ವಿಧಾನ ಪರಿಷತ್‌ನ 4 ಸ್ಥಾನಗಳಲ್ಲಿಅಕ್ಟೋಬರ್ 23ರ ಶುಕ್ರವಾರ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವುದು- ‘ಬೆಂಗಳೂರು ಶಿಕ್ಷಕರ ಕ್ಷೇತ್ರ’. ಇಲ್ಲಿ ಕಾಂಗ್ರೆಸ್‌ನಿಂದ ಸ್ಫರ್ಧಿಸಿರುವ ಪುಟ್ಟಣ್ಣ ಮತ್ತು ಎನ್‌ಡಿಎ ಅಭ್ಯರ್ಥಿಯಾಗಿರುವ ಎ.ಪಿ ರಂಗನಾಥ್ ಅವರ ನಡುವೆ ತೀವ್ರ ಪೈಪೋಟಿ ಇದೆ. ಈ ಕಾಳಗ, ಪ್ರತಿಷ್ಠೆಯ ವಿಷಯವಾಗಿಯೂ ಹೊಮ್ಮಿದೆ. ಪುಟ್ಟಣ್ಣನವರು ಎಂಎಲ್‌ಸಿ ಚುನಾವಣೆಗಳಲ್ಲಿ ಸೋಲಿಲ್ಲದ ಸರದಾರರಾಗಿ ಉಳಿಯಬೇಕೆಂಬ ಹಠದಲ್ಲಿದ್ದರೆ, ಸೋಲುಗಳಿಂದ ಕಂಗಾಲಾಗಿರುವ ರಂಗನಾಥ್, ಪುಟಿದೇಳುವ ಹುಮ್ಮಸ್ಸಿನಲ್ಲಿದ್ದಾರೆ.
ಜೆಡಿಎಸ್ ಕಾನೂನು ಘಟಕದ ಎ.ಪಿ. ರಂಗನಾಥ್ ಅವರು ಈಗಾಗಲೇ ಎರಡು ಬಾರಿ ಪುಟ್ಟಣ್ಣನವರ ಎದುರು ನೆಲಕಚ್ಚಿದ್ದಾರೆ. ಈಗ ಮೂರನೇ ಸಲ ಎದುರಾಳಿಯಾಗಿ ನಿಂತಿದ್ದಾರೆ. ಆದರೆ ಇಲ್ಲಿ ಮುಖ್ಯವಾಗಿ ಕಾಣುವುದು ಪುಟ್ಟಣ್ಣನವರ ಹಿಡಿತ.
ಪುಟ್ಟಣ್ಣ ಅವರು ಸತತ ಐದು ಬಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆಯಾಗಿ ಬಂದರೂ ಒಂದೇ ಪಕ್ಷದಿಂದ ಗೆದ್ದಿಲ್ಲ ಎಂಬುದು ಕುತೂಹಲಕಾರಿ ಸಂಗತಿ. ಅವರು ಜೆಡಿಎಸ್‌ನಿಂದ ಮೂರು ಬಾರಿ ಗೆದ್ದಿದ್ದರು. ನಂತರ ಬಿಜೆಪಿಗೆ ಬಂದರು. ಅಲ್ಲಿ ಒಮ್ಮೆ ಗೆದ್ದರು. ಆದರೆ, ಒಪಿಎಸ್ ಹೋರಾಟ ತೀವ್ರ ಸದ್ದು ಮಾಡಿದ್ದ ಸಂದರ್ಭದಲ್ಲಿ ಶಿಕ್ಷಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ, ‘ಒಂದೇ ಒಂದು ಉನ್ನತ ಮಟ್ಟದ ಸಭೆ ಮಾಡಿಸಲು ಸಾಧ್ಯವಾಗಲಿಲ್ಲವಲ್ಲ’ ಎಂದು ಬೇಸತ್ತು ರಾಜೀನಾಮೆ ನೀಡಿ ಬಿಜೆಪಿಯಿಂದ ಬರಬಂದರು. ಈ ರಾಜೀನಾಮೆ ನಡುವೆ, 2023ರ ವಿಧಾನಸಭೆ ಚುನಾವಣೆ ಎದುರಾಯಿತು. ರಾಜಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪುಟ್ಟಣ್ಣ, ಬಿಜೆಪಿಯ ಸುರೇಶ್ ಕುಮಾರ್ ಎದುರು ಸೋಲು ಕಂಡರು. ಆದರೆ, ಬಳಿಕ, ವಿಧಾನ ಪರಿಷತ್ ಚುನಾವಣೆಯಲ್ಲಿ ಮತ್ತೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಸ್ಪರ್ಧಿಸಿದರು. ಈ ಹಿಂದೆ ಎದುರಾಳಿಯಾಗಿದ್ದ ಎ.ಪಿ. ರಂಗನಾಥ್ ಅವರು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿದ್ದರು. ಎರಡು ಪಕ್ಷ ಒಂದಾದರೂ ಪುಟ್ಟಣ್ಣ ಅವರು ಕಡಿಮೆ ಅಂತರದಲ್ಲಿ (1,507 ಮತಗಳಿಂದ) ಗೆದ್ದುಬಂದರು. ಅಂದರೆ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಪುಟ್ಟಣ್ಣನವರ ಶಕ್ತಿ ಪಕ್ಷಾತೀತವಾಗಿ ಸಾಬೀತಾಗಿದೆ.
ವಿದ್ಯಾರ್ಥಿ ಚಳವಳಿಗಳ ಮೂಲಕ ರಾಜಕಾರಣ ಪ್ರವೇಶಿಸಿದ ಪುಟ್ಟಣ್ಣ, ತಮ್ಮ ಎರಡೂವರೆ ದಶಕಗಳ ಸಾರ್ವಜನಿಕ ಜೀವನದಲ್ಲಿ ಪಕ್ಷಾತೀತವಾಗಿ ಬೆಂಬಲಿಸುವ ಶಿಕ್ಷಕ ವರ್ಗವನ್ನು ಬೆಳೆಸಿಕೊಂಡಿರುವುದು ಅವರ ದೊಡ್ಡ ಶಕ್ತಿ. ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣ, ರಾಜೀರಹಿತವಾಗಿ ಶಿಕ್ಷಕರ ಪರ ಹೋರಾಟ, ಯಾವುದೇ ಸಂದರ್ಭದಲ್ಲಿಯಾದರೂ ಸ್ಪಂದಿಸುವ ಗುಣಗಳಿಂದ ಪುಟ್ಟಣ್ಣ ಶಿಕ್ಷಕ ಬಳಗದಲ್ಲಿ ಮನೆಮಾತಾಗಿರುವುದು ನಿಜ. ‘ಖಾಸಗಿ ಶಿಕ್ಷಕರಿಗೆ ಆರೋಗ್ಯ ವಿಮೆ’ ಮತ್ತು ‘ಸರ್ಕಾರಿ ಶಿಕ್ಷಕರನ್ನು ಬೋಧಕೇತರ ಕೆಲಸಗಳಿಗೆ ಬಳಸದಂತೆ ಶಿಕ್ಷಕರ ರಕ್ಷಣಾ ಕಾಯ್ದೆ’ ಜಾರಿಗೆ ತರುತ್ತೇನೆ ಎಂಬುದು ಅವರ ಬಹುಮುಖ್ಯ ವಾಗ್ದಾನ. ಇದು ವರ್ಕೌಟ್ ಆಗುವ ಸಾಧ್ಯತೆಯೂ ಇದೆ.
ಪುಟ್ಟಣ್ಣನವರು ಮೇಲುಗೈ ಸಾಧಿಸಲು ಇರುವ ಮತ್ತೊಂದು ಅಂಶವೆಂದರೆ- ಕಾಂಗ್ರೆಸ್ ನಲ್ಲಾಗಿರುವ ನಾಯಕತ್ವ ಬದಲಾವಣೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ಒಕ್ಕಲಿಗರ ಪ್ರಾಬಲ್ಯದ ಬೆಂಗಳೂರು ಶಿಕ್ಷಣ ಕ್ಷೇತ್ರದಲ್ಲಿ ಪುಟ್ಟಣ್ಣನವರು, ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಿದ್ದರು. ಈಗ ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಿರುವುದರಿಂದ ಬೆಂಗಳೂರು ಭಾಗದ ಶಿಕ್ಷಕರು ‘ಜಾತಿ ಲೆಕ್ಕಾಚಾರ’ಗಳನ್ನು ಹಾಕಿ, ಅಧಿಕಾರ ಕೇಂದ್ರಿತವಾಗಿ ಯೋಚಿಸಿದರೆ ಪುಟ್ಟಣ್ಣನವರ ಗೆಲುವು ಮತ್ತೊಮ್ಮೆ ಗೆಲ್ಲಬಹುದಾದ ಸಾಧ್ಯತಗಳಿವೆ.
ಈ ಲೇಖನ ಓದಿದ್ದೀರಾ?: ಯೂರೋಪ್ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ ಸರ್ಕಾರಗಳು!
ಪುಟ್ಟಣ್ಣರ ಎದುರಾಳಿ ರಂಗನಾಥ್ ಅವರು ವಕೀಲಿ ವೃತ್ತಿಯ ಹಿನ್ನೆಲೆಯವರಾದರೂ, ಶಿಕ್ಷಕರ ಕ್ಷೇತ್ರದಲ್ಲಿ ಗೆಲ್ಲಲು ಶತಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಎರಡು ಬಾರಿ ಸೋತಿರುವ ರಂಗನಾಥ್ ಅವರು ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಆ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳುವ ಸಾಧ್ಯತೆಯೂ ಇದೆ. “ಸತತ ಪುಟ್ಟಣ್ಣನವರನ್ನು ಗೆಲ್ಲಿಸಿದ್ದೇವೆ, ಈಗ ಎಪಿ ರಂಗನಾಥ್ ಅವರಿಗೆ ಒಂದು ಚಾನ್ಸ್ ಕೊಡಬೇಕು” ಎಂದು ಕ್ಷೇತ್ರದ ಶಿಕ್ಷಕರು ಯೋಚಿಸಿದರೆ, ಪುಟ್ಟಣ್ಣನವರಿಗೆ ಹಿನ್ನಡೆಯಾಗುತ್ತದೆ.
ಪುಟ್ಟಣ್ಣರನ್ನು ಮಣಿಸಲೇಬೇಕು ಎಂದು ಹಠಕ್ಕೆ ಬಿದ್ದಿರುವ ರಂಗನಾಥ್ ಅವರು ಎಲ್ಲ ಅಸ್ತ್ರಗಳನ್ನು ಝಳುಪಿಸುತ್ತಿದ್ದಾರೆ. “ಪುಟ್ಟಣ್ಣನವರಿಗೆ ವೋಟ್ ಹಾಕುವುದು ವ್ಯರ್ಥ. ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜಾಜಿನಗರದ ಟಿಕೆಟ್ ಪಡೆದು ಹೋಗುತ್ತಾರೆ” ಎಂಬ ಬಾಣವನ್ನು ಪ್ರಯೋಗಿಸಿದ್ದಾರೆ. ಇದಕ್ಕೆ ಪುಟ್ಟಣ್ಣ, “ಇಂತಹ ಅಪಪ್ರಚಾರಗಳಿಗೆ ಒಳಗಾಗಬೇಡಿ, ಶಿಕ್ಷಕರು ನನ್ನ ಕುಟುಂಬ. 2023ರ ಅವಧಿಯಲ್ಲಿ ನಾನು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಆಗ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು, ರಾಜಾಜಿನಗರಕ್ಕೆ ನಿಲ್ಲುವಂತೆ ಸೂಚಿಸಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಆದರೆ ಶಿಕ್ಷಕರ ಕ್ಷೇತ್ರಕ್ಕೆ ಮರಳಿದಾಗ ನನ್ನನ್ನು ಗೆಲ್ಲಿಸಿದರು. ನಾನು ಮತ್ತೆ ರಾಜಾಜಿನಗರಕ್ಕೆ ಹೋಗುತ್ತೇನೆ ಎಂಬುದು ಶುದ್ಧಸುಳ್ಳು. ಹೀಗೆ ಹೇಳಿಕೆ ನೀಡುವ ಎದುರಾಳಿ ಅಭ್ಯರ್ಥಿಯು, ಈ ಚುನಾವಣೆ ಮುಗಿದ ಮೇಲೆ ಬಾರ್ ಕೌನ್ಸಿಲ್ಗೆ ಹೋಗುವುದಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
“ಪುಟ್ಟಣ್ಣ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ, ಅವರು ಶಿಕ್ಷಕರಿಗೆ ಕೂಪನ್ ಹಂಚಿಕೆ ಮಾಡುತ್ತಿದ್ದಾರೆ” ಎಂದು ಆರೋಪಿಸಿರುವ ರಂಗನಾಥ್, ಚುನಾವನಾ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ. ಆದರೆ ಪುಟ್ಟಣ್ಣ ಇದ್ಯಾವುಕ್ಕೂ ಹೆಚ್ಚು ಗಮನ ಕೊಟ್ಟಂತೆಯೂ ಕಾಣುತ್ತಿಲ್ಲ.
ಎ.ಪಿ. ರಂಗನಾಥ್ ಅವರು ಹಾಕಿರುವ ಕಣ್ಣೀರಿನ ಬಗ್ಗೆ ಪುಟ್ಟಣ್ಣನವರಿಗೆ ಆತಂಕವಿದ್ದಂತೆಯೂ ಕಾಣುತ್ತದೆ. ಹೀಗಾಗಿ, “ನನ್ನ ವಿರುದ್ಧ ನಡೆಯುವ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ಐದು ಬಾರಿ ಆಯ್ಕೆಯಾಗಿರುವ ನನ್ನ ವಿರುದ್ಧ ಯಾವುದಾದರೂ ಆರೋಪಗಳಿದ್ದರೆ ತೋರಿಸಿ ಗೆಲ್ಲಬೇಕೇ ಹೊರತು, ಕಣ್ಣೀರು ಹಾಕಿದರೆ ಪ್ರಯೋಜನವಿಲ್ಲ. ಶಿಕ್ಷಕ ಮತದಾರರು ಇಂತಹ ವಿಚಾರಗಳಿಗೆ ಗಮನ ಕೊಡುವುದಿಲ್ಲ” ಎಂದು ದಾಳ ಉರುಳಿಸಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಪ್ರತಿಫಲ ನೀಡುತ್ತದೆ ಎಂದು ನೋಡಬೇಕು.
ಬೆಂಗಳೂರು ಶಿಕ್ಷಕರ ಕ್ಷೇತ್ರ ಪುಟ್ಟಣ್ಣವರ ಭದ್ರಕೋಟೆ ಎಂಬುದು ಸತ್ಯ. ಆದರೆ ಈ ಕೋಟೆಯನ್ನು ಎ.ಪಿ.ರಂಗನಾಥ್ ಛಿದ್ರಗೊಳಿಸಿದರೆ, ಅದು ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಕರೆಘಂಟೆಯಾಗುತ್ತದೆ.




