ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ವಾರ ಒಡಿಯಾ ಕವಿ ಪ್ರದೀಪ್ ಬಿಸ್ವಾಲ್ ಅವರ ಇಂಗ್ಲಿಷ್ ಕವನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ.ಎಚ್.ಭಾಗ್ಯ.
ಮೋಡಗಳ ಬಗ್ಗೆ
ಏನನ್ನೂ ಹೇಳದಿರುವುದೆ ಒಳ್ಳೆಯದು.
ಒಳಿತನಲ್ಲಾಗಲೀ ಕೆಡುಕಿನಲ್ಲಾಗಲೀ
ಬದುಕಿನಲ್ಲಾಗಲೀ ಸಾವಿನಲ್ಲಾಗಲೀ
ಅವೆಂದೂ ನಮ್ಮ ಜೊತೆ ಇಲ್ಲವೇ ಇಲ್ಲ.
ಮನಸೋ ಇಚ್ಛೆ ಅವು
ಆಕಾಶದಲ್ಲಿ ತೇಲುತ್ತವೆ
ಮರೀಚಿಕೆಯ ಬೆಂಬತ್ತುವಂತೆ
ನಾವು ಅದರ ಬೆನ್ನು ಹತ್ತುತ್ತೇವೆ
ನಮ್ಮೆಲ್ಲಾ ಪ್ರಾರ್ಥನೆಗಳು ಭರವಸೆಗಳು
ವ್ಯರ್ಥವಾಗುತ್ತವೆ.
ಆಕಾಶದಲ್ಲಿ ಮೋಡಗಳು ದಟ್ಟೈಸುತ್ತವೆ
ಚಂದಿರ, ನಕ್ಷತ್ರಗಳನ್ನು
ಮುಚ್ಚಿಹಾಕುತ್ತಾ….
ಆದರೂ ಅವು ಎಲ್ಲೂ ಸಿಕ್ಕಿಹಾಕಿಕೊಳ್ಳುವುದಿಲ್ಲ
ಯಾರ ಮುಷ್ಟಿಯಲ್ಲೂ.
ಬರೀ ಕಣ್ಣಾಮುಚ್ಚಾಲೆ ಆಟ ಮುಂದುವರೆಯುತ್ತದೆ.
ಮೊನ್ನೆ ಮೋಡಗಳು ನಮ್ಮ ಅಂಗಳದಲ್ಲಿ ತೇಲುತ್ತಿದ್ದವು
ಕೈಚಾಚಿ ಹಿಡಿಯಹೋದರೆ
ದಿಗಂತದಾಚೆ ತೇಲಿ ಹೋದವು…
ಮೋಡಗಳ ಬಗ್ಗೆ ಮಾತಾಡದಿರುವುದೇ ಒಳ್ಳೆಯದು.





