ದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ನಡೆಯುತ್ತಿದ್ದ ಯುವ ಛಾಯಾಗ್ರಾಹಕ ರೇಹಾನ್ ರಾಜೀವ್ ವಾದ್ರಾ ಅವರ ‘No Idea Is Final’ ಛಾಯಾಚಿತ್ರ ಪ್ರದರ್ಶನದಿಂದ ಬರೋಬ್ಬರು 74 ಚಿತ್ರಗಳನ್ನು ಬಲವಂತವಾಗಿ ತೆರವುಗೊಳಿಸಲಾಗಿದೆ. ಇದು ಕಲಾ ಲೋಕದಲ್ಲಿ ತೀವ್ರ ವಿವಾದ ಸೃಷ್ಟಿಸಿದ್ದು, ಕಲೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಗಡಿರೇಖೆಗಳು ಎಲ್ಲಿಗೆ ಕೊನೆಗೊಳ್ಳುತ್ತವೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಅಂದಹಾಗೆ, ರೇಹಾನ್ ವಾದ್ರಾ ಅವರು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪುತ್ರ. ರೇಹಾನ್ ಅವರು ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ 105 ಚಿತ್ರಗಳನ್ನು ಇರಿಸಲಾಗಿತ್ತು. ಈ ಪೈಕಿ, ದೇಶದಲ್ಲಿ ನಡೆದ ಯುವಜನರ ಸಾರ್ವಜನಿಕ ಪ್ರತಿಭಟನೆಗಳನ್ನು ಬಿಂಬಿಸುವ ಪ್ರಮುಖ ಕಲಾಕೃತಿಗಳೂ ಇದ್ದವು. ಪ್ರತಿಭಟನೆಯನ್ನು ಸೂಚಿಸುವ ಕಲಾಕೃತಿಗಳನ್ನು ಕೊನೆಕ್ಷಣದಲ್ಲಿ ಕಿತ್ತುಹಾಕಲಾಗಿದೆ. ಕೇವಲ ಪ್ರತಿಭಟನಾ ಚಿತ್ರಗಳನ್ನಷ್ಟೇ ಅಲ್ಲದೆ, ಅವುಗಳನ್ನು ತೆರವುಗೊಳಿಸಲಾದ ಗೋಡೆಯಲ್ಲಿ ಉಳಿದಿದ್ದ ಖಾಲಿ ಫ್ರೇಮ್‌ಗಳು ಮತ್ತು ಭಾರತದ ರಾಷ್ಟ್ರಧ್ವಜ ಕಾಣಿಸಿಕೊಂಡಿದ್ದ ದೃಶ್ಯಗಳನ್ನು ಸಹ ಪ್ರದರ್ಶಿಸಲು ಆಡಳಿತ ಮಂಡಳಿ ಅವಕಾಶ ನೀಡಿಲ್ಲ.
ಕಳೆದ ಅಕ್ಟೋಬರ್ 21ರಂದು ಸಂಜೆ ಆರಂಭವಾಗಬೇಕಿದ್ದ ಈ ಪ್ರದರ್ಶನಕ್ಕೆ ತಿಂಗಳುಗಳ ಹಿಂದೆಯೇ ಅಧಿಕೃತ ಅನುಮೋದನೆ ದೊರೆತಿತ್ತು. ಆದರೆ, ಪ್ರದರ್ಶನ ಆರಂಭಗೊಳ್ಳಲು ಕೆಲವೇ ಗಂಟೆಗಳು ಬಾಕಿ ಇರುವಾಗ, ಅಕ್ಟೋಬರ್ 20ರ ಸಂಜೆ ಮತ್ತು ಮರುದಿನ ಮಧ್ಯಾಹ್ನದ ವೇಳೆಗೆ ಬಿಕಾನೇರ್ ಹೌಸ್ ಆಡಳಿತ ಮಂಡಳಿಯಿಂದ ದಿಢೀರ್ ನಿರ್ದೇಶನಗಳು ಬಂದಿವೆ.
“ಇತ್ತೀಚಿನ ತಿಂಗಳುಗಳಲ್ಲಿ ದೆಹಲಿಯಲ್ಲಿ ನಡೆದ ಯುವಜನರ ಪ್ರತಿಭಟನೆಗಳು, ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧದ ಆಂದೋಲನಗಳು, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಚಳವಳಿಗಳು ಹಾಗೂ ಸಾರ್ವಜನಿಕ ಧ್ವನಿಯನ್ನು ಸೆರೆಹಿಡಿದಿದ್ದ ಛಾಯಾಚಿತ್ರಗಳು ರಾಜಕೀಯ ಸ್ವರೂಪ ಪಡೆದಿವೆ. ಅವುಗಳನ್ನು ಪ್ರದರ್ಶನಕ್ಕೆ ಇರಿಸಬಾರದು” ಎಂಬ ಕಾರಣ ನೀಡಿದ್ದ ಆಡಳಿತ ಮಂಡಳಿ, ಅಕ್ಟೋಬರ್ 21ರ ಸಂಜೆ 5 ಗಂಟೆಯೊಳಗೆ ಅಂತಹ ಎಲ್ಲ ಚಿತ್ರಗಳನ್ನು ತೆರವುಗೊಳಿಸಬೇಕೆಂದು ತಾಕೀತು ಮಾಡಿದೆ.
ಒಂದು ವೇಳೆ ಚಿತ್ರಗಳನ್ನು ತೆಗೆಯದಿದ್ದರೆ ಇಡೀ ಕಾರ್ಯಕ್ರಮವನ್ನೇ ರದ್ದುಗೊಳಿಸುವುದಾಗಿಯೂ ಬೆದರಿಕೆ ಹಾಕಿದೆ. ಈ ಬೆದರಿಕೆಗೆ ಮಣಿದು ಆಯೋಜಕರು ಅನಿವಾರ್ಯವಾಗಿ ಬಹುಪಾಲು ಕಲಾಕೃತಿಗಳನ್ನು ತೆರವುಗೊಳಿಸಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಒತ್ತಡದಿಂದಲೇ, ಬಿಕಾನೇರ್ ಹೌಸ್‌ನ ಆಡಳಿತ ಮಂಡಳಿಯು ಇಂತಹ ಸೆನ್ಸಾರ್ ಕ್ರಮವನ್ನು ಹೇರಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಆಳಿತನ ಮಂಡಳಿಯ ಒತ್ತಡ ಯಾವ ಹಂತಕ್ಕಿತ್ತು ಎಂದರೆ, ತೆಗೆದುಹಾಕಲಾದ ಚಿತ್ರಗಳ ಜಾಗದಲ್ಲಿ ಸಾಂಕೇತಿಕವಾಗಿ ತೂಗುಹಾಕಲಾಗಿದ್ದ ಖಾಲಿ ಫ್ರೇಮ್‌ಗಳನ್ನೂ ಸಹ ತೆರವುಗೊಳಿಸಲಾಗಿದೆ.
“ಕಲೆಯ ಸ್ವಾತಂತ್ರ್ಯವನ್ನು ಹತ್ತಿಕ್ಕಿದಾಗ ಉಂಟಾಗುವ ಶೂನ್ಯತೆ ಮತ್ತು ಕಲಾಕೃತಿಯೇ ಇಲ್ಲದ ಸ್ಥಿತಿಯನ್ನು ಬಿಂಬಿಸಲು ಕಲಾವಿದ ಇರಿಸಿದ್ದ ಖಾಲಿ ಫ್ರೇಮ್‌ಗಳೂ ಕೂಡ ಆಡಳಿತಕ್ಕೆ ಅಸಹನೀಯವಾಗಿವೆ. ಕಲೆಯೊಂದನ್ನು ನಿಷೇಧಿಸುವುದರ ಜೊತೆಗೆ ಆ ನಿಷೇಧದ ಗುರುತನ್ನೂ ಕಾಣದಂತೆ ಮಾಡುವ ಈ ಕೃತ್ಯವು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿದೆ” ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಯೂರೋಪ್ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ ಸರ್ಕಾರಗಳು!
ಆಡಳಿತದ ಈ ಧೋರಣೆಯ ಕುರಿತು ಪ್ರಕ್ರಿಯಿಸಿರುವ ಯುವ ಛಾಯಾಗ್ರಾಹಕ ರೇಹಾನ್ ವಾದ್ರಾ, “ನಮ್ಮ ಕಲಾಕೃತಿಗಳು ಯಾವುದೇ ಪಕ್ಷದ ಪ್ರಚಾರಕ್ಕಾಗಿ ಇರಲಿಲ್ಲ. ಬದಲಿಗೆ ಕಳೆದ ಕೆಲವು ತಿಂಗಳುಗಳಿಂದ ದೇಶದ ರಾಜಧಾನಿಯಲ್ಲಿ ನಡೆದ ಸಾರ್ವಜನಿಕ ಚಳವಳಿಗಳನ್ನು ಒಬ್ಬ ದಾಖಲೆಕಾರನಾಗಿ ಕಲಾತ್ಮಕವಾಗಿ ಸೆರೆಹಿಡಿದಿದ್ದೆ. ಆದಾಗ್ಯೂ, ಕಲೆ ಮತ್ತು ರಾಜಕೀಯವನ್ನು ಸಂಪೂರ್ಣವಾಗಿ ಬೇರ್ಪಡಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಕಲಾವಿದನ ನೈತಿಕ ಕರ್ತವ್ಯ” ಎಂದಿದ್ದಾರೆ.
ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, “ಇಂದು ರೇಹಾನ್ ಅವರ ಕಲಾಕೃತಿಗಳ ಮೇಲೆ ಹೇರಲಾಗಿರುವ ಈ ನಿರ್ಬಂಧವು ನಾಳೆ ದೇಶದ ಪ್ರತಿಯೊಬ್ಬ ಸ್ವತಂತ್ರ ಕಲಾವಿದನಿಗೂ ಎದುರಾಗಬಹುದು. ಯುವಜನರ ಧ್ವನಿ ಮತ್ತು ಸತ್ಯದ ದೃಶ್ಯ ದಾಖಲೆಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಈ ಪ್ರವೃತ್ತಿಯು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ” ಎಂದು ಟೀಕಿಸಿದ್ದಾರೆ.
ಸಂವಿಧಾನದ 19(1)(ಎ) ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ಒದಗಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ಕಲೆ, ಸಾಹಿತ್ಯ ಹಾಗೂ ಛಾಯಾಗ್ರಹಣದ ಸ್ವಾತಂತ್ರ್ಯವೂ ಸೇರಿದೆ. ಯಾವುದೇ ಪೂರ್ವಾನುಮತಿ ಪಡೆಯದೆ ಕೊನೆಯ ಕ್ಷಣದಲ್ಲಿ ಅನುಮೋದಿತ ಪ್ರದರ್ಶನದ ಅರ್ಧಕ್ಕೂ ಹೆಚ್ಚು ಭಾಗವನ್ನು ಬಲವಂತವಾಗಿ ಮುಟ್ಟುಗೋಲು ಹಾಕಿಕೊಳ್ಳುವ ಅಥವಾ ತೆರವುಗೊಳಿಸುವ ಆಡಳಿತಾತ್ಮಕ ಧೋರಣೆಯು ಕಾನೂನಿನ ಚೌಕಟ್ಟಿನ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.




