ನವೆಂಬರ್ 6ರ ರಾತ್ರಿ ಪರಿಚಿತರಿಂದಲೇ ಕೊಲೆಯಾದ ಪುತ್ತೂರಿನ ಅಕ್ಷಯ್ ಕಲ್ಲೇಗನ ಮೃತದೇಹ ಮನೆ ತಲುಪಿದಾಗ ಹಿಂದೂ ಧರ್ಮ ರಕ್ಷಣೆಯ ಗುತ್ತಿಗೆ ಪಡೆದವರಂತೆ ಪೋಸು ಕೊಡುತ್ತಿದ್ದವರು, ಧರ್ಮ ರಕ್ಷಣಾ ಯಾತ್ರೆಯ ರಥವೇರಿದವರು, ಗರ್ವದಿಂದ ಗರ್ಜಿಸು ನಾನೊಬ್ಬ ಹಿಂದೂ ಎಂದು ಬೀದಿಯಲ್ಲಿ ಗರ್ಜಿಸುತ್ತಿದ್ದವರು ಯಾರೂ ಇರಲಿಲ್ಲ.
ನವೆಂಬರ್ 6ರ ರಾತ್ರಿ ಹನ್ನೊಂದು ಗಂಟೆಗೆ ಪುತ್ತೂರು ನಗರ ಭೀಕರ ಕೊಲೆಯೊಂದಕ್ಕೆ ಸಾಕ್ಷಿಯಾಗಿತ್ತು. ಕಲ್ಲೇಗ ಟೈಗರ್ಸ್ ಎಂಬ ಹುಲಿವೇಷ ಕಲಾವಿದರ ತಂಡ ಕಟ್ಟಿಕೊಂಡು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಅಕ್ಷಯ್ ಕಲ್ಲೇಗ ಹತ್ಯೆಯಾದ ಯುವಕ. ಕೊಂದವರು ಹಿಂದೂಪರ ಸಂಘಟನೆಯ ಯುವಕರಾದ ಚೇತನ್, ಮನೀಶ್, ಮಂಜುನಾಥ್ ಪೊಲೀಸರಿಗೆ ಶರಣಾಗಿದ್ದಾರೆ. ಆ ದಿನ ಸಂಜೆ ನಡೆದ ಬೈಕ್ ಸವಾರ ವಿಖ್ಯಾತ್ ಮತ್ತು ಖಾಸಗಿ ಬಸ್ ಚಾಲಕ ಚೇತನ್ ನಡುವಿನ ಸಣ್ಣದೊಂದು ಜಗಳ ಕೊಲೆಗೆ ಕಾರಣ ಎನ್ನಲಾಗಿದೆ. ಬೈಕ್ ಮತ್ತು ಬಸ್ ನಡುವೆ ಅಪಘಾತವಾಗಿದೆ. ಬೈಕ್ ರಿಪೇರಿಗೆ ಎರಡು ಸಾವಿರ ರೂಪಾಯಿ ಕೊಡುವಂತೆ ಗೆಳೆಯ ವಿಖ್ಯಾತ್‌ನ ಪರವಾಗಿ ಅಕ್ಷಯ್ ಫೋನ್‌ನಲ್ಲಿ ಚೇತನ್‌ಗೆ ತಿಳಿಸಿದ್ದಾನೆ. ಅದೇ ದಿನ ರಾತ್ರಿ ಅಕ್ಷಯ್ ತನ್ನ ಗೆಳೆಯ ವಿಖ್ಯಾತ್ ಜೊತೆಗಿದ್ದಾಗ ಹಂತಕರ ಗುಂಪು ಕಾರಿನಲ್ಲಿ ಬಂದು ತಲವಾರಿನಿಂದ ದಾಳಿ ನಡೆಸಿದೆ. ವಿಖ್ಯಾತ್ ಓಡಿ ತಪ್ಪಿಸಿಕೊಂಡಿದ್ದಾನೆ. ಅಕ್ಷಯ್‌ನನ್ನು ಅಮಾನುಷವಾಗಿ ಕೊಚ್ಚಿ ಹಾಕಿದ್ದಾರೆ.
ಮರುದಿನ ಮಧ್ಯಾಹ್ನ ಪೋಸ್ಟ್‌ಮಾರ್ಟಂ ಆದ ಅಕ್ಷಯ್ ಮೃತದೇಹ ಮನೆ ತಲುಪಿದಾಗ ಆ ಕುಟುಂಬದವರ ಆಕ್ರಂದನ ಕರುಳು ಹಿಂಡುವಂತಿತ್ತು. ಶವವನ್ನು ಮನೆಯೊಳಗೆ ಕೊಂಡೊಯ್ಯುತ್ತಿದ್ದಂತೆ “ನನ್ನ ಮಗುವನ್ನು ಹೇಗೆ ನೋಡಲಿ” ಎಂಬ ಅಪ್ಪನ ಅಸಹಾಯಕ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿರಲಿಲ್ಲ. ತಮಗೆ ಕೊಳ್ಳಿ ಇಡಬೇಕಿದ್ದ ಮಗನಿಗೆ ತಾವೇ ಕೊಳ್ಳಿ ಇಡಬೇಕಿರುವ ಸಂದರ್ಭ ಬಂದಾಗ ಆ ತಂದೆತಾಯಿಗೆ ಯಾರು ಸಮಾಧಾನ ಮಾಡಲು ಸಾಧ್ಯ?
ಆ ಮನೆಯ ದೃಶ್ಯಗಳನ್ನು ನೋಡುತ್ತಿದ್ದಾಗ ಅಲ್ಲಿ ಕಂಡು ಬಂದ ಒಂದೇ ಒಂದು ಕೊರತೆ ಏನೆಂದರೆ ಅಲ್ಲಿ ಹಿಂದೂ ಧರ್ಮ ರಕ್ಷಣೆಯ ಗುತ್ತಿಗೆ ಪಡೆದವರಂತೆ ಪೋಸು ಕೊಡುತ್ತಿದ್ದವರು, ಧರ್ಮ ರಕ್ಷಣಾ ಯಾತ್ರೆಯ ರಥವೇರಿದವರು, ಗರ್ವದಿಂದ ಗರ್ಜಿಸು ನಾನೊಬ್ಬ ಹಿಂದೂ ಎಂದು ಬೀದಿಯಲ್ಲಿ ಗರ್ಜಿಸುತ್ತಿದ್ದ ಭಜರಂಗದಳದವರು… ಯಾರೂ ಕಾಣಿಸಲಿಲ್ಲ. ಆಂಬುಲೆನ್ಸ್ ಬಿಟ್ಟರೆ ಆ ಮನೆಯ ಅಂಗಳದಲ್ಲಿ ಬೇರೆ ವಾಹನಗಳ ಸದ್ದಿರಲಿಲ್ಲ. ಕಾದು ಕುಳಿತು ಮೊಸಳೆ ಕಣ್ಣೀರು ಸುರಿಸುವ ರಾಜಕೀಯ ನಾಯಕರಿರಲಿಲ್ಲ, ಕೇಸರಿ ಶಾಲಿನವರೂ ಕಾಣಿಸಲಿಲ್ಲ. ಯಾವುದೇ ಮೆರವಣಿಗೆ, ಬಿಗಿ ಭದ್ರತೆಯಿಲ್ಲದೇ ಎಲ್ಲವೂ ಸಹಜವೆಂಬಂತೆ ನಡೆದು ಹೋಯ್ತು. ಅಕ್ಷಯ್ ಹತ್ಯೆ ಸಂಬಂಧ ಕಟೀಲು, ಪೂಂಜಾ, ಕರಂದ್ಲಾಜೆ ಯಾರೊಬ್ಬರ ಖಂಡನಾ ಹೇಳಿಕೆಗಳೂ ಬಂದಿಲ್ಲ.
ಕಳೆದ ಚುನಾವಣೆಯ ಸಮಯದಲ್ಲಿ ಬಿಜೆಪಿ ಟಿಕೆಟ್ ಸಿಗಲಿಲ್ಲ ಎಂದು ಬಂಡಾಯವಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಮತ್ತು ಆತನ ಪುತ್ತಿಲ ಪರಿವಾರ ಈ ಕೃತ್ಯವನ್ನು ಒಂದು ಸಾಲಿನಲ್ಲಿ ಖಂಡಿಸುವ ಕೆಲಸವನ್ನೂ ಮಾಡಿಲ್ಲ. ಚಿಕ್ಕಮಗಳೂರಿನಲ್ಲಿ ಕಲ್ಲು ತೂರಾಟ ನಡೆದ ಸುದ್ದಿ ಕೇಳಿ ಮರುದಿನ ಅಲ್ಲಿದ್ದವರು ಈ ಪುತ್ತಿಲ. ಅಕ್ಷಯ್ ಕೊಲೆಯನ್ನು “ವಿಧಿಯ ಕ್ರೂರ ಲೀಲೆಗೆ ಬಲಿಯಾದ ಸಹೋದರನ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವೀಟ್ ಮಾಡುವ ಮೂಲಕ ತನ್ನ ನಿಜರೂಪ ಅನಾವರಣ ಮಾಡಿದ್ದಾರೆ. ಕೊಲೆಗಡುಕರಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಲೂ ಇಲ್ಲ. ಕಾರಣ ಕೊಲೆ ಮಾಡಿದವರೂ ತಮ್ಮ ಸಹೋದರರೇ ಎಂಬ ಎಚ್ಚರ ಅವರಿಗಿದೆ. ಇವರ ಹಿಂದುತ್ವ ಯಾವ ಮಟ್ಟಿನದು ಎಂದು ಯುವಕರು ಅರ್ಥ ಮಾಡಿಕೊಳ್ಳಬೇಕು. ಕೋಮುವಾದಿ ಭಾಷಣ, ಹಿಂದುತ್ವದ ವಿಷ ಬೀಜ ಬಿತ್ತಲು ಪುತ್ತೂರನ್ನು ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡಿರುವ ಕಲ್ಲಡ್ಕ ಪ್ರಭಾಕರ ಭಟ್ಟ, ಡಾ ಪ್ರಸಾದ್ ಭಂಡಾರಿ ಮುಂತಾದ ಸಂಘ ಪರಿವಾರದ ಮುಖಂಡರಿಗೆ ಅಕ್ಷಯ್‌ನ ಹಿಂದೂ ರಕ್ತ ಕಾಣಲಿಲ್ಲ ಎಂಬುದು ಬೇಸರದ ಸಂಗತಿ.
ಕರಾವಳಿಯಲ್ಲಿ ಒಂದೊಂದು ಕೊಲೆ ನಡೆದಾಗಲೂ ಅಲ್ಲಿನ ಬಿಜೆಪಿ ನಾಯಕರು ನಡೆದುಕೊಳ್ಳುವ ರೀತಿ ಭಿನ್ನವಾಗಿರುತ್ತದೆ. ಕೊಲೆಗಾರರು ಮುಸ್ಲಿಮರಾಗಿದ್ದರೆ ಕ್ಷಣ ಮಾತ್ರದಲ್ಲಿ ಜಿಲ್ಲೆಯೇ ಉದ್ವಿಘ್ನಗೊಳ್ಳುತ್ತದೆ. ಮಾಧ್ಯಮಗಳು ಬಿಜೆಪಿಯ ಉಗ್ರವಾದಿ ನಾಯಕರ ಬಾಯಿಗೆ ತಕ್ಷಣ ಮೈಕ್ ಹಿಡಿಯುತ್ತವೆ. ದೆಹಲಿಯಿಂದ ಶೋಭಾ ಕರಂದ್ಲಾಜೆ, ಬೆಂಗಳೂರಿನಿಂದ ಅಶ್ವತ್ಥನಾರಾಯಣ, ಚಿಕ್ಕಮಗಳೂರಿನಿಂದ ಸಿ ಟಿ ರವಿ, ಶಿವಮೊಗ್ಗದಿಂದ ಈಶ್ವರಪ್ಪ, ಮಂಗಳೂರಿನಿಂದ ವೇದವ್ಯಾಸ ಕಾಮತ್, ನಳಿನ್ ಕುಮಾರ್ ಕಟೀಲ್, ಬೆಳ್ತಂಗಡಿಯಿಂದ ಹರೀಶ್ ಪೂಂಜಾ, ಉಡುಪಿಯಿಂದ ಯಶ್ಪಾಲ್ ಸುವರ್ಣ, ಹುಬ್ಬಳ್ಳಿಯಿಂದ ಪ್ರಮೋದ್ ಮುತಾಲಿಕ್ ಇವರಷ್ಟೇ ಅಲ್ಲ ಸಕಲ ಭಾಷಣಕಾರರು, ಸ್ವಾಮಿಗಳೆಲ್ಲ ಎದ್ದು ಬಿದ್ದು ಆ ಊರಿಗೆ ಬಂದು ಬಿಡುತ್ತಾರೆ. ಅದರಲ್ಲೂ ಕಾಂಗ್ರೆಸ್ ಸರ್ಕಾರ ಇದ್ದರೆ ಮುಗಿದೇ ಹೋಯ್ತು. ಖುದ್ದು ಮುಖ್ಯಮಂತ್ರಿಗಳೇ ಕೊಲೆ ಮಾಡಿಸಿದ್ದಾರೆ ಎಂಬ ಹೇಳಿಕೆ ಕೊಡಲೂ ಅಂಜುವುದಿಲ್ಲ.
ಬಿಜೆಪಿಯವರ ಶವ ರಾಜಕಾರಣದ ಕರಾಳ ದರ್ಶನ
ಹಿಂದೂವಿನ ಕೊಲೆ ಮುಸ್ಲಿಮರಿಂದ ಆದಾಗ ಮತ್ತು ಹಿಂದೂವಿನ ಕೊಲೆ ಹಿಂದೂ ಕೇಡಿಗಳಿಂದಲೇ ಆದಾಗ ಸಂಘಪರಿವಾರದ ಕರಾಳ ಮುಖ ಅನಾವರಣವಾಗುತ್ತದೆ. ಶವ ರಾಜಕಾರಣ ಮಾಡಲು ಬಿಜೆಪಿ ನಾಯಕರಿಗೆ ತಾವು ಅಧಿಕಾರದಲ್ಲಿ ಇರಲೇ ಬೇಕು ಎಂದೇನಿಲ್ಲ. ಆಡಳಿತ ನಡೆಸುತ್ತಿದ್ದಾಗಲೂ ವಿರೋಧ ಪಕ್ಷದಲ್ಲಿದ್ದಾಗಲೂ ಅವರದು ಒಂದೇ ಅಜೆಂಡ.
2022 ಏಪ್ರಿಲ್ 5 ಕಾಟನ್‌ಪೇಟೆಯ ರಸ್ತೆಯಲ್ಲಿ ಯುವಕರು ಜಗಳ ಮಾಡಿಕೊಂಡು ಚಂದ್ರು ಎಂಬ ಯುವಕನನ್ನು ಚುಚ್ಚಿ ಕೊಲೆ ಮಾಡಿದ ಪ್ರಕರಣದಲ್ಲಿ ಕೊಂದವನು ಮುಸ್ಲಿಂ ಯುವಕ ಮತ್ತು ಸತ್ತವ ಹಿಂದೂ ಯುವಕ ಎಂದು ಹೆಸರಿನಿಂದ ಗೊತ್ತಾದ ಕೂಡಲೇ “ಉರ್ದು ಭಾಷೆಯಲ್ಲಿ ಮಾತನಾಡದ ಕಾರಣಕ್ಕೆ ಕೊಲೆ ಮಾಡಲಾಗಿದೆ” ಎಂದು ಸುಳ್ಳು ಸುದ್ದಿ ಹಬ್ಬಿಸಿದ ಬಿಜೆಪಿ ನಾಯಕರು, ಪೊಲೀಸ್ ಆಯುಕ್ತರು ಅದನ್ನು ಅಲ್ಲಗಳೆದಾಗ ಅವರ ಮೇಲೆಯೇ ಆರೋಪ ಮಾಡಿದ್ದರು. ಎಂಎಲ್‌ಸಿ ರವಿಕುಮಾರ್ ಮತ್ತು ಸಿಟಿ ರವಿ ಯುವಕನ ಮನೆಗೆ ಹೋಗಿ 5ಲಕ್ಷ ರೂ. ಹಣ ನೀಡಿ, ಉರ್ದು ಭಾಷೆ ಮಾತನಾಡದಿರುವ ಕಾರಣವನ್ನೇ ನೀವೂ ಹೇಳಬೇಕು ಎಂದು ಒಪ್ಪಿಸಿ ಬಂದಿದ್ದರು. ಯುವಕ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಸೈಲೆಂಟ್ ಆಗಿದ್ದರು.
2022 ಫೆ. 22 ರಂದು ಶಿವಮೊಗ್ಗದ ಬಿಜೆಪಿ ಕಾರ್ಯಕರ್ತ ಹರ್ಷನ ಕೊಲೆ ನಡೆದಾಗ ಆರೋಪಿಗಳು ಯಾರೆಂದು ಪತ್ತೆಯಾಗುವುದಕ್ಕೂ ಮುನ್ನವೇ ಸಚಿವ ಈಶ್ವರಪ್ಪ “ಮುಸ್ಲಿಂ ಗೂಂಡಾಗಳ ಕೃತ್ಯ” ಎಂದು ಹೇಳಿಕೆ ನೀಡಿದ್ದರು. ಆ ರಾತ್ರಿಯೇ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮುಸ್ಲಿಂ ಅಂಗಡಿ, ಮನೆ, ವಾಹನಗಳನ್ನು ಧ್ವಂಸ ಮಾಡಿದ್ದರು. ಅದು ಅವರದೇ ಸರ್ಕಾರದ ಅಡಿಯಲ್ಲಿ ನಡೆದ ಹೆಣ ರಾಜಕಾರಣದ ಸ್ಯಾಂಪಲ್. ಅಷ್ಟೇ ಅಲ್ಲ ಮರುದಿನ 144 ಸೆಕ್ಷನ್ ಹಾಕಿದ್ರೂ ಈಶ್ವರಪ್ಪ, ಸಂಸದ ಬಿ ವೈ ರಾಘವೇಂದ್ರ ನೇತೃತ್ವದಲ್ಲಿ ಶವದ ಮೆರವಣಿಗೆ ಮಾಡಿದ್ದರು. ಆಗಲೂ ಕಲ್ಲು ತೂರಾಟ ನಡೆದಿತ್ತು.
ಕೊಲೆಯ ಪ್ರಮುಖ ಆರೋಪಿ ಮುಸ್ಲಿಂ ಯುವಕನಿಗೂ ಹರ್ಷನಿಗೂ ವೈಯಕ್ತಿಕ ದ್ವೇಷ ಇತ್ತು. ವೈಯಕ್ತಿಕ ಕಾರಣಕ್ಕೆ ನಡೆದ ಈ ಕೊಲೆಯನ್ನು ಬಿಜೆಪಿ ರಾಜಕಾರಣಕ್ಕಾಗಿ ಬಳಸಿಕೊಂಡಿತು. ಹರ್ಷನ ಅಕ್ಕ ಘಟನೆ ನಡೆದ ಕೂಡಲೇ ನೀಡಿದ ಹೇಳಿಕೆಯನ್ನು ಮರುದಿನ ತಿರುಚಿ ಧರ್ಮಕ್ಕಾಗಿ ಕೊಲೆ ನಡೆದಿದೆ ಎಂದು ಹೇಳಿಕೆ ನೀಡಿಸಿದ್ದಲ್ಲದೇ, ಬಿಜೆಪಿಯ ಸಕಲ ನಾಯಕರೂ, ಸಚಿವರೂ, ಸಂಸದರೂ, ಶಾಸಕರೂ ಅಷ್ಟೇ ಯಾಕೆ ಉಗ್ರ ಭಾಷಣಗಾರ ಸೂಲಿಬೆಲೆ, ಸ್ವಾಮೀಜಿಗಳೂ ಹರ್ಷನ ಮನೆ ಕಡೆ ಹೆಜ್ಜೆ ಹಾಕಿದರು. ರಾಜಕೀಯ ನಾಯಕರು ಲಕ್ಷ ಲಕ್ಷದ ಚೆಕ್ ನೀಡಿದರು. ಬಿಜೆಪಿ ಪಕ್ಷದ ವತಿಯಿಂದ 25 ಲಕ್ಷ ಮುಖ್ಯಮಂತ್ರಿ ನಿಧಿಯಿಂದ 25 ಲಕ್ಷ, ಸಚಿವ ಅಶ್ವತ್ಥನಾರಾಯಣ ತಮ್ಮ ಕುಟುಂಬದ ಟ್ರಸ್ಟ್‌ನ ಹೆಸರಿನಲ್ಲಿ 10 ಲಕ್ಷ ರೂ. ನೆರವು ನೀಡಿದ್ದರು. ಈಶ್ವರಪ್ಪ 10 ಲಕ್ಷ ರೂ., ಹೀಗೆ ಸುಮಾರು ಒಂದೂವರೆ ಕೋಟಿಯಷ್ಟು ಹಣ ಸಂಗ್ರಹವಾಗಿತ್ತು.
2022 ಜುಲೈ 26 ಸುಳ್ಯದ ಬೆಳ್ಳಾರೆ ಸಮೀಪದ ನೆಟ್ಟಾರುವಿನಲ್ಲಿ ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ನಡೆದಾಗ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಸಂಸದ ಮತ್ತು ಕರಾವಳಿಯ ಬಿಜೆಪಿ ನಾಯಕರು ತಕ್ಷಣ ಬಂದಿಲ್ಲ ಎಂದು ರೊಚ್ಚಿಗೆದ್ದಿದ್ದರು. ಸಂಸದ ನಳಿನ್‌ಕುಮಾರ್, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಸಚಿವ ಸುನಿಲ್ ಕುಮಾರ್ ಮುಂತಾದವರು ಮೃತನ ಊರಿಗೆ ಬರುವಾಗ ಮರುದಿನ ಮಧ್ಯಾಹ್ನವಾಗಿತ್ತು. ರಸ್ತೆಯಲ್ಲಿಯೇ ಅಡ್ಡಗಟ್ಟಿದ ಕಾರ್ಯಕರ್ತರು ಕಾರನ್ನು ನೂಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಆ ನಂತರ ಪ್ರವೀಣ್ ಮನೆ ಮುಂದೆ ಬಿಜೆಪಿ ಮುಖಂಡರು ಚೆಕ್ ಹಿಡಿದು ಪರೇಡ್ ನಡೆಸಿದರು. ಮುಖ್ಯಮಂತ್ರಿಗಳು ರೂ. 25 ಲಕ್ಷ, ಪಕ್ಷದಿಂದ ರೂ. 25ಲಕ್ಷ ಪರಿಹಾರ ನೀಡಿದರು. ಪ್ರಕರಣದ ತನಿಖೆಯನ್ನು ಎನ್‌ಐಎ ಗೆ ನೀಡಿದರು. ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚಲಾಗದ ಎನ್‌ಐಎ ಎರಡೆರಡು ಬಾರಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಆರೋಪಿಗಳ ಸುಳಿವು ನೀಡಿದವರಿಗೆ ನಗದು ಬಹುಮಾನ ಘೋಷಣೆ ಮಾಡಿದೆ.

ಬಿಜೆಪಿ ಸರ್ಕಾರ ಇದ್ದಾಗಲೇ ಬಿಜೆಪಿ ಕಾರ್ಯಕರ್ತರ ಕೊಲೆ ನಡೆದಿರುವುದು ಮುಂದಿನ ಚುನಾವಣೆಯಲ್ಲಿ ತಿರುಗುಬಾಣವಾಗಬಹುದು ಎಂದು ಅರಿತ ಬಿಜೆಪಿ, ಪ್ರವೀಣ್ ಕುಟುಂಬಕ್ಕೆ ರೂ. 60 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟಿತ್ತು. ಚುನಾವಣೆಗೆ ಮುನ್ನವೇ ಆ ಮನೆಯ ಗೃಹಪ್ರವೇಶವನ್ನು ಪಕ್ಷದ ಮುಖಂಡರೇ ನಿಂತು ಮಾಡಿಸಿ ಪ್ರಚಾರಕ್ಕೆ ಬಳಸಿಕೊಂಡಿದ್ದರು. “ಪಕ್ಷ ನಮ್ಮ ಕುಟುಂಬದ ಕೈ ಬಿಡಲಿಲ್ಲ” ಎಂದು ಆ ಕುಟುಂಬದ ಪ್ರತಿಯೊಬ್ಬರಿಂದಲೂ ಹೇಳಿಸಿ ಮೈಲೇಜ್ ಪಡೆಯಲು ಯತ್ನಿಸಿದ್ದರು.
ಇನ್ನೊಂದು ಕರಾಳ ಮುಖ
ಪ್ರವೀಣ್ ನೆಟ್ಟಾರು ಕೊಲೆಯಾಗುವುದಕ್ಕೂ ಮುನ್ನ ಮುಸ್ಲಿಂ ಕೂಲಿ ಕಾರ್ಮಿಕ ಯುವಕ ಮಸೂದ್ ನನ್ನು ಕ್ಷುಲ್ಲಕ ಕಾರಣಕ್ಕೆ ಹೊಡೆದು ಕೊಲೆ ಮಾಡಲಾಗಿತ್ತು. ಕೊಲೆ ಮಾಡಿದವರು ಭಜರಂಗದಳದ ಕಾರ್ಯಕರ್ತರು. ನೆಟ್ಟಾರು ಮನೆಗೆ ಸಮೀಪದಲ್ಲಿಯೇ ಇರುವ ಮಸೂದ್‌ನ ಮನೆಗೆ ಆಡಳಿತ ಪಕ್ಷದ ಯಾವೊಬ್ಬ ಸಚಿವ, ಶಾಸಕರು ಹೋಗಿ ಸಾಂತ್ವನ ಹೇಳಲಿಲ್ಲ. ಚಿಕ್ಕಾಸಿನ ಪರಿಹಾರವನ್ನೂ ಕೊಡುವ ಮನಸ್ಸು ಮುಖ್ಯಮಂತ್ರಿ ಬೊಮ್ಮಾಯಿ ಮಾಡಲಿಲ್ಲ. ನೆಟ್ಟಾರುವಿನ ಕೊಲೆ ನಡೆದ ಮರುದಿನ ಹಾಡು ಹಗಲೇ ಸುರತ್ಕಲ್ ನಲ್ಲಿ ಭಜರಂಗದಳದ ಕಾರ್ಯಕರ್ತರು ಫಾಝಿಲ್ ಎಂಬ ಯುವಕನನ್ನು ಕೊಚ್ಚಿ ಹಾಕಿದ್ದರು. ಅದು ಪ್ರವೀಣ್ ಕೊಲೆಗೆ ಪ್ರತೀಕಾರ ಎಂಬಂತೆ ವಿಎಚ್‌ಪಿ ಮುಖಂಡ ಶರಣ್ ಪಂಪ್ವೆಲ್ ಪೋಸ್ಟ್ ಹಾಕಿ ಸಂಭ್ರಮಿಸಿದ್ದ. ಫಾಜಿಲ್ ಕುಟುಂಬಕ್ಕೂ ಬೊಮ್ಮಾಯಿ ಸರ್ಕಾರ ಸಾಂತ್ವನ ಹೇಳಲಿಲ್ಲ. ಇದು ಸರ್ವರ ರಕ್ಷಣೆಗೆ ಬದ್ಧವಾಗಿರಬೇಕಿದ್ದ ಸರ್ಕಾರವೊಂದು ನಿರ್ಲಜ್ಜತೆಯಿಂದ ತಾನು ಕೋಮುವಾದಿ ಎಂದು ಸಾರಿಕೊಂಡ ಪರಿಯಿದು.

ಶಿವಮೊಗ್ಗದ ಹರ್ಷನ ಕೊಲೆ ನಡೆದ ವಾರವೇ ಧರ್ಮಸ್ಥಳದಲ್ಲಿ ದಲಿತ ಯುವಕ ದಿನೇಶ್‌ನನ್ನು ಸ್ಥಳೀಯ ಬಿಜೆಪಿ ಮುಖಂಡನೊಬ್ಬ ಹಾಡು ಹಗಲೇ ಅಂಗಡಿ ಮುಂದೆ ಒದ್ದು ಹಲ್ಲೆ ಮಾಡಿದ್ದ. ಆಸ್ಪತ್ರೆ ಸೇರಿದ್ದ ದಿನೇಶ್ ಅಲ್ಲೇ ಮೃತಪಟ್ಟಿದ್ದ. ಆದರೆ ದಿನೇಶ್ ಮನೆಗೆ ಸ್ಥಳೀಯ ಶಾಸಕರಾಗಲಿ, ಸಂಸದರಾಗಲಿ, ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಾಗಲಿ ಭೇಟಿ ನೀಡಲಿಲ್ಲ. ಕಾಂಗ್ರೆಸ್ ಮುಖಂಡರು, ಸಿದ್ದರಾಮಯ್ಯನವರು ಭೇಟಿ ನೀಡಿ ವೈಯಕ್ತಿಕ ನೆರವು ನೀಡಿದ್ದರು. ಮುಖ್ಯಮಂತ್ರಿ ಬೊಮ್ಮಾಯಿ ತಮ್ಮ ನಿಧಿಯಿಂದ ಪರಿಹಾರ ನೀಡಲಿಲ್ಲ. ಹಲ್ಲೆ ಮಾಡಿ ಕೊಲೆಗೆ ಕಾರಣನಾದ ಆರೋಪಿಗೆ ಎರಡೇ ವಾರದಲ್ಲಿ ಜಾಮೀನು ಸಿಕ್ಕಿತ್ತು!

ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಅವರ ಅವಧಿ ಮುಗಿಯುವುದಕ್ಕೆ ಆರೇಳು ತಿಂಗಳಿದ್ದಾಗ ಸುರತ್ಕಲ್‌ನ ದೀಪಕ್ ರಾವ್ ಎಂಬ ಯುವಕನನ್ನು ನಡುಮಧ್ಯಾಹ್ನ ಹತ್ಯೆ ಮಾಡಲಾಗಿತ್ತು. ಸಂಜೆ ವೇಳೆಗೆ ಆರೋಪಿಗಳ ಬಂಧನವಾಗಿತ್ತು. ಆದರೆ, ದೀಪಕ್ ರಾವ್ ಶವ ಇಟ್ಟುಕೊಂಡು ಒಂದಿಡೀ ದಿನ ಬಿಜೆಪಿ ಪ್ರತಿಭಟನೆ ಮಾಡಿತ್ತು. ಅಷ್ಟೇ ಅಲ್ಲ, ಹಿಂದೂ ಹೆಣಕ್ಕೊಂದು ಮುಸ್ಲಿಂ ಹೆಣ ಬೀಳಬೇಕು ಎಂಬ ಉದ್ದೇಶದಿಂದ ಸುರತ್ಕಲ್‌ನಲ್ಲಿ ಪುಟ್ಟ ಹೋಟೆಲ್ ನಡೆಸುತ್ತಿದ್ದ ಅಹಮ್ಮದ್ ಬಶೀರ್ ಅವರನ್ನು ರಾತ್ರಿ ಮನೆಗೆ ಹೋಗುವಾಗ ಕೊಚ್ಚಿ ಹಾಕಿದವರು ಇದೇ ಹಿಂದೂಪರ ಸಂಘಟನೆಯ ಕಾರ್ಯಕರ್ತರು. ಬಿಜೆಪಿಯವರು ದೀಪಕ್ ರಾವ್ ಕುಟುಂಬಕ್ಕೆ ದೇಣಿಗೆ ಸಂಗ್ರಹಿಸುವ ನಾಟಕ ಮಾಡಿದ್ದರು. ಅದೆಷ್ಟು ಸಂಗ್ರಹವಾಗಿತ್ತೋ ಗೊತ್ತಿಲ್ಲ. ನಂತರ ಅಧಿಕಾರ ಹಿಡಿದ ಬಿಜೆಪಿ ದೀಪಕ್ ರಾವ್ ಕುಟುಂಬಕ್ಕೆ ಪರಿಹಾರ ನೀಡುವ ಗೋಜಿಗೆ ಹೋಗಿರಲಿಲ್ಲ. ಅದರಿಂದ ಪಕ್ಷಕ್ಕೆ ಲಾಭ ಇಲ್ಲ ಅನ್ನಿಸಿರಬೇಕು. ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕಳೆದ ವರ್ಷ ಕೊಲೆಯಾದ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಪರಿಹಾರ ನೀಡುವಾಗ ಆರು ವರ್ಷಗಳ ಹಿಂದೆ ಕೊಲೆಯಾದ ದೀಪಕ್ ರಾವ್ ಮತ್ತು ಅಹಮ್ಮದ್ ಬಶೀರ್ ಕುಟುಂಬಕ್ಕೂ ತಲಾ ಹತ್ತು ಲಕ್ಷ ರೂ. ಪರಿಹಾರ ನೀಡಿದ್ದಾರೆ.
2017ರ ಡಿಸೆಂಬರ್‌ನಲ್ಲಿ ಹೊನ್ನಾವರದಲ್ಲಿ ಕೋಮು ಗಲಭೆ ನಡೆದಿತ್ತು. ಆ ದಿನ ಪರೇಶ್ ಮೇಸ್ತ ಎಂಬ ಮೀನುಗಾರ ಸಮುದಾಯದ ಯುವಕ ಕಾಣೆಯಾಗಿದ್ದ. ಮರುದಿನ ಹೊನ್ನಾವರ ಬಸ್ ನಿಲ್ದಾಣದ ಮುಂದಿನ ಶೆಟ್ಟಿಕೆರೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಆತನನ್ನು ಮುಸ್ಲಿಂ ಸಮುದಾಯದವರು ಕೊಂದಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಅದೇ ಕಾರಣಕ್ಕೆ ನಡೆದ ಗಲಾಟೆ, ಬಳಿಕ ಕೋಮು ಸಂಘರ್ಷಕ್ಕೆ ತಿರುಗಿತ್ತು. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಸಿ ಟಿ ರವಿ, ಈಶ್ವರಪ್ಪ ಮುಂತಾದವರು ತಮ್ಮ ಕಾರ್ಯಕರ್ತನೇ ಅಲ್ಲದ ಪರೇಶ್ ಮೇಸ್ತನ ಶವವನ್ನು ತಮ್ಮ ಕೊಳಕು ರಾಜಕಾರಣಕ್ಕೆ ಬಳಸಿಕೊಂಡರು. ಆತನ ಮುಖಕ್ಕೆ ಪೆಟ್ರೋಲ್ ಸುರಿದು ಸುಟ್ಟು ನಂತರ ಕೆರೆಗೆ ಎಸೆಯಲಾಗಿದೆ ಎಂಬ ಹಸಿ ಹಸಿ ಕತೆಯನ್ನು ಹೆಣೆದವರು ಸಂಸದೆ ಶೋಭಾ ಕರಂದ್ಲಾಜೆ. ವಾರಗಟ್ಟಲೆ ಬಂದ್ ಪ್ರತಿಭಟನೆಗಳು ನಡೆದುವು. ಈ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು.
ಸಿದ್ದರಾಮಯ್ಯನವರೇ ಪರೇಶ್ ಮೇಸ್ತನ ಕೊಲೆ ಮಾಡಿಸಿದ್ದಾರೆ ಎಂದು ಈಗ ವಂಚನೆಯ ಕೇಸಿನಲ್ಲಿ ಜೈಲಿನಲ್ಲಿರುವ ಚೈತ್ರಾ ಕುಂದಾಪುರ ಉಗ್ರ ಭಾಷಣ ಮಾಡಿದ್ದಳು. ನಂತರ ಸಿದ್ದರಾಮಯ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. 2022ರಲ್ಲಿ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿಯೇ ಸಿಬಿಐ ಹೊನ್ನಾವರ ಕೋರ್ಟ್‌ಗೆ ವರದಿ ಸಲ್ಲಿಸಿ, ಪರೇಶ್ ಮೇಸ್ತನದು ಸಹಜ ಸಾವು ಎಂದು ತಿಳಿಸಿದೆ. ಈ ಬಗ್ಗೆ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಅತ್ತ ಪರೇಶ್ ಮೇಸ್ತನ ಕುಟುಂಬಕ್ಕೆ ಬಿಜೆಪಿ ಯಾವುದೇ ಪರಿಹಾರ ಕೊಡಲಿಲ್ಲ. ರಾಜಕಾರಣಿಗಳ ಸ್ವಾರ್ಥಕ್ಕೆ ಆ ಕುಟುಂಬ ಬಲಿಯಾಯಿತಷ್ಟೇ.
2019 ಜುಲೈನಲ್ಲಿ ಹಿರೇಬಾಗೇವಾಡಿಯ ಎಪಿಎಂಸಿಯ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಶಿವು ಉಪ್ಪಾರ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಬಿಜೆಪಿ ಕೊಲೆ ಎಂದು ಸಾಬೀತುಪಡಿಸಲು ಹರ ಸಾಹಸ ಪಟ್ಟಿತ್ತು. ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. “ಗೋ ರಕ್ಷಣೆ ಮಾಡುತ್ತಿದ್ದ ಕಾರಣ ಶಿವು ಉಪ್ಪಾರನನ್ನು ಕೊಲೆ ಮಾಡಿ ನೇತು ಹಾಕಲಾಗಿದೆ” ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ ಮಾಡಿದ್ದರು. ಶವ ರಾಜಕಾರಣದಲ್ಲಿ ಶೋಭಾ ಅವರದ್ದು ಎತ್ತಿದ ಕೈ ಎಂಬುದಕ್ಕೆ ಪರೇಶ್ ಮೇಸ್ತ ವಿಚಾರದಲ್ಲಿ ಆಕೆ ಹಬ್ಬಿಸಿದ್ದ ಸುಳ್ಳುಗಳೇ ಸಾಕ್ಷಿ. ಆಕೆಯ ಶವ ರಾಜಕಾರಣದ ವ್ಯಾಪ್ತಿ ಕರಾವಳಿಯಿಂದಾಚೆಗೂ ಖ್ಯಾತ.

ಇತ್ತೀಚೆಗೆ ಹೊಸ ಸರ್ಕಾರ ರಚನೆಯಾಗಿ ತಿಂಗಳಾಗುವಾಗ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಹನುಮ ಜಯಂತಿ ವೇಳೆ ಕ್ಷುಲ್ಲಕ ವಿಷಯಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕೊನೆಗೆ ವೇಣುಗೋಪಾಲ್ ನಾಯಕ್ ಎಂಬ ಯುವಕನ ಕೊಲೆ ನಡೆದಿತ್ತು. ಇದನ್ನೂ ಕಾಂಗ್ರೆಸ್ ಸರ್ಕಾರದ ತಲೆಗೆ ಕಟ್ಟಿ ಲಾಭ ಪಡೆಯಲು ಬಿಜೆಪಿ ನಾಯಕರು ಯತ್ನಿಸಿದ್ದರು. ಸ್ವತಃ ವೇಣುಗೋಪಾಲ್ ಪತ್ನಿ ಮಾಧ್ಯಮಗಳ ಮುಂದೆ ಹಂತಕರು ಯಾರು ಮತ್ತು ಕಾರಣವೇನು ಎಂಬುದನ್ನು ಸ್ಪಷ್ಟವಾಗಿ ಹೇಳಿದ ಮೇಲೂ ಹಿಂದುತ್ವದ ಭಾಷಣಗಾರ ಚಕ್ರವರ್ತಿ ಸೂಲಿಬೆಲೆ ಕಾಂಗ್ರೆಸ್ ಸಚಿವರ ಪುತ್ರನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ಹನ್ನೆರಡು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ವಿಚಾರಣೆ ನಡೆದು ಸಿಬಿಐ ವರದಿ ಬಂದ ನಂತರ ನಾಲ್ಕು ತಿಂಗಳಿನಿಂದ ಕರಾವಳಿಯಾದ್ಯಂತ ಮರು ತನಿಖೆಗೆ ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಸೌಜನ್ಯ ಪರ ಆಕೆಯ ಕುಟುಂಬ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಭಾಗವಹಿಸುವ ಯಾವುದೇ ಪ್ರತಿಭಟನೆಗಳಿಗೆ ಬಾರದ ಜಿಲ್ಲೆಯ ಬಿಜೆಪಿಯ ಮುಖಂಡರು ಹಿಂದೂಪರ ಇರುವ ಒಂದು ಗುಂಪಿನ ವಿರೋಧಕ್ಕೆ ತುತ್ತಾಗುವುದರಿಂದ ತಪ್ಪಿಸಿಕೊಳ್ಳಲು ಪಕ್ಷದ ವತಿಯಿಂದ ತಾವೇ ಒಂದು ಸಮಾವೇಶ ಮಾಡಿ ಸರ್ಕಾರಕ್ಕೆ ಮರು ತನಿಖೆಗೆ ಒತ್ತಾಯಿಸಿ ಪತ್ರ ಬರೆದು ಸುಮ್ಮನಾಗಿದ್ದಾರೆ.
ಸೌಜನ್ಯಳ ಪಕ್ಕದ ತಾಲ್ಲೂಕಿನವರು, ಅಷ್ಟೇ ಅಲ್ಲ ಒಕ್ಕಲಿಗ ಜಾತಿಯವರೇ ಆಗಿದ್ದೂ ಶೋಭಾ ಕರಂದ್ಲಾಜೆ ಸೌಜನ್ಯ ಪರ ಒಂದೇ ಒಂದು ಹೇಳಿಕೆ ನೀಡಿಲ್ಲ. ಆಕೆಯ ಕುಟುಂಬವನ್ನು ಭೇಟಿಯಾಗಿಲ್ಲ. ಸೌಜನ್ಯ ಕೊಲೆಯಾದಾಗ ಈಕೆ ಇಂಧನ ಸಚಿವೆಯಾಗಿದ್ದರು. ತಮ್ಮದೇ ಜಾತಿ, ಊರಿನ ಸೌಜನ್ಯಳ ಕುಟುಂಬದ ಪರ ನಿಲ್ಲದೇ, ಕೇರಳದ ಯುವತಿಯನ್ನು ಲವ್ ಜಿಹಾದ್‌ನಿಂದ ರಕ್ಷಣೆ ಮಾಡಲು ಹೋಗಿದ್ದರು.
ಇಂತಹ ಹಲವು ನಿದರ್ಶನಗಳು ಬಿಜೆಪಿಯ ಕೋಮುವಾದಿ ನಾಯಕರ ಬಣ್ಣವನ್ನು ಆಗಾಗ ಬಯಲು ಮಾಡಿವೆ. ತಮಗೆ ರಾಜಕೀಯ ಲಾಭವಿದ್ದಾಗ ಯಾವ ಮಟ್ಟಿನ ಹೋರಾಟಕ್ಕೂ ಸೈ. ಲಾಭ ಇಲ್ಲದಿದ್ದರೆ ಹಿಂದೂ ಸಮಾಜದ ಬಗ್ಗೆ ಕಾಳಜಿಯೇ ಇಲ್ಲದಂತೆ ತಲೆ ಮರೆಸಿಕೊಂಡು ಓಡಾಡುತ್ತಾರೆ. ಈ ಎಲ್ಲಾ ಬೆಳವಣಿಗೆಯಿಂದಾಗಿ ಬಿಜೆಪಿ ಮತ್ತು ಸಂಘಪರಿವಾರ, ಹಿಂದುತ್ವ ನಾಯಕರ ಮೇಲೆ ಕರಾವಳಿಯ ಜನ ಸಿಟ್ಟಾಗಿದ್ದಾರೆ. ಆದರೆ ಆ ಸಿಟ್ಟು ಮತದಾನದ ಸಮಯದಲ್ಲಿ ಪ್ರತಿಫಲಿಸುತ್ತಿಲ್ಲ ಎಂಬುದೂ ಅಷ್ಟೇ ನಿಜ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.