ಜನ ಬದುಕಿನ “ಸಮುದಾಯ – 50”

Date:

Advertisements

ನಾಟಕಗಳ ಮೂಲಕ ಸಾಮಾಜಿಕ ಬದಲಾವಣೆಯ ಹೆಜ್ಜೆ ಇಟ್ಟ ‘ಸಮುದಾಯ’ ಮೊದಲು ಬೆಂಗಳೂರಿಗೆ ಸೀಮಿತವಾದರೂ, ಅದರ ಆಶಯ, ಅದು ಹೊರಟ ದಿಕ್ಕು – ಒಟ್ಟು ಜನಸಂಸ್ಕೃತಿಯ ಬೇರನ್ನು ಭದ್ರಪಡಿಸುವತ್ತ ಇದ್ದುದರಿಂದ ಅದು ರಾಜ್ಯದ ಹಲವು ಜಿಲ್ಲೆಗಳಿಗೂ ಬೇಗ ಪಸರಿಸಿತು. ಸಮಕಾಲೀನ ರಂಗಭೂಮಿಯ ಚಳವಳಿಗೆ ಎಲ್ಲ ಕಡೆಯಿಂದ ಸ್ವಾಗತ ಸಿಕ್ಕಿತು

ನಪರ ಆಶಯ ಹಾಗೂ ಜನಮುಖಿ ಚಿಂತನೆ ಇಟ್ಟುಕೊಂಡು ಸಾಂಸ್ಕೃತಿಕವಾಗಿ ಬೇರುಬಿಡುವ ಚಿಂತನೆ ಭಾರತೀಯ ಮನಸ್ಸುಗಳಿಗೆ ತಾಕಿದ್ದು ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ. ಲಾವಣಿ, ದೇಶಭಕ್ತಿ ಗೀತೆಗಳು, ರಂಗದ ಮೇಲೆ ಅಭಿನಯಿಸುವ ನಾಟಕಗಳಲ್ಲಿ ಸೂಕ್ಷ್ಮವಾಗಿ ದೇಶ ಪ್ರೇಮ, ಸ್ವಾತಂತ್ರ್ಯದ ಮಹತ್ವ ಸಾರುವ ಚಿಂತನೆಗಳನ್ನು ಬಿಂಬಿಸಲಾಗುತ್ತಿತ್ತು. ಸ್ವಾತಂತ್ರ್ಯ ನಂತರ ಭಾರತೀಯ ಹಾಗೂ ಪಾಶ್ಚಾತ್ಯ ಚಿಂತನೆಯ ಸಾಹಿತ್ಯ-ಸಂಸ್ಕೃತಿಯ ಅಧ್ಯಯನ ಶುರುವಾಯಿತು. ಅದು ಕಲಿತವರ ನಡುವಿನ ಸಮಾಲೋಚನೆ, ಚರ್ಚೆಯ ವಿಷಯ ಆದದ್ದು ಕ್ರಮೇಣ ಜನರತ್ತ ಆ ಚಿಂತನೆ ಹರಿಸುವ ಪ್ರಯತ್ನಗಳೂ ನಡೆದವು. ಸರ್ಕಾರದ ಕೆಲವು ಸಂಸ್ಥೆಗಳು, ಖಾಸಗಿ ಸಂಸ್ಥೆ-ವ್ಯಕ್ತಿಗಳು ವಿಚಾರಗಳನ್ನು ಹಲವು ಮಾಧ್ಯಮಗಳ ಮೂಲಕ ಬಿಂಬಿಸುವಲ್ಲಿ ಯಶಸ್ವಿಯಾದವು.

ಸಾಹಿತ್ಯ, ಕಲೆ, ಸಂಗೀತ, ನಾಟಕಗಳು ಜನ ಬದುಕಿನ ಭಾಗವಾಗಿ ಬೆಳೆದು, ಅವು ಸಮಾಜದ ಊನಗಳನ್ನು ಎತ್ತಿ ಹಿಡಿದ ಪ್ರಯತ್ನವನ್ನೂ ಮಾಡಿದವು. ಹೀಗಾಗಿ ರಾಜಕಾರಣದ ಮೂಲಕ ಆಗುವ ಜನವಿರೋಧಿ ತಪ್ಪುಗಳನ್ನು ಸಾಹಿತ್ಯ ರಂಗಭೂಮಿಯ ಸಾಂಸ್ಕೃತಿಕ ಆಯಾಮಗಳು ಚಿಕಿತ್ಸೆಯಂತೆ ಕೆಲಸ ಮಾಡಿದವು.

Advertisements

ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ರಾಜಕಾರಣದ ಏರುಪೇರುಗಳು ಘಟಿಸುತ್ತಿದ್ದ ಸಂದರ್ಭವನ್ನು ಸಾಹಿತಿ-ಕಲಾವಿದರು ಗಂಭೀರವಾಗೇ ಪರಿಗಣಿಸುತ್ತಾ ಬಂದಿದ್ದರು. ಜನಪರ ನಿಲುವಿನ, ಪ್ರಗತಿಪರ ಆಶಯದ ವಿಚಾರಗಳಿಗೆ ವೇದಿಕೆಯ ಅಗತ್ಯವೂ ಇತ್ತು. 1975ರ ಕಾಲಕ್ಕೆ ದೇಶದಲ್ಲಿ ವಿದ್ಯಾರ್ಥಿ ಚಳವಳಿ, ರಾಜಕೀಯ ಅಸ್ಥಿತರೆ, ಒಂದು ರೀತಿಯ ಕ್ಷೋಭೆ ಶುರುವಾಗಿತ್ತು. ಪ್ರಜಾಪ್ರಭುತ್ವದಿಂದ ಅರಾಜಕತೆಯತ್ತ ಸಾಗಿದ್ದ ಸಂದರ್ಭವದು. ಇದನ್ನೇ ಬಳಸಿಕೊಂಡು ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ತಂದರು. ಹಲವೆಡೆ ವಿಚಾರವಾದಿಗಳು, ಬುದ್ದಿಜೀವಿಗಳು ಪ್ರತಿರೋಧ ವ್ಯಕ್ತಪಡಿಸಿದರು. ಬೀದಿಗಿಳಿದು ಪ್ರತಿಭಟಿಸಿ ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹಲವರ ಬಂಧನವೂ ಆಯಿತು. ಆಗ ಭೂಗತ ಚಟುವಟಿಕೆಗಳೂ ಹೆಚ್ಚಾದವು. ಮತ್ತೆ ಪ್ರಜಾತಂತ್ರ ಉಳಿದು ಬೆಳೆಯಬೇಕು ಎಂಬ ದನಿಗೆ ಎಡ ಚಿಂತನೆಯ, ಜನಪರ ಆಲೋಚಕರು ಯೋಚಿಸಿದ್ದರ ಪರಿಣಾಮ ‘ಸಮುದಾಯ’ ಎಂಬ ಸಾಂಸ್ಕೃತಿಕ ಸಂಘಟನೆ ಇದೇ ಕಾಲಘಟ್ಟದಲ್ಲಿ ಜನ್ಮತಾಳಿತು.

Samudaya 4

ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಸೇರಿದ್ದ ಚಿಂತಕರ ಸಭೆಯಲ್ಲಿ ಸಾಂಸ್ಕೃತಿಕ ಆಯಾಮದ ಮೂಲಕ ಜನರ ಮನಸ್ಸು ಮುಟ್ಟಬೇಕೆಂಬ ತೀರ್ಮಾನಕ್ಕೆ ಅಲ್ಲಿದ್ದವರೆಲ್ಲ ಬದ್ದರಾಗಿದ್ದರು. ಕಿ.ರಂ. ನಾಗರಾಜ, ವಿಜಯಾ, ಪ್ರಸನ್ನ, ಸಿ. ವೀರಣ್ಣ, ಕೆ.ವಿ. ನಾರಾಯಣ, ಸಿ.ಜಿ. ಕೃಷ್ಣಸ್ವಾಮಿ, ಡಿ.ಆರ್. ನಾಗರಾಜ ಮೊದಲಾದವರು ಸಮುದಾಯದ ರೂಪುರೇಷೆ ಸಿದ್ದ ಮಾಡಿದರು.

ನಾಟಕಗಳ ಮೂಲಕ ಸಾಮಾಜಿಕ ಬದಲಾವಣೆಯ ಹೆಜ್ಜೆ ಇಟ್ಟ ‘ಸಮುದಾಯ’ ಮೊದಲು ಬೆಂಗಳೂರಿಗೆ ಸೀಮಿತವಾದರೂ, ಅದರ ಆಶಯ, ಅದು ಹೊರಟ ದಿಕ್ಕು – ಒಟ್ಟು ಜನಸಂಸ್ಕೃತಿಯ ಬೇರನ್ನು ಭದ್ರಪಡಿಸುವತ್ತ ಇದ್ದುದರಿಂದ ಅದು ರಾಜ್ಯದ ಹಲವು ಜಿಲ್ಲೆಗಳಿಗೂ ಬೇಗ ಪಸರಿಸಿತು. ಸಮಕಾಲೀನ ರಂಗಭೂಮಿಯ ಚಳವಳಿಗೆ ಎಲ್ಲ ಕಡೆಯಿಂದ ಸ್ವಾಗತ ಸಿಕ್ಕಿತು.

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬೇತು ಪಡೆದು ಬಂದಿದ್ದ ಪ್ರಸನ್ನ ಹೊಸ ಆಶಯದ ಕನಸುಗಳನ್ನು ಚೆಲ್ಲಿದರು. ರಾಜಕಾರಣದ ಅರಾಜಕತೆ, ಸಾಮಾಜಿಕ ಅಸಮಾನತೆ, ದೌರ್ಜನ್ಯಗಳಿಗೆ ರಂಗಭೂಮಿ ಉತ್ತರವಾಗಬಲ್ಲದು ಎಂಬ ನಂಬುಗೆಯನ್ನು ಗಟ್ಟಿಗೊಳಿಸಬೇಕಾದ ಜವಾಬ್ದಾರಿ ಪ್ರಸನ್ನ ಅವರಂಥ ತರುಣರ ಮೇಲಿತ್ತು. ಪ್ರಸನ್ನ ಅವರ ಜತೆ ಕೈ ಜೋಡಿಸಿ ದುಡಿಯಲು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಒಂದು ಪಡೆಯ ಜೊತೆಗೆ ಅರ್ಥಶಾಸ್ತ್ರ ವಿಭಾಗದಲ್ಲಿದ್ದ ರಂಗಕರ್ಮಿ ಸಿಜಿಕೆ ಅವರುಗಳು ಹೊಸ ಆಶಯದ ‘ಸಮುದಾಯ’ ಸಂಘಟನೆಯ ಭಾಗವಾದರು.

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ನಡೆದ ಅಮಾನವೀಯ ಕೃತ್ಯಗಳಿಗೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದ ಶೋಷಣೆ, ದಬ್ಬಾಳಿಕೆ, ಕೊಲೆಗಳಿಗೆ ಸ್ಪಂದಿಸಿದ ‘ಸಮುದಾಯ’ ಕೊಂಡೊಯ್ದು ನಾಟಕದ ವಸ್ತು ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಇತ್ತು. ‘ಕಲೆ ಮನರಂಜನೆಗಾಗಿ ಅಲ್ಲ, ಜನರಿಗಾಗಿ ಕಲೆ’ ಎಂಬ ಧ್ಯೇಯ ವಾಕ್ಯಕ್ಕೆ ಬದ್ಧವಾಗಿ ತುರ್ತು ಪರಿಸ್ಥಿತಿಯ ಕರಾಳ ಇತಿಹಾಸವನ್ನು ಬಿಚ್ಚಿಡುವಲ್ಲಿ ಯಶಸ್ಸಿನ ಹಾದಿ ಕಂಡಿತು. ನಾಟಕದಲ್ಲಿನ ವಾಸ್ತವಾಂಶಗಳು ಮಾತುಗಳ ಮೂಲಕ, ಹಾಡಿನ ಮೂಲಕ ಜನಮನ ತಟ್ಟುವಲ್ಲಿ ಯಶಸ್ವಿಯಾದವು. ಇದಕ್ಕಾಗಿ ಹಾಡುವ ತಂಡಗಳೇ ಸಿದ್ಧವಾಗಿದ್ದವು. ವ್ಯವಸ್ಥೆಯನ್ನು ಪ್ರಶ್ನಿಸುವ, ಟೀಕಿಸುವ ‘ಇಷ್ಟಾ’ದಂಥ ತಂಡ ಅಭಿನಯ, ಹಾಡುಗಳ ಮೂಲಕ ಸಾಂಸ್ಕೃತಿಕವಾಗಿ ಗುರ್ತಿಸಿಕೊಂಡಿತು. ಯುವ ಜನಾಂಗವೇ ಅಧಿಕವಾಗಿ ಸೇರ್ಪಡೆ ಹೊಂದಿದ್ದರೂ ಮಧ್ಯ ವಯಸ್ಸಿನ ಅನೇಕ ಚಿಂತಕರು ‘ಸಮುದಾಯ’ದ ಜತೆ ಕೈ ಜೋಡಿಸಿದ್ದರು. ನಾಟಕಗಳಷ್ಟೇ ಅಲ್ಲದೆ ವಿಚಾರ ಸಾಹಿತ್ಯ, ವಿಚಾರ ಸಂಕಿರಣ, ತರಬೇತು ಶಿಬಿರಗಳ ಮೂಲಕ ಮತ್ತಷ್ಟು ಗಟ್ಟಿಯಾದ ಚಿಂತನೆಗಳು ಬೆಳೆಯಲು ಅನುಕೂಲಕರ ವಾತಾವರಣ ನಿರ್ಮಾಣವಾಯಿತು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಲೆಮಾರಿ ಸಮುದಾಯಗಳಿಗೆ ಅನ್ಯಾಯ – ಜಾತಿಗಣತಿಯ ಮೇಲೂ ಕರಿನೆರಳು: ರಾಹುಲ್‌ ಗಾಂಧಿ ಗಮನಿಸುವರೇ?

ಹುತ್ತವ ಬಡಿದರೆ’, ‘ಕತ್ತಲೆ ದಾರಿ ದೂರ’, ‘ತಾಯಿ’, ‘ಗೆಲಿಲಿಯೋ, ‘ಕುರಿ’, ‘ಪಂಚಮ’ ಮೊದಲಾದ ನಾಟಕಗಳು ಎಪ್ಪತ್ತರ ದಶಕದ ಮಧ್ಯದಿಂದ ಎಂಬತ್ತು, ತೊಂಬತ್ತರ ದಶಕದವರೆಗೆ ಜನಮನಕ್ಕೆ ಹತ್ತಿರವಾದ ನಾಟಕಗಳಾಗಿದ್ದವು. ದಲಿತ ಕವಿ ಸಿದ್ದಲಿಂಗಯ್ಯನವರ ಅನೇಕ ಹೋರಾಟದ ಹಾಡುಗಳಿಗೆ ‘ಜನ್ನಿ’ ದನಿಯಾದರು. ಸಮುದಾಯದ ಮೂಲಕ ಜನ್ನಿ ಬೆಳೆದಂತೆ ಹಲವು ಕಲಾವಿದರೂ ಹೆಸರು ಗಳಿಸಿದರು.

Samudaya 5

ಬೆಂಗಳೂರು, ತುಮಕೂರು, ಧಾರವಾಡ, ಗುಲಬರ್ಗಾ, ರಾಯಚೂರು ಮೊದಲಾದೆಡೆ ಸಮುದಾಯದ ಜಿಲ್ಲಾ ಘಟಕಗಳು ಶುರುವಾದವು. ರಾಜಕೀಯ ಪ್ರಜ್ಞೆ ಹಾಗೂ ಸಾಮಾಜಿಕ ಬದಲಾವಣೆಯ ಆಶಯವನ್ನು ಅವು ಎತ್ತಿಹಿಡಿದವು. ಹವ್ಯಾಸಿ ರಂಗತಂಡಗಳು ರೂಪಿಸಿದ ಸಾಮಾಜಿಕ ಎಚ್ಚರ ಬೆಳೆವ ಮನಸ್ಸುಗಳಿಗೆ ಮಾರ್ಗದರ್ಶಿಯೂ ಆಯಿತು. ಎನ್‌ಎಸ್‌ಡಿಯಲ್ಲಿ ತರಬೇತು ಪಡೆದು ಬಂದ ಬಿ. ಜಯಶ್ರೀ, ಗಂಗಾಧರ ಸ್ವಾಮಿ, ಸಿ. ಬಸವಲಿಂಗಯ್ಯ, ಜನ್ನಿ, ಮಾಲತಿ ಎಸ್. ಮೊದಲಾದವರಲ್ಲದೆ ಲೇಖಕ ಬೋಳುವಾರು, ಬರಗೂರು ರಾಮಚಂದ್ರಪ್ಪ, ಕೆ.ಆರ್. ಹುಡುಗಿ, ರಾಮಚಂದ್ರದೇವ, ಕೆ. ಮರುಳಸಿದ್ದಪ್ಪ, ಲಿಂಗದೇವರು ಹಳೆಮನೆ, ಗುಂಡಣ್ಣ, ಬಾರೀಘಾಟ್, ಸುರೇಂದ್ರರಾವ್ ಮೊದಲಾದವರು ಸಮುದಾಯಕ್ಕಾಗಿ ಸೇವೆ ಸಲ್ಲಿಸಿದರು.

ಎಪ್ಪತ್ತರ ದಶಕದಲ್ಲೇ ಬೀದಿ ನಾಟಕಕ್ಕೆ ಮೂರನೇ ಆಯಾಮ ನೀಡಿದ ಪಶ್ಚಿಮ ಬಂಗಾಳದ ಬಾದಲ್ ಸರ್ಕಾರ್ ರಾಜ್ಯಕ್ಕೆ ಬಂದು ನಾಟಕಗಳಲ್ಲಿ ಅಭಿನಯಿಸಿ ರಂಗಚಳವಳಿಗೆ ಪ್ರೇರಕರಾದರು. “ಸಮುದಾಯ” ಸಾಂಸ್ಕೃತಿಕ ಸಂಘಟನೆಗೆ ಸಮುದಾಯ ವಾರ್ತಾಪತ್ರ ಎಂಬ ಪತ್ರಿಕೆ ನೀಡಿದ ಕೊಡುಗೆ ಮರೆಯಲಾಗದು. 1979ರ ಮೇನಲ್ಲಿ ಮೊದಲ ಸಂಚಿಕೆ ಹೊರ ಬಂತು. ಪ್ರಥಮ ಸಂಚಿಕೆಯಲ್ಲೇ ಪಿ. ಲಂಕೇಶ್, ಪ್ರಸನ್ನ, ಕೆ.ವಿ. ನಾರಾಯಣ, ಡಿ.ಆರ್. ನಾಗರಾಜ, ಬಾದಲ್ ಸರ್ಕಾರ್ ಮೊದಲಾದವರ ಬರಹಗಳಿದ್ದವು.

samudaya 2

ಸಮುದಾಯ ರಾಜ್ಯದಾದ್ಯಂತ ಸಾಂಸ್ಕೃತಿಕ ಜಾಥ ಸಂಘಟಿಸಿದ್ದು ಮಹತ್ವದ ದಾಖಲೆ. 1981 ಜನವರಿಯಲ್ಲಿ ಬರಗೂರು ರಾಮಚಂದ್ರಪ್ಪ ಅವರ ಸಂಪಾದಕತ್ವದಲ್ಲಿ ‘ಜಾಥಾ ವಿಶೇಷ ಸಂಚಿಕೆ’ ಹೊರ ಬಂತು. ನಿರಂಜನ, ವಿಜಯಾ, ಜಿ. ರಾಮಕೃಷ್ಣ, ಸಿದ್ದಲಿಂಗಯ್ಯ ಅವರುಗಳ ಲೇಖನದ ಜತೆ, ಶಿವರಾಮ ಕಾರಂತ, ಯು.ಆರ್. ಅನಂತಮೂರ್ತಿ, ಎಚ್. ನರಸಿಂಹಯ್ಯ, ಜಿ.ಎಸ್. ಶಿವರುದ್ರಪ್ಪ ಅವರುಗಳ ಸಂದರ್ಶನಗಳೂ ಅದರಲ್ಲಿ ದಾಖಲಾದವು. ಹಲವು ಕಾರಣಗಳಿಂದ ವಾರ್ತಾಪತ್ರ ಸ್ಥಗಿತವಾಯಿತು. ಒಂದೆರಡು ದಶಕದ ನಂತರ ಸಮುದಾಯದ ಸಕ್ರಿಯ ಮೇಷ್ಟ್ರು ಎಚ್.ವಿ. ವೇಣುಗೋಪಾಲ ಅವರು ಹೊಸ ಆವಿಷ್ಕಾರದೊಂದಿಗೆ ಸಮುದಾಯ ವಾರ್ತಾಪತ್ರಕ್ಕೆ ಜೀವ ಕೊಟ್ಟರು. ಹೊಸರೀತಿಯ ಈ ಪತ್ರಿಕೆಯೂ ಅಲ್ಪಾಯುಷಿ ಆಯ್ತು. ಇದು ನಿಂತಿದ್ದಕ್ಕೆ ಬೇಸರಪಟ್ಟುಕೊಳ್ಳಬೇಕಿಲ್ಲ. ಕಾಲದ ಒತ್ತಡ, ಮಾಧ್ಯಮಗಳ ಹೊಸ ಆವಿಷ್ಕಾರದಲ್ಲಿ ಮುದ್ರಣ ಪತ್ರಿಕೆಯ ಮಾಹಿತಿ ಮುದ್ರಣವಾಗಿ ಕೈ ಸೇರುವುದರೊಳಗೆ ಹಳತಾಗಿರುತ್ತದೆ. ಹಾಗೆಂದು ಮುದ್ರಣ ಮಾಧ್ಯಮದ ಬರಹಗಳಿಗೆ ಭವಿಷ್ಯ ಇಲ್ಲ ಎಂದರ್ಥವಲ್ಲ. ಅದಕ್ಕು ಒಂದು ‘ಮಿತಿ’ ಏರ್ಪಟ್ಟಿದೆ. ಈಗ ಸಾಮಾಜಿಕ ಜಾಲತಾಣಗಳು, ಯೂ – ಟ್ಯೂಬ್ ವಿಡಿಯೋಗಳು ಸಮುದಾಯವನ್ನು ಹೆಚ್ಚು ಜನಕ್ಕೆ ತಲುಪಿಸುವ ಮಾಧ್ಯಮ ಆಗಿವೆ. ಅದೇ ಸಂತೋಷ.

ಮತ್ತೆ ಹಿನ್ನೋಟಕ್ಕೆ ಹೋಗುವುದಾದರೆ ಸಮುದಾಯ – ‘ನೂರು ಅಡಿಗಳ ಬಣ್ಣ ನಡೆ, ಅಣು ಸಮರಕ್ಕೆ ಜನತೆಯ ತಡೆ’ ಎಂಬ 120 ಅಡಿ ಉದ್ದದ ಕ್ರಿಯಾತ್ಮಕ ತೈಲ ಚಿತ್ರ ನಾಡಿನಾದ್ಯಂತ ಪ್ರದರ್ಶನಗೊಂಡಿತು. ದಾವಣಗೆರೆ ಕಲಾವಿದ ಸೊಲಬಕ್ಕನವರ್, ಕರಿರಾಜು ಇದರ ತಯಾರಕ ರುವಾರಿಗಳು. ಈಗ ಸಮುದಾಯಕ್ಕೆ 50ರ ಪ್ರಾಯ. ಏಳುಬೀಳುಗಳ ನಡುವೆ ಪ್ರಜಾಸತ್ತಾತ್ಮಕವಾಗಿ, ಜನಪರ ನಿಲುವಿನಿಂದ ಜೀವಂತ ಇರುವ ಸಾಂಸ್ಕೃತಿಕ ಸಂಘಟನೆ ಇದು. ನಟರಂಗ ತಂಡಕ್ಕಾಗಿ ಸಿ.ಆರ್. ಅಭಿನಯಿಸುತ್ತಿದ್ದ ‘ತುಘಲಕ್’ ಭಾರಿ ಸದ್ದು ಮಾಡಿತ್ತು. ಅವರು ಹೋದ ನಂತರ ಈ ನಾಟಕವನ್ನು ಸಮುದಾಯ ಕೈಗೆತ್ತಿಕೊಂಡು ಹೊಸ ಕಲಾವಿದರಿಂದ ಇದನ್ನು ಯಶಸ್ವಿಯಾಗಿ ಪ್ರದರ್ಶಿಸಿದರು.

(ಮುಂದೆ ಈ ಬರಹವನ್ನು ಹಿಗ್ಗಿಸಿ ಬರೆಯಲಾಗುವುದು. 2025 ಆಗಸ್ಟ್ 24ರಂದು “ಸಮುದಾಯ – 50” ಉದ್ಘಾಟನೆಗೆ ಮುನ್ನ ನನ್ನ ಕೆಲವು ನೆನಪುಗಳು.)

r g halli nagaraj

?s=150&d=mp&r=g
ಆರ್‌ ಜಿ ಹಳ್ಳಿ ನಾಗರಾಜ್‌
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X