರ ಅಲೆಗಳ ವಿರುದ್ಧ ಈಜಬೇಕಾಗುತ್ತದೆ. ಅದಕ್ಕೆ ಬಹಳಷ್ಟು ಶಕ್ತಿ ಬೇಕಾಗುತ್ತದೆ. ಇಂತಹ ತಡೆಗೋಡೆಗಳನ್ನು ದಾಟಿ ಬಂದು ಸಾರಾ, ಬಾನು ಹಾಗೂ ನಾನು ಕೂಡ ಸಮಾಜವನ್ನು ಮೌಢ್ಯ , ಅನ್ಯಾಯಗಳ ವಿರುದ್ದ ಸತ್ಯದ ದರ್ಶನ ಮಾಡಿಸಬೇಕಾದ ಹೊಣೆಗಾರಿಕೆಯಿದೆ.

ಇವರ ಕರಿನಾಗರುಗಳು ಕಥೆ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ‘ಹಸೀನಾ’ ಚಲನಚಿತ್ರವಾಯಿತು. ಇದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಿತು. ಇವರ ಕಥೆಗಳು ದುರ್ಬಲರು ಅಸಹಾಯಕರಿಗೆ ಊರುಗೋಲುಗಳಾಗುವ ಶಕ್ತಿ ಪಡೆದಿವೆ. 2025ನೇ ಸಾಲಿನ ಅಂತರರಾಷ್ಟ್ರೀಯ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪಡೆದ ಎದೆಯ ಹಣತೆ (ಹಾರ್ಟ್‌ ಲ್ಯಾಂಪ್‌) ಕಥಾ ಸಂಕಲನದಲ್ಲಿ ಒಟ್ಟು 12 ಕಥೆಗಳಿವೆ. ಶಾಯಿಸ್ತಾ ಮಹಲಿನ ಕಲ್ಲು ಚಪ್ಪಡಿಗಳು, ಬೆಂಕಿಮಳೆ, ಕರಿನಾಗರುಗಳು, ಹೃದಯದ ತೀರ್ಪು, ಕೆಂಪು ಲುಂಗಿ, ಎದೆಯ ಹಣತೆ, ಒಮ್ಮೆ ಹೆಣ್ಣಾಗು ಪ್ರಭುವೆ, ಹೈ ಹೀಲ್ಡ್ ಶೂ, ಮೆಲುದನಿಗಳು, ಸ್ವರ್ಗವೆಂದರೆ, ಕಫನ್, ‘ಅರಬ್ಬಿ ಮೇಷ್ಟ್ರು ಮತ್ತು ಗೋಬಿಮಂಚೂರಿ’ ಕಥೆಗಳು ಬೂಕರ್ ಪ್ರಶಸ್ತಿ ಪಡೆಯುವ ಮೂಲಕ ವಿಶ್ವದ ಗಮನ ಸೆಳೆದಿದೆ. ಮೊಟ್ಟ ಮೊದಲ ಬಾರಿಗೆ ಮೂಲ ಕನ್ನಡದ ಬರಹಗಾರರಿಗೆ ದೊರೆತ ಪ್ರಶಸ್ತಿ ಇದಾಗಿದೆ. ಅದರಲ್ಲೂ ಮಹಿಳೆ, ಅದರಲ್ಲೂ ಮುಸ್ಲಿಂ ಮಹಿಳೆಗೆ ದೊರಕಿರುವುದು ಅಭಿಮಾನದ ಸಂಗತಿ. ಪಂಚರ್ ಹಾಕುವವರೆಂದು ಹೀಗಳೆಯುವವರು ಇದನ್ನು ಗಮನಿಸಬೇಕು. ಹಿಜಾಬಿನ ಹೆಸರಿನಿಂದ ಅವರನ್ನು ಹಿಂದಕ್ಕೆ ತಳ್ಳುವುದನ್ನು ಬಿಟ್ಟು ಅವರ ಸಾಧನೆಯನ್ನು ಇಡೀ ಲೋಕವೇ ಬೆರಗುಗಣ್ಣಿನಿಂದ ನೋಡುತ್ತಿದೆ.

ಇದನ್ನೂ ಓದಿ ಬಾನು ಮುಷ್ತಾಕ್‌ ಬರಹಕ್ಕೆ ಇನ್ನಾದರೂ ʼಸಾಹಿತ್ಯಕ ಮನ್ನಣೆʼ ಸಿಗಲಿ

ಈ ಸಂತೋಷದ ಸಂದರ್ಭದಲ್ಲಿ ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿಯವರು ಬಾನು ಮುಷ್ತಾಕ್ ಅವರಿಗೆ ಅಭಿನಂದಿಸುವ ಮೂಲಕ ಸಂತೋಷವನ್ನು ಹಂಚಿಕೊಂಡಿದ್ದಾರೆ. ಆದರೆ ದೇಶಕ್ಕೆ ದೊರೆತ ಈ ಗೌರವಕ್ಕೆ ದೇಶದ ಪ್ರಧಾನಿಯವರು ಇಲ್ಲಿಯವರೆಗೆ ಅಭಿನಂದಿಸದೇ ಇರುವುದು ಶೋಚನೀಯ!. ಇತ್ತೀಚೆಗೆ ಭಯೋತ್ಪಾದಕರ ಅಡ್ಡೆಗಳ ಮೇಲೆ “ಆಪರೇಷನ್ ಸಿಂಧೂರ” ದಾಳಿ ಮಾಡಿದ ಸಿಂಹಿಣಿ ಕರ್ನಲ್ ಸೋಫಿಯಾ ಖುರೇಷಿಯವರನ್ನು ಇಡೀ ದೇಶವೇ ಕೊಂಡಾಡಿತು. ಆದರೆ ಮಧ್ಯಪ್ರದೇಶದ ಬಿಜೆಪಿ ಸಂಸದ ಮತ್ತು ಮಂತ್ರಿಯಾದ ವಿಜಯ್‌ ಶಾ ಎಂಬ ವ್ಯಕ್ತಿ ಕರ್ನಲ್ ಸೋಫಿಯಾ ಅವರಿಗೆ ‘ಭಯೋತ್ಪಾಕರ ಸೋದರಿ’ ಎಂದು ಹೇಳುತ್ತಾರೆ. ಕರ್ನಲ್ ಸೋಫಿಯಾ ದೇಶವನ್ನು ರಕ್ಷಿಸಿದರೆ, ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿಯವರು ಕರ್ನಾಟಕಕ್ಕೆ ಗೌರವ ತಂದು ಕೊಟ್ಟರು. ಅವರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯ. ಮಾನ್ಯ ಕರ್ನಾಟಕದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಮಂತ್ರಿಗಳಾದ ಜಮೀರ ಅಹ್ಮದ್, ಬರಗೂರು ರಾಮಚಂದ್ರಪ್ಪ ಹೀಗೆ ಇನ್ನೂ ಹಲವಾರು ಜನ ಅವರನ್ನು ಅಭಿನಂದಿಸಿದ್ದಾರೆ. ಅವರು ಭಾರತಕ್ಕೆ ಬಂದಾಗ ಅವರನ್ನು ಕರೆದು ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕರ್ನಾಟಕದ ಹೆಮ್ಮೆಯ ಪುತ್ರಿಯರಿಬ್ಬರಿಗೂ ನನ್ನ ಸಲಾಂ.

k shareefa
ಡಾ ಕೆ ಷರೀಫಾ
+ posts

ಬಂಡಾಯ ಸಾಹಿತಿ, ಕವಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಕೆ ಷರೀಫಾ
ಡಾ ಕೆ ಷರೀಫಾ
ಬಂಡಾಯ ಸಾಹಿತಿ, ಕವಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X