ಕೇಂದ್ರ- ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಜೂ.25ರಂದು ʼದೇವನಹಳ್ಳಿ ಚಲೋʼ

Date:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬಲವಂತ ಹಾಗೂ ಅನ್ಯಾಯದ ಕೆಐಎಡಿಬಿ ಭೂ ಸ್ವಾಧೀನಕ್ಕೆ ರೈತರ ಪ್ರಬಲ ವಿರೋಧ ಧಿಕ್ಕರಿಸಿ ಅಂತಿಮ ಅಧಿಸೂಚನೆ ಹೊರಡಿಸಿರುವುದು ರಾಜ್ಯ ಸರ್ಕಾರದ ಹೇಡಿತನದ ಕೃತ್ಯವಾಗಿದೆ. ಈ ಅಧಿಸೂಚನೆಯನ್ನು ಸಂಪೂರ್ಣ ರದ್ದುಪಡಿಸಲು ಆಗ್ರಹಿಸಿ ಜೂನ್ 25, 2025 ರಂದು ದೇವನಹಳ್ಳಿ ತಾಲ್ಲೂಕು ಕಚೇರಿ ಎದುರು ಪ್ರತಿಭಟಿಸಲು ರಾಜ್ಯಾದ್ಯಂತ ದೇವನಹಳ್ಳಿ ಚಲೋಗೆ ಬರುವಂತೆ ರಾಜ್ಯದ ಎಲ್ಲಾ ಬಲವಂತದ ಹಾಗೂ ಅನ್ಯಾಯದ ಭೂ ಸ್ವಾಧೀನ ವಿರೋಧಿಸುತ್ತಿರುವ ರೈತರಿಗೆ ಹಾಗೂ ರೈತ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ-ಯುವಜನರಿಗೆ ಸಂಯುಕ್ತ ಹೋರಾಟ-ಕರ್ನಾಟಕ ಕರೆ ನೀಡಿದೆ.

- Advertisement -

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ಇದು ನಿರ್ಣಾಯಕ ಹೋರಾಟವಾಗಿದ್ದು ಸರ್ಕಾರ ಈ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡುವ ತನಕ ಹಿಂದೆಸರಿಯದೆ ಮುಂದುವರೆಯಲಿದೆ. ಅನಿರ್ಧಿಷ್ಟ ಹೋರಾಟಕ್ಕೆ ಸಜ್ಜಾಗಿ ರಾಜ್ಯದ ಎಲ್ಲಾ ಸಂಘಟನೆಗಳ ಮುಂದಾಳುಗಳು, ಕಾರ್ಯಕರ್ತರು ಹಾಗೂ ನಾಗರಿಕರು ಹೋರಾಟನಿರತ ರೈತರ ಜೊತೆಗೂಡಲು ದೇವನಹಳ್ಳಿಗೆ ಹೊರಡುತ್ತಿದ್ದಾರೆ.

ಕಳೆದ 1,180 ದಿನಗಳಿಂದ ಅಂದರೆ ಸುಮಾರು ನಾಲ್ಕು ವರ್ಷಗಳಿಂದ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ನಾಡ ಕಚೇರಿ ಮುಂದೆ ಅನಿರ್ದಿಷ್ಟ ಪ್ರತಿಭಟನೆ ನಡೆಸುತ್ತಿದ್ದಾರೆ. ಶೇಕಡಾ 80 ರಷ್ಟು ರೈತರು ಲಿಖಿತವಾಗಿ ಭೂ ಸ್ವಾಧೀನಕ್ಕೆ ತಮ್ಮ ಅಸಮ್ಮತಿ ಹಾಗೂ ವಿರೋಧವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರೂ, ಬಲವಂತದ ಭೂ ಸ್ವಾಧೀನಕ್ಕೆ ಕ್ರಮವಹಿಸಿರುವುದು, ಭೂ ಸ್ವಾಧೀನ ಕಾಯ್ದೆ-2013ರ ಸ್ಪಷ್ಟ ಉಲ್ಲಂಘನೆಯಾಗಿದೆ.

ಈ ರೈತರು ವಿವಿಧೆಡೆ ನಡೆಸಿದ ಪ್ರತಿಭಟನಾ ಧರಣಿ ಸ್ಥಳಗಳಿಗೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರಾಗಿದ್ದಾಗ ಭೇಟಿ ಕೊಟ್ಟು ತಾನು ಅಧಿಕಾರಕ್ಕೆ ಬಂದರೆ ಅನ್ಯಾಯ ಹಾಗೂ ಬಲವಂತದ ಭೂ ಸ್ವಾಧೀನವನ್ನು ರದ್ದುಪಡಿಸುವುದಾಗಿ ಸಾರ್ವಜನಿಕ ಘೋಷಣೆ ಮಾಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಈಗ ಉಸ್ತುವಾರಿ ಸಚಿವರಾಗಿರುವ ಕೆ.ಹೆಚ್. ಮುನಿಯಪ್ಪ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಬಲವಂತವಾಗಿ ಭೂ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ಈ ರೈತರ ಮತ ಕೇಳಿದ್ದರು. ಆದರೆ ಈ ಇಬ್ಬರೂ ಅಧಿಕಾರಕ್ಕೆ ಬಂದು ಎರಡುವರೆ ವರ್ಷಗಳಾದರೂ ತಮ್ಮ ವಚನಕ್ಕೆ ವಿರುದ್ದವಾಗಿ ವರ್ತಿಸಿ ವಚನಭ್ರಷ್ಟರು ಎಂದು ಸಾಬೀತು ಮಾಡಿಕೊಂಡಿದ್ದಾರೆ ಇದು ಸಾರ್ವಜನಿಕ ಹುದ್ದೆಗೆ ಮತ್ತು ನಡವಳಿಕೆಗೆ ಯೋಗ್ಯವಲ್ಲದ್ದು ಎಂದರು.

ಇತ್ತೀಚಿಗಿನ ಸಭೆಯೂ ಸೇರಿದಂತೆ ಕಳೆದ ನಾಲ್ಕು ವರ್ಷಗಳಲ್ಲಿ ರೈತರ ಪ್ರತಿಭಟನಾ ಒತ್ತಡ ಹೆಚ್ಚಿದ ಸಂದರ್ಭದಲ್ಲೆಲ್ಲಾ ಮುಖ್ಯಮಂತ್ರಿ ನೇತೃತ್ವದಲ್ಲಿ ನಾಲ್ಕಾರು ಸಭೆಗಳು, ಉಸ್ತುವಾರಿ ಮಂತ್ರಿ ನೇತೃತ್ವದಲ್ಲಿ ಹತ್ತಾರು ಸಭೆಗಳು ಅಲ್ಲದೇ ಸ್ವತಃ ಉಸ್ತುವಾರಿ ಮಂತ್ರಿ ಹತ್ತಾರು ಬಾರಿ ಧರಣಿ ಸ್ಥಳಕ್ಕೆ ಭೇಟಿ ಕೊಟ್ಟು ರೈತರ ಪರವಾಗಿ ತೀರ್ಮಾನ ಮಾಡುವುದಾಗಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ರೈತರ ಒಪ್ಪಿಗೆ ಇಲ್ಲದೇ ಭೂ ಸ್ವಾಧೀನ ಮುಂದುವರೆಸುವುದಿಲ್ಲ ಎಂದು ಸಾರ್ವಜನಿಕವಾಗಿ ಹಲವಾರು ಬಾರಿ ಸ್ಪಷ್ಟ ಪಡಿಸಿದ್ದಾರೆ. ಈ ರೀತಿ ಭರವಸೆ ನೀಡಿ ಒಳಗೊಳಗೆ ಭೂಸ್ವಾಧೀನದ ಪ್ರಕ್ರಿಯೆ ಮುಂದುವರೆಸಿ ಅಂತಿಮ ಅಧಿಸೂಚನೆ ಹೊರಡಿಸಿರುವುದು ರೈತರಲ್ಲಿ ಹತಾಶೆ-ನಿರಾಶೆ ಉಂಟು ಮಾಡಿ ಒಡಕು ಉಂಟು ಮಾಡುವ ಹೀನ ಕುತಂತ್ರವಲ್ಲದೇ ಬೇರೇನೂ ಅಲ್ಲ ಎಂದು ಅವರು ಟೀಕಿಸಿದರು.

ಸಾರ್ವಜನಿಕವಾಗಿ ಒಂದು ಮುಖ ತೋರಿ, ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಇನ್ನೊಂದು ರೀತಿಯಲ್ಲಿ ಆದೇಶ ನೀಡಿ ರೈತ ಸಮುದಾಯವನ್ನು ಹಾಗೂ ರೈತ ಹೋರಾಟವನ್ನು ಸಿದ್ದರಾಮಯ್ಯರವರ ನೇತೃತ್ವದ ರಾಜ್ಯ ಸರ್ಕಾರ ಅಪಮಾನಿಸಿದೆ. ಚನ್ನರಾಯಪಟ್ಟಣ ಹೋಬಳಿ ರೈತರ ಧರಣಿ ಸ್ಥಳಕ್ಕೆ ಈ ನಾಲ್ಕು ವರ್ಷಗಳಲ್ಲಿ ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷರು, ಸಂಯುಕ್ತ ಕಿಸಾನ್ ಮೋರ್ಚಾ ನಾಯಕರೂ ಆಗಿರುವ ಡಾ.ಅಶೋಕ್ ಧವಳೆ, ಅಖಿಲ ಭಾರತ ಕಿಸಾನ್ ಸಭಾದ ಅಖಿಲ ಭಾರತ ಹಣಕಾಸು ಕಾರ್ಯದರ್ಶಿ ಮಾಜಿ ಶಾಸಕ ಕೃಷ್ಣಪ್ರಸಾದ್, ಭಾರತೀಯ ಕಿಸಾನ್ ಯೂನಿಯನ್‍ನ ರಾಕೇಶ್ ಟಿಕಾಯತ್ ಸೇರಿದಂತೆ ರಾಷ್ಟ್ರೀಯ ರೈತ ನೇತಾರರು ಭೇಟಿ ಕೊಟ್ಟು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಡೀ ರಾಜ್ಯದ ಎಲ್ಲಾ ರೈತ ಚಳವಳಿಗಳ ಹಾಗೂ ಬುದ್ಧಿಜೀವಿ, ಸಾಹಿತಿಗಳ ಬೆಂಬಲ ಮತ್ತು ಅನುಕಂಪ ಈ ಭೂ ಸ್ವಾಧೀನ ವಿರೋಧಿ ರೈತರ ಮೇಲೆ ಇದೆ. ಮೇಲಾಗಿ ತಮ್ಮ ತೀವ್ರ ಅನಾರೋಗ್ಯದ ನಡುವೆಯೂ ಈ ರೈತರ ಹೋರಾಟಕ್ಕೆ ನೇತೃತ್ವ ನೀಡುತ್ತಿದ್ದ ಜಿ.ಸಿ. ಬಯ್ಯಾರೆಡ್ಡಿರವರು ಈ ಹೋರಾಟದ ಬೇಡಿಕೆಯನ್ನು ಪುನರುಚ್ಚರಿಸುತ್ತಾ ಮರಣವನ್ನಪ್ಪಿದ್ದಾರೆ.
ಇಷ್ಟೆಲ್ಲಾ ಇದ್ದರೂ ಬಹುರಾಷ್ಟ್ರೀಯ ಸಂಸ್ಥೆಗಳು, ರಿಯಲ್ ಎಸ್ಟೇಟ್ ಮಾಫಿಯಾಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಬಲವಂತದ ಹಾಗೂ ಅನ್ಯಾಯದ ಭೂಸ್ವಾಧೀನ ಮಾಡೇತೀರುವ ಹಠ ಸರ್ವಾಧಿಕಾರಿ ಮನೋಭಾವದ್ದು ಮತ್ತು ಇಂತಹ ಭೂ ಸ್ವಾಧೀನ ವಿರೋಧಿ ಹೋರಾಟವನ್ನು ರಾಜ್ಯಾದ್ಯಂತ ಸಂಪೂರ್ಣ ಮಟ್ಟ ಹಾಕುವ ಫ್ಯಾಸಿಸ್ಟ್ ದುರುದ್ದೇಶದ್ದು. ಈ ದುರುದ್ದೇಶ ಈಡೇರುವುದಕ್ಕೆ ರಾಜ್ಯದ ರೈತ ಸಮುದಾಯ ಅವಕಾಶ ನೀಡುವುದಿಲ್ಲ ಮತ್ತು ಚನ್ನರಾಯಪಟ್ಟಣ ರೈತರ ಹೋರಾಟಕ್ಕೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯು ಸೇರಿದಂತೆ ರಾಜ್ಯದ ಎಲ್ಲಾ ಭೂ ಸ್ವಾಧೀನದ ಭೀತಿ ಎದುರಿಸುತ್ತಿರುವ ಎಲ್ಲಾ ರೈತರನ್ನು ಒಗ್ಗೂಡಿಸಿ ಚನ್ನರಾಯಪಟ್ಟಣ ಭೂ ಸ್ವಾಧೀನಕ್ಕೆ ಪ್ರಬಲ ವಿರೋಧವನ್ನು ಇನ್ನೂ ಹೆಚ್ಚಿನ ಹೋರಾಟದ ಶಕ್ತಿಯೊಂದಿಗೆ ಮುಂದುವರೆಸಿ, ರೈತ ಹೋರಾಟ ಜಯಗಳಿಸುವಂತೆ ಮಾಡಲು ಜೂನ್ 25, 2025ರಂದು ದೇವನಹಳ್ಳಿ ಚಲೋ ಹಮ್ಮಿಕೊಳ್ಳಲಾಗಿದೆ.

ಕಾರ್ಪೊರೇಟ್ ಭೂ ಕಬಳಿಕೆ ವಿರುದ್ಧದ ಚನ್ನರಾಯಪಟ್ಟಣ ರೈತರ ಹೋರಾಟ ಗೆಲುವು ಸಾಧಿಸುವುದು ಇಡೀ ರಾಜ್ಯದ ಭೂ ಸ್ವಾಧೀನ ವಿರೋಧಿ ಹೋರಾಟದ ಹಿತದೃಷ್ಟಿಯಿಂದ ಬಹಳ ಮಹತ್ವ ಪಡೆದಿದ್ದು ರಾಜ್ಯದ ರೈತರ ಪ್ರಜಾಸತ್ತಾತ್ಮಕ ಹಕ್ಕು ಕಾಪಾಡಲು ಈ ಹೋರಾಟ ತೀವ್ರಗೊಳಿಸುವುದು ಅನಿವಾರ್ಯವಾಗಿದೆ. ಈ ಮಧ್ಯೆ ದೇವನಹಳ್ಳಿ ಪೊಲೀಸ್‌ ಠಾಣೆಯಿಂದ ಅಲ್ಲಿನ ಎಲ್ಲಾ ಸಂಘಟನೆಗಳ ಮುಖಂಡರಿಗೂ ದೇವನಹಳ್ಳಿ ವ್ಯಾಪ್ತಿಯಲ್ಲಿ ನಿಶೇಧಾಜ್ಞೆ ಇದ್ದು, ಹೋರಾಟಕ್ಕೆ ಮುಂದಾಗುವುದಾದರೆ ಕ್ರಮ ತೆಗೆದುಕೊಳ್ಳುವುದಾಗಿ ಧಮಕಿ ಪತ್ರ ಕಳುಹಿಸಲಾಗಿದೆ. ಪೊಲೀಸರು ಅವರು ಮಾಡುವ ಕೆಲಸ ಅವರು ಮಾಡಲಿ, ನ್ಯಾಯ ಉಳಿಸಿಕೊಳ್ಳಲು ನಾವು ಮಾಡಲೇಬೇಕಾದ ಹೋರಾಟವನ್ನು ನಾವು ಮುಂದುವರೆಸುತ್ತೇವೆ. ಕೇಸಿಗಾಗಲೀ, ಜೈಲಿಗಾಗಲೀ, ಲಾಟಿಗಾಗಲೀ, ಗುಂಡಿಗೂ ಸಹ ಹೆದರುವ ಪ್ರಶ್ನೆಯೇ ಇಲ್ಲ. ಹೋರಾಟದಿಂದ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇವೆ. ಈ ಸಂಘರ್ಷ ನಿಲ್ಲಿಸಬೇಕಿದ್ದಲ್ಲಿ ಸರ್ಕಾರ ಹಟಬಿಟ್ಟು ಈ ಭೂ ಸ್ವಾಧೀನವನ್ನು ಸಂಪೂರ್ಣವಾಗಿ ಕೈಬಿಡಲೇಬೇಕು ಎಂದು ಕೊನೆಯ ಬಾರಿ ಮತ್ತೊಮ್ಮೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇವೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ಬಡಗಲಪುರ ನಾಗೇಂದ್ರ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ್, ದಲಿತ ಮುಖಂಡ ಮಾವಳ್ಳಿ ಶಂಕರ್‌ ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ಸತ್ಯ ಹೇಳದೇ ಸಹಿ ಪಡೆದರು; ಎಫ್‌ಐಆರ್ ದಾಖಲಾಗುತ್ತಿದ್ದಂತೆ ತಮ್ಮ ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ (ಡಿಲಿಷನ್) ಪ್ರಕ್ರಿಯೆ...

ಸುಂಟರಗಾಳಿ ಚಿತ್ರದ ಲೇಡಿ ವಿಲನ್, ‘ಸಾರಾಯಿ ಶಾರದೆ’ ಖ್ಯಾತಿಯ ಹಿರಿಯ ನಟಿ ಲಲಿತಮ್ಮ ನಿಧನ

ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಹಿರಿಯ ಪೋಷಕ ನಟಿ, 'ಸುಂಟರಗಾಳಿ' ಸಿನಿಮಾದ...

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ ಕಡೇ ದಿನಗಳು’

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ...