ತಮಿಳುನಾಡಿನಲ್ಲಿ ಅಧಿಕಾರ ಕಳೆದುಕೊಂಡಿರುವ ಡಿಎಂಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಆಂತರಿಕ ಬೇಗುದಿಯಲ್ಲಿ ಬೇಯುತ್ತಿರುವ ಟಿಎಂಸಿ- ಈ ಎರಡು ಪಕ್ಷಗಳ ರಾಜಕೀಯ ಸನ್ನಿವೇಶಗಳನ್ನು ಬಳಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ!
ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಸೂದೆಯನ್ನು ಜಾರಿಗೆ ತರಲು ಹೋಗಿ ಸಂಸತ್ತಿನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ನರೇಂದ್ರ ಮೋದಿ ನಾಯಕತ್ವದ ಎನ್ಡಿಎ ಸರ್ಕಾರ, ಬದಲಾದ ರಾಜಕೀಯ ಸನ್ನಿವೇಶಗಳನ್ನು ಬಳಸಿಕೊಂಡು ಈ ಮಸೂದೆಯನ್ನು ಮತ್ತೆ ಮುನ್ನಲೆಗೆ ತರಲು ಯೋಜನೆ ರೂಪಿಸುತ್ತಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಡಿಲಿಮಿಟೇಷನ್ ಮತ್ತು ‘ಒಂದು ದೇಶ, ಒಂದು ಚುನಾವಣೆ’ (ಒನ್ ನೇಷನ್ ಒನ್ ಎಲೆಕ್ಷನ್) ಮಸೂದೆಗಳಿಗಾಗಿ ಒಳಗೊಳಗೆ ಸಿದ್ದತೆ ನಡೆಸುತ್ತಿರುವ ಎನ್ಡಿಎ ಸರ್ಕಾರ, ಪ್ರಾದೇಶಿಕ ಪಕ್ಷಗಳ ಬೆಂಬಲವನ್ನು ಪಡೆಯಲು ಕಸರತ್ತು ನಡೆಸುತ್ತಿದೆ. ಈ ಎರಡೂ ಮಸೂದೆಗಳನ್ನು 2029ರ ಲೋಕಸಭಾ ಚುನಾವಣೆಗೆ ಮುನ್ನವೇ ಜಾರಿಗೆ ತರಲು ಸರ್ಕಾರ ಯೋಚಿಸಿದೆ ಎಂದು ವರದಿ ಉಲ್ಲೇಖಿಸಿದೆ.
ಏಪ್ರಿಲ್ನಲ್ಲಿ ಲೋಕಸಭೆಯಲ್ಲಿ ಸಂವಿಧಾನದ (131ನೇ ತಿದ್ದುಪಡಿ) ಮಸೂದೆ, 2026 ಕ್ಕೆ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಸಿಗದೆ ವಿಫಲವಾದ ನಂತರ, ಕೇಂದ್ರ ಗೃಹ ಸಚಿವಾಲಯವು ಹೊಸ ಡಿಲಿಮಿಟೇಷನ್ ಮಸೂದೆಯನ್ನು ಸಿದ್ಧಪಡಿಸುತ್ತಿದೆ ಎಂಬುದು ಗೊತ್ತಾಗಿದೆ.
ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಚರ್ಚೆಗೆ ಕೈಗೆತ್ತಿಕೊಂಡಾಗ, ವಿರೋಧ ಪಕ್ಷಗಳ ‘ಇಂಡಿಯಾ’ (INDIA) ಒಕ್ಕೂಟವು ಕಾಂಗ್ರೆಸ್, ಡಿಎಂಕೆ (22) ಮತ್ತು ಟಿಎಂಸಿ (28) ಸೇರಿದಂತೆ 230 ಸಂಸದರೊಂದಿಗೆ ಒಗ್ಗಟ್ಟಾಗಿ ಮತ ಚಲಾಯಿಸಿತ್ತು. ವಿವಾದಾತ್ಮಕ ಲೋಕಸಭಾ ಸೀಟುಗಳ ಹೆಚ್ಚಳವನ್ನು ಮಹಿಳಾ ಮೀಸಲಾತಿ ಕಾಯ್ದೆಯ ಜಾರಿಗೆ ಲಿಂಕ್ ಮಾಡುವುದನ್ನು ಈ ಒಕ್ಕೂಟವು ವಿರೋಧಿಸಿತ್ತು. ಸರ್ಕಾರ ತರಲು ಇಚ್ಛಿಸಿರುವ ಡಿಲಿಮಿಟೇಷನ್ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯವನ್ನು ಮೂಲೆಗುಂಪು ಮಾಡಬಹುದು ಎಂಬ ಆತಂಕ ವ್ಯಕ್ತವಾಗಿತ್ತು.
ಈಗ ಡಿಲಿಮಿಟೇಷನ್ ಜೊತೆ, ಒನ್ ನೇಷನ್ ಒನ್ ಎಲೆಕ್ಷನ್ ಮಸೂದೆ ತರುವುದಾದರೂ ಅದಕ್ಕೂ ಸಂವಿಧಾನ ತಿದ್ದುಪಡಿ ಅಗತ್ಯವಿದೆ. ತಿದ್ದುಪಡಿಗೆ 2/3ರಷ್ಟು ಬಹುಮತದ ಜೊತೆಗೆ ಕನಿಷ್ಠ ಅರ್ಧದಷ್ಟು ರಾಜ್ಯಗಳ ಒಪ್ಪಿಗೆ ಬೇಕಾಗುತ್ತದೆ. ಒನ್ ನೇಷನ್, ಒನ್ ಎಲೆಕ್ಷನ್ ನಡೆಯಬೇಕಾದರೆ ಕೆಲವು ರಾಜ್ಯಗಳ ವಿಧಾನಸಭೆಯ ಅವಧಿಯನ್ನು ಕೆಲವು ತಿಂಗಳು ವಿಸ್ತರಿಸಬೇಕಾಗುತ್ತದೆ ಅಥವಾ ಕಡಿತಗೊಳಿಸಬೇಕಾಗುತ್ತದೆ. ಸರ್ಕಾರಗಳು ಬಹುಮತ ಕಳೆದುಕೊಂಡ ಸನ್ನಿವೇಶಗಳಲ್ಲಿ ಚುನಾವಣೆಯನ್ನು ದೀರ್ಘಕಾಲದವರೆಗೆ ಮುಂದೂಡಬೇಕಾಗುತ್ತದೆ. ಆಗ ಕೇಂದ್ರದ ಹಿಡಿತಕ್ಕೆ ರಾಜ್ಯಗಳು ಸಿಲುಕುತ್ತವೆ. ಈ ಎಲ್ಲ ಬದಲಾವಣೆಗಳಿಗೆ ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಒಪ್ಪಬೇಕಾಗುತ್ತದೆ. ಪ್ರಾದೇಶಿಕ ಪಕ್ಷಗಳ ಹಿಡಿತದ ಮೇಲೆ ಸವಾರಿ ಮಾಡುವ ಉದ್ದೇಶವಂತೂ ‘ಒನ್ ನೇಷನ್, ಒನ್ ಎಲೆಕ್ಷನ್’ಗೆ ಇರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ರಾಜಕೀಯ ಸನ್ನಿವೇಶದ ಲಾಭ ಪಡೆಯಲು ಕಸರತ್ತು?
ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್ನ ಮಿತ್ರಪಕ್ಷಗಳು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ನೆಲಕಚ್ಚಿವೆ. ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಇರುವ ಮಮತಾ ಬ್ಯಾನರ್ಜಿಯವರ ಟಿಎಂಸಿ, ಪಶ್ಚಿಮ ಬಂಗಾಳದಲ್ಲಿ ಹೀನಾಯ ಸೋಲು ಕಂಡಿತು. 93 ಲಕ್ಷ ಜನರ ಮತದಾನದ ಹಕ್ಕು ಕಸಿದ ಚುನಾವಣಾ ಆಯೋಗವು ಬಿಜೆಪಿಗೆ ಬಹುದೊಡ್ಡ ಅವಕಾಶವನ್ನು ಒದಗಿಸಿದ್ದು ರಾಜಕೀಯ ದುರಂತವಾಗಿತ್ತು. ಇತ್ತ ತಮಿಳುನಾಡಿನಲ್ಲಿ ಡಿಎಂಕೆ ಸಖ್ಯ ತೊರೆದ ಕಾಂಗ್ರೆಸ್, ಹೊಸದಾಗಿ ಅಧಿಕಾರಕ್ಕೆ ಬಂದಿರುವ ಟಿವಿಕೆ ಜೊತೆ ಕೈ ಜೋಡಿಸಿದೆ. ಕೇಂದ್ರದ ಯಾವುದೇ ಪ್ರಮುಖ ನಿರ್ಧಾರಗಳು ಪಾಸ್ ಆಗಬೇಕಾದರೆ ಟಿಎಂಸಿ ಮತ್ತು ಡಿಎಂಕೆ- ದೊಡ್ಡ ಮಟ್ಟದ ಪ್ರತಿರೋಧ ತೋರುವುದು ಸಹಜವಾಗಿತ್ತು. ಅದರಲ್ಲೂ ದಕ್ಷಿಣ ಭಾರತಕ್ಕೆ ದೊಡ್ಡ ಮಟ್ಟದಲ್ಲಿ ವಂಚನೆ ಮಾಡಲು ಉದ್ದೇಶಿಸಿದ್ದ ಡಿಲಿಮಿಟೇಷನ್ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರ ಆಗದಿರುವುದಕ್ಕೆ ಡಿಎಂಕೆ, ಟಿಎಂಸಿ ತೋರಿದ ವಿರೋಧ ಪ್ರಮುಖ ಕಾರಣವಾಗಿತ್ತು. ಈಗ ಚುನಾವಣೆಗಳಲ್ಲಿ ಈ ಎರಡು ಪಕ್ಷಗಳು ಅಧಿಕಾರ ಕಳೆದುಕೊಂಡಿರುವುದರಿಂದ ಸನ್ನಿವೇಶದ ಲಾಭ ಪಡೆಯಲು ಮೋದಿ ಸರ್ಕಾರ ಯೋಚಿಸುತ್ತಿದೆ.
ಸಂಸತ್ತಿನಲ್ಲಿ ಹೊಸ ರಾಜಕೀಯ ಸಮೀಕರಣವನ್ನು ರೂಪಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ಸಂಪರ್ಕಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, “ಸರ್ಕಾರವು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಬೇಕು ಮತ್ತು ಎಲ್ಲಾ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಬೇಕು” ಎಂದು ಆಗ್ರಹಿಸಿದೆ.
ಬಿಜೆಪಿಯೊಂದಿಗೆ ‘ನಿರ್ದಿಷ್ಟ ವಿಷಯ’ಗಳ ಮೇಲೆ ಮಾತುಕತೆ ನಡೆಸಲು ಡಿಎಂಕೆ ಒಳಗೊಳಗೆಯೇ ಸಿದ್ದತೆ ನಡೆಸುತ್ತಿದೆ ಎಂಬ ಮಾತುಕತೆಗಳು ಕೇಳಿಬರುತ್ತಿವೆ. ಇದೇ ಸಮಯದಲ್ಲಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಒಳಗೆ ಆಂತರಿಕ ಭಿನ್ನಾಭಿಪ್ರಾಯಗಳು ಭುಗಿಲೆದ್ದಿವೆ. ಟಿಎಂಸಿ ನಾಯಕತ್ವದ ವಿರುದ್ಧ ಹೆಚ್ಚುತ್ತಿರುವ ಜನಾಕ್ರೋಶವನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಂಸತ್ತಿನಲ್ಲಿ ತನ್ನ ಮುಂದಿನ ಕಾರ್ಯತಂತ್ರಕ್ಕೆ ಇವುಗಳು ಹೇಗೆ ಮತ್ತು ಯಾವಾಗ ಸಹಕಾರಿಯಾಗಲಿವೆ ಎಂಬುದನ್ನು ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ.
ಈ ಲೇಖನ ಓದಿದ್ದೀರಾ?: ಪ್ರಜಾಪ್ರಭುತ್ವ ದಮನಕ್ಕೆ ಮೋದಿ ‘SIR’ ಅಸ್ತ್ರ ಬಳಸುತ್ತಿರುವುದು ಯಾಕೆ?
ಇದಕ್ಕೆ ಸಮಾನಾಂತರವಾಗಿ, ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ‘ಒಂದು ದೇಶ, ಒಂದು ಚುನಾವಣೆ’ ಮಸೂದೆಯನ್ನು ಔಪಚಾರಿಕಗೊಳಿಸುವ ಕೆಲಸವೂ ನಡೆಯುತ್ತಿದೆ. ಪ್ರಸ್ತುತ, ಇದನ್ನು 39 ಸದಸ್ಯರ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಪರಿಶೀಲಿಸುತ್ತಿದೆ. ಈ ಪ್ರಸ್ತಾವಿತ ಕಾನೂನಿನ ಬಗ್ಗೆ ಕೇಳಿದಾಗ ಜೆಪಿಸಿ ಅಧ್ಯಕ್ಷ ಪಿ.ಪಿ. ಚೌಧರಿ ಪ್ರತಿಕ್ರಿಯಿಸಿ, “ಕಾನೂನಿಗೆ ಶೀಘ್ರದಲ್ಲೇ ತಿದ್ದುಪಡಿ ತರಲಾಗುವುದು. ವರದಿ ಸಿದ್ಧಪಡಿಸುವಲ್ಲಿ ನಾವು ಉತ್ತಮ ಪ್ರಗತಿ ಸಾಧಿಸುತ್ತಿದ್ದೇವೆ. ನಿಗದಿತ ಸಮಯದೊಳಗೆ ವರದಿಯನ್ನು ಸಲ್ಲಿಸುತ್ತೇವೆ” ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ಗೆ ತಿಳಿಸಿದ್ದಾರೆ. ಜೆಪಿಸಿಯ ಅವಧಿಯನ್ನು ಮುಂಗಾರು ಅಧಿವೇಶನದ ಕೊನೆಯ ವಾರದ ಮೊದಲ ದಿನದವರೆಗೆ ವಿಸ್ತರಿಸಲಾಗಿದೆ.
ವಿವಿಧ ರಾಜ್ಯಗಳ ವಿಧಾನಸಭೆಗಳ ಅವಧಿಗಳು ಬೇರೆ ಬೇರೆಯಾಗಿರುವುದರಿಂದ, ಈ ಕಾನೂನನ್ನು ಹಂತ ಹಂತವಾಗಿ ಜಾರಿಗೆ ತರಬಹುದು ಎಂದು ಮತ್ತೊಬ್ಬ ಬಿಜೆಪಿ ನಾಯಕ ಹೇಳಿದ್ದಾರೆ. “ಉದಾಹರಣೆಗೆ, ಈಗಷ್ಟೇ ಐದು ರಾಜ್ಯಗಳಲ್ಲಿ ಚುನಾವಣೆ ಮುಗಿದಿದೆ. ಏಳು ರಾಜ್ಯಗಳಲ್ಲಿ (ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ, ಮಣಿಪುರ, ಹಿಮಾಚಲ ಪ್ರದೇಶ ಮತ್ತು ಗುಜರಾತ್) 2027ರಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬೇಕಿದೆ. ಆದ್ದರಿಂದ ಒಂದು ದೇಶ, ಒಂದು ಚುನಾವಣೆಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವ ಸಾಧ್ಯತೆಯಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಬಿಜೆಪಿ ಈಗಾಗಲೇ ಡಿಎಂಕೆ ನಾಯಕರನ್ನು ಸಂಪರ್ಕಿಸಿದ್ದು, ಅವರ ಕಳವಳಗಳನ್ನು ನಿವಾರಿಸಲು ಪ್ರಸ್ತುತ ಇರುವ (ಒಂದು ದೇಶ, ಒಂದು ಚುನಾವಣೆ) ಮಸೂದೆಯ ಕರಡಿನಲ್ಲಿ ಕೆಲವು ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ಅವರ ಬೆಂಬಲವನ್ನು ಕೋರಲು ಕರಡು ಮಸೂದೆಯನ್ನು ಡಿಎಂಕೆ ನಾಯಕರೊಂದಿಗೆ ಹಂಚಿಕೊಳ್ಳಲಾಗುವುದು” ಎಂದು ಮೂಲಗಳು ಪ್ರತಿಕ್ರಿಯಿಸಿವೆ.
“ಬಿಜೆಪಿ ಮತ್ತು ಡಿಎಂಕೆ ಹಲವು ವಿಷಯಗಳಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವುದರಿಂದ, ಎರಡೂ ಪಕ್ಷಗಳು ಒಂದಾಗುವುದೆಂದರೆ ಒಂದು ಸುದೀರ್ಘ ಪ್ರಕ್ರಿಯೆಯಾಗಿದೆ. ಆರಂಭದಲ್ಲಿ ಇದು ಕೇವಲ ವಿಷಯಾಧಾರಿತವಾಗಿರಲಿದೆ” ಎಂದು ತಮಿಳುನಾಡಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಬಲ್ಲ ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಡಿಎಂಕೆ ಹಿರಿಯ ನಾಯಕರೊಬ್ಬರು ಈ ಕುರಿತು ಪ್ರತಿಕ್ರಿಯಿಸಿ, “ಕ್ಷೇತ್ರ ಮರುವಿಂಗಡಣೆ ಮತ್ತು ಒಂದು ದೇಶ, ಒಂದು ಚುನಾವಣೆಯಂತಹ ವಿಷಯಗಳಲ್ಲಿ, ಪಕ್ಷದ ನಿಲುವು ಕೇವಲ ಸಿದ್ಧಾಂತಕ್ಕಿಂತ ಹೆಚ್ಚಾಗಿ ತಮಿಳುನಾಡಿನ ಹಿತಾಸಕ್ತಿಗಳನ್ನೇ ಆಧರಿಸಿರುತ್ತದೆ. ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ರಾಜ್ಯಗಳಿಗೆ ಸಂಸತ್ತಿನ ಪ್ರಾತಿನಿಧ್ಯದಲ್ಲಿ ಅನ್ಯಾಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರವು ನಂಬಲರ್ಹವಾದ ಭರವಸೆ ನೀಡಿದರೆ ಮತ್ತು ಪರಸ್ಪರ ಒಪ್ಪಿತ ಸೂತ್ರದ ಮೂಲಕ ಪ್ರಸ್ತುತ ಪ್ರಾತಿನಿಧ್ಯದ ಅನುಪಾತವನ್ನು ರಕ್ಷಿಸಿದರೆ, ಈ ಪ್ರಸ್ತಾಪವನ್ನು ತಿರಸ್ಕರಿಸಲು ಯಾವುದೇ ಕಾರಣವಿಲ್ಲ… ತಮಿಳುನಾಡಿನ ಧ್ವನಿಯನ್ನು ಸಂಸತ್ತಿನಲ್ಲಿ ರಕ್ಷಿಸುವುದೇ ನಮ್ಮ ಪ್ರಮುಖ ಕಾಳಜಿಯಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದೆಲ್ಲದರ ಆಚೆಗೂ ಇರುವ ಸಿದ್ಧಾಂತ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿರುವ ಡಿಎಂಕೆ ನಾಯಕರು, ಬಿಜೆಪಿಯೊಂದಿಗೆ ರಾಜಕೀಯ ಒಪ್ಪಂದದ ಮಾತುಗಳು ‘ಅಕಾಲಿಕ’ವಷ್ಟೇ ಎಂದು ಬಣ್ಣಿಸಿದ್ದಾರೆ. “ನಾವು ಮೈತ್ರಿ ಬಗ್ಗೆ ಚರ್ಚಿಸುವ ಹಂತದಲ್ಲಿ ಎಲ್ಲೂ ಇಲ್ಲ. ಬಿಜೆಪಿಯೊಂದಿಗೆ ಡಿಎಂಕೆಗೆ ಇರುವ ಭಿನ್ನಾಭಿಪ್ರಾಯಗಳು ಎಲ್ಲರಿಗೂ ತಿಳಿದಿವೆ. ಆದರೆ ರಾಜಕೀಯದಲ್ಲಿ ಯಾವುದು ಕೂಡ ಶಾಶ್ವತವಲ್ಲ. ವಾಜಪೇಯಿ ಅವರ ಅವಧಿಯಲ್ಲಿ ನಡೆದಂತೆ, ವಿಶೇಷ ಸಂದರ್ಭಗಳಲ್ಲಿ ಪಕ್ಷಗಳು ನಿರ್ದಿಷ್ಟ ವಿಷಯಗಳ ಮೇಲೆ ಬೆಂಬಲ ನೀಡಿರುವುದನ್ನು ಅಥವಾ ಸ್ಥಿರತೆಯನ್ನು ಕಾಪಾಡಿರುವುದನ್ನು ಭಾರತೀಯ ಸಂಸದೀಯ ಇತಿಹಾಸ ಕಂಡಿದೆ. ಭವಿಷ್ಯದ ಯಾವುದೇ ನಿರ್ಧಾರವು ಸಂಪೂರ್ಣವಾಗಿ ಆಯಾ ರಾಜಕೀಯ ಸಂದರ್ಭ ಮತ್ತು ತಮಿಳುನಾಡಿನ ಹಿತಾಸಕ್ತಿಯನ್ನು ಅವಲಂಬಿಸಿರುತ್ತವೆ. ಮುಖ್ಯವಾಗಿ ಒಕ್ಕೂಟ ವ್ಯವಸ್ಥೆಯ ಹಕ್ಕುಗಳ ರಕ್ಷಣೆಯನ್ನು ಮುಖ್ಯವಾಗಿರಿಸಿಕೊಂಡಿರುತ್ತವೆ” ಎಂದು ಮಾಜಿ ಡಿಎಂಕೆ ಸಚಿವರೊಬ್ಬರು ಹೇಳಿದ್ದಾರೆ.
ಡಿಲಿಮಿಟೇಷನ್ ಮಸೂದೆಯ ಚರ್ಚೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “ವಿರೋಧ ಪಕ್ಷಗಳು ಮಸೂದೆಯನ್ನು ಬೆಂಬಲಿಸಲು ಒಪ್ಪಿದರೆ ಎಲ್ಲಾ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳನ್ನು ಸಮಾನವಾಗಿ ಶೇಕಡಾ 50 ರಷ್ಟು ಹೆಚ್ಚಿಸಲು ತಿದ್ದುಪಡಿ ತರಲು ಸರ್ಕಾರ ಸಿದ್ಧವಿದೆ” ಎಂದಿದ್ದರು. ಈ ಸೂತ್ರದ ಮೂಲಕ ದಕ್ಷಿಣದ ರಾಜ್ಯಗಳಿಗೆ ಯಾವುದೇ ನಷ್ಟವಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದರು. ಆದರೆ ಅಮಿತ್ ಶಾ ಮಾತುಗಳು ವಾಸ್ತವದಲ್ಲಿ ಇರಲಿಲ್ಲ ಎನ್ನುತ್ತಾರೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್.
‘ಕಾಂಗ್ರೆಸ್ ಪಕ್ಷದ ಕಳವಳಗಳನ್ನು ನಿವಾರಿಸಿದರೆ ಹೊಸ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಬೆಂಬಲಿಸುತ್ತೀರಾ?’ ಎಂದು ಕೇಳಿದಾಗ ಜೈರಾಮ್ ರಮೇಶ್, “ಮೊದಲಿಗೆ ಸರ್ವಪಕ್ಷ ಸಭೆ ಕರೆಯಬೇಕು; ಪ್ರಸ್ತಾಪಗಳನ್ನು ಲಿಖಿತವಾಗಿ ನೀಡಬೇಕು. ನಮ್ಮ ಹಿಂದಿನ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ ಭರವಸೆ ನೀಡಿದ್ದಕ್ಕೂ ಮತ್ತು ಮಸೂದೆಯಲ್ಲಿ ತಂದಿದ್ದಕ್ಕೂ ಆಕಾಶ ಭೂಮಿಯಷ್ಟು ವ್ಯತ್ಯಾಸವಿತ್ತು. ಚರ್ಚೆಗಳು ನಡೆಯಬೇಕು ಮತ್ತು ಪಕ್ಷಗಳಿಗೆ ತಮ್ಮ ನಿಲುವುಗಳನ್ನು ಅಂತಿಮಗೊಳಿಸಲು ಸಮಯ ನೀಡಬೇಕು. ಏಕೆಂದರೆ ಇದು ಸಂವಿಧಾನ ತಿದ್ದುಪಡಿಯಾಗಿದೆ. ಚರ್ಚೆಯ ಸಮಯದಲ್ಲಿ ನೀವು ದಿಢೀರನೆ ತಿದ್ದುಪಡಿಗಳನ್ನು ತರಲು ಸಾಧ್ಯವಿಲ್ಲ” ಎಂದಿದ್ದಾರೆ.
ಕಾಂಗ್ರೆಸ್ ಮತ್ತು ಪ್ರಮುಖ ವಿರೋಧ ಪಕ್ಷಗಳನ್ನು ಹೊರಗಿಟ್ಟು ಬಿಜೆಪಿಯವರು ಪ್ರಾದೇಶಿಕ ಪಕ್ಷಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಆರೋಪ ಮಾಡಿರುವ ರಮೇಶ್, “ಅವರಿಗೆ ಮೌಖಿಕವಾಗಿ ಹೇಳಿದ್ದೂ ಸಹ ಕರಡು ಮಸೂದೆಯಲ್ಲಿ ಇರಲಿಲ್ಲ. ಇದು ಅವರ ಉದ್ದೇಶಗಳು ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ” ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಡಿಎಂಕೆಯ ನಾಯಕರೊಂದಿಗೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದರೆ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಬಿಜೆಪಿ ಬೇರೆಯ ರೀತಿಯ ಯೋಜನೆಯನ್ನು ಹೊಂದಿರುವಂತೆ ಕಾಣುತ್ತಿದೆ.
“ಟಿಎಂಸಿ ಒಳಗೆ ಆಂತರಿಕ ಬಿರುಕುಗಳು ಎದ್ದಿವೆ. ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ತೀವ್ರಗೊಂಡು ಪಕ್ಷದ ಶಕ್ತಿ ಕ್ಷೀಣಿಸುತ್ತಿದೆ. ಬಂಗಾಳದ ರಾಜಕೀಯ ಬದಲಾಗಿದೆ. ಪ್ರಸ್ತುತ ಟಿಎಂಸಿ ನಾಯಕತ್ವದ ಬಗ್ಗೆ ತೀವ್ರ ನಿರಾಶೆಗೊಂಡಿರುವ ವರ್ಗ, ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಟಿಎಂಸಿ ಕಾಂಗ್ರೆಸ್ನಂತಲ್ಲ; ಅದೊಂದು ಪ್ರಾದೇಶಿಕ ಪಕ್ಷ. ಅಲ್ಲಿ ಪಕ್ಷ ಸೀಳಾಗುವಂತಹ ಬೆಳವಣಿಗೆಗಳು ನಡೆಯಬಹುದು. ಇದನ್ನು ಬಿಜೆಪಿ ಸಂಸತ್ತಿನಲ್ಲಿ ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಹುದು” ಎನ್ನುತ್ತಿವೆ ಬಿಜೆಪಿಯ ಮೂಲಗಳು.
ಪಶ್ಚಿಮ ಬಂಗಾಳದಲ್ಲಿ ತನ್ನ ಪಕ್ಷ ಅಧಿಕಾರ ಕಳೆದುಕೊಂಡ ಕೆಲವೇ ದಿನಗಳಲ್ಲಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯವರು ಹೊಸ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ವಿರೋಧಿಗಳ ವಿರುದ್ಧ ರಾಜಕೀಯ ಒತ್ತಡ ಹಾಗೂ ಬೆದರಿಕೆ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದರು. “ಬಂಗಾಳದಲ್ಲಿ ಬಿಜೆಪಿ ಎಷ್ಟು ಹೆಚ್ಚು ಟಿಎಂಸಿಯನ್ನು ಹಿಂಸಿಸುತ್ತದೆಯೋ, ನವದೆಹಲಿಯಲ್ಲಿ ಅದು ಅಷ್ಟೇ ಹೆಚ್ಚು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಚುನಾಯಿತ ಪ್ರತಿನಿಧಿಗಳನ್ನು ಹಿಂಸಿಸಲಾಗುತ್ತಿದೆ ಮತ್ತು ಬೆದರಿಸಲಾಗುತ್ತಿದೆ, ಆದರೆ ನಾವು ಧೃತಿಗೆಡದೆ ಹೋರಾಡುತ್ತಿದ್ದೇವೆ” ಎಂದು ಮಮತಾ ಗುಡುಗಿದ್ದಾರೆ. ಆದರೆ, ರಾಜಕಾರಣದಲ್ಲಿ ಮೋದಿ- ಅಮಿತ್ ಶಾ ಯಾವ ದಾಳಗಳನ್ನು ಉರುಳಿಸುತ್ತಾರೋ ಯಾರು ಬಲ್ಲರು?
‘ಒನ್ ನೇಷನ್ ಒನ್ ಎಲೆಕ್ಷನ್’ ಬಗ್ಗೆ ಬಿಜೆಪಿಗೇಕೆ ಆಸಕ್ತಿ?
ಚುನಾವಣೆಗಳಿಗೆ ವಿನಿಯೋಗವಾಗುವ ಶ್ರಮ ಮತ್ತು ಸಮಯವನ್ನು ಉಳಿಸುವುದು ‘ಒನ್ ನೇಷನ್ ಒನ್ ಎಲೆಕ್ಷನ್’ ಯೋಜನೆಯ ಗುರಿ ಎಂದು ಬಿಜೆಪಿಯವರು ಪ್ರತಿಪಾದಿಸುತ್ತಾರೆ. ಆದರೆ ವಾಸ್ತವದಲ್ಲಿ ಇದು ಪ್ರಾದೇಶಿಕ ಅಸ್ಮಿತೆ ಮತ್ತು ಸ್ಥಳೀಯ ಸಮಸ್ಯೆಗಳನ್ನು ಗೌಣವಾಗಿಸುವ ಉದ್ದೇಶವನ್ನು ಹೊಂದಿದೆ. ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಒಟ್ಟಿಗೆ ನಡೆದಾಗ, ಚುನಾವಣಾ ಪ್ರಚಾರವು ಹೆಚ್ಚಾಗಿ ರಾಷ್ಟ್ರೀಯ ವಿಷಯಗಳು, ದೇಶದ ಭದ್ರತೆ ಮತ್ತು ಪ್ರಧಾನಿ ನರೇಂದ್ರ ಮೋದಿಯಂಥವರ ನಾಯಕತ್ವದ ಸುತ್ತಲೇ ಸುತ್ತುತ್ತದೆ. ಸ್ಥಳೀಯ ಅಥವಾ ರಾಜ್ಯ ಮಟ್ಟದ ವಿಷಯಗಳು ರಾಷ್ಟ್ರೀಯ ಅಲೆಯ ಮುಂದೆ ಮರೆಯಾಗುವ ಸಾಧ್ಯತೆ ಇರುತ್ತದೆ. ಇದು ಪ್ರಾದೇಶಿಕ ಪಕ್ಷಗಳಿಗೆ ಹಿನ್ನಡೆಯಾಗಿ, ರಾಷ್ಟ್ರೀಯ ಬ್ರ್ಯಾಂಡ್ ಹೊಂದಿರುವ ಪಕ್ಷಗಳಿಗೆ ನೇರ ಲಾಭ ತಂದುಕೊಡುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಡಿಲಿಮಿಟೇಷನ್ ತೂಗುಗತ್ತಿ!
ಮಹಿಳಾ ಮೀಸಲಾತಿ ಜಾರಿಗೆ ಬರಬೇಕಾದರೆ, ಡಿಲಿಲಿಮಿಟೇಷನ್ ಆಗಬೇಕು ಎನ್ನುವ ಬಿಜೆಪಿಯ ಉದ್ದೇಶ ಈಗಾಗಲೇ ಸ್ಪಷ್ಟವಾಗಿದೆ. ಮಹಿಳೆಯರ ಹೆಗಲ ಮೇಲೆ ಬಂದೂಕು ಇಟ್ಟು ದಕ್ಷಿಣ ರಾಜ್ಯಗಳತ್ತ ಗಂಡು ಹಾರಿಸುವ ದುಷ್ಟತನಕ್ಕೆ ಸೋಲಾಯಿತು. ಸರ್ಕಾರ ಬಾಯಿ ಮಾತಿನಲ್ಲಿ ಹೇಳುವುದು ಒಂದಾದರೆ ಲಿಖಿತ ದಾಖಲೆಯಲ್ಲಿ ಇದ್ದದ್ದೇ ಬೇರೆಯದಾಗಿತ್ತು. ಡಿಲಿಮಿಟೇಷನ್ ತೂಗುಗತ್ತಿಯ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ.



