ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ರಾಜೀನಾಮೆಯ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಕರು ನಾಗರಾಜನ್, ರಾಜ್ಯ ಕಾರ್ಯದರ್ಶಿ ಸುಮತಿ ವೆಂಕಟೇಶ್ ಸೇರಿದಂತೆ 14ಕ್ಕೂ ಹೆಚ್ಚು ಪ್ರಮುಖ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ತಮಿಳುನಾಡು ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು ತೀವ್ರಗೊಂಡಿದೆ.
ಅಣ್ಣಾಮಲೈ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿ, ಹೊಸ ರಾಜಕೀಯ ಚಳವಳಿಯನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಈ ಸರಣಿ ರಾಜೀನಾಮೆ ಪ್ರಕ್ರಿಯೆ ನಡೆದಿದೆ. ತಮಿಳುನಾಡು ಕುರಿತಾದ ತಮ್ಮ ದೃಷ್ಟಿಕೋನ ಮತ್ತು ಪಕ್ಷದ ವರಿಷ್ಠರ ನಿಲುವುಗಳು ಹೊಂದಾಣಿಕೆಯಾಗುತ್ತಿಲ್ಲ ಎಂದು ಅಣ್ಣಾಮಲೈ ಪಕ್ಷ ತೊರೆದಿದ್ದರು.
ಅಣ್ಣಾಮಲೈ, ತಾವು ಪಕ್ಷ ಬಿಡುವ ನಿರ್ಧಾರವನ್ನು 2025ರ ಡಿಸೆಂಬರ್‌ನಲ್ಲೇ ವರಿಷ್ಠರಿಗೆ ತಿಳಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. ಆದರೆ, ವಿಧಾನಸಭಾ ಚುನಾವಣೆಯ ಪ್ರಚಾರ ಮುಗಿಯುವವರೆಗೆ ಪಕ್ಷದಲ್ಲೇ ಮುಂದುವರಿಯುವಂತೆ ಹೈಕಮಾಂಡ್ ವಿನಂತಿಸಿತ್ತು ಎಂದು ಅವರು ಹೇಳಿದ್ದಾರೆ.
“ನನ್ನ ರಾಜಕೀಯ ಗುರಿಗಳು ದೊಡ್ಡದಾಗಿವೆ. ಸಮಾಜದ ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ಕೊಂಡೊಯ್ಯುವ ಹೊಸ, ಎಲ್ಲರನ್ನೂ ಒಳಗೊಳ್ಳುವ ವೇದಿಕೆಯ ಅಗತ್ಯವಿದೆ” ಎಂದು ಹೇಳಿರುವ ಅಣ್ಣಾಮಲೈ, ಶೀಘ್ರದಲ್ಲೇ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಮುಂದಿನ ಚುನಾವಣೆಗಳನ್ನು ಎದುರಿಸುವುದಾಗಿ ಪ್ರಕಟಿಸಿದ್ದಾರೆ.
ಅಣ್ಣಾಮಲೈ ನಿರ್ಧಾರವನ್ನು ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಆದರೆ, ಹಾಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಈ ಬೆಳವಣಿಗೆಯನ್ನು ತಳ್ಳಿಹಾಕಿದ್ದಾರೆ. “ಬಿಜೆಪಿ ಸಿದ್ಧಾಂತದ ಆಧಾರದ ಮೇಲೆ ನಡೆಯುವ ಸಂಸ್ಥೆ. ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೆ ಯಾವುದೇ ಹಿನ್ನಡೆಯಾಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಹೊಸ ಪಕ್ಷ ಕಟ್ಟಬಹುದು” ಎಂದು ನಾಗೇಂದ್ರನ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: SIR | ಇದು ಪ್ರಭುಗಳೇ ಪ್ರಜೆಗಳ ಆಯ್ದುಕೊಳ್ಳುವ ಕಾಲ; ಸುಪ್ರೀಂ ಮೂಕ ಪ್ರೇಕ್ಷಕ!
2026ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮರುಸ್ಥಾಪನೆಯಾದ ನಂತರ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಎಐಎಡಿಎಂಕೆ ನಾಯಕರ ವಿರುದ್ಧ ಅಣ್ಣಾಮಲೈ ಮಾಡಿದ್ದ ಕೆಲವು ವಿವಾದಾತ್ಮಕ ಕಾಮೆಂಟ್‌ಗಳಿಂದಾಗಿ ಉಭಯ ನಾಯಕರ ನಡುವಿನ ಸಂಬಂಧ ಹಳಸಿತ್ತು.
ಈಗ ಕರು ನಾಗರಾಜನ್ ಸೇರಿದಂತೆ ಹಲವು ಪ್ರಮುಖ ಪದಾಧಿಕಾರಿಗಳು ಹೊರಬಂದಿರುವುದು, ಮುಂಬರುವ ದಿನಗಳಲ್ಲಿ ಇನ್ನು ಹಲವು ನಾಯಕರು ಮತ್ತು ಕಾರ್ಯಕರ್ತರು ಅಣ್ಣಾಮಲೈ ಕಟ್ಟಲಿರುವ ಹೊಸ ಪಕ್ಷದ ಕಡೆಗೆ ಮುಖ ಮಾಡಲಿದ್ದಾರೆ ಎನ್ನಲಾಗುತ್ತಿದೆ.





