ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಆಡಳಿತ ನಡೆಸಿದ ಮತ್ತು ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಈ ಪಕ್ಷದಲ್ಲಿ ಅತ್ಯುನ್ನತ ಮತ್ತು ಸರ್ವೋಚ್ಚ ನಿರ್ಧಾರ ಕೈಗೊಳ್ಳುವ ಸಮಿತಿ – ‘ಸಿಡಬ್ಲ್ಯೂಸಿ,’. ಅಂದರೆ, ಕಾಂಗ್ರೆಸ್ ವರ್ಕಿಂಗ್ ಕಮಿಟಿ (ಕಾಂಗ್ರೆಸ್ ಕಾರ್ಯಕಾರಿ ಸಮಿತಿ). ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ, ಸಿದ್ದರಾಮಯ್ಯ ಅವರನ್ನು ಈ ಸಮಿತಿಗೆ ನೇಮಿಸಿಕೊಳ್ಳಲಾಗಿದೆ. ಆ ಮೂಲಕ, ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದೊಯ್ಯಲಾಗಿದೆ.
ಕಾಂಗ್ರೆಸ್ನ ಸಾಂಸ್ಥಿಕ ರಚನೆ, ಅಧಿಕಾರದ ಕೇಂದ್ರೀಕರಣ ಹಾಗೂ ಆಂತರಿಕ ಪ್ರಜಾಪ್ರಭುತ್ವದ ಸ್ವರೂಪದಲ್ಲಿ ಸಿಡಬ್ಲ್ಯೂಸಿ ಮಹತ್ವದ ಪಾತ್ರವಹಿಸುತ್ತದೆ.
ಸಿಡಬ್ಲ್ಯೂಸಿ ಉಗಮ ಮತ್ತು ರಚನೆ
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಕಾಂಗ್ರೆಸ್ ಸಂವಿಧಾನದ ಅಡಿಯಲ್ಲಿ ಬರುವ ಅತ್ಯುನ್ನತ ಕಾರ್ಯನಿರ್ವಾಹಕ ಮಂಡಳಿಯಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ನಲ್ಲಿ ಈ ಸಮಿತಿ ಚಾಲ್ತಿಯಲ್ಲಿದೆ. 1920ರ ದಶಕದಲ್ಲಿ ನಾಗ್ಪುರದಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದ ಅವಧಿಯಲ್ಲಿ, ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಕಾಂಗ್ರೆಸ್ಅನ್ನು ಕೇವಲ ವಾರ್ಷಿಕವಾಗಿ ಸಭೆ ಸೇರುವ ವೇದಿಕೆಯನ್ನಾಗಿ ಉಳಿಸಬಾರದು. ಇದು ನಿರಂತರವಾಗಿ ಕಾರ್ಯನಿರ್ವಹಿಸುವ ಒಂದು ಬಲಿಷ್ಠ ರಾಜಕೀಯ ಸಂಘಟನೆಯನ್ನಾಗಿ ರೂಪಿಸಬೇಕು ಎಂಬ ಚರ್ಚೆ ನಡೆದಿತ್ತು. ಆ ಚರ್ಚೆಯ ಭಾಗವಾಗಿ, ಕಾಂಗ್ರೆಸ್ಅನ್ನು ಬಲಿಷ್ಠವಾಗಿ ಮುಂದುವರೆಸುವ ಉದ್ದೇಶದಿಂದ ರೂಪುಗೊಂಡಿದ್ದೇ ಈ ಸಿಡಬ್ಲ್ಯೂಸಿ.
ಸಾಮಾನ್ಯವಾಗಿ ಸಿಡಬ್ಲ್ಯುಸಿಯಲ್ಲಿ ಪಕ್ಷದ ಅಧ್ಯಕ್ಷರು, ಸಂಸದೀಯ ಮಂಡಳಿಯ ನಾಯಕರು ಹಾಗೂ ದೇಶದ ವಿವಿಧ ಭಾಗಗಳ ಪ್ರಮುಖ ಹಿರಿಯ ನಾಯಕರು ಸೇರಿದಂತೆ ಒಟ್ಟು 24 ರಿಂದ 35 ಕ್ಕೂ ಹೆಚ್ಚು ಕಾಯಂ ಸದಸ್ಯರು, ಕಾಯಂ ಆಮಂತ್ರಿತರು ಹಾಗೂ ವಿಶೇಷ ಆಮಂತ್ರಿತರು ಇರುತ್ತಾರೆ. ಪಕ್ಷದ ಅಧ್ಯಕ್ಷರೇ ಈ ಸಮಿತಿಯ ಮುಖ್ಯಸ್ಥರೂ ಆಗಿರುತ್ತಾರೆ.
ಸ್ವಾತಂತ್ರ್ಯ ನಂತರವೂ ಕಾಂಗ್ರೆಸ್ ಈ ಸಿಡಬ್ಲ್ಯೂಸಿಯನ್ನು ಮುಂದುವರೆಸಿಕೊಂಡು ಬಂದಿದೆ. ಈಗ, ದೇಶದ ವಿವಿಧ ರಾಜ್ಯಗಳ ಪ್ರಭಾವಿ ನಾಯಕರನ್ನು ಒಳಗೊಳ್ಳುವ ಮೂಲಕ ರಾಷ್ಟ್ರೀಯ ಮಟ್ಟದ ನಿರ್ಧಾರಗಳಲ್ಲಿ ಪ್ರಾದೇಶಿಕ ಧ್ವನಿಗಳಿಗೆ ಮನ್ನಣೆ ನೀಡುವ ವೇದಿಕೆಯಾಗಿಯೂ ಇದು ಬಳಕೆಯಾಗುತ್ತಿದೆ. ಸಿದ್ದರಾಮಯ್ಯನವರಂತಹ ತಳಮಟ್ಟದಿಂದ ಬಂದ, ಜನಪ್ರಿಯ ಹಿಂದುಳಿದ ವರ್ಗಗಳ ನಾಯಕನನ್ನು ಇದಕ್ಕೆ ಸೇರಿಸುವುದರಿಂದ ದಕ್ಷಿಣ ಭಾರತದ ರಾಜಕೀಯ ಒಲವುಗಳನ್ನು ರಾಷ್ಟ್ರೀಯ ನೀತಿಯಲ್ಲಿ ಅಳವಡಿಸಲು ಸಹಕಾರಿಯಾಗುತ್ತದೆ.
ಸಿಡಬ್ಲ್ಯುಸಿ ಅಧಿಕಾರಗಳು ಮತ್ತು ಕಾರ್ಯಗಳು
ಮಾಧ್ಯಮಗಳು ಮತ್ತು ರಾಜಕೀಯ ವಿಶ್ಲೇಷಕರು ಪದೇ ಪದೇ ಬಳಸುವ ‘ಕಾಂಗ್ರೆಸ್ ಹೈಕಮಾಂಡ್’ ಎಂಬ ನಿಗೂಢ ಪದದ ನಿಜವಾದ ಸಾಂಸ್ಥಿಕ ಹಾಗೂ ಕಾನೂನಾತ್ಮಕ ರೂಪವೂ ಇದೇ ಸಿಡಬ್ಲ್ಯುಸಿ. ಕಾಂಗ್ರೆಸ್ ಪಕ್ಷದ ಆಂತರಿಕ ನಿಯಮಾವಳಿಗಳ ಪ್ರಕಾರ, ಸಿಡಬ್ಲ್ಯುಸಿ ಸಮಿತಿಗೆ ಪಕ್ಷದ ಭವಿಷ್ಯವನ್ನು ನಿರ್ಧರಿಸುವ ಅತ್ಯುನ್ನತ ಅಧಿಕಾರಗಳು ಇವೆ.
ಪಕ್ಷದ ಸದ್ಧಾಂತಿಕ ನಿಲುವುಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಪಕ್ಷದ ಅಧಿಕೃತ ಧೋರಣೆ ಹಾಗೂ ಪ್ರಮುಖ ಆರ್ಥಿಕ-ಸಾಮಾಜಿಕ ನೀತಿಗಳನ್ನು ಅಂತಿಮಗೊಳಿಸುವ ಹಕ್ಕು ಈ ಸಮಿತಿಗಿದೆ.
ಅಂತೆಯೇ, ಲೋಕಸಭೆ ಅಥವಾ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಇತರೆ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೇ ಅಥವಾ ಬೇಡವೇ, ಸೀಟುಗಳ ಹಂಚಿಕೆ ಹೇಗಿರಬೇಕು ಹಾಗೂ ಚುನಾವಣಾ ಪ್ರಣಾಳಿಕೆ ಹೇಗಿರಬೇಕು ಎಂಬುದನ್ನು ಈ ಸಮಿತಿಯೇ ನಿರ್ಧರಿಸುತ್ತದೆ.
ಪಕ್ಷದ ಯಾವುದೇ ಹಿರಿಯ ನಾಯಕ, ಸಂಸದ, ಶಾಸಕ ಅಥವಾ ಮುಖ್ಯಮಂತ್ರಿಗಳು ಪಕ್ಷದ ಶಿಸ್ತು ಉಲ್ಲಂಘಿಸಿದರೆ ಅಥವಾ ಬಂಡಾಯವೆದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ, ಅಮಾನತು ಮಾಡುವ ಅಥವಾ ಪಕ್ಷದಿಂದ ಉಚ್ಛಾಟಿಸುವ ಗರಿಷ್ಠ ಅಧಿಕಾರ ಸಿಡಬ್ಲ್ಯುಸಿಗೆ ಇರುತ್ತದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ತೆಗೆದುಕೊಳ್ಳುವ ನಿರ್ಣಯಗಳನ್ನು ದೇಶಾದ್ಯಂತ ಜಾರಿಗೊಳಿಸುವುದು, ವಿವಿಧ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗಳ (PCC) ವಿವಾದಗಳನ್ನು ಬಗೆಹರಿಸುವುದು ಹಾಗೂ ಪಕ್ಷದ ಆಂತರಿಕ ಚುನಾವಣೆಗಳ ಮೇಲ್ವಿಚಾರಣೆ ನೋಡುವುದು ಇದರ ಪ್ರಮುಖ ಜವಾಬ್ದಾರಿಯಾಗಿದೆ.
ಈ ಲೇಖನ ಓದಿದ್ದೀರಾ?: ರಾಷ್ಟ್ರೀಯ ಬಿಕ್ಕಟ್ಟುಗಳಲ್ಲಿ ಮೋದಿ ‘ನಿಗೂಢ ಮೌನ’; ಮರ್ಮವೇನು?
ಪಕ್ಷದಲ್ಲಿ ನಾಯಕತ್ವದ ಬಿಕ್ಕಟ್ಟು ಎದುರಾದಾಗ, ಒಡಕು ಉಂಟಾಗುವ ಭೀತಿ ಇದ್ದಾಗ ಅಥವಾ ಲೋಕಸಭೆ ಚುನಾವಣೆಯ ನಂತರ ಪ್ರಧಾನಿ ಅಭ್ಯರ್ಥಿ ಇಲ್ಲವೇ ಯುಪಿಎ (UPA) ಮಾದರಿಯ ಒಕ್ಕೂಟದ ನಾಯಕನನ್ನು ಆಯ್ಕೆ ಮಾಡುವಂತಹ ಐತಿಹಾಸಿಕ ಮತ್ತು ಸಂಕೀರ್ಣ ಸಂದರ್ಭಗಳಲ್ಲಿ ಸಿಡಬ್ಲ್ಯುಸಿ ಪಕ್ಷದ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಪ್ರಕಟಿಸುತ್ತದೆ.
ಸಮಿತಿಯ ಇತ್ತೀಚಿನ ಸವಾಲುಗಳು ಮತ್ತು ಸಾಂಸ್ಥಿಕ ಬಿಕ್ಕಟ್ಟುಗಳು
ಇತ್ತೀಚಿನ ದಿನಗಳಲ್ಲಿ, ಕಾಂಗ್ರೆಸ್ ಸರಣಿ ಚುನಾವಣಾ ಹಿನ್ನಡೆಗಳನ್ನು ಎದುರಿಸುತ್ತಿದೆ. ಇದರ ಬೆನ್ನಲ್ಲೇ ಸಿಡಬ್ಲ್ಯುಸಿಯ ಕಾರ್ಯವೈಖರಿಯೂ ಸಹ ತೀವ್ರ ಸವಾಲುಗಳನ್ನು ಎದುರಿಸುತ್ತಿದೆ.
ಮೂಲ ನಿಯಮಗಳ ಪ್ರಕಾರ, ಸಿಡಬ್ಲ್ಯುಸಿಯ ಸದಸ್ಯರನ್ನು ಆಂತರಿಕ ಚುನಾವಣೆಯ ಮೂಲಕ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆ ಮಾಡಬೇಕು. ಆದರೆ, ಕಳೆದ ಕೆಲವು ದಶಕಗಳಿಂದ ಚುನಾವಣೆಗಳ ಬದಲಿಗೆ ಪಕ್ಷದ ಅಧ್ಯಕ್ಷರೇ ನೇರವಾಗಿ ನಾಯಕರನ್ನು ನೇಮಕ ಮಾಡುವ ಪದ್ಧತಿ ಹೆಚ್ಚಾಗಿದೆ. ಇದು ಮುಕ್ತ ಚರ್ಚೆಯ ಗುಣಮಟ್ಟವನ್ನು ಕುಗ್ಗಿಸಿದೆ ಎಂಬ ಟೀಕೆಗಳೂ ಇವೆ.
ಇದೇ ಕಾರಣಕ್ಕಾಗಿಯೂ ಮತ್ತು ಪಕ್ಷದ ಸಾಂಸ್ಥಿಕ ನಿಷ್ಕ್ರಿಯತೆಯನ್ನು ಪ್ರಶ್ನಿಸಿ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್, ಶಶಿ ತರೂರ್ ಸೇರಿದಂತೆ 23 ಹಿರಿಯ ನಾಯಕರು (ಜಿ-23) ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದರು. ಸಿಡಬ್ಲ್ಯುಸಿಯ ಪುನರ್ರಚನೆ ಮತ್ತು ಸಕ್ರಿಯ ನಾಯಕತ್ವಕ್ಕೆ ಆಗ್ರಹಿಸಿ ಪತ್ರ ಬರೆದಿದ್ದರು. ಇದು ಪಕ್ಷದ ಇತಿಹಾಸದಲ್ಲೇ ದೊಡ್ಡ ಆಂತರಿಕ ಬಿಕ್ಕಟ್ಟನ್ನು ಸೃಷ್ಟಿಸಿತ್ತು.
ಅಂತೆಯೇ, ಹಳೆಯ ತಲೆಮಾರಿನ ಸಾಂಪ್ರದಾಯಿಕ ರಾಜಕಾರಣಿಗಳು ಮತ್ತು ಇಂದಿನ ಡಿಜಿಟಲ್ ಯುಗದ ತಂತ್ರಜ್ಞಾನ ಆಧಾರಿತ ಯುವ ನಾಯಕರ ಆಲೋಚನಾ ಲಹರಿಗಳ ನಡುವೆ ಸಮನ್ವಯ ಸಾಧಿಸುವುದು ಸಮಿತಿಗೆ ದೊಡ್ಡ ಸವಾಲಾಗಿದೆ.
‘ರಬ್ಬರ್ ಸ್ಟ್ಯಾಂಪ್’ ಆಗಿಯೂ ಕಾಣಿಸಿಕೊಂಡಿರುವ ಸಿಡಬ್ಲ್ಯೂಸಿ
ಕಾಂಗ್ರೆಸ್ ಇತಿಹಾಸದಲ್ಲಿ ಸಿಡಬ್ಲ್ಯುಸಿ ಅತ್ಯಂತ ಶಕ್ತಿಶಾಲಿಯಾಗಿದ್ದರೂ, ಹಲವು ಸಂದರ್ಭಗಳಲ್ಲಿ ಕೇವಲ ‘ರಬ್ಬರ್ ಸ್ಟ್ಯಾಂಪ್’ನಂತೆಯೇ ನಡೆದುಕೊಂಡಿದೆ.
ಕಾಂಗ್ರೆಸ್ ಪಕ್ಷದಲ್ಲಿನ ಅಲಿಖಿತ ನಿಯಮದಂತೆ ಪಕ್ಷದ ಬಹುತೇಕ ಪ್ರಮುಖ ಮತ್ತು ಅಂತಿಮ ನಿರ್ಧಾರಗಳು ಗಾಂಧಿ ಕುಟುಂಬದ (ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ) ಮಟ್ಟದಲ್ಲೇ ನಿರ್ಧಾರವಾಗುತ್ತವೆ. ಸಿಡಬ್ಲ್ಯುಸಿ ಸಭೆಗಳು ಕೇವಲ ಆ ಮೊದಲೇ ನಿರ್ಧಾರವಾದ ನೀತಿಗಳಿಗೆ ಅಧಿಕೃತ ಮುದ್ರೆ ಒತ್ತುವ ವೇದಿಕೆಗಳಾಗಿ ಮಾರ್ಪಟ್ಟಿವೆ ಎಂಬ ಬಹಿರಂಗ ಟೀಕೆಗಳನ್ನು ‘ಜಿ-23’ ಬಂಡಾಯ ನಾಯಕರು ಎತ್ತಿದ್ದರು.
ಸಮಿತಿಯ ಬಹುತೇಕ ಸದಸ್ಯರು ಮುಖಂಡರ ಕೃಪಾಕಟಾಕ್ಷದಿಂದ ನೇಮಕಗೊಳ್ಳುತ್ತಾರೆ. ಆದ್ದರಿಂದ, ಅವರು ನಾಯಕತ್ವದ ತಪ್ಪು ನಿರ್ಧಾರಗಳನ್ನು ಅಥವಾ ತಂತ್ರಗಳ ವೈಫಲ್ಯಗಳನ್ನು ಸಭೆಯಲ್ಲಿ ಮುಕ್ತವಾಗಿ ಮತ್ತು ಕಟುವಾಗಿ ಟೀಕಿಸಲು ಹಿಂಜರಿಯುತ್ತಾರೆ. ಸಭೆಗಳು ಕೇವಲ ಆತ್ಮಾವಲೋಕನ ಮಾಡಿಕೊಳ್ಳುವ ಬದಲು ನಾಯಕತ್ವದ ಗುಣಗಾನಕ್ಕೆ ಸೀಮಿತವಾಗುತ್ತವೆ ಎಂಬ ಗಂಭೀರ ಆರೋಪವೂ ಇದೆ.
ಅದೇ ರೀತಿ, ದೇಶದಲ್ಲಿ ತುರ್ತು ರಾಜಕೀಯ ವಿದ್ಯಮಾನಗಳು ಸಂಭವಿಸಿದಾಗ ಅಧಿಕೃತ ಸಿಡಬ್ಲ್ಯುಸಿ ಸಭೆ ಕರೆಯುವ ಮುನ್ನವೇ ಹೈಕಮಾಂಡ್ನ ಆಪ್ತ ವಲಯದಲ್ಲಿ ನಿರ್ಧಾರಗಳನ್ನು ಅಂತಿಮಗೊಳಿಸಲಾಗಿರುತ್ತದೆ. ನಂತರ ಔಪಚಾರಿಕವಾಗಿ ಸಿಡಬ್ಲ್ಯುಸಿ ಸಭೆ ಕರೆದು ಅದನ್ನು ಜಗತ್ತಿಗೆ ಸಾರಲಾಗುತ್ತದೆ. ಇದು ಸಮಿತಿಯ ನೈಜ ಮೌಲ್ಯವನ್ನು ಕುಗ್ಗಿಸಿದೆ ಎಂಬ ಅಭಿಪ್ರಾಯಗಳೂ ಇವೆ.
ಪ್ರಸ್ತುತ ಸನ್ನಿವೇಶದಲ್ಲಿ ಸಿದ್ದರಾಮಯ್ಯನವರಂತಹ ಜನಪ್ರಿಯ, ಮಾಸ್ ಲೀಡರ್ ಹಾಗೂ ತಳಮಟ್ಟದ ವಾಸ್ತವದ ಅರಿವಿರುವ ಸೈದ್ಧಾಂತಿಕ ಬದ್ಧತೆಯುಳ್ಳ ನಾಯಕರನ್ನು ಸಿಡಬ್ಲ್ಯುಸಿಗೆ ನೇಮಕ ಮಾಡಲಾಗಿದೆ. ಇದು ಸಮಿತಿಗೆ ಹೊಸ ಆಯಾಮ ಮತ್ತು ಶಕ್ತಿಯನ್ನು ನೀಡಬಲ್ಲದು. ಆದರೆ, ಸಿಡಬ್ಲ್ಯುಸಿ ಕೇವಲ ಹೆಸರಿಗಷ್ಟೇ ಶಕ್ತಿಶಾಲಿ ಸಮಿತಿಯಾಗುಳಿಯದೆ, ಕಾರ್ಯಪ್ರವೃತ್ತವಾಗುವ ಶಕ್ತಿಯನ್ನು ಮರಳಿ ಪಡೆದಾಗ ಮಾತ್ರ ಕಾಂಗ್ರೆಸ್ ಮತ್ತೆ ಪುಟಿದೇಳಲು ಸಾಧ್ಯವಾಗುತ್ತದೆ.




