ಕಳೆದೊಂದು ತಿಂಗಳಿನಿಂದ ಅಬ್ಬರಿಸುತ್ತಿದ್ದ ಮಳೆ, ಕಳೆದ ವಾರ ಕೊಂಚ ಕಡಿಮೆಯಾಗಿತ್ತು. ಇದೀಗ ಮತ್ತೆ ಭಾರೀ ಮಳೆಯಾಗಲು ಆರಂಭಿಸಿದ್ದು, ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ ಒಂದು ವಾರಗಳ ಕಾಲ ಮಳೆ ಅಬ್ಬರ ಮುಂದುವರೆಯಲಿದೆ ಎಂದು ಸೂಚನೆ ನೀಡಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳು, ಮಲೆನಾಡು ಪ್ರದೇಶದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಇನ್ನು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಮಳೆ ಅಬ್ಬರ ಮುಂದುವರೆದಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶಗಳಾದ ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ಉತ್ತರ ಒಳನಾಡು ಪ್ರದೇಶಗಳಾದ ಹಾವೇರಿ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಈ ವರದಿ ಓದಿದ್ದೀರಾ?: ಭಾರತದ ಲಡಾಖ್‌ನಲ್ಲಿ ಚೀನಾ ಬಂಕರ್ ನಿರ್ಮಾಣ – ಮೋದಿ ಮೌನವಾಗಿದ್ದಾರೆ, ಅಂದರೆ…!
ಕಳೆದೊಂದು ತಿಂಗಳಿನಿಂದ ರಾಜ್ಯದ ನಾನಾ ಭಾಗಗಳಲ್ಲಿ ಧಾರಕಾರ ಮಳೆಯಾಗುತ್ತಿದೆ. ರಾಜ್ಯದ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವಾರು ಪ್ರಮುಖ ಸೇತುವೆಗಳು ಮುಳಗಡೆಯಾಗಿವೆ. ಜಲಾಶಯಗಳು ಭರ್ತಿಯಾಗಿದ್ದು, ಅಣೆಕಟ್ಟುಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗಳಿಗೆ ಹರಿಸಲಾಗುತ್ತಿದೆ. ಪರಿಣಾಮ, ಹಲವೆಡೆ ಪ್ರವಾಹ ಭೀತಿ ಎದುರಾಗಿದೆ. ಮಲೆನಾಡು ಪ್ರದೇಶದಲ್ಲಿ ಮಳೆಯಿಂದಾಗಿ, ಗುಡ್ಡ ಕುಸಿತಗಳು ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.