ಇತ್ತೀಚಿನ ದಿನಗಳಲ್ಲಿ ಧರ್ಮ ಎಂಬ ಶಬ್ಧಕ್ಕೆ ಅರ್ಥವೇ ಇಲ್ಲವೇ? ಎಂಬ ಪರಿಸ್ಥಿತಿ ಬಂದಂತಿದೆ. ನಾವು ಧರ್ಮದ ವ್ಯಾಖ್ಯಾನ ಮಾಡುವಾಗ ಮನುಷ್ಯ ನಿರ್ಮಿತ ಹಾಗೂ ನಮ್ಮ ಮನೆಗಳಲ್ಲಿ ಆಚರಿಸುವ ಆಚರಣೆಯ ಪಥವನ್ನೇ ಧರ್ಮ ಎಂದುಕೊಂಡಿದ್ದೇವೆ. ಆ ಧರ್ಮಗಳು ಮನುಷ್ಯನನ್ನು ತಿದ್ದುವುದಕ್ಕಾಗಿಯೇ ಬಂದ ಧರ್ಮಗಳೆಂಬುದರ ಅರಿವು ನಮ್ಮಲ್ಲಿ ಬರಬೇಕಿದೆ.
ಧರ್ಮ ಮೊದಲೊ ಅಥವಾ ಮನುಷ್ಯ ಮೊದಲೊ ಎಂಬ ವಿಚಾರಕ್ಕೆ ಇಳಿದಾಗ; ಮನುಷ್ಯನೇ ಮೊದಲು ಎಂಬ ಉತ್ತರ ಸಿಗುತ್ತದೆ. ಆದರೂ ಮನುಷ್ಯ ತನ್ನನ್ನೇ ಮರೆತು ಧರ್ಮಕ್ಕೆ ಅಂಟಿಕೊಂಡಿರುವುದನ್ನು ನೋಡಿದರೆ; ಹನ್ನೆರಡನೇ ಶತಮಾನದಲ್ಲಿ ‘ದಯವೇ ಧರ್ಮದ ಮೂಲವಯ್ಯಾ’ ಎಂದು ಸಾರಿದ ಬಸವಾದಿ ಶರಣರು ನಮ್ಮ ನೆನಪಿಗೆ ಬರುತ್ತಾರೆ.
ʼಅದೆಷ್ಟು ವಿಷಮ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸಮಾಜದಲ್ಲಿ ಅನ್ಯಾಯ, ಅನಾಚಾರ ರಾರಾಜಿಸುತ್ತಿದೆ. ಕೋಮುವಾದದ ಹೆಸರಿನಲ್ಲಿ ಅಮಾಯಕರ ಕೊಲೆಗಳಾಗುತ್ತಿವೆ. ಇವುಗಳನ್ನು ಪ್ರಶ್ನಿಸಲೂ ಆಗದೇ; ನಿಸ್ಸಹಾಯಕತೆಯಿಂದ ಬದುಕು ಸಾಗಿಸುತ್ತಿದ್ದೇವೆ. ಎಲ್ಲಿ ನಾವು ಸತ್ಯ ಹೇಳಿದರೆ ಅಥವಾ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ; ನಮ್ಮನ್ನು ಕೊಲ್ಲುವರೆಂಬ ಭಯದಲ್ಲಿಯೇ ಜೀವಿಸುತ್ತಿದ್ದೇವೆ. ಯಾರೋ ಕಾಣದ ವ್ಯಕ್ತಿಯ ಮತ್ತು ಯಾವುದೋ ಕಾಣದ ಶಕ್ತಿಯ ಷಡ್ಯಂತ್ರಕ್ಕೆ ಬಲಿಯಾಗಿ ಅವರ ಕೈಗೊಂಬೆಗಳಾಗಿದ್ದೇವೆ ಎಂಬ ಪ್ರಶ್ನೆ ಕಾಡುತ್ತದೆ.
ಅಜ್ಞಾನವೆಂಬ ಕತ್ತಲು ನಮ್ಮಲ್ಲಿ ಆವರಿಸಿ ಧರ್ಮದ ನಿಜಾರ್ಥವನ್ನು ತಿಳಿಯುವ ಪ್ರಯತ್ನಕ್ಕೆ ನಾವು ಮುಂದಾಗುತ್ತಿಲ್ಲ ಎಂಬುದು ವಿಷಾಧದ ಸಂಗತಿಯಾಗಿದೆ. ಒಂದು ಧರ್ಮಿಯರು ಮತ್ತೊಂದು ಧರ್ಮಿಯರ ಮೇಲೆ ಎಸಗುತ್ತಿರುವ ದೌರ್ಜನ್ಯ, ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಅಟ್ಟಹಾಸಗಳಿಗೆ ಬಸವಾದಿ ಶರಣರು ಹನ್ನೆರಡನೆಯ ಶತಮಾನದಲ್ಲಿಯೇ ತಿಲಾಂಜಲಿ ಇಟ್ಟಿದ್ದರು.
ಒಬ್ಬರು ಮತ್ತೊಬ್ಬರನ್ನು ತಿಳಿದು ಬದುಕಬೇಕೆ ಹೊರತು ತುಳಿದು ಬದುಕಬಾರದು. ಎಲ್ಲ ಧರ್ಮಗಳೂ ಮನುಷ್ಯ ಧರ್ಮವೇ ಶ್ರೇಷ್ಠವೆಂದು ಸಾರುತ್ತವೆ. ಅದನ್ನು ಅರ್ಥೈಸಿಕೊಳ್ಳದ ನಾವುಗಳು ಧರ್ಮದ ಸೋಗಿನಲ್ಲಿ ಅಧರ್ಮದ ಹಾದಿ ಹಿಡಿದಿದ್ದೇವೆ ಎಂದರೂ ತಪ್ಪಾಗದು. ‘ಕೊಲ್ಲೆನಯ್ಯಾ ಪ್ರಾಣಿಗಳ’ ಎನ್ನುವ ಸಾಲು ಮನುಷ್ಯನನ್ನು ಹೊರತು ಪಡಿಸಿ ಪ್ರಾಣಿಗಳಿಗೆ ಮಾತ್ರ ಸೀಮಿತವಾಗಿದೆ ಎನ್ನಲಾಗದು. ಧರ್ಮಗಳು, ಆಚಾರ-ವಿಚಾರಗಳು ಇರುವುದು ಮನುಷ್ಯರಿಗಾಗಿಯೇ ಹೊರತು ಮೂಖ ಪ್ರಾಣಿಗಳಿಗಲ್ಲ. ‘ದಯವಿರಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’ ಎಂದು ಬಸವಣ್ಣ ಹೇಳುತ್ತಾರೆ. ಕೇವಲ ನಾವು ಪ್ರಾಣಿ, ಪಕ್ಷಿಗಳಲ್ಲಿ ಮಾತ್ರ ಕನಿಕರ ತೋರಿಸಿದರೆ ಸಾಲದು. ಶರಣರು ಸಕಲ ಜೀವಾತ್ಮರಿಗೂ ಲೇಸು ಬಯಸಿದವರು ಎಂಬುದನ್ನು ಮರೆಯಬಾರದು.
ಕಳೆದ 2022ರಲ್ಲಿ ಧಾರವಾಡದಲ್ಲಿ ನಡೆದ ಕಲ್ಲಂಗಡಿ ಹೊಡೆದು ಹಾಕಿದ ಪ್ರಕರಣವು ‘ಮಾನವೀಯತೆಗಿಂತ ಧರ್ಮ ದೊಡ್ಡದೇ?’ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಇಂತಹ ಅನೇಕ ಘಟನೆಗಳು ನಮ್ಮ ಕಣ್ಣು ಮುಂದೆ ಹಾದು ಹೋಗುತ್ತವೆ. ಸ್ವಧರ್ಮವನ್ನು ಪ್ರೀತಿಸುತ್ತಾ ಪರಧರ್ಮವನ್ನು ಗೌರವಿಸುತ್ತಾ ನಡೆಯುವವರೆಗೂ ಇಂತಹ ಅಮಾನವೀಯ ಘಟನೆಗಳಿಗೆ ಕೊನೆ ಸಿಗುವುದಿಲ್ಲ. ಬಸವ ಪೂರ್ವದಲ್ಲಿ ಧಾರ್ಮಿಕತೆಯ ಹೆಸರಿನಲ್ಲಿ ಅನೇಕ ದೌರ್ಜನ್ಯಗಳು ನಡೆದವು. ದೇವರು-ಧರ್ಮವು ಭೂಸುರರು ಎನಿಸಿಕೊಂಡವರ ಅಡಿಯಲ್ಲಿದ್ದವು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಮುದಾಯಕ್ಕೆ ದೇವರು ಎಂಬುವ ಶಬ್ದವನ್ನು ಕೇಳಲಾರದ ಪರಿಸ್ಥಿತಿ ಇತ್ತು. ಆಗ ಬಸವಣ್ಣನವರು ಇವನಾರವ ಎನ್ನದೆ ಇವನಮ್ಮವ ಎಂದು ಎಲ್ಲರನ್ನೂ ಅಪ್ಪಿಕೊಂಡರು. ಅನುಭವ ಮಂಟಪದಲ್ಲಿ ಎಲ್ಲ ಸಮುದಾಯಗಳಿಗೂ, ಮಹಿಳೆಯರಿಗೂ, ದೀನರಿಗೂ, ದಮನಿತರಿಗೂ ಹೀಗೆ ಎಲ್ಲರಿಗೂ ಸಮಾನವಾದ ಪ್ರವೇಶ ನೀಡಲಾಗಿತ್ತು.

ಯಾವ ಧರ್ಮವು ಮಾನವೀಯತೆಯ ವಿರುದ್ಧ ಇರುತ್ತದೆಯೋ ಅದು ನಾಮಮಾತ್ರಕ್ಕೆ ಧರ್ಮ ಎಂದೆನಿಸಿಕೊಳ್ಳುತ್ತದೆಯೇ ಹೊರತು; ನಿಜವಾಗಿಯೂ ಅದು ಧರ್ಮವಲ್ಲ. ಧರ್ಮವೆಂದರೆ ದಯೆ, ಕರುಣೆ, ಪರಸ್ಪರ ಪ್ರೀತಿ, ಸಾಮರಸ್ಯ, ಮಾನವೀಯತೆ ಮನೆ ಮಾಡಿಕೊಂಡಿರಬೇಕು. ಉತ್ತಮರು ಎನಿಸಿಕೊಂಡವರು ಮಾಡುತ್ತಿದ್ದ ಹೋಮ ಹವನಾದಿಗಳನ್ನು ನೋಡಲೂ ಅವಕಾಶವಿಲ್ಲದ ವಾತಾವರಣವಿತ್ತು. ದೇವರ ಹೆಸರನ್ನು ತಳ ಸಮುದಾಯದವರು ಕೇಳಿಸಿಕೊಂಡರೆ ಅವರ ಕಿವಿಯಲ್ಲಿ ಕಾದ ಸೀಸವನ್ನು ಸುರಿಯುವ ಕೆಟ್ಟ ಪದ್ಧತಿಯೊಂದು ಜಾರಿಯಲ್ಲಿತ್ತು. ಬಸವಣ್ಣ ಅದಕ್ಕೆಲ್ಲ ಕಡಿವಾಣವನ್ನು ಹಾಕಿ ದೇವರು ಮತ್ತು ಧರ್ಮವೂ ಯಾರ ಸ್ವತ್ತು ಅಲ್ಲ ಎಂದು ಎಲ್ಲರ ಕೈಯಲ್ಲಿ ದೇವರನ್ನೇ ತಂದುಕೊಟ್ಟರು. ಕೇವಲ ಅಡುಗೆ ಮನೆ ಮತ್ತು ಹೆರಿಗೆ ಕೋಣೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯನ್ನು ಸಮಾಜದ ಮುನ್ನೆಲೆಗೆ ತಂದು, ಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಬಲೆ ಎಂದು ಸಾರಿ, ‘ಅಪ್ಪನು ನಮ್ಮ ಮಾದಾರ ಚೆನ್ನಯ್ಯ’ ಎಂದು ಹೇಳುತ್ತಾ ಕೆಳಜಾತೀಕರಣಕ್ಕೆ ಒಳಗಾದರು.
ಲಿಂಗಾಯತ ಧರ್ಮ, ಬಸವಧರ್ಮ, ವಚನ ಧರ್ಮ, ಶರಣ ಧರ್ಮ ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಈ ಧರ್ಮವು ಮಹಾಮಾನವತಾ ಧರ್ಮವಾಗಿದೆ. ಲಿಂಗವಂತ ಧರ್ಮದಲ್ಲಿ ಮಾನವೀಯತೆಯೇ ಮುಖ್ಯವಾಗಿ ಮನೆಮಾಡಿದೆ. ಈ ಧರ್ಮವು ನಾಯಿ ನರಿಗಳಿಗಿಂತ ಕೀಳಾಗಿ ಕಾಣುತ್ತಿದ್ದ ಮನುಷ್ಯರಿಗೆ ಒಂದು ಘನತೆಯನ್ನು ತಂದುಕೊಟ್ಟಿದೆ. ನೊಂದವರ ನೋವಿಗೆ ಧ್ವನಿಯಾಗಿದೆ. ‘ಕುಲವನರಸುವರೆ ಶರಣರಲ್ಲಿ ಜಾತಿ ಸಂಕರವಾದ ಬಳಿಕ’ ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. ಸಮಗಾರ ಹರಳಯ್ಯನವರು ಮತ್ತು ಬ್ರಾಹ್ಮಣ ಮಧುವರಸರು ಪರಸ್ಪರ ಒಪ್ಪಿಕೊಂಡು ಲಿಂಗಾಯತರಾಗುವ ಮೂಲಕ ತಮ್ಮ ಜಾತಿಗಳನ್ನು ನಿರ್ನಾಮ ಮಾಡಿ ಎಲ್ಲ ಮನುಷ್ಯರು ಒಂದೇ ಎಂಬುದನ್ನು ತೋರಿಸಿಕೊಟ್ಟರು. ಇಲ್ಲಿ ಅನಾಚಾರಿ ಅಥವಾ ದುರಾಚಾರಿ ಸದಾಚಾರಿ ಆಗಬಹುದು. ಕಳ್ಳನು ಮನ ಪರಿವರ್ತನೆಯಿಂದ ಶರಣನಾಗಬಹುದು. ವೇಶ್ಯೆಯರು ಕೂಡ ಮನಃಪರಿವರ್ತನೆ ಮಾಡಿಕೊಂಡು ಶರಣೆಯರಾಗಿ ಬದುಕಿದ ಉದಾಹರಣೆಗಳು ಸಿಗುತ್ತವೆ.
‘ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ’ ‘ಯಾರೂ ಮೇಲಲ್ಲ ಯಾರೂ ಕೇಳಲ್ಲ’ ಯಾವ ಕಾಯಕದಲ್ಲಿಯೂ ಮೇಲು ಕೀಳೆಂಬ ಭಾವ ಮೂಡಗೊಡದೆ ಶರಣರು ಕಾಯಕದಲ್ಲಿಯೇ ಕೈಲಾಸವನ್ನು ಕಂಡರು. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಅನಾಚಾರಗಳಿಗೆ ಕಡಿವಾಣ ಹಾಕಿದರು. ಧರ್ಮದ ಸೋಗಿನಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ ದುರಾಚಾರಿಗಳನ್ನು ಮಟ್ಟ ಹಾಕಿದರು. ‘ಕಾಯಕವಾವುದೆಂದು ಕೇಳ್ದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ರಾಣಿ ನಿಮ್ಮ ರಾಣಿವಾಸದಾಣೆ’ ಎಂದು ಎಲ್ಲ ವೃತ್ತಿಗಳನ್ನು ಗೌರವಿಸಿದರು. ಎಲ್ಲ ಕಾಯಕಗಳ ಶರಣರನ್ನು ಸಮಾನವಾಗಿ ಕಂಡರು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವರ್ಣಗಳ ವರ್ಗೀಕರಣವನ್ನು ತಿರಸ್ಕರಿಸಿ, ಒಬ್ಬನೇ ದೇವರು, ಒಂದೇ ಜಗತ್ತು, ಒಂದೇ ಮಾನವ ಕುಲ ಎಂದು ಸಾರುವ ಮೂಲಕ ಮಾನವ ಕುಲವನ್ನು ಒಂದು ಮಾಡುವ ಕ್ರಮಬದ್ಧ ದಾರಿಯನ್ನು ತೋರಿಸಿದರು.
ಬಸವಣ್ಣನವರ ಮನೆಗೆ ಕಳ್ಳನೊಬ್ಬ ಬಂದರೆ ಕೂಡಲಸಂಗಮದೇವನಲ್ಲದೆ ಮತ್ತಾರೂ ಅಲ್ಲ ಎಂದು ಮನಃಪರಿವರ್ತಿಸಿ ಶರಣಾಗುವಂತೆ ಮಾಡುತ್ತಾರೆ. ತಮ್ಮ ದೇವರ ನಾಮವನ್ನು ಕೇಳಿದನೆಂದು ತಳ ಸಮುದಾಯದ ವ್ಯಕ್ತಿಯನ್ನು ಉಳ್ಳವರು ಥಳಿಸಿದಾಗ ಬಸವಣ್ಣ ಬಂದು ಕೈ ಹಿಡಿದು ಎತ್ತಿಕೊಳ್ಳುತ್ತಾರೆ. ದೇವರನ್ನು ಹುಡುಕಿಕೊಂಡು ನೀವು ಎಲ್ಲಿಗೂ ಹೋಗುವುದು ಬೇಡ ನಿಮ್ಮಲ್ಲಿಯೇ ದೇವರನ್ನು ಹುಡುಕಿಕೊಳ್ಳಿರಿ ಎಂದು ಇಷ್ಟಲಿಂಗವನ್ನು ಕೈಗೆ ಕೊಟ್ಟರು. ಕೆಳ ಜಾತಿಯ ಮನುಷ್ಯರು ಉತ್ತಮರ ಬೀದಿಯಲ್ಲಿ ಬರಬೇಕಾದರೆ ಅವರ ನೆರಳು ಕೂಡ ಬೀಳದಂತೆ, ಅವರ ಉಗುಳು ಉಗುಳದಂತೆ, ಅವರ ಶಬ್ದವು ಉತ್ತಮರಿಗೆ ಕೇಳಿಸದಂತೆ ಬರಬೇಕಾಗಿತ್ತು. ಅಂತಹ ಅನಿಷ್ಟಗಳ ವಿರುದ್ಧ ಬಸವಾದಿ ಶರಣರು ಕಿಡಿಕಾರಿದರು.
‘ಮೊಲೆ ಮುಡಿ ಬಂದಡೆ ಹೆಣ್ಣಂಬರು, ಗಡ್ಡ ಮೀಸೆ ಬಂದಡೆ ಗಂಡೆಂಬರು, ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ ರಾಮನಾಥ’ ಎನ್ನುವ ಮೂಲಕ ದೇವರ ದೃಷ್ಟಿಯಲ್ಲಿ ಹೆಣ್ಣು-ಗಂಡು ಇಬ್ಬರೂ ಒಂದೇ ಎಂದು ಸಾರಿದರು. ಮಹಿಳೆಯು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಹೇಳಿದ ಮನುಸ್ಮತಿಯ ಮನುವಾದಿ ವ್ಯವಸ್ಥೆಯನ್ನು ಶರಣರು ಖಡಾ ಖಂಡಿತವಾಗಿ ತಿರಸ್ಕರಿಸುತ್ತಾರೆ.
ಮಾನವ ಮಾನವರಿಂದಲೇ ಮಾನವರ ಉದ್ಧಾರವಾಗುತ್ತದೆ. ಹೀಗಾಗಿ ಎಲ್ಲಕ್ಕಿಂತ ಮಾನವ ಧರ್ಮವೇ ಶ್ರೇಷ್ಠವಾಗುತ್ತದೆ. ಮನುಷ್ಯ ಧರ್ಮಕ್ಕಿಂತ ಶ್ರೇಷ್ಠ ಧರ್ಮ ಯಾವುದಿದೆ? ಎಂಬ ಪ್ರಶ್ನೆಗೆ ನಮ್ಮಲ್ಲಿ ಉತ್ತರವೇ ಸಿಗುವುದಿಲ್ಲ. ತುಳಿತಕ್ಕೊಳಗಾದವರ ಉದ್ಧಾರವೇ ಬಸವಣ್ಣನವರ ಏಕ ಮಾತ್ರ ಗುರಿಯಾಗಿತ್ತು. ಅಸ್ಪೃಶ್ಯರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ ಹೊಸ ಚಿಂತನೆಯ ಮಾನವೀಯ ಧರ್ಮವನ್ನು ಪರಿಚಯಿಸಿದರು. ಅಂತಹ ಮಾನವೀಯತೆಯ ಪರವಾಗಿರುವ ಮತ್ತು ಸರ್ವ ಸಮಾನತೆ ಸಾರುವ ವಚನಗಳು ಬೆಂಕಿಗೆ ಆಹುತಿಯಾದವು. ಅನೇಕ ಶರಣರ ಕಗ್ಗೊಲೆಯಾಯಿತು. ಹರಳಯ್ಯ ಮಧುವರಸರಿಗೆ ಎಳೆಹೂಟೆ ಶಿಕ್ಷೆಯಾಯಿತು. ವಿವಿಧ ಪ್ರಾಂತಗಳಿಂದ ಅನ್ಯ ದೇಶಗಳಿಂದ ವಿವಿಧ ನಾಡುಗಳಿಂದ ಕಲ್ಯಾಣಕ್ಕೆ ಆಗಮಿಸಿದ ಅನೇಕ ಶರಣರು ಕನ್ನಡವನ್ನೇ ತಮ್ಮ ವಚನಗಳ ಭಾಷೆಯನ್ನಾಗಿ ಬಳಸಿಕೊಂಡರು. ಶರಣರ ಪ್ರಭಾವಕ್ಕೆ ಒಳಗಾಗಿ ಕಾಶ್ಮೀರದ ಅರಸನಾಗಿದ್ದ ಮಹದೇವ ಭೂಪಾಲ ಕಲ್ಯಾಣದಲ್ಲಿ ಸಾಮಾನ್ಯರಂತೆ ಬದುಕಿ ಬಾಳುತ್ತಾರೆ.
ಒಟ್ಟಾರೆಯಾಗಿ ಬಸವಾದಿ ಶರಣರ ವಚನಗಳು ಮಾನವೀಯ ಮೌಲ್ಯಗಳಿಂದ ರಚಿಸಲ್ಪಟ್ಟಿವೆ. ದೇವರು ಧರ್ಮಕ್ಕಿಂತ ಮೊದಲು ಮಾನವೀಯತೆಯೇ ಹಿರಿದಾದ ಧರ್ಮವೆಂದು ಅವರ ಸಂದೇಶಗಳು ಸಾರುತ್ತವೆ. ಜಾತಿ ಧರ್ಮಗಳ ಹೆಸರಿನಲ್ಲಿ ಮನುಷ್ಯ ಮನುಷ್ಯನ ಮೇಲೆ ಅಮಾನವೀಯವಾಗಿ ನಡೆದುಕೊಳ್ಳುವ ನಡೆಯನ್ನು ಬಸವಾದಿ ಶರಣರು ಖಂಡಿಸುತ್ತಾರೆ. ‘ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ ಜಲವೊಂದೇ ಶೌಚಾಚಮನಕ್ಕೆ ಕುಲವೊಂದೇ ತನ್ನ ತಾನರಿದವಂಗೆ’ ಎಂದು ಹೇಳುವ ಮೂಲಕ ಮಾನವತಾ ಧರ್ಮದ ಬಗ್ಗೆ ಅರುಹಿದ್ದಾರೆ.
ಇದನ್ನೂ ಓದಿ : 2027ರಲ್ಲಿ ಎಸ್ಪಿ ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಲಿದೆ, ಕಾಂಗ್ರೆಸ್ ನಮ್ಮೊಂದಿಗಿರುತ್ತದೆ: ಅಖಿಲೇಶ್
ಇವತ್ತಿನ ಯುದ್ಧದ ಸಮಯದಲ್ಲಿ ಅವರ ಸಂದೇಶಗಳು ಒಂದಷ್ಟು ಶಾಂತಿಯನ್ನು ತಂದುಕೊಡುತ್ತವೆ. ಕೇವಲ ಘರ್ಷಣೆ ಮಾತ್ರದಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಒಬ್ಬರನ್ನೊಬ್ಬರು ಹೊಡೆದಾಡಿಕೊಂಡು ಸಾಯುವುದರಲ್ಲಿ ಕೊನೆಗೆ ಏನೂ ಉಳಿಯುವುದಿಲ್ಲ. ಶರಣರ ಮಾನವೀಯ ಮೌಲ್ಯಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ಮಾತ್ರ ಸಮಾಜಕ್ಕೆ ಅಂಟಿಕೊಂಡಿರುವ ಜಾತಿ, ದ್ವೇಷ, ಅಸೂಯೆ, ಅಜ್ಞಾನ, ಅಂಧಕಾರ, ಕೋಮುವಾದ, ಅಸಮಾನತೆ, ಅಮಾನವೀಯತೆ ಎಂಬಿತ್ಯಾದಿ ಪಿಡುಗುಗಳಿಗೆ ಕೊನೆ ಹೇಳಬಹುದು.





