Ground Report | ದೆಹಲಿ ರೈತ ಚಳವಳಿ ಮಾದರಿಯಲ್ಲಿ ‘ಚನ್ನರಾಯಪಟ್ಟಣ ಭೂ ಹೋರಾಟ’; ಸರ್ಕಾರಕ್ಕೆ ಜಗ್ಗದ ದಿಟ್ಟ ಜನತೆ

Date:

Advertisements
ಬರೋಬ್ಬರಿ 1180 ದಿನಗಳ ಹೋರಾಟ ನಡೆಸಿ, ‘ಮಾಡು ಇಲ್ಲವೇ ಮಡಿ’ ಎನ್ನುತ್ತಾ ಸರ್ಕಾರಗಳಿಗೆ ಎದೆಯೊಡ್ಡುವುದು ಸುಲಭದ ಸಂಗತಿಯಲ್ಲ. ಇದರ ಮುಂದುವರಿದ ಭಾಗವಾಗಿ 'ದೇವನಹಳ್ಳಿ ಚಲೋ' ಇದೇ ಜೂನ್ 25ರಂದು ನಡೆಯುತ್ತಿದೆ...

“ತಿನ್ನೋಕೆ ಊಟ, ತಿಂಡಿ ಏನು ಬೇಡ್ವಾ ನಮಗಾ? ಊರ್ ಬಿಟ್ ಹೋದ್ಮೇಲೆ ಏನ್ ಸಿಕ್ತದಾ? ಹೋಗ್ಲಪ್ಪ, ಇಷ್ಟು ವರ್ಷ ಕಂದಾಯ ಕಟ್ಕೊಂಡು ಬಂದಿದ್ದೀವಲ್ಲಾ, ಏನ್ಕೆ ಕಟ್ಟಿಸ್ಕೊಂಡ್ರು ಆವಾಗ? ನಮ್ ಭೂಮಿ ಅಂತ ತಾನೇ ಕಂದಾಯ ಕಟ್ಟಿಸ್ಕೊಂಡ್ರು? ಆವತ್ತಿಂದ ಕಂದಾಯ ಕಟ್ಟಿಸ್ಕೊಂಡ್ರಲ್ಲ, ಅದಕ್ಕೆಲ್ಲ ಬಡ್ಡಿ, ಚಕ್ರಬಡ್ಡಿ, ಮರಿಬಡ್ಡಿ ಎಲ್ಲಾ ಸೇರ್ಸಿ ಕೊಡ್ಲಿ ನೋಡೋಣ.. ಸರ್ಕಾರದಿಂದ ಆತದಾ? ಅವರ್ದೆಲೈತೆ ಜಮೀನು?..”

“ಅವಾಗೇನೋ ಒಂದಿಷ್ಟು ಭೂಮಿ ಬಿಟ್‌ಕೊಟ್ಟೆವು. ಹಿಂಗಾಗುತ್ತೆ ಅಂತ ಆಗ ಗೊತ್ತಿರಲಿಲ್ಲ. ಈಗ ನಾವ್ ಭೂಮಿ ಕೊಡಲ್ಲ ಅಂತಿದ್ದೀವಿ. ವಿಷ ಕುಡ್ದು ಸತ್ತೋಗ್ತೀನಿ. ಅವರ ಮುಂದೇನೇ ಬೆಂಕಿ ಹಚ್ಕೋತೀನಿ. ಅದ್ಯಾನ್ ಮಾಡ್ತಾರೆ ನೋಡ್ತೀನಿ. ಭೂಮಿ ಕೊಟ್ಬಿಟ್ಟು ನಾವೇನ್ ತಿನ್ನೋನಾ ಹೇಳಿ? ನಾವ್ ಮಾಡಿದ್ದು ತಾನೇ ಅವರು ಅಲ್ಲಿ ಕೂತು ತಿಂತಾ ಇರೋದು? 25ನೇ ತಾರೀಕು ದೊಡ್ ಸ್ಟ್ರೈಕ್ ಮಾಡ್ತೀವಿ ನಡಿ…”

-ಹೀಗೆ ಒಳಲಾಳದ ನೋವಿನ ನುಡಿಗಳನ್ನು ಆಡುತ್ತಾರೆ ಚೀಮಾಚನಹಳ್ಳಿ ರಾಜಣ್ಣ. ಭೂಮಿ ಮಾತು ಎತ್ತಿದ ತಕ್ಷಣ, ಅವರ ನರನಾಡಿಯೆಲ್ಲ ಸೆಟೆದು ನಿಂತವು. ಮುಖ ಬಿಗಿಯಿತು. ಅವರ ಮೀಸೆ ಕೋಪದಿಂದ ಕುಣಿಯತೊಡಗಿತು. ಎಲೆ ಅಡಕೆ ಜಗಿಯುತ್ತಿದ್ದ ಅವರ ಬಾಯಿ, ಆಕ್ರೋಶದಿಂದ ಕೆಂಪಾಯಿತು.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ ಎಲ್ಲ ರೈತರದ್ದೂ ಇದೇ ರೀತಿಯ ಭಾವ, ಇದೇ ರೀತಿಯ ಸಂಕಟ, ಆಕ್ರೋಶ.

Advertisements
1 rajanna
ಚೀಮಾಚನಹಳ್ಳಿ ರಾಜಣ್ಣ

ಪಾಳ್ಯ, ಹರಳೂರು, ಪೋಲನಹಳ್ಳಿ, ಗೋಕೆರೆ ಬಚ್ಚೇನಹಳ್ಳಿ, ನಲ್ಲೂರು, ಮಲ್ಲೇಪುರ, ನಲ್ಲಪ್ಪನಹಳ್ಳಿ, ಚೀಮಾಚನಹಳ್ಳಿ, ಮಟ್ಟಿಬಾರ್ಲು, ಮುದ್ದೇನಹಳ್ಳಿ, ಚನ್ನರಾಯಪಟ್ಟಣ, ತೆಲ್ಲೋಹಳ್ಳಿ, ಹ್ಯಾಡಾಳ ಗ್ರಾಮಸ್ಥರ ಕಿವಿಗೆ ಎರಡು ಪದಗಳು ಹೊನ್ನಶೂಲದಂತೆ ಇರಿಯುತ್ತವೆ; ಒಂದು, ಕೆಐಎಡಿಬಿ; ಮತ್ತೊಂದು ಭೂ ಸರ್ವೇ. ಇವುಗಳನ್ನು ಕೇಳಿದರೆ ಸಾಕು ನಖಶಿಖಾಂತ ಉರಿದುಬೀಳುತ್ತಾರೆ. ಅವರ ಹೋರಾಟದ ಕಿಚ್ಚಿಗೆ 1180 ದಿನಗಳು ತುಂಬುತ್ತಿವೆ. ಜೂನ್ 25ರಂದು ‘ದೇವನಹಳ್ಳಿ ಚಲೋ’ ಹಮ್ಮಿಕೊಂಡು ಬೃಹತ್ ಹೋರಾಟಕ್ಕೂ ಇಲ್ಲಿನ ಜನರು ಸಜ್ಜಾಗಿದ್ದಾರೆ. ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಾಗಿ ಹೊಮ್ಮಿರುವ ‘ಸಂಯುಕ್ತ ಹೋರಾಟ ಕರ್ನಾಟಕ’ ಕೂಡ ಈ ಗ್ರಾಮಗಳ ಜನರ ಪರ ನಿಂತಿದೆ. ಛಲಬಿಡದೆ ಹೋರಾಡುತ್ತಿರುವ ರೈತರಿಗೆ ಮತ್ತಷ್ಟು ಬಲ ಬಂದಂತಾಗಿದೆ.

ಇದನ್ನೂ ಓದಿರಿ: ಕೇಂದ್ರ- ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಜೂ.25ರಂದು ʼದೇವನಹಳ್ಳಿ ಚಲೋʼ

ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದ ರೈತರು ದೆಹಲಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಸಿದ ಚಾರಿತ್ರಿಕ ಚಳವಳಿಗೇನೂ ಕಡಿಮೆ ಇಲ್ಲದಷ್ಟು ಮಟ್ಟಕ್ಕೆ ನಡೆಯುತ್ತಿರುವ ಹೋರಾಟವಿದು. ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ನಡೆಸುತ್ತಿರುವುದು ಅಕ್ಷರಶಃ ಐತಿಹಾಸಿಕ ಚಳವಳಿ. ಬರೋಬ್ಬರಿ 1180 ದಿನಗಳ ಹೋರಾಟ ನಡೆಸಿ, ‘ಮಾಡು ಇಲ್ಲವೇ ಮಡಿ’ ಎನ್ನುತ್ತಾ ಸರ್ಕಾರಗಳಿಗೆ ಎದೆಯೊಡ್ಡುವುದು ಸುಲಭದ ಸಂಗತಿಯಲ್ಲ. ಇಲ್ಲಿ ಜಾತಿ- ಮತದ ಹಂಗಿಲ್ಲ. ಒಡೆದು ಆಳಲು ಬರುವವರಿಗೆ ಬೆಲೆ ಇಲ್ಲ. ಪಕ್ಷರಾಜಕಾರಣದ ಕೊಳೆ ಇಲ್ಲ. ‘ಪ್ರಾಣ ಕೊಟ್ಟೇವು.. ಭೂಮಿ ಕೊಡೆವು’ ಎಂಬುದಷ್ಟೇ ಇಲ್ಲಿನ ಜನರ ಸ್ಪಷ್ಟ ಘೋಷಣೆ.

ಚನ್ನರಾಯಪಟ್ಟಣದಲ್ಲಿ ಎದ್ದುನಿಂತ ಹೋರಾಟದ ಟೆಂಟ್‌ ಗಾಳಿ, ಮಳೆ, ಚಳಿಗೆ ಜಗ್ಗಲಿಲ್ಲ. ಹಗಲು ರಾತ್ರಿ ಉರುಳಿ ಹೋದವು. ಭೂಮಿ ಕಳೆದುಕೊಂಡರೆ ಬದುಕಿಲ್ಲ ಎಂದು ಅರಿತ ಜನ, ತಮ್ಮ ಕೆಲಸ ಕಾರ್ಯಗಳ ನಡುವೆ, ಪಟ್ಟು ಬಿಡದೆ ಪಾಳಿಯಲ್ಲಿ ಕೂತು ನಡೆಸುತ್ತಿರುವ ದಿಟ್ಟ ಚಳವಳಿ ಇದು.

“13 ಗ್ರಾಮಗಳ 1777 ಎಕರೆ ಜಮೀನು ಸ್ವಾಧೀನಕ್ಕೆ ಸಂಬಂಧಿಸಿದಂತೆ 2022ನೇ ಇಸವಿ, ಜನವರಿ 1ರಂದು ಸರ್ಕಾರದಿಂದ ಪ್ರತಿ ಮನೆಗೂ ನೋಟಿಸ್ ಬಂದಿತು. ಅಂದೇ ಜಾಗೃತವಾದೆವು. 13 ಹಳ್ಳಿಗಳ ರೈತರು ಚನ್ನರಾಯಪಟ್ಟಣದಲ್ಲಿ ಸಭೆ ನಡೆಸಿದೆವು. ಹೋರಾಟ ಕಟ್ಟಲು ನಿರ್ಧರಿಸಿದೆವು. ಪ್ರತಿ ಹಳ್ಳಿಯಲ್ಲೂ ಗ್ರಾಮಸಭೆ ಮಾಡಿದೆವು. ಒಮ್ಮೆ ಡಿಸಿ ಆಫೀಸ್‌ ಮುತ್ತಿಗೆ ಹಾಕಲು ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡೆವು. ಪೊಲೀಸರು ನಮ್ಮನ್ನು ತಡೆದು ನಿಲ್ಲಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇವನಹಳ್ಳಿ ಬಂದ್ ಮಾಡಿಸಿದ್ದೆವು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಾಯಕರೆಲ್ಲ ನಮ್ಮ ಹೋರಾಟದ ಸ್ಥಳಕ್ಕೆ ಬಂದು ಹೋಗಿದ್ದಾರೆ. ಯಾವುದೇ ಪ್ರಯೋಜನವಾಗಲಿಲ್ಲ” ಎನ್ನುತ್ತಾ ತಮ್ಮ ಚಳವಳಿಯ ಕ್ಷಣಗಳನ್ನು ಬಿಚ್ಚಿಡುತ್ತಾ ಹೋಗುತ್ತಾರೆ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರಾದ ನಲ್ಲಪ್ಪನಹಳ್ಳಿ ನಂಜಪ್ಪ.

2 nallappanahalli nanjappa
ತಮ್ಮ ದ್ರಾಕ್ಷಿ ತೋಟದಲ್ಲಿ ನಲ್ಲಪ್ಪನಹಳ್ಳಿ ನಂಜಪ್ಪ

“ಒಂದು ದಿನವೂ ಹೋರಾಟ ತಪ್ಪಲಿಲ್ಲ. ಒಬ್ಬರಿಗೊಬ್ಬರು ಎಂದಿಗೂ ಮನಸ್ತಾಪ ಮಾಡಿಕೊಳ್ಳಲಿಲ್ಲ. ಹೋರಾಟದ ಟೆಂಟ್ ಎರಡು ಬಾರಿ ದುರಸ್ತಿಯಾಯಿತು. ಒಮ್ಮೆ ಮಳೆ, ಗಾಳಿ ಬಂದು ಮುರಿದು ಬಿದ್ದಿತ್ತು. ಟೆಂಟ್‌ನಲ್ಲಿ ಅಂದು ರಾತ್ರಿ ಮಲಗಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಪಾಲಿಹೌಸ್ ರೀತಿಯಲ್ಲಿ ಮತ್ತೊಮ್ಮೆ ಟೆಂಟ್ ಮಾಡಿದ್ದೆವು. ಅದು ಕೂಡ ಈಗ ದುರಸ್ತಿಗೆ ಬಂದಿದೆ. ಈ ಹೋರಾಟದ ಮೇಲೆ ಪೊಲೀಸರನ್ನು ಬಿಟ್ಟು ಬೆದರಿಸುವ ಕೆಲಸ ಆಗಿದೆ. ಬಿಜೆಪಿ ಅವಧಿಯ ವೇಳೆ ಸ್ವಾತಂತ್ರ್ಯ ದಿನದಂದು ಕಪ್ಪುಪಟ್ಟಿ ಪ್ರದರ್ಶಿಸಲು ಮುಂದಾದಾಗ ಪೊಲೀಸರು ನಮ್ಮನ್ನು ಬಂಧಿಸಿದ್ದರು. ಅಂದು ಪ್ರಮೋದ್ ಎಂಬ ಹುಡುಗನ ಕಣ್ಣಿಗೆ ಪೆಟ್ಟಾಯಿತು. ಆತ ಈಗಲೂ ಸುಧಾರಿಸಿಕೊಳ್ಳುತ್ತಿದ್ದಾನೆ. ಎಪ್ಪತ್ತು ಜನರ ಮೇಲೆ ಕೇಸ್ ಹಾಕಿದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮತ್ತೆರಡು ಪ್ರಕರಣಗಳು ಬಿದ್ದಿವೆ. ಬಿಜೆಪಿ ಅವಧಿಯಲ್ಲಿ ನಡೆದ ಮತ್ತೊಂದು ಮಾತುಕತೆ ನೆನಪಾಗುತ್ತಿದೆ. ಅಂದು ಸಚಿವರಾಗಿದ್ದ ಅಶ್ವತ್ಥ ನಾರಾಯಣ ನಮ್ಮ ಎದುರಿಗೆ ಬಂದು, ‘ನಿಮ್ಮ ಭೂಮಿಗೆ ಬೆಲೆ ಎಷ್ಟು ಹೇಳ್ರೀ, ಕೊಡ್ತೀವಿ’ ಅಂದ್ರು. ‘ಭೂಮಿ ನಮ್ಮದು, ಬೆಲೆ ಕಟ್ಟೋಕೆ ನೀವ್ಯಾರ್ರೀ? ಇದು ಬೆಲೆ ಕಟ್ಟಲಾಗದ ಭೂಮಿ’ ಎಂದಿದ್ದೆ..”- ಹೀಗೆ ಹೋರಾಟದ ಕ್ಷಣಗಳನ್ನು ಮೆಲುಕು ಹಾಕುತ್ತಾರೆ ಹಿರಿಯ ಜೀವ ನಂಜಪ್ಪ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಮ್ಮ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಬಿಡುವುದಿಲ್ಲ. “ನಮ್ಮ ಭೂಮಿಗೆ ಬೆಲೆ ಕಟ್ಟಲು ಬರಬೇಡಿ, ಇದು ನಾವು ಹುಟ್ಟಿ ಬೆಳೆದ ನೆಲ, ನಮಗೆ ಅನ್ನ ನೀಡಿದ ನೆಲ. ನಿಮಗೆ ಇದನ್ನು ಕೊಟ್ಟು, ನಮ್ಮ ಬಾಯಿಗೆ ಮಣ್ಣು ಹಾಕಿಕೊಳ್ಳಲಾ?” ಎಂದು ಕೇಳುತ್ತಾರೆ ಇಲ್ಲಿನ ಜನ. ಇಷ್ಟು ದಿನ ಜೀವಂತವಾಗಿರುವ ಹೋರಾಟಕ್ಕೆ ಕಂಬನಿ ಮಿಡಿಯದೆ ಇರಲಾದೀತೆ?

ಇದನ್ನೂ ಓದಿರಿ: ಬೆಂ.ಗ್ರಾಮಾಂತರ | ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ, ಸರಕಾರದ ಹೇಡಿತನದ ಕೃತ್ಯ; ಕೆಪಿಆರ್‌ಎಸ್‌

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಹಳ್ಳಿಗಳ ಭೂಮಿಯ ಮೇಲೆ ಯಾವುದೇ ಸರ್ಕಾರ ಬಂದರೂ ಕಣ್ಣಿದೆ. ಏರ್‌ಪೋರ್ಟ್, ಏರೋಸ್ಪೇಸ್, ಎಸ್‌ಇಜೆಡ್‌ ಮುಂತಾದವುಗಳಿಗೆ ಸಾವಿರಾರು ಎಕರೆ ಜಮೀನು ಬಿಟ್ಟುಕೊಟ್ಟ ರೈತರು ಈಗಾಗಲೇ ಕೆಐಎಡಿಬಿಯ ಮೊದಲ ಹಂತದ ಭೂ ಸ್ವಾಧೀನದಲ್ಲಿಯೂ 1282 ಎಕರೆ ಭೂಮಿಯನ್ನೂ ಕಳೆದುಕೊಂಡಿದ್ದಾರೆ. ಈ ಭಾಗದ ಭೂಮಿ ಪದೇ ಪದೇ ಸ್ವಾಧೀನವಾಗುತ್ತಲೇ ಇದೆ. ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಕೆಐಎಡಿಬಿ ಎರಡನೇ ಹಂತದ ಭೂಸ್ವಾಧೀನಕ್ಕೆ ಮುಂದಾಯಿತು. ಈ ಮೊದಲೇ ಅತಂತ್ರವಾಗಿದ್ದ ಜನರು, ಇನ್ನೂ ನಾವು ಸುಮ್ಮನಿದ್ದರೆ ಬದುಕು ಛಿದ್ರವಾಗುತ್ತದೆ ಎಂದು ಅರಿತರು. ‘1777 ಎಕರೆ ಭೂಮಿಯಲ್ಲ, ಒಂದಿಂಚು ನೆಲವನ್ನೂ ಬಿಟ್ಟುಕೊಡುವುದಿಲ್ಲ’ ಎಂದು ಸವಾಲೆಸೆದರು.

3 kiadb
ಕೆಐಎಡಿಬಿ ಈಗಾಗಲೇ ಸ್ವಾಧೀನಕ್ಕೆ ಪಡೆದಿರುವ ಪ್ರದೇಶ

ಈಗಾಗಲೇ ಭೂಮಿ ಕಳೆದುಕೊಂಡು ಬರಿಗೈ ಆಗಿರುವ ರೈತರು ಉಳಿದವರಿಗೆ ತಮ್ಮ ಅನುಭವಗಳನ್ನು ಹೇಳುತ್ತಿದ್ದಾರೆ. ಭೂಮಿ ಬಿಟ್ಟುಕೊಟ್ಟರೆ ಕೆಲಸ ಸಿಗುತ್ತೆ, ಒಳ್ಳೆಯ ಕಾಸು ಸಿಗುತ್ತೆ ಎಂಬುದೆಲ್ಲ ಭ್ರಮೆ. ಕೊಡುವ ಕಾಸೆಲ್ಲ ಹೊಳೆಯಲ್ಲಿ ಹುಣಸೆ ಹಿಂಡಿದಂತೆ ಖರ್ಚಾಗುವುದಂತೂ ದಿಟ. ಆನಂತರ ಬದುಕು ದಿಕ್ಕಾಪಾಲು. ‘ಈದಿನ ಡಾಟ್ ಕಾಮ್‌’ ಜೊತೆ ಮಾತನಾಡಿರುವ ನಾರಾಯಣಸ್ವಾಮಿ ಎಂಬವರ ಮಾತುಗಳೇ ಇದಕ್ಕೊಂದು ನಿದರ್ಶನ.

“ನಮ್ಮದು ಮುದ್ದೇನಹಳ್ಳಿ ಸ್ವಾಮಿ. ನಮಗೆ ನಾಲ್ಕು ಎಕರೆ ಜಮೀನಿತ್ತು. ಸರ್ಕಾರ ಕಿತ್ತುಕೊಂಡಿತು. ಸರ್ಕಾರದವ್ರು ಒಂದು ಕೋಟಿ ಕೊಡ್ತೀವಿ ಅಂದ್ರು. ಕೈಗೆ ಸಿಗೋವಷ್ಟರಲ್ಲಿ ಎಂಬತ್ತು ಲಕ್ಷ ಬಂತು. ಆ ರೆಕಾರ್ಡ್ ಚೆನ್ನಾಗಿಲ್ಲ, ಈ ರೆಕಾರ್ಡ್ ಸರಿಯಿಲ್ಲ. ಆ ಫೈಲ್ ಇಲ್ಲ, ಈ ಫೈಲ್ ಇಲ್ಲ ಅಂತ ಅಲೆದಾಡಿಸಿದರು. ಇದನ್ನೇ ಬಳಸಿಕೊಂಡು ಬ್ರೋಕರ್‌ಗಳು ತಿಂದು ತೇಗಿದರು. ಬಂದ ಹಣವನ್ನು ಐದು ಮಂದಿ ಅಣ್ಣ-ತಮ್ಮಂದಿರು ಹಂಚಿಕೊಂಡೆವು. ಆ ಕಾಸು ಎತ್ತ ಹೋಯ್ತು ಅಂತಾನೇ ಗೊತ್ತಾಗುತ್ತಿಲ್ಲ. ಫ್ಯಾಕ್ಟರಿಗಳಲ್ಲಿ ಕೆಲಸ ಸಿಗುತ್ತೆ ಅಂದಿದ್ದರು. ಈಗ ಫ್ಯಾಕ್ಟರಿಗಳು ಬಂದಿವೆ. ನಾವು ತಿರುಗಾಡ್ತಾ ಇದ್ದ ಜಾಗಕ್ಕೆ ಗೇಟ್‌ಗಳನ್ನು ಹಾಕ್ಕೊಂಡಿದ್ದಾರೆ. ಉದಾರ್ ಜಾವೋ, ಉದಾರ್ ಜಾವೋ ಅಂತಾರೆ. ನಮಗೆ ಹಿಂದಿ ಬರಲ್ಲ. ಪಕ್ಕದ ಚನ್ನರಾಯಪಟ್ಟಣದಲ್ಲಾದರೂ ಭೂಮಿ ಉಳಿಕೊಂಡರೆ, ಇಲ್ಲಿನ ಜಮೀನುಗಳಿಗೆ ಬಂದು ಜೀವನ ಮಾಡೋಕಾದ್ರೂ ಆಗುತ್ತೆ ಸ್ವಾಮಿ. ಓದು ಬರವಣಿಗೆ ಇಲ್ಲದ ನನ್ನಂಥವರು ಜೀವನ ಮಾಡೋದು ಎಲ್ಲಿ ಸ್ವಾಮಿ? ಅಕ್ಕಪಕ್ಕ ಏನೋ ಕೂಲಿನಾಲಿ ಮಾಡಿ ಬದುಕ್ತಾ ಇದ್ದೀನಿ. ಈಗ ಸರ್ಕಾರದವ್ರು ಕಿತ್ತುಕೊಂಡುಬಿಟ್ಟರೆ ನಾವ್ ಏನ್ ಮಾಡೋದು ಸ್ವಾಮಿ? ಅಕ್ಷರ ಗೊತ್ತಿಲ್ಲದೆ ಇರೋ ನಾನು ಫ್ಯಾಕ್ಟ್ರಿಗೋದ್ರೆ ವಾಚ್ ಮ್ಯಾನ್ ಕೆಲ್ಸಾನೂ ಕೊಡಕ್ಕಿಲ್ಲ. ಹೆಂಗಸ್ರು ಹೋದ್ರೆ ಬಾತ್‌ರೂಮ್ ತೊಳಿಯಾಕಂತ ಹತ್ತು ಸಾವ್ರ ಕೊಡ್ತಾರೆ ಸ್ವಾಮಿ. ಅದರಲ್ಲಿ ಜೀವನ ಮಾಡೋಕಾಗುತ್ತಾ?..”

4 muddenahalli
ಕೆಐಎಡಿಬಿ ಮೊದಲ ಹಂತದ ಭೂಸ್ವಾಧೀನ ಮಾಡಿಕೊಂಡಾಗ ಭೂಮಿ ಕಳೆದುಕೊಂಡಿರುವ ಮುದ್ದೇನಹಳ್ಳಿ ನಾರಾಯಣಸ್ವಾಮಿ

ಕೈ ಮುಗಿಯುತ್ತಲೇ ಮಾತು ಮುಗಿಸಿದರು ನಾರಾಯಣಸ್ವಾಮಿ. “ನಾವಂತೂ ಹಾಳಾದೆವು, ನಿಮಗೂ ಈ ಗತಿ ಬರಬಾರ್ದು” ಎನ್ನುತ್ತಾ ಚಳವಳಿಯ ಜೊತೆಯಲ್ಲಿ ಅವರು ಸಾಗುತ್ತಿದ್ದಾರೆ. ತಮ್ಮ ಕೈಲಾದ ಮಟ್ಟಿಗೆ ಬೆಂಬಲ ಕೊಡುತ್ತಿದ್ದಾರೆ. ಇಷ್ಟೇ ಅಲ್ಲ. ಮೊದಲ ಹಂತದ ಸ್ವಾಧೀನದ ವೇಳೆ ಭೂಮಿ ಕಳೆದುಕೊಂಡವರು, ಎರಡನೇ ಹಂತದ ಸ್ವಾಧೀನದಲ್ಲಿಯೂ ತಮ್ಮ ಭೂಮಿ ಒಳಪಟ್ಟಿದ್ದರೆ ಕಳೆದುಕೊಳ್ಳಲು ಬಯಸುತ್ತಿಲ್ಲ. ಈಗಾಗಲೇ ಒಮ್ಮೆ ಎಡವಿದ್ದೇವೆ. ಮತ್ತೆಯೂ ಎಡವಲಾರೆವು ಎನ್ನುತ್ತಿದ್ದಾರೆ. ಆದರೆ ಹೋರಾಟಕ್ಕೆ ಸರ್ಕಾರ ಕಿವುಡಾದಂತೆ ಕಾಣುತ್ತಿದೆ. ಪ್ರಾಥಮಿಕ ಅಧಿಸೂಚನೆಯನ್ನು ಬಿಜೆಪಿ ಅವಧಿಯಲ್ಲಿ ಹೊರಡಿಸಿದರೆ, ಕಾಂಗ್ರೆಸ್ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸಿ ರೈತರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಾತು ಮರೆತರೆ ಸಿದ್ದರಾಮಯ್ಯ?

2022ರ ಸೆಪ್ಟೆಂಬರ್‌ನಲ್ಲಿ ನಡೆದ ವಿಧಾನಸಭೆ ಅಧಿವೇಶನದ ವೇಳೆ 13 ಗ್ರಾಮಗಳ ರೈತರು ಸರ್ಕಾರದ ಗಮನ ಸೆಳೆಯಲು ಬೆಂಗಳೂರಿನ ಫ್ರೀಡಂಪಾರ್ಕ್‌ಗೆ ಬಂದು ಕೂತರು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಧರಣಿ ಸ್ಥಳಕ್ಕೆ ಬಂದು ಹೋರಾಟವನ್ನು ಬೆಂಬಲಿಸಿದ್ದರು. “ಕೈಗಾರಿಕೆಗಳು ಆಗಬೇಕು ನಿಜ. ಹಾಗೆಂದು ಫಲವತ್ತಾದ ಭೂಮಿಯನ್ನು ರೈತರಿಂದ ಕಸಿಯಬಾರದು. ಈ ಹೋರಾಟಕ್ಕೆ ನನ್ನ ಬೆಂಬಲವಿದೆ” ಎಂದು ಸ್ಪಷ್ಟವಾಗಿ ನುಡಿದಿದ್ದರು. ಆದರೆ ಈಗ ಏನಾಯಿತು ಎಂದು ಆಶ್ಚರ್ಯಚಕಿತರಾಗುತ್ತಾರೆ ಚೀಮಾಚನಹಳ್ಳಿ ರಮೇಶ್.

‘ಈ ದಿನ ಡಾಟ್ ಕಾಮ್’ ಗ್ರೌಂಡ್ ರಿಪೋರ್ಟ್ ವೇಳೆ ವಿಸ್ತೃತವಾಗಿ ಮಾತನಾಡಿದ ಅವರು, “ಈ ಹಿಂದೆ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯನವರು ನಮ್ಮ ಪ್ರತಿಭಟನಾ ಸ್ಥಳಕ್ಕೆ ಬಂದು, ಸರ್ಕಾರದ ನಡೆಯನ್ನು ಖಂಡಿಸಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ರೈತ ಸಂಘದ ಹಿನ್ನೆಲೆಯಿಂದ ಬಂದ ನಾಯಕರವರು. ರೈತರ ಸಂಕಷ್ಟ ಗೊತ್ತಿದ್ದರೂ ಮೂರೂವರೆ ವರ್ಷದ ಹೋರಾಟವನ್ನು ಧಿಕ್ಕರಿಸಿ ಅಂತಿಮ ಅಧಿಸೂಚನೆ ಹೊರಡಿಸಿದ್ದು ಹೇಗೆ? ರೈತರ ಪರವಾಗಿದ್ದ ಸಿದ್ದರಾಮಯ್ಯನವರಿಂದ ಇದಾಗಬಾರದಿತ್ತು. ಭೂಮಿ ಸ್ವಾಧೀನ ಅಂತಿಮ ಆದೇಶವು ಸಿದ್ದರಾಮಯ್ಯನವರಿಗೆ ಗೊತ್ತಿದೆಯೋ ಇಲ್ಲವೋ ಎಂಬ ಅನುಮಾನವಿದೆ. ಗೊತ್ತಿದ್ದೇ ಇದು ನಡೆಯುತ್ತಿದ್ದರೆ ಅವರನ್ನು ಅನ್ನರಾಮಯ್ಯ, ಸಮಾಜವಾದಿ ಸಿದ್ದರಾಮಯ್ಯ ಅನ್ನುವಂತಹದ್ದು ಸುಳ್ಳಾಯಿತೆ?” ಎಂದು ಪ್ರಶ್ನಿಸಿದರು.

5 chimachanhalli ramesh
ತಮ್ಮ ದ್ರಾಕ್ಷಿ ತೋಟದಲ್ಲಿ ಚೀಮಾಚನಹಳ್ಳಿ ರಮೇಶ್ ಅವರು ‘ಈದಿನ ಡಾಟ್ ಕಾಮ್’ನೊಂದಿಗೆ ಮಾತನಾಡಿದರು.

“ಡಿ.ದೇವರಾಜು ಅರಸು ಅವರ ಅಧಿಕಾರವಧಿಯಲ್ಲಿ ಉಳುವವನೇ ಭೂಮಿಯ ಒಡೆಯ ಕಾನೂನಿನ ಕಾರಣ ಇಲ್ಲಿನ ತಳಸಮುದಾಯಗಳು ಭೂಮಿ ಪಡೆದಿವೆ. ಮೇಲ್ಜಾತಿಗಳ ವಿರೋಧವನ್ನು ಕಟ್ಟಿಕೊಂಡ ಇತಿಹಾಸವೂ ಇದೆ. ಈಗ ಸ್ವಾಧೀನಕ್ಕೆ ಹೊರಡಿಸಿರುವ ಆದೇಶದ ಪ್ರಕಾರ ಒಟ್ಟು 500 ಎಕರೆಯಷ್ಟು ದಲಿತರ ಭೂಮಿ ಇಲ್ಲವಾಗುತ್ತದೆ. ದೇವರಾಜ ಅರಸು ಅವರು ಕೊಟ್ಟ ಭೂಮಿಯನ್ನು ಈಗಿನ ಸರ್ಕಾರ ಕಿತ್ತುಕೊಳ್ಳುವುದೇ?” ಎಂದು ಮಾರ್ಮಿಕವಾಗಿ ಕೇಳಿದರು.

ಇದನ್ನೂ ಓದಿರಿ: ಭೂಸ್ವಾಧೀನ | ವಚನ ಭ್ರಷ್ಟರಾದ ಸಿದ್ದರಾಮಯ್ಯ, ಮುನಿಯಪ್ಪ: ರೈತ ಸಂಘ ತೀವ್ರ ವಾಗ್ದಾಳಿ

“ಇದು ತುಂಬಾ ಸಂಪದ್ಭರಿತವಾದ ಭೂಮಿ. ಇಲ್ಲಿ ಹೂ, ಹಣ್ಣು, ತರಕಾರಿ ಬೆಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಭೂಮಿಯನ್ನು ಕಿತ್ತುಕೊಂಡರೆ 350ಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಾಗುತ್ತವೆ. 150ಕ್ಕೂ ಹೆಚ್ಚು ದಲಿತ ಕುಟುಂಬಗಳು ಭೂ ರಹಿತವಾಗುತ್ತವೆ. ಚನ್ನರಾಯಪಟ್ಟಣ ಹೋಬಳಿಯ ರೈತರು ವರ್ಷಕ್ಕೆ ಕನಿಷ್ಠ 2,000 ಟನ್ ದ್ರಾಕ್ಷಿ ಬೆಳೆಯುತ್ತಾರೆ, ಹತ್ತು ಸಾವಿರ ಟನ್ ಮಾವು ಬೆಳೆಯುತ್ತಾರೆ. ಕನಿಷ್ಠ 3 ಸಾವಿರ ಲೀಟರ್ ಹಾಲು ಪ್ರತಿದಿನ ಸರಬರಾಜಾಗುತ್ತದೆ. ಇದಕ್ಕೆಲ್ಲ ಕಾರಣ ಫಲವತ್ತಾದ ಭೂಮಿ. ಹೀಗಿರುವಾಗ ಇಂತಹ ನೆಲವನ್ನು ಕೈಗಾರಿಕೆಗೆ ಬಿಟ್ಟುಕೊಡಬೇಕೆ? ಬೆಂಗಳೂರಿಗೆ ಸರಬರಾಜಾಗುವ ಶೇ. 25ರಷ್ಟು ಆಹಾರ ಉತ್ಪನ್ನಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಬರುತ್ತವೆ. ಅದರಲ್ಲಿ ಚನ್ನರಾಯಪಟ್ಟಣ ಹೋಬಳಿ ರೈತರ ಪಾಲು ದೊಡ್ಡದಿದೆ. ಇಲ್ಲಿನ ಭೂಮಿಯನ್ನು ಕಿತ್ತುಕೊಳ್ಳುವುದನ್ನು ರೈತರು ಒಪ್ಪಲು ಸಾಧ್ಯವಿಲ್ಲ” ಎಂದು ಸ್ಪಷ್ಟವಾಗಿ ತಮ್ಮ ಹೋರಾಟದ ದಿಕ್ಕನ್ನು ವಿವರಿಸುತ್ತಾರೆ.

“ಇಲ್ಲಿನ ಗ್ರಾಮ ಪಂಚಾಯಿತಿಯ ನೇತೃತ್ವದಲ್ಲಿ ಅಧ್ಯಯನ ನಡೆಸಬೇಕು. ಆದರೆ ಅದಾಗಲಿಲ್ಲ. ಇಲ್ಲಿನ ಜನರ ಅಭಿಪ್ರಾಯ ಇವರಿಗೆ ಬೇಕಾಗಿಲ್ಲ. ಬಂಡವಾಳಶಾಹಿಗಳೇ ನಮ್ಮ ನಿಜವಾದ ಶತ್ರುಗಳು, ಅಂಥವರಿಗೆ ಸರ್ಕಾರ ಬೆಂಬಲಿಸುತ್ತಿದೆ ಎಂಬ ಸತ್ಯವನ್ನು ಇಲ್ಲಿನ ಜನ ಸ್ಪಷ್ಟವಾಗಿ ಅರಿತುಕೊಂಡಿದ್ದಾರೆ. ಹೀಗಾಗಿ ಎಲ್ಲ ಜಾತಿಗಳು ಒಟ್ಟಿಗೆ ಸೇರಿ ಈ ಚಳವಳಿ ಕಟ್ಟಲು ಸಾಧ್ಯವಾಗಿದೆ. ಈ ಹಿಂದೆ ಕೆಲವು ವೈಷಮ್ಯಗಳಿದ್ದವು. ಆದರೆ ಈ ಚಳವಳಿ ಆರಂಭವಾದ ಮೇಲೆ ಅವೆಲ್ಲವನ್ನೂ ಮರೆತು ಒಂದಾಗಿದ್ದೇವೆ. ಜಾತಿ, ಮತ, ಪಕ್ಷ ರಾಜಕಾರಣ ಇದರೊಳಗೆ ಬೆರೆಯಲೇ ಇಲ್ಲ. ಅಷ್ಟರ ಮಟ್ಟಿಗೆ ಈ ಹೋರಾಟ ಯಶಸ್ವಿಯಾಗಿದೆ” ಎನ್ನುತ್ತಾರೆ ರಮೇಶ್.

ಯುಪಿಎ ಅವಧಿಯಲ್ಲಿ ಜಾರಿಗೆ ಬಂದ ಕಾಯ್ದೆಯನ್ನು ಉಲ್ಲಂಘಿಸಿತೇ ರಾಜ್ಯ ಸರ್ಕಾರ?

2013ರಲ್ಲಿ ಯುಪಿಎ ಅಧಿಕಾರವಧಿಯಲ್ಲಿ ಜಾರಿಗೆ ತಂದ ‘ಭೂ ಸ್ವಾಧೀನ, ಪುನರ್ ವಸತಿ, ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯ್ದೆ’ಯು ಬಲವಂತದ ಭೂಸ್ವಾಧೀನವನ್ನು ನಿರ್ಬಂಧಿಸುತ್ತದೆ. ಇದರ ಉಲ್ಲಂಘನೆ ಸ್ಪಷ್ಟವಾಗಿ ಕಂಡು ಬರುತ್ತಿದೆ ಎನ್ನುವ ಹೋರಾಟಗಾರ ರಮೇಶ್, “ಶೇ. 80ಕ್ಕೂ ಹೆಚ್ಚು ರೈತರು ಭೂ ಸ್ವಾಧೀನಕ್ಕೆ ಒಪ್ಪದಿದ್ದರೆ ಸರ್ಕಾರ ಆ ಸಾಹಸಕ್ಕೆ ಕೈಹಾಕುವಂತಿಲ್ಲ. ಆದರೆ ಈಗ ಆಗುತ್ತಿರುವುದೇನು?” ಎಂದು ಪ್ರಶ್ನಿಸುತ್ತಾರೆ. ಈ ಹಿಂದೆ ಬಿಜೆಪಿ ಅವಧಿಯಲ್ಲಿ ಜನಾಭಿಪ್ರಾಯ ಸಂಗ್ರಹಕ್ಕೆ ಬಂದಾಗಲೂ ಬಹುಸಂಖ್ಯಾತ ರೈತರು ತಮ್ಮ ವಿರೋಧವನ್ನು ದಾಖಲಿಸಿದ್ದರು ಎಂದು ಅವರು ಉಲ್ಲೇಖಿಸುತ್ತಾರೆ.

“ರೈತ ಚಳವಳಿಯ ಮೂಲಕ ಬೆಳೆದುಬಂದ ಸಿದ್ದರಾಮಯ್ಯನವರು ಎರಡನೇ ಅವಧಿಗೆ ಸಿಎಂ ಆಗಿದ್ದಾರೆ. ಅವರಿಗೆ ನಮ್ಮ ಕಷ್ಟ ಅರ್ಥವಾಗುತ್ತದೆ, ಯಾವುದೋ ಒತ್ತಡಕ್ಕೆ ಒಳಗಾಗಿರುವ ಅವರು ತಮ್ಮ ಅಂತಿಮ ಆದೇಶವನ್ನು ಬದಲಿಸುತ್ತಾರೆಂಬ ವಿಶ್ವಾಸದಲ್ಲಿ ಈಗಲೂ ರೈತರು ಇದ್ದಾರೆ. ಸಿದ್ದರಾಮಯ್ಯನವರಿಗೆ ತಪ್ಪು ಮಾಹಿತಿ ಕೊಟ್ಟವರ್ಯಾರು? ಅವರ ಕಾಳಜಿಯಲ್ಲಿ ಕೊರತೆಯಾದರೂ ಬಂದಿದ್ದು ಹೇಗೆ? ಯಾವ ಕೈಗಳು ಅವರನ್ನು ಕಟ್ಟಿ ಹಾಕಿವೆ” ಎಂಬುದು ರಮೇಶ್ ಅವರ ಪ್ರಶ್ನೆ.

ಹೆಸರಿಗೆ ಮಾತ್ರ ಕೈಗಾರಿಕೆ; ಕೊಡೋದು ಬೇರೆಯವರಿಗೆ

ಕೆಐಎಡಿಬಿ ಮೊದಲ ಹಂತದಲ್ಲಿ ಸ್ವಾಧೀನ ಪಡೆದ ಭೂಮಿ ಕೇವಲ ಕೈಗಾರಿಕಾ ಉದ್ದೇಶಕ್ಕಾಗಿ ಬಳಕೆಯಾಗುತ್ತಿಲ್ಲ ಎನ್ನುತ್ತಾರೆ ಚನ್ನರಾಯಪಟ್ಟಣ ಹೋರಾಟಗಾರರು. ರೈತರಿಂದ ವಶಕ್ಕೆ ಪಡೆದ ಭೂಮಿಯಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ತಲೆ ಎತ್ತಿದೆ. ರಿಯಲ್ ಎಸ್ಟೇಟ್ ಕಂಪನಿ ಬ್ರಿಗೇಡ್‌ ಗ್ರೂಪ್‌ನವರಿಗೆ ಹತ್ತಾರು ಎಕರೆ ಭೂಮಿ ಕೊಡಲಾಗಿದೆ. ಹೇಳುವುದು ಒಂದು, ಆಗುತ್ತಿರುವುದು ಇನ್ನೊಂದು. ಬಡವರ ಬದುಕು ಬಲಿಕೊಟ್ಟು ಸರ್ಕಾರಗಳು ಯಾರನ್ನು ಉಳಿಸುತ್ತಿವೆ?

6 chanakya vv
ಕೆಐಎಡಿಬಿ ಸ್ವಾಧೀನಕ್ಕೆ ಪಡೆದಿರುವ ಭೂಮಿಯಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ತಲೆ ಎತ್ತಿದೆ.
7 Brigade
ರೈತರಿಂದ ವಶಕ್ಕೆ ಪಡೆದಿರುವ ಭೂಮಿಯಲ್ಲಿ ಹತ್ತಾರು ಎಕರೆ ಪ್ರದೇಶವನ್ನು ರಿಯಲ್ ಎಸ್ಟೇಟ್ ಕಂಪನಿ ಬ್ರಿಗೇಡ್‌ ಗ್ರೂಪ್‌ನವರಿಗೆ ಕೊಡಲಾಗಿದೆ.

ತರಹೇವಾರಿ ಹೂವು, ಹಣ್ಣು, ತರಕಾರಿ, ಹಾಲು, ರೇಷ್ಮೆ ಉತ್ಪಾದನೆಯಲ್ಲಿ ದೇವನಹಳ್ಳಿ ತಾಲ್ಲೂಕು ಮುಂಚೂಣಿಯಲ್ಲಿದೆ. ಬೆಂಗಳೂರು ನಗರಕ್ಕೆ ಕೃಷಿ ಉತ್ಪನ್ನಗಳನ್ನು ಒದಗಿಸುತ್ತಾ ಬದುಕು ನಡೆಸುತ್ತಿರುವ ರೈತರ ಕೂಗು ಸರ್ಕಾರಕ್ಕೆ ಕೇಳಿಸುತ್ತದೆ ಎಂಬ ಭರವಸೆಯಲ್ಲೇ ಹೋರಾಟ ಮುಂದುವರಿಸಿದ್ದಾರೆ. ಇದೇ ಜೂನ್ 25ರಂದು ಅಂತಿಮ ಆದೇಶದ ವಿರುದ್ಧ ದೇವನಹಳ್ಳಿ ಚಲೋ ಹಮ್ಮಿಕೊಳ್ಳಲಾಗಿದೆ. 13 ಗ್ರಾಮಗಳ ರೈತರ ಬೆನ್ನಿಗೆ ಎಲ್ಲ ಜನಪರ ಸಂಘಟನೆಗಳು ದನಿಯಾಗಿವೆ. ರಾಷ್ಟ್ರಮಟ್ಟದ ರೈತ ಹೋರಾಟಗಾರರೆಲ್ಲ ಚನ್ನರಾಯಪಟ್ಟಣ ಚಳವಳಿಗೆ ಈಗಾಗಲೇ ಬೆಂಬಲಿಸಿದ್ದಾರೆ.

ಇದನ್ನೂ ಓದಿರಿ: ಚನ್ನರಾಯಪಟ್ಟಣ ರೈತ ಹೋರಾಟ: ಭೂಸ್ವಾಧೀನ ಹಿಂಪಡೆಯಲು ಸರ್ಕಾರಕ್ಕೆ ಅಂತಿಮ‌ ಗಡುವು ನೀಡಿದ ರೈತರು

ಇಷ್ಟು ದಿನಗಳ ಹೋರಾಟ ಹಲವು ಏಳುಬೀಳುಗಳನ್ನು ಕಂಡಿದೆ. ಮಾತುಕೊಟ್ಟವರು ಮಾತು ತಪ್ಪಿದ್ದಾರೆ. ಹತಾಶರಾದ ರೈತರು ವಿಷ ಕುಡಿಯಲೆತ್ನಿಸಿದ್ದಾರೆ. ಭೂಮಿ ಕೊಟ್ಟು ಸಾಯುವುದಕ್ಕಿಂತ ಹೋರಾಡಿ ಸಾಯುವುದು ಮೇಲು ಎನ್ನುತ್ತಾರೆ ವಿಷ ಕುಡಿದಿದ್ದ ರೈತ ವೆಂಕಟೇಶ್.

ಐದು ಗ್ಯಾರಂಟಿಗಳನ್ನು ಕೊಟ್ಟು ಬಡವರಿಗೆ ಆಸರೆಯಾದ ಸರ್ಕಾರ, ಚನ್ನರಾಯಪಟ್ಟಣ ರೈತರಿಗೆ ಭೂ ಗ್ಯಾರಂಟಿಯನ್ನು ಕೊಡಬೇಕಾಗಿದೆ. ಸಿಎಂ ಸಿದ್ದರಾಮಯ್ಯನವರ ಮೇಲೆ ಮತ್ತು ಈ ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪನವರ ಮೇಲೆ ಇಟ್ಟಿರುವ ಭರವಸೆ ಹುಸಿಯಾಗದಿರಲಿ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರು ರೈತರ ಕೂಗನ್ನು ಆಲಿಸಲಿ. ಸಾಮಾಜಿಕ ನ್ಯಾಯದ ಪರ ದನಿ ಎತ್ತುವ ಕಾಂಗ್ರೆಸ್‌ನ ರಾಷ್ಟ್ರಮಟ್ಟದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರಿಗೂ ಈ ಚಾರಿತ್ರಿಕ ಹೋರಾಟದ ಮಹತ್ವ, ಜನರ ಒಡಲಾಳದ ಸಂಕಟ ತಿಳಿಯುವಂತಾಗಲಿ.

ಚಿತ್ರಗಳು: ಪಾಂಡು, ಹರೀಶ್

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X