ಜಾಗತಿಕ ತಾಪಮಾನ ಏರಿಕೆಯಿಂದ ಭೂಮಿಯ ಪರಿಸರ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತಿದ್ದು, ಭವಿಷ್ಯದಲ್ಲಿ ಆಹಾರ ಉತ್ಪಾದನೆ, ನೀರಿನ ಲಭ್ಯತೆ ಹಾಗೂ ಸೂಕ್ಷ್ಮಾಣು ಜೀವಿಗಳ ಅಸ್ತಿತ್ವವೇ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಲೇಖಕ ಹಾಗೂ ಕೃಷಿಕ ಟಿ.ಜಿ.ಎಸ್. ಅವಿನಾಶ್ ಎಚ್ಚರಿಸಿದರು.
ಮೈಸೂರಿನ ಬನವಾಸಿ ತೋಟದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಆಯೋಜಿಸಿದ್ದ ‘ಪದಾಧಿಕಾರಿಗಳಿಗೆ ಒಂದು ದಿನದ ಅಧ್ಯಯನ ಶಿಬಿರ’ದಲ್ಲಿ ‘ಜಾಗತಿಕ ತಾಪಮಾನ’ ಕುರಿತು ಮಾತನಾಡಿದ ಅವರು, ಹವಾಮಾನದಲ್ಲಿ ಆಗುತ್ತಿರುವ ತೀವ್ರ ಬದಲಾವಣೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ವಾತಾವರಣಕ್ಕೆ ಸೇರುತ್ತಿರುವ ಶಾಖವರ್ಧಕ ಅನಿಲಗಳಿಂದ ಭೂಮಿಯ ಉಷ್ಣತೆಯನ್ನು ಹೆಚ್ಚಿಸುವ ಪ್ರಕ್ರಿಯೆ ತೀವ್ರಗೊಂಡಿದೆ. ವಿಜ್ಞಾನಿಗಳು ಇಂತಹ ಶಾಖವರ್ಧಕ ಅನಿಲಗಳ ಪೈಕಿ 17 ಅನಿಲಗಳನ್ನು ಗುರುತಿಸಿದ್ದಾರೆ. ಇವುಗಳ ಹೆಚ್ಚಳದಿಂದ ಭೂಮಿಯ ಉಷ್ಣಾಂಶ ನಿರಂತರವಾಗಿ ಏರುತ್ತಿದ್ದು, ‘ಭೂಮಿಗೆ ಜ್ವರ ಬಂದಿದೆ’ ಎಂದು ಹೇಳಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಭೂಮಿಗೆ ಬಂದಿರುವ ಈ ಜ್ವರವನ್ನು ಕಡಿಮೆ ಮಾಡುವ ಶಕ್ತಿ ಯಾರೊಬ್ಬರ ಕೈಯಲ್ಲೂ ಇಲ್ಲ. ಆದರೆ ಭೂಮಿಗೆ ಹಾನಿ ಮಾಡುವಲ್ಲಿ ಮನುಷ್ಯನ ಕೊಡುಗೆ ಅಪಾರವಾಗಿದೆ. ಪರಿಸರದ ಮೇಲೆ ನಿರಂತರವಾಗಿ ನಡೆಸುತ್ತಿರುವ ಹಸ್ತಕ್ಷೇಪದಿಂದ ಪ್ರಕೃತಿಯ ಸಮತೋಲನವೇ ಹದಗೆಡುತ್ತಿದೆ ಎಂದು ಅವರು ವಿಷಾದಿಸಿದರು.
ಆಹಾರ ಉತ್ಪಾದನೆಗೂ ಎದುರಾಗಲಿದೆ ಅಪಾಯ
ತಾಪಮಾನ ಇದೇ ರೀತಿಯಲ್ಲಿ ಏರುತ್ತಾ ಹೋದರೆ ಭವಿಷ್ಯದಲ್ಲಿ ಕೃಷಿಯ ಮೇಲೆಯೂ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ. ಅತಿಯಾದ ತಾಪಮಾನದಲ್ಲಿ ಎಲ್ಲ ರೀತಿಯ ಆಹಾರ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ. ನೀರು ಹೆಚ್ಚಾಗಿ ಆವಿಯಾಗುತ್ತಾ ಹೋದರೆ ನೀರಿನ ಕೊರತೆಯೂ ಮತ್ತಷ್ಟು ತೀವ್ರವಾಗಲಿದೆ ಎಂದು ಅವಿನಾಶ್ ಎಚ್ಚರಿಸಿದರು.
ಮಳೆ ಬೀಳುವ ಪ್ರದೇಶಗಳಲ್ಲಿ ಮಳೆಯ ಕೊರತೆ, ಮಳೆ ಅಗತ್ಯವಿಲ್ಲದ ಸಂದರ್ಭಗಳಲ್ಲಿ ಅತಿಯಾದ ಮಳೆ ಸೇರಿದಂತೆ ಮಳೆಯ ಸ್ವರೂಪದಲ್ಲಿಯೇ ದೊಡ್ಡ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ. ಹವಾಮಾನ ವೈಪರೀತ್ಯದಿಂದ ಕೃಷಿ ವ್ಯವಸ್ಥೆ ಮಾತ್ರವಲ್ಲದೆ ಜನರ ದೈನಂದಿನ ಬದುಕಿನ ಮೇಲೂ ಪರಿಣಾಮ ಉಂಟಾಗಲಿದೆ ಎಂದರು.
ಸೂಕ್ಷ್ಮಾಣು ಜೀವಿಗಳಿಗೂ ಅಪಾಯ
ಜಾಗತಿಕ ತಾಪಮಾನ ಏರಿಕೆ ಕೇವಲ ಮನುಷ್ಯನ ಬದುಕಿನ ಸಮಸ್ಯೆಯಲ್ಲ. ಮಣ್ಣಿನ ಫಲವತ್ತತೆ ಹಾಗೂ ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡುವ ಸೂಕ್ಷ್ಮಾಣು ಜೀವಿಗಳ ಸಂತತಿಗೂ ಇದು ಮಾರಕವಾಗಬಹುದು. ಇವುಗಳ ಅಸ್ತಿತ್ವಕ್ಕೆ ಧಕ್ಕೆಯಾದರೆ ಕೃಷಿ ಮತ್ತು ಆಹಾರ ಸರಪಳಿಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ 70-80 ವರ್ಷಗಳಲ್ಲಿ ಭೂಮಿಯ ಪರಿಸರ ವ್ಯವಸ್ಥೆ ಯಾವ ಸ್ಥಿತಿಗೆ ತಲುಪಲಿದೆ ಎಂಬುದನ್ನು ಊಹಿಸುವುದೇ ಕಷ್ಟ ಎಂದು ವಿಜ್ಞಾನಿಗಳ ಎಚ್ಚರಿಕೆಗಳನ್ನು ಉಲ್ಲೇಖಿಸಿದರು.
ದೈನಂದಿನ ಬಳಕೆಯಲ್ಲೂ ಪರಿಸರ ಕಾಳಜಿ ಅಗತ್ಯ
ನಾವು ಪ್ರತಿನಿತ್ಯ ಬಳಸುವ ವಸ್ತುಗಳೂ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ. ಪೇಪರ್ ಬಳಕೆಯಿಂದ ಹಿಡಿದು ನಮ್ಮ ಅಗತ್ಯಗಳಿಗಾಗಿ ಮರಗಳನ್ನು ಕಡಿಯುವವರೆಗೂ ಪ್ರತಿಯೊಂದು ಚಟುವಟಿಕೆಯಲ್ಲೂ ಪರಿಸರದ ಮೇಲೆ ಆಗುತ್ತಿರುವ ಪರಿಣಾಮವನ್ನು ಅರಿತುಕೊಳ್ಳಬೇಕಿದೆ.
ಪ್ರಕೃತಿಯ ಸಂಪನ್ಮೂಲಗಳನ್ನು ಅಗತ್ಯಕ್ಕೆ ತಕ್ಕಂತೆ, ಮಿತವಾಗಿ ಬಳಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅತಿಯಾದ ಬಳಕೆ ಹಾಗೂ ವ್ಯರ್ಥ ಬಳಕೆಯನ್ನು ನಿಯಂತ್ರಿಸದಿದ್ದರೆ ಮುಂದಿನ ಪೀಳಿಗೆಗೆ ಅಗತ್ಯವಾದ ಪೋಷಕಾಂಶಗಳು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಎದುರಾಗಲಿದೆ ಎಂದು ಅವರು ತಿಳಿಸಿದರು.
ಸರ್ಕಾರದ ಹೊಣೆಗಾರಿಕೆ ಪ್ರಶ್ನಿಸುವ ಸಮಯ
ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದ ಹಣ ಬರುತ್ತಿದ್ದರೂ ಅದರ ಬಳಕೆ ಹಾಗೂ ನಿರ್ವಹಣೆ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ಸಮರ್ಪಕವಾದ ಪ್ರಶ್ನೆಗಳು ಕೇಳಿಬರುತ್ತಿಲ್ಲ. ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಜನರು ಪ್ರಶ್ನಿಸುವ ಹಾಗೂ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವ ಅಗತ್ಯವಿದೆ ಎಂದು ಅವಿನಾಶ್ ಹೇಳಿದರು.
ಈ ವಿಶೇಷ ವೀಡಿಯೊ ವೀಕ್ಷಿಸಿ: https://www.youtube.com/watch?v=b9DxzsqEiYo&t=75s
ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಾದ ಸಂದರ್ಭ ನಮ್ಮ ಮುಂದಿದೆ. ಪರಿಸರ ಸಂರಕ್ಷಣೆ ಮತ್ತು ಭವಿಷ್ಯದ ಪೀಳಿಗೆಯ ಬದುಕಿನ ಪ್ರಶ್ನೆಯಲ್ಲಿ ಜನರು ಮೌನವಾಗಿರಬಾರದು ಎಂದು ಅವರು ಕರೆ ನೀಡಿದರು.
ಸೆ.21ರಿಂದ ಸತ್ಯಾಗ್ರಹ
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 21, 22 ಮತ್ತು 23ರಂದು ಸತ್ಯಾಗ್ರಹ ನಡೆಸಲು ಮುಂದಾಗಿದ್ದೇವೆ. ನಾಡಿನ ಸಾಕ್ಷಿಪ್ರಜ್ಞೆ ದೇವನೂರ ಮಹಾದೇವ ಅವರ ನೇತೃತ್ವದಲ್ಲಿ ಹಲವು ಸಾಹಿತಿಗಳು, ಚಿಂತಕರು ಹಾಗೂ ಮುಖಂಡರು ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? 43.81 ಲಕ್ಷ ನೋಟಿಸ್: 7.31 ಲಕ್ಷ ಮಾತ್ರ ವಿತರಣೆ; ‘SIR’ ಪ್ರಕ್ರಿಯೆಯ ವೇಗಕ್ಕೆ ಸವಾಲು
ಪರಿಸರ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆ ಹಾಗೂ ಭವಿಷ್ಯದ ಪೀಳಿಗೆಯ ಬದುಕಿನ ಹಕ್ಕಿಗಾಗಿ ನಡೆಯಲಿರುವ ಈ ಹೋರಾಟದಲ್ಲಿ ರೈತರು, ಸಾರ್ವಜನಿಕರು ಸೇರಿದಂತೆ ಎಲ್ಲರೂ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.





