ಸ್ವಾತಂತ್ರ್ಯೋತ್ಸವದ ಕಾಲಕ್ಕೆ ಕೋಡಿ ಹರಿದು, ರಾಗಿ ಫಸಲು ಗರಿಗರಿಯಾಗಿರಬೇಕಾಗಿತ್ತು…

Date:

Advertisements
ಬಯಲುಸೀಮೆಗೆ ರಾಗಿ ಪ್ರಧಾನ ಆಹಾರ ಬೆಳೆ. ರಾಗಿ ಬೆಳೆಯಾದರೇ ರೈತರಿಗೆ ಸಮಾಧಾನ. ಅಪ್ಪಂತಹವರು ಮನೆಗೆ ಬಂದರೆ ಅವರಿಗೆ ಒಪ್ಪತಿನ ಊಟಕ್ಕೆ ಅರಿಕಾಗಬಾರದು, ಅದಕಾಗಿ ರಾಗಿ ಬೆಳೆಯನ್ನು ರೈತರು ಬಹಳ ಬಯಸುವರು. ಸಮಸ್ಯೆಗಳು ಏಷ್ಟೇ ಇದ್ದರೂ ಉಣ್ಣೋ ರಾಗಿ ಮನೇಲಿ ಇದ್ದರೆ ಸಾಕು, ಬೆಟ್ಟದಷ್ಟು ಬದುಕನ್ನು ಜನ ಹಿಂದಾಕಬಲ್ಲರು... 

ಸಹೃದಯರಿಗೆ, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಮುಂದೆ ಮಳೆಯಾಗಬಹುದೇನೋ? ಮುಂಗಾರು ಚುರುಕಾದರೂ ಬೆಳೆ ಮಾತ್ರ ಕೈಸೇರದೆ ಮುಂಗಾರು ಕಾಲದಲ್ಲೂ ಮಳೆಯಾಶ್ರಿತ ಬರಗಾಲ. ಹೀಗೆಯೇ ಮುಂದುವರಿಯಬಹುದೇನೋ? ಮುಂದೆಯೂ, ಚಳಿಗಾಲದಲ್ಲಿಯೂ ಬರಗಾಲ. ಸಮತೋಲನವಾಗದ ಮಳೆಗಾಲದ ಸಮಸ್ಯೆ. ಬರಗಾಲವನ್ನು ಮುಡಿದೇ ಎಲ್ಲಾ ಕಾಲಗಳೂ ಬಂದು ಹೋಗುತ್ತಿವೆ. ಮಳೆಗಾಲ ಮತ್ತು ಬರಗಾಲ ಬೆಳೆಗಾರರಿಗೆ ತಾಕಲಾಟ ತಂದಿಟ್ಟು ನಾ ಮುಂದು ತಾ ಮುಂದು ಎಂದು ಒಂದಕ್ಕೊಂದು ತಳ್ಳಾಡುತ್ತಿವೆ. ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದರೆ ದಾವು ಇಂಗುವುದೇ? ರಂಗೋಲಿ ಹಾಕಲು ಮನೆಯಂಗಳಕ್ಕೆ ನೀರಾಕಿ ಧೂಳಡಗಿಸುವಂತೆ ಮಾಡುವ ಹಾಗೆ ಗೂಬರು ಸ್ವಾನೆಗಷ್ಟೇ ನೆಲ ತಣ್ಣಗಾಗಿರುವುದು; ಬಿತ್ತನೆಗೆ ಅಲ್ಲಲ್ಲಿ ಅನುಕೂಲ ಆಗುವಷ್ಟು. ಬಿತ್ತಲು ಎಷ್ಟೋ ಕಡೆ ಕುಳ ಇಟ್ಟರೆ ನೆಲ ನರನರ ಕರಗುಟ್ಟುವುದು.

ಹೆಸರು ಕಾಳಿನ ಒಕ್ಕಣೆಯ ಅವಧಿ ಅಖೈರಾಗಿ ರಾಗಿ ನಾಟಿ ಮಾಡಲು ಭೂಮಿ ಸಿದ್ದತೆ ಮುಗಿದು ಬಿತ್ತನೆಯ ತವಕದಲ್ಲಿದ್ದಾರೆ ರೈತಾಪಿಗಳು. ಗಾಳಿ ಬಾಯಿ ಬಾಯಿ ಬಡಿದುಕೊಳ್ಳುತ್ತಿದೆ. ದನಕುರಿಗೆ ಹೋದವರಿಗೆ ಶೀತ ಮುಚ್ಚಿಕೊಳ್ಳುವ ಹಾಗೆ. ಶೀತಕ್ಕೆ ಆಸ್ಪತ್ರೆ ಮತ್ತು ಹಾಸಿಗೆಯ ಬಯಸತೊಡಗಿದ್ದಾರೆ ಜನಸಾಮಾನ್ಯರು. ಹಗಲೂ ಇಳ್ಳೂ ಆಷಾಢ ಮುಗಿದ ಮೇಲೂ ಗಾಳಿ ಒಯ್ದುಕೊಳುವುದು ಮುಗಿಯದಾಗಿರುವುದು. ಮಳೆ ಸುರಿಸುವ ಮೋಡಗಳನ್ನು ಅದೆಲ್ಲಿಗೋ ತಳ್ಳಿಕೊಂಡು ಹೋಗಲು ಗಾಳಿಯ ಗುದ್ದಾಟ ನಿಂತೇಯಿಲ್ಲ ಬಿಡಿ. ಮೋಡಗಳನ್ನು ಕೆಡವಿ ಗುಡ್ಡಗಳನ್ನು ಕುಸಿಯುವಂತೆ ಮಾಡುವ ಗುತ್ತಿಗೆ ಕೆಲಸ ಹಿಡಿದಿರಬಹುದು ಗಾಳಿ. ಸುರಿಯುವ ಮಳೆಗೆ ನಾಡುಗಳ ಹಲವು ಪಾಳುಗಳೇ ಕೊಚ್ಚಿ ಹೋಗಿ ಕಾಡು ತೊರೆಹಳ್ಳ ಸೇರುವ ದಾರುಣ ದೃಶ್ಯಗಳು ಹೇರಳವಾಗುತ್ತಿವೆ. ಮಳೆಯ ನರ್ತನಕ್ಕೆ ಕಾಡು ಕಣಿವೆಯಲ್ಲಿ ಹಳ್ಳಿಗಳು ನೆಲದ ಆಳಕ್ಕೆ ನಾಟಿಕೊಂಡಿವೆ.

ಬಯಲು ಸೀಮೆಯಲ್ಲಿ ಮಾತ್ರ ಒಂದು ಹೋದರೂ ಇನ್ನೊಂದು ಮಳೆ ಬರಬಹುದು ಎಂಬ ಭಂಡತನದಿಂದ ಮೊಂಡು ಪೈರು ರಾಗಿ ಬಿತ್ತನೆ ನಡೆಯುತ್ತಿದೆ. ಗೆಣ್ಣು ನೋವಾಗುವ ತನಕ ಹಿಡಿ ತುಂಬಾ ಬೀಜ ಹಿಡಿದು ಅವಸರವಸರವಾಗಿ ಬಿತ್ತುತ್ತಿರುವರು ಮುಂದೆ ಮಳೆಯಾದರೆ ಬೆಳೆ ಕೈಸೇರಬಹುದೆಂದು ಊಹಿಸಿ. ಉಸಿರು ಹುಡುಕುವ ಗಣೆ ಕೋಲಿನ ಹಾಗೆ ಹದ ಹುಡುಕಿ ನೆಲದ ಮರ್ಮ ಅರಿತವರಾಗಿ ಭೂಮಿಗೆ ಬೀಜ ಮಡಗುತ್ತಿರುವರು. ಬಿತ್ತಿದ ಬೀಜಗಳು ನೆಲದ ಎದೆಯೊಳಗಿರುವಾಗಲೇ ಇರುವೆಗಳಿಗೆ ಆಹಾರವಾಗುವವೋ ಅಥವಾ ಅವು ಹುಟ್ಟಿ ಬಿತ್ತಿದವರ ಬಾಯಿ ತುಂಬಾ ಅನ್ನವಾಗುವವೋ ಕಾದು ನೋಡುವ ಕಷ್ಟ ಬೆಳೆಗಾರರಿಗೆ ಅನಿವಾರ್ಯವಾಗಿದೆ.

Advertisements

ಇದನ್ನು ಓದಿದ್ದೀರಾ?: ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಮತ್ತೆ ಮಳೆ; ಆರೇಂಜ್ ಅಲರ್ಟ್‌ ಘೋಷಣೆ

ಬಿತ್ತನೆಯ ಕಾಲ ಮುಕ್ತಾಯವಾದ ನಂತರಕ್ಕೆ ನಮ್ಮ ಕಡೆಯೂ ಕೆರೆ ಕಟ್ಟೆಗಳು ತುಂಬಿ ಕೋಡಿಗಳು ಹರಿಯಬಹುದು. ಜೋಪು ನೀರಿನ ಸಿಗುಳು ಝರಿಯೊಳಗೆ ಮಕ್ಕಳು ಕೇಕೆ ಹಾಕಿ ಹಾಡಿ ಕುಣಿದು ಜಾರಿ ಬಿದ್ದು ಎದ್ದೇಳಲು ಬೆಳಕು ಥಣಗುಟ್ಟಿ ಪಳಾರಿಸಬಹುದು. ಮುಂದೆ, ಇದೇ ಮಳೆಗಾಲ ಮುಗಿಯುವ ವೇಳೆಗೆ ನೆಲದ ಮೇಲೆ ಬೆಳಕಿನ ನೀರು ಹರಿದಾಡಬಹುದು. ಕೋಡಿ ನೀರಿನ ನೀನಾದವನ್ನು ಈ ವರ್ಷದ ಮಳೆಗಾಲದ ಅಂತ್ಯಕ್ಕಾದರೂ ನಾವೂ ಕೇಳಬಹುದೇನೋ? ಹಳ್ಳಗಳ ಕೊರಳೊಳಗೆ ಹರಿಯುವ ನೀರಿನ ನಾದ. ಸ್ವಾತಂತ್ರ್ಯೋತ್ಸವದ ಕಾಲಕ್ಕೆ ಕೋಡಿಗಳು ಹರಿದು ಸಾಲಳ್ಳಿಗಳ ಕೆರೆಗಳು ಇಷ್ಟೊತ್ತಿಗಾಗಲೇ ತುಂಬಿರಬೇಕಾಗಿತ್ತು. ಗುಣಿ ರಾಗಿ ಉಗುಣಿ ಬಳ್ಳಿ ಚಿಗುರಿನ ಹಾಗೆ ಕಾಲ್ದಾರಿ ಒಳಗೆ ಕಾಲ್ಬೆರಳಿಗೆ ತೊಡರಾಕಿಕೊಳ್ಳುವಂತೆ ರಾಗಿ ಫಸಲು ಗರಿಗರಿಯಾಗಿರಬೇಕಾಗಿತ್ತು. ನೋಡೋಣ? ಸ್ವಾತಂತ್ರ್ಯೋತ್ಸವ ಮುಗಿದು; ಗೌರಮ್ಮ ಗದ್ದಿಗೆ ಮೇಲೆ ಬರುವ ಹೊತ್ತಿಗಾದರೂ, ರಾಗಿ ಪೈರು ನಾಟಿಯಾಗಬಹುದು.

ಕಾಲಕ್ಕೆ ಸರಿಯಾಗಿ ಬಿತ್ತನೆ ಮಾಡಲು ಮಾತ್ರ ಈಗ ಮಳೆಯ ಕೊರತೆಯಾಗಿದೆ. ಉಯ್ಯೋ ಕಡೆ ಸಕತ್ತಾಗಿಯೇ ಮಳೆಸುರಿದು ಜೀವ ಹಾನಿ ಉಂಟುಮಾಡಿದೆ. ಗುಡ್ಡಗಳು ಬುಡಮುಂಟ ಕುಸಿದಿವೆ, ಅವುಗಳು ಇದ್ದ ಕುರುಹುಗಳನ್ನೂ ಉಳಿಸದೆ. ಕುಟುಂಬಗಳು ಕೊಚ್ಚಿಹೋಗಿವೆ. ಗ್ರಾಮಗಳೇ ಹೇಳ ಹೆಸರಿಲ್ಲದ ಹಾಗೆ ಮಾಡಿದೆ ಮಳೆ. ಹೊಸದಾಗಿ ಹೇಳ ಬೇಕಾಗಿಲ್ಲ ಕಾರಣ ಹವಾಮಾನದ ವ್ಯತ್ಯಾಸ. ಆರೋಗ್ಯದ ವ್ಯತ್ಯಾಸ ಉಂಟಾದರೆ ಹೇಗೆ ಅಜೀರ್ಣವಾಗಿ ದೇಹದಲ್ಲಿ ನರಳಾಟ ಶುರುವಾಗುತ್ತದೆಯೋ ಹಾಗೆ ವಾತಾವರಣದಲ್ಲಿ ವ್ಯತ್ಯಾಸ ಉಂಟಾಗಿ ಮನುಷ್ಯ ಪ್ರಾಣವನ್ನೇ ಕಳೆದುಕೊಳ್ಳಲು ಕಾರಣವಾಯಿತು. ಹಾಲು ಕುಡದೇ ಬದುಕೋದು ಕಷ್ಟ ವಿಷ ಕುಡಿದು ಬದುಕೋದು ಉಂಟಾ? ಕುರಿ ಕಾಯಲು ತೋಳ ನೇಮಕವಾದ ಹಾಗಾಯಿತು. ಕಾಡುಕಾಯಲು ಕೊಡಲಿಗಳು, ಗುಡ್ಡ ಕಾಯಲು ಇಟಾಚಿಗಳು, ಹೊಲಗಳಿಗೆ ವಿಷಕಾರಕವಾದ ರಾಸಾಯನಿಕಗಳು. ಅವ್ವನ ಎದೆ ಹಾಲೂ ವಿಷವಾಗಿರುವಾಗ ಅನ್ನ  ಆಹಾರಗಳು ಅಮೃತವಾಗಿರಲು ಸಾಧ್ಯವೇ?

ಬೇಲಿಗಳು ಬೆಳೆದಿವೆ ಹೊಲಗಳು ಮುಚ್ಚಿಕೊಳ್ಳುವ ಹಾಗೆ. ಬೇಲಿ ಅರಗು ಮಾಡಿ ಹೊಲದೊಳಗೆ ಹೋಗಿ ನಿಂತರೆ ಒಣಿ ನೆಲ. ಬಿತ್ತನೆ ಮಾಡಲು ಬಿರುವಾಗಿದೆ ನೆಲ. ಬೇಸಾಯ ಮಾಡಿದರೂ ನೆಲ ನೆನೆಯುವಂತಹ ಮಳೆ ಆಗಿಲ್ಲ. ಮೋಡ ಕವಿದ ವಾತಾವರಣ ಮುಂದುವರೆದು ಧೂಳು ಹದ ಇದ್ದೇ ಇದೆ, ಧೂಳು ಸ್ವಾನಾಡಿ. ಮಾಗಿ ಉಕ್ಕೆ ಮಾಡಿದರೂ ಮಳೆ ಕಡಿಮೆಯಾಗಿ ರಾಗಿ ಬಿತ್ತಲು ಹದವೇ ಇಲ್ಲದಂತಾಗಿರುವುದು. ಮಾಡಿದ ಜನ್ಮ ತಡಿಯುತ್ತಾ? ಹೊಲ ಬೀಳು ಬಿಡಲು ಆಗುವುದಿಲ್ಲ ಬಿತ್ತಲೇಬೇಕು ಬೆಳಿಲೇಬೇಕು. ಕೊಯ್ಲು ಮಾಡುವಾಗ ಕೋಳಿ ಜುಟ್ಟಿನ ಮೇಲೆ ನೀರು ಚುಮಿಕಿಸುವ ಹಾಗೆ ಆಗಾಗ ಮಳೆ ಉದುರುತ್ತಿರುವುದು. ಹದಕ್ಕೆ ಬಂಗ ಇದ್ದರೂ ಇರಲಿ; ಬೀಜ ಭೂಮಿ ಒಳಗಿರಲೆಂದು ಕಟ್ಟಿದ ಮಡಿಲು ಬಾರ ಇಳಿಸಿಕೊಳ್ಳಲು ಬಿತ್ತೋ ಕೆಲಸಗಳು ಹೊಲಟ್ಟಿಗಳೊಳಗೆ ಮುಂದುವರಿದಿವೆ. ಬಿತ್ತೋದು, ರಾಗಿ ನಾಟಿ ಮಾಡೋದು ಉಬ್ಬೆ ಮಳೆ, ಮಾಗಿ ಮಳೆ ತನಕವೂ ನಡೆಯುತ್ತಾದರೂ ಮುಂಗಾಡಿ ಬಿತ್ತಿ ಮಳೆ ಬಂದರೆ ತೆನೆ ಎತ್ತಿಯಾದರೂ ರಾಗಿ ಬೆಳೆ ಕೈಯ್ಯಾರ ಮಾಡಿಕೊಳ್ಳಲು ಅವಕಾಶ ಆಗುತ್ತದೆ ಎಂಬುದು ಬಿತ್ತನೆದಾರರ ನಿರೀಕ್ಷೆಯಾಗಿದೆ.

ಮುಂಗಾಡಿ ಬಿತ್ತಿದರೆ ಹಿಂಗಾಡಿ ಮಳೆಗಳಿಗೆ ಸಿಕ್ಕಿ ಆಗಲೂ ಹೊಲ ಬದುಕು ಮೂರಾಬಟ್ಟೆಯಾಗುವುದು. ಹಿಂಗಾಡಿ ಬಿತ್ತಿದರೆ ಮುಂದೆ ಮಳೆ ಬರದಿದ್ದರೆ ಬೆಳೆ ಗತಿ ಏನು? ಎನ್ನುವ ಆತಂಕ. ರಾಗಿ ಬೆಳೆಗಾರರು ವಿಳಂಬ ಮುಂಗಾರು ಹಿಂಗಾಡಿ ಮಳೆಗಾಲದಲ್ಲಿ ಬಾರೀಕಾಲವೆಲ್ಲಾ ಇಂಗೇ ಕಾಲದೂಡುವರು. ಆಗಲೇ ಕೆಲವರು ಬಿತ್ತಿದ್ದಾರೆ, ಅವೇನಾದರೂ ಮುಂದೆ ಮಳೆಗೆ ಸಿಕ್ಕಿದರಂತೂ ಹೊಲಕೋಟು ಮನೆಗೋಟು ಆಗುವದು, ಆರಂಭ. ಬೇಸಾಯದ ಬದುಕೇ ಹೀಗೆ ಅಲಾಕು ಮೂರು ಪಾಲು. ಹೊಲಕೋಟು ಮನಿಗೋಟು.

ಬಿತ್ತಿದ ರಾಗಿ ಬಿದ್ದ ಸ್ವಾನೆ ಮಳೆಗೇ ಆಗೋವೋಟು ಹುಟ್ಟಿ ಭೂಮಿ ಮೇಲೆ ಕಾಣುತ್ತಿದೆ. ಬಿತ್ತನೆ ಬೆಳೆಯುವ ಹೊಸತನ ಕಾಯಿಸಿಟ್ಟ  ಹಾಲು ಕೆನೆಗಟ್ಟುವ ಹಾಗೆ ಸ್ವಾನಾಡಿ ಹೊಲಗಳಲ್ಲಿ ಹಸಿರು ಕೆನೆಗಟ್ಟಿರುವುದು. ಗಾಳಿಗಿಟ್ಟುಕೊಂಡಿದೆ ಪಸಿಮೆಯಾದ ನೆಲ ಗಾರಾಗುವ ಹಾಗೆ ವಾತಾವರಣ. ಹುಳತ್ತಿ ವಟ್ಲು ಹಂತದಲ್ಲೇ ಸೊಸಿ ರಾಗಿ ಎಲ್ಲಿ ಸಾಯುವುದೋ ಎಂದು ಬೇಸಾಯಗಾರರು ಯೋಚಿಸತೊಡಗಿರುವರು. ಉಣ್ಣೋದು ಊಟವಲ್ಲ, ಕುಡಿಯೋದು ನೀರಲ್ಲ ಎಂದು ಉಸಿರು ಕಟ್ಟುವಂತೆ ಹೊಲಮನೇಲಿ ಬದುಕ ಮಾಡಿದರೂ ಬೆಳೆ ಕೈಸೇರುವುದೆಂಬ ಸಮಾಧಾನವೇ ಬೇಸಾಯಗಾರರಲ್ಲಿ ಇಲ್ಲದಂತಾಗಿದೆ. ಅಂತೂ ಅಲ್ಲಲ್ಲಿ ಚಿಗೀಚಲು, ದೊಡ್ಡೀಚಲು ಮಳೆಗೆ ರಾಗಿ ಬಿತ್ತನೆ ಆಗಿದೆ. ಹುಟ್ಟಾಣಿಕೆ ಅಂತಹ ಪಾಡೇನಾಗಿಲ್ಲವಾದರೂ ಬೆಳೆ ನಿಲ್ಲಲು ವಾಸ್ತವದಲ್ಲಿ ಮಳೆ ಬೇಕಾಗಿರುವುದು. ಸುಳಿ ಮೇಲೆ ಮಳೆ ನೀರು ಬೀಳುವ ಹಾಗೆ ಆಗಾಗ್ಗೆ ಸ್ವಾನಾಡಿದರೂ ರಾಗಿ ಪೈರು ಬೇರೊಳಗೇ ಜೀವ ಹಿಡಿದಿಟ್ಟುಕೊಂಡು ಪಾಡಾಗಿ ಬೆಳೆಯಬಹುದು. ಜನರ ಪರದಾಟ ಕಡಿಮೆಯಾಗಬಹುದು. ಅವರ ನಿಜವಾದ ನಿರೀಕ್ಷೆಗಳು ಉಸಿಯಾಗದಿರಬಹುದು.

ರಾಗಿ ಪ್ರಧಾನ ಆಹಾರ ಬೆಳೆ. ರಾಗಿ ಬೆಳೆಯಾದರೇ ರೈತರಿಗೆ ಸಮಾಧಾನ. ಅಪ್ಪಂತಹವರು ಮನೆಗೆ ಬಂದರೆ ಅವರಿಗೆ ಒಪ್ಪತಿನ ಊಟಕ್ಕೆ ಅರಿಕಾಗಬಾರದು ಅದಕ್ಕಾಗಿ ರಾಗಿ ಆಗುವುದನ್ನು ರೈತರು ಬಹಳ ಬಯಸುವರು. ಸಮಸ್ಯೆಗಳು ಏಷ್ಟೇ ಇದ್ದರೂ ಉಣ್ಣೋ ರಾಗಿ ಮನೆಲೀ ಇದ್ದರೆ ಸಾಕು. ಬೆಟ್ಟದಷ್ಟು ಬದುಕನ್ನು ಜನ ಹಿಂದಾಕಬಲ್ಲರು. ಅವರಿಗೆ ಮನೆಯೊಳಗೆ ರಾಗಿ, ಕಾಳುಕಡ್ಡಿ ಅರಿಕ್ಯಾಗ ಬಾರದು ಅಷ್ಟೇ.

ಎಷ್ಟೋ ಮಳೆ ಉಯ್ಯುವುದರ ಹಾಗೆ ಮೋಡ ಕವಿಯುವುದು ಎಲ್ಲೋ ಮಳೆ ಸುರಿಸಿ ಸುಮ್ಮನಾಗಿ. ಬಿತ್ತನೆಗೆ ನೆಲ ತನುವಾಗದೆ ಬೀಜ ಇರುವೆ ಪಾಲಾಗುವಂತೆ ಮಾಡಿದೆ‌ ಎನ್ನುವ ಗೊಣಗಾಟ ಬೇಸಾಯಗಾರರಿಗೆ ಮಾಮೂಲಿಯಾಗಿದೆ.

ಹೇಮಾವತಿ ನದಿಯು ತುಂಬಿ ನಮ್ಮ ಕಡೆಯೂ ನದಿ ನೀರು ಹರಿಯುತ್ತಿದೆ. ಹೊಲಗಳು ಬೀಳುಗಳು ಬೀಜ ಕಾಣುವ ಅವಸರದಲ್ಲಿವೆ. ಕೆರೆಗಳು ತುಂಬುತ್ತಿವೆ ನದಿ ನೀರು ಕಾಲುವೆಗಳಲ್ಲಿ ಹರಿದು. ಕೆರೆಗಳ ಬಯಲು, ಬೇಲಿ, ಆವಾಸಸ್ಥಾನ, ಆಹಾರ, ಆಧರಿಸಿ ಬದುಕುತಿದ್ದ ವನ್ಯಜೀವಿಗಳು ಆಸರೆ ಕಳೆದುಕೊಂಡು ಹೊರ ಹೊರಟಿವೆ. ಹಾಗೆ ಹೊರಟ ಅವುಗಳ ಕಣ್ಣಿಗೆ ಕಟ್ಟುವಂತೆ ಕಾಣುವ ದೃಶ್ಯ ಬಿತ್ತನೆ ಮಾಡುವ ಜನ. ಹಸಿವು ಕೆಟ್ಟದ್ದು, ಅವು ಪುನರ್ವಸತಿಗಾಗಿ ಪರದಾಡುವ ಹೋರಾಟದಲ್ಲಿ ಹೊಲಮನೆಗೆ ಹೋಗುವ ಜನರಲ್ಲಿಯೂ ಭೀತಿ ಉಂಟು ಮಾಡಿರುವವು. ದನ, ಕುರಿ, ಆಡುಗಳಿಗೆ ಬಾಯಾಕುವವು, ಅವುಗಳು ಮೇವು ನೀರಿನ ಹುಡುಕಾಟದಲ್ಲಿ ತೊಡಗಿರುವಾಗ. ಉಳಿಯುವ ವಸತಿಯ ಕುರುಹುಗಳನ್ನು ಹುಡುಕಿ ಕೆರೆಗಳ ಪಾಳುಗಳನ್ನು ಬಿಟ್ಟು ಹೊರ ಹೊರಟಿರುವ ವನ್ಯಜೀವಿ ಚಿರತೆಗಳಿಗೆ ಜನರ ಭಯವೂ ಇವೆ.

WhatsApp Image 2024 08 15 at 07.43.20

ಬಿತ್ತನೆ, ಬೇಸಾಯ, ಅಚ್ಚುಕಟ್ಟು, ಕಳೆ ತೆಗೆಯಲು ಹೋದಾಗ ಹೊಲ ಗದ್ದೆಗಳಲ್ಲಿ ಚಿರತೆಗಳನ್ನು ಬೇಟಿಯಾಗುವ ಜನರು ಘಾಸಿಗೊಂಡು ಅರಣ್ಯ, ಪೊಲೀಸ್ ಇಲಾಖೆಗಳಿಗೆ ದೂರು ನೀಡುತ್ತಿರುವರು. ಪೊಲೀಸ್ ಠಾಣೆಗಳು ಚಿರತೆಗಳಿವೆ ಎಂದು ಕರಪತ್ರಗಳನ್ನು ಹಂಚುವ ಮೂಲಕ ಜನರಲ್ಲಿ ಎಚ್ಚರಿಕೆ ವಹಿಸುವುದು, ಅರಣ್ಯ ಇಲಾಖೆಯವರು ಚಿರತೆಗಳನ್ನು ಹಿಡಿದುಕೊಂಡು ಬೇರೆಬೇರೆ ಪ್ರದೇಶದಲ್ಲಿ ಬಿಡಲು ಬೋನ್ ಹಿಡತೊಡಗಿರುವರು. ಇದೊಂದು ತರವಾಗಿ ತಾಯಿಮಕ್ಕಳನ್ನು ಅಗಲಿಸುವ ಕ್ರಮವಾದರೂ ಇಲಾಖೆಗಳಿಗೆ ಅನಿವಾರ್ಯ. ಮಳೆಗಾಲದಲ್ಲಿ ಅವುಗಳಿಗೆ ಉಳಿಯಲು ಆವಾಸಸ್ಥಾನಗಳೇ ಇಲ್ಲದಂತಾಗಿರುವುದು. ಅವಾಸ್ತವಿಕ ರೂಪವಾಗಿರುವ‌ ಅಭಿವೃದ್ಧಿಯಿಂದ ಕಾಡುಪ್ರಾಣಿಗಳ ವಸತಿಗಳು ವಿರೂಪಗೊಂಡಿವೆ. ಅವುಗಳು ಮನುಷ್ಯನ ಕಣ್ಣಿಗೆ ಮರೆಯಾಗಿರಲೂ ಜಾಗ ಇರಗೊಡದಂತಹ ಪರಿಸ್ಥಿಯ ಪರಿಣಾಮವಾಗಿ ಅವುಗಳ ವನವಾಸಕ್ಕೂ ಅಡ್ಡಿಯಾಗಿದೆ. ಮತ್ತೊಮ್ಮೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು… ನಮಸ್ಕಾರ.

WhatsApp Image 2023 09 02 at 11.06.04
ಉಜ್ಜಜ್ಜಿ ರಾಜಣ್ಣ
+ posts

ಪತ್ರಕರ್ತ, ಲೇಖಕ, ಸಾಮಾಜಿಕ ಹೋರಾಟಗಾರ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಉಜ್ಜಜ್ಜಿ ರಾಜಣ್ಣ
ಉಜ್ಜಜ್ಜಿ ರಾಜಣ್ಣ
ಪತ್ರಕರ್ತ, ಲೇಖಕ, ಸಾಮಾಜಿಕ ಹೋರಾಟಗಾರ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

Download Eedina App Android / iOS

X