ಕೆ ಎಸ್ ನಿಸಾರ್ ಅಹಮದ್ ಅವರು ನಾಡಹಬ್ಬ ಉದ್ಘಾಟನೆ ಮಾಡಿದಾಗ ಇವರೆಲ್ಲ ಸುಮ್ಮನಿದ್ದರು. ಇಂದು ಬಾನು ಅವರನ್ನು ವಿರೋಧಿಸುತ್ತಿರುವುದು ಮಹಿಳಾ ವಿರೋಧಿಯಾದ ನಿಲುವು ಎಂಬುದು ಸ್ಪಷ್ಟವಾಗುತ್ತದೆ. ಬಾನು ಅವರು ಇಂಥದ್ದನ್ನೆಲ್ಲ ಜೀವನದುದ್ದಕ್ಕೂ ಎದುರಿಸಿಕೊಂಡೇ ಬಂದವರಾದ್ದರಿಂದ ಅವರು ಇದರಿಂದ ವಿಚಲಿತರಾಗುವುದಿಲ್ಲ.
ಬಾನು ಮುಸ್ತಾಕ್ ಅವರು ನಾಡಹಬ್ಬದ ಉದ್ಘಾಟನೆ ಮಾಡುವುದನ್ನು ಕೋಮುವಾದಿಗಳು ವಿರೋಧಿಸಿದ್ದಾರೆ. ಅದು ಅವರ ಅನ್ನ ಮತ್ತು ಅಧಿಕಾರದ ಪ್ರಶ್ನೆಯಾದ್ದರಿಂದ ಇಂಥ ಕೆಲಸ ಮಾಡದೆ ಅವರಿಗೆ ಬೇರೆ ಹಾದಿಯೇ ಇಲ್ಲ. ಕೆ ಎಸ್ ನಿಸಾರ್ ಅಹಮದ್ ಅವರು ನಾಡಹಬ್ಬ ಉದ್ಘಾಟನೆ ಮಾಡಿದಾಗ ಇವರೆಲ್ಲ ಸುಮ್ಮನಿದ್ದರು ಎಂದರೆ, ಇದು ಮಹಿಳಾ ವಿರೋಧಿಯಾದ ನಿಲುವು ಕೂಡಾ ಹೌದು ಎಂಬುದು ಸ್ಪಷ್ಟವಾಗುತ್ತದೆ. ಬಾನು ಅವರು ಇಂಥದ್ದನ್ನೆಲ್ಲ ಜೀವನದುದ್ದಕ್ಕೂ ಎದುರಿಸಿಕೊಂಡೇ ಬಂದವರಾದ್ದರಿಂದ ಅವರು ಇದರಿಂದ ವಿಚಲಿತರಾಗುವುದಿಲ್ಲ. ಈಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ತಂದೆ ಮೈಸೂರಿನ ಕೆ ಆರ್ ಎಸ್ ನಲ್ಲಿ ಕೆಲಸ ಮಾಡುತ್ತಿದ್ದುದನ್ನೂ, ಇದು ಕಾರಣವಾಗಿ ಚಿಕ್ಕ ವಯಸ್ಸಿನಿಂದಲೇ ತಾನು ದಸರಾ ನೋಡಿ ಸಂಭ್ರಮಿಸುತ್ತಿದ್ದುದನ್ನೂ, ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಕಂಡು ಭಾವುಕರಾದುದನ್ನೂ ವಿವರಿಸಿದ್ದಾರೆ.
ಇದನ್ನೂ ಓದಿ “ಕನ್ನಡನಾಡು ನನ್ನ ಪ್ರೀತಿಯ ನಾಡು” ಎಂದು ಇಡೀ ಜಗತ್ತಿಗೆ ಸಾರುತ್ತಾ ಬಂದ ಬಾನು ದಸರಾ ಉದ್ಘಾಟಿಸಿದರೆ ತಪ್ಪೇ!
ಈ ನಾಡಹಬ್ಬಗಳು, ಊರಿನ ಜಾತ್ರೆಗಳೆಲ್ಲ ಪೂರ್ತಿಯಾಗಿ ಧಾರ್ಮಿಕ ಅಲ್ಲ. ಅಲ್ಲಿ ದೇವರುಗಳು ʼಪವಿತ್ರ ಜಾಗದಿಂದ ಹೊರಬಂದು ಸೆಕ್ಯೂಲರ್ ಆಗುತ್ತಾರೆ ( From sacred to secular). ನಮ್ಮೂರಿನಲ್ಲಿ ಮುಸ್ಲಿಮರು ಜಾತ್ರೆಗಳಲ್ಲಿ ದೇವರ ಸೇವೆ ಮಾಡುತ್ತಾರೆ, ಹುಂಡಿಗೆ ಹರಕೆ ಹಾಕುತ್ತಾರೆ. ಕುಡಿಯಲು ಮಜ್ಜಿಗೆ ನೀರು ಕೊಡುತ್ತಾರೆ. ದೆಹಲಿಯಲ್ಲಿರುವ ನನ್ನ ಮುಸ್ಲಿಂ ಗೆಳೆಯ ಸಾರ್ವಜನಿಕ ಗಣೇಶೋತ್ಸವನ್ನು ತಾನೆ ಮುಂದೆ ನಿಂತು ನಡೆಸುತ್ತಿದ್ದ. ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಸಣ್ಣ ಹೋಟೆಲ್ ನಡೆಸುತ್ತಿರುವ ಅಬ್ದುಲ್ ನಬಿ ತಮ್ಮ ಮನೆಯಲ್ಲಿ ಗಣೇಶ ಮೂರ್ತಿಯನ್ನು ಸ್ಥಾಪಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಎಲ್ಲರೂ ಒಟ್ಟಾಗಿ ಊರಿನ ಮಾನ ಕಾಪಾಡಬೇಕೆಂಬುದು ಆ ಪ್ರದೇಶಗಳಲ್ಲಿ ಬದುಕುತ್ತಿರುವ ಜನರ ಕಾಳಜಿ. ಅಲ್ಲಿ ಜಾತಿ ಮತಗಳು ಪ್ರಧಾನವೇನೂ ಅಲ್ಲ. ʼಕಲ್ಲಂಗಡಿ ಒಡೆದು ಹಾಕಿದ ಪ್ರಕರಣʼ ಈಚಿನದು, ಅದು ನಮ್ಮ ಸಮಾಜ ದುರವಸ್ಥೆಗೆ ತಲುಪಿದ್ದರ ಸಂಕೇತ.
ಮೈಸೂರಿಗೆ ದಸರಾ ಬಂದದ್ದು ವಿಜಯನಗರದ ಪತನದ ಆನಂತರ. ಹಂಪಿಯಲ್ಲಿ ದಸರಾ ನಡೆಯುತ್ತಿದ್ದ ಮಹಾನವಮಿ ದಿಬ್ಬದಲ್ಲಿ ಮುಸ್ಲಿಂ ಅರಬ್ಬರು, ತುರ್ಕರು ಅಥವಾ ಪರ್ಷಿಯನ್ನರು ಎಂದು ಸಂಶೋಧಕರು ಗುರುತಿಸಿರುವ ಉಬ್ಬು ಶಿಲ್ಪಗಳಿವೆ. ಇದನ್ನು ಯಾರೂ ವಿರೋಧಿಸಿರಲಿಲ್ಲ, ಬದಲು ಇದು ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಡೆದ ಸಾಂಸ್ಕೃತಿಕ ಸಂಬಂಧಗಳ ಸಂಕೇತ ಎಂದು ಕೊಂಡಾಡಿದರು. ನಾವೀಗ ಸಮಾಜವನ್ನು ೬೦೦ ವರ್ಷಗಳಿಗಿಂತಲೂ ಹಿಂದೆ ತೆಗೆದುಕೊಂಡು ಹೋಗಿದ್ದೇವೆ.
ಕೆಲವು ವರ್ಷಗಳ ಹಿಂದೆ ನಡೆದ ಒಂದು ಸಭೆಯಲ್ಲಿ ಬಾನು ಅವರು ಕನ್ನಡವನ್ನು ಪ್ರತಿನಿಧಿಸುವ ಕೆಂಪು (ಕುಂಕುಮ) ಮತ್ತು ಹಳದಿ (ಅರಶಿನ) ಬಗ್ಗೆ ಹೇಳಿದ್ದು ನಿಜ. ಈ ಬಣ್ಣಗಳನ್ನು ನಿಮ್ಮದೇ ರಾಜ್ಯದ ಅಲ್ಪಸಂಖ್ಯಾತರ ಕಣ್ಣಲ್ಲಿ ನೋಡಿದಾಗ ನಿಮಗೆ ಹೇಗನ್ನಿಸುತ್ತದೆ? ಎಂಬ ಪ್ರಶ್ನೆಯನ್ನು ಒಬ್ಬ ಪ್ರಜಾಪ್ರಭುತ್ವವಾದಿಯಾಗಿ ಅವರು ಜನರ ಮುಂದಿಟ್ಟಿದ್ದರು. ಸೃಜನಶೀಲ ಲೇಖಕರು ಇಂಥ ಪ್ರಶ್ನೆಗಳನ್ನು ಎಲ್ಲ ಕಾಲಕ್ಕೂ ಕೇಳುತ್ತಲೇ ಬಂದಿದ್ದಾರೆ. ಹಾಗಂತ ಬಾನು ಅವರು ಮುಂದೆ ಕನ್ನಡದಲ್ಲಿ ಬರೆಯುವುದನ್ನೂ ನಿಲ್ಲಿಸಿಲ್ಲ! ಕನ್ನಡ ಬಾವುಟವನ್ನು ತಿರಸ್ಕರಿಸಿ ಎಂದೂ ಕರೆಕೊಟ್ಟಿಲ್ಲ. ಅವರಿಗೆ ಸಂದ ಬೂಕರ್ ಪ್ರಶಸ್ತಿ ಎಲ್ಲ ಕನ್ನಡಿಗರಿಗೂ ಸಂದ ಗೌರವ ಎಂದು ಅವರೇ ಹೇಳಿದ್ದಾರೆ. ಉರ್ದು ಮನೆ ಮಾತಿನ ಅವರು ಕನ್ನಡದಲ್ಲಿ ಬರೆದದ್ದಕ್ಕೆ ಹೆಮ್ಮ ಪಡೋಣ.
ನಾಡಹಬ್ಬ ಎಲ್ಲರನ್ನೂ ಒಗ್ಗೂಡಿಸಲಿ. ಮೈಸೂರಿನಲ್ಲಿಯೇ ಇದ್ದ ಕುವೆಂಪು ಅವರು ಕರ್ನಾಟಕವನ್ನು ʼಸರ್ವಜನಾಂಗದ ಶಾಂತಿಯ ತೋಟʼ ಎಂದು ಕರೆದರು. ಅವರ ಆಶಯಕ್ಕೆ ಭಂಗ ತರದಿರೋಣ.

ಡಾ. ಪುರುಷೋತ್ತಮ ಬಿಳಿಮಲೆ
ಜಾನಪದ ವಿದ್ವಾಂಸರು, ಲೇಖಕರು, ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು