2013 ರಿಂದ 2018ರವರೆಗೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಪೂರ್ಣಾವಧಿಯನ್ನು ಪೂರೈಸಿದ ಹೆಗ್ಗಳಿಕೆಗೆ ಪಾತ್ರವಾಯಿತು. ಆದರೆ, 2018ರ ಚುನಾವಣೆಯಲ್ಲಿ ಕಾಂಗ್ರೆಸ್, ಆಡಳಿತವಿರೋಧಿ ಅಲೆಯನ್ನು ದಾಟಲಾಗದೆ ಬಹುಮತ ಕಳೆದುಕೊಂಡು ದ್ವಿತೀಯ ಸ್ಥಾನಕ್ಕೆ ಕುಸಿಯಿತು.
ಕರ್ನಾಟಕದ ರಾಜಕೀಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲಿನ ಮತದಾರರು ಎಂದಿಗೂ ಸುಲಭವಾಗಿ ಯಾವುದೇ ಸರ್ಕಾರಕ್ಕೆ ಸತತ ಎರಡನೇ ಬಾರಿಗೆ ಮನ್ನಣೆ ನೀಡಿಲ್ಲ. ಯಾವುದೇ ಪಕ್ಷಕ್ಕೆ ಒಮ್ಮೆ ಅಧಿಕಾರ ನೀಡಿದರೆ, ಮುಂದಿನ ಚುನಾವಣೆಯಲ್ಲಿ ಮತ್ತೊಂದು ಪಕ್ಷಕ್ಕೆ ಪಟ್ಟ ಕಟ್ಟುವುದು ನಡೆದೇ ಬಂದಿದೆ. ಈಗ, ಈ ಇತಿಹಾಸ ಮುರಿದು, 2028ರ ವಿಧಾನಸಭಾ ಚುನಾವಣೆಯನ್ನು ಮರಳಿ ಗೆಲ್ಲುವ ಹಠ ಕಾಂಗ್ರೆಸ್ನಲ್ಲಿದೆ. ಅದಕ್ಕಾಗಿ, ಸರ್ಕಾರದ ಸಾರಥ್ಯವನ್ನು ಡಿ.ಕೆ ಶಿವಕುಮಾರ್ ಅವರ ಕೈಗಿತ್ತಿದೆ. ಇಂದು (ಬುಧವಾರ) ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕರ್ನಾಟಕದಲ್ಲಿ ಆಡಳಿತವಿರೋಧಿ ಭಾವನೆಯನ್ನು ಮೆಟ್ಟಿ, ಕಾಂಗ್ರೆಸ್ಅನ್ನು ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಅವರ ಹೆಗಲಿಗೆ ಹೊರಿಸಲಾಗಿದೆ.
ಹಾಗೆ ನೋಡಿದರೆ, ಕರ್ನಾಟಕದಲ್ಲಿ ಪಕ್ಷವೊಂದು ಅಧಿಕಾರಕ್ಕೇರಿ, ತನ್ನ ಐದು ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿ, ನಂತರದ ಚುನಾವಣೆಯಲ್ಲಿ ಮತ್ತೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿ 40 ವರ್ಷಗಳೇ ಕಳೆದಿವೆ. ಕರ್ನಾಟಕದ ಇತಿಹಾಸದಲ್ಲಿ 1970ರ ಮತ್ತು 80ರ ದಶಕದಲ್ಲಿ ಇಂತಹ ಅಪರೂಪದ ರಾಜಕೀಯ ವಿದ್ಯಮಾನಗಳು ಜರುಗಿದ್ದವು.
ಮೊದಲನೆಯದಾಗಿ, ಕರ್ನಾಟಕದ ರಾಜಕೀಯ ಧ್ರುವತಾರೆ ಎಂದೇ ಕರೆಯಲ್ಪಡುವ ಡಿ. ದೇವರಾಜ ಅರಸು ಅವರು 1972 ರಿಂದ 1977 ರವರೆಗೆ ಮುಖ್ಯಮಂತ್ರಿಯಾಗಿ ಭೂಸುಧಾರಣೆ, ಹಿಂದುಳಿದ ವರ್ಗಗಳ ಸಬಲೀಕರಣ ಹಾಗೂ ಬಡವರ ಪರ ಯೋಜನೆಗಳ ಮೂಲಕ ಭದ್ರವಾದ ಜನಪರ ನೆಲೆಯನ್ನು ಕಂಡುಕೊಂಡಿದ್ದರು. ತದನಂತರದ ರಾಜಕೀಯ ಏರುಪೇರುಗಳ ನಡುವೆಯೂ, 1978ರ ವಿಧಾನಸಭಾ ಚುನಾವಣೆಯಲ್ಲಿ ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ (ಇಂದಿರಾ) ಭರ್ಜರಿ ಬಹುಮತ ಗಳಿಸಿ ಮರಳಿ ಅಧಿಕಾರ ಹಿಡಿಯಿತು. ಅರಸು ಅವರು ಜಾರಿಗೆ ತಂದ ಕ್ರಾಂತಿಕಾರಿ ಸಾಮಾಜಿಕ ಸುಧಾರಣೆಗಳು ಆಡಳಿತವಿರೋಧಿ ಅಲೆಯನ್ನು ಸಂಪೂರ್ಣವಾಗಿ ನುಂಗಿ ಹಾಕಿದ್ದವು. ಮತದಾರರು ಮರಳಿ ಅರಸು ಅವರಿಗೆ ಅಧಿಕಾರದ ಗದ್ದುಗೆ ನೀಡಿದ್ದರು.
ಅರಸು ಅವರ ನಂತರ ಈ ಸಾಧನೆ ಮಾಡಿದ ಮತ್ತೊಬ್ಬ ಧೀಮಂತ ನಾಯಕ ರಾಮಕೃಷ್ಣ ಹೆಗಡೆ. 1983ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಜನತಾ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಹೆಗಡೆ ಮುಖ್ಯಮಂತ್ರಿಯಾದರು. ಆದರೆ, 1984ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಹಿನ್ನಡೆ ಅನುಭವಿಸಿದಾಗ, ಹೆಗಡೆ ಅವರು ನೈತಿಕ ಹೊಣೆ ಹೊತ್ತು ವಿಧಾನಸಭೆಯನ್ನು ವಿಸರ್ಜಿಸಿ ಸಾರ್ವತ್ರಿಕ ಚುನಾವಣೆಗೆ ಹೋದರು. 1985 ರಲ್ಲಿ ನಡೆದ ಮರುಚುನಾವಣೆಯಲ್ಲಿ ಜನತಾ ಪಕ್ಷವು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿತು. ಹೆಗಡೆ ಮತ್ತೊಮ್ಮೆ ಮುಖ್ಯಮಂತ್ರಿಯಾದರು. ಆದಾಗ್ಯೂ, ಇದು ಐದು ವರ್ಷಗಳ ಪೂರ್ಣಾವಧಿ ಮುಗಿದ ನಂತರ ನಡೆದ ಚುನಾವಣೆಯಾಗಿರಲಿಲ್ಲ, ಬದಲಿಗೆ ಅವಧಿಗೆ ಮುನ್ನವೇ ಜರುಗಿದ ಚುನಾವಣೆಯಾಗಿತ್ತು. ಆ ನಂತರ, 2013ರವರೆಗೆ ಯಾವೊಬ್ಬ ನಾಯಕ ಅಥವಾ ಪಕ್ಷವು ಐದು ವರ್ಷಗಳ ಪೂರ್ಣಾವಧಿಯ ಸರ್ಕಾರವನ್ನು ನಡೆಸಲೇ ಇಲ್ಲ.
ಇತ್ತೀಚಿನ ಇತಿಹಾಸವನ್ನು ಕೆದಕಿದರೆ, 2013 ರಿಂದ 2018ರವರೆಗೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಪೂರ್ಣಾವಧಿಯನ್ನು ಪೂರೈಸಿದ ಹೆಗ್ಗಳಿಕೆಗೆ ಪಾತ್ರವಾಯಿತು. ಆದರೆ, 2018ರ ಚುನಾವಣೆಯಲ್ಲಿ ಕಾಂಗ್ರೆಸ್, ಆಡಳಿತವಿರೋಧಿ ಅಲೆಯನ್ನು ದಾಟಲಾಗದೆ ಬಹುಮತ ಕಳೆದುಕೊಂಡು ದ್ವಿತೀಯ ಸ್ಥಾನಕ್ಕೆ ಕುಸಿಯಿತು.
ಅಂದರೆ, 1985ರ ನಂತರ, ಕಳೆದ 40 ವರ್ಷಗಳಲ್ಲಿ ಯಾವುದೇ ಒಂದು ಪಕ್ಷ ಸತತವಾಗಿ ಎರಡು ಬಾರಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲು ಸಾಧ್ಯವಾಗಿಯೇ ಇಲ್ಲ. ಕರ್ನಾಟಕದ ಜನರು ಅಂತಹ ಅವಕಾಶವನ್ನೂ ನೀಡಿಲ್ಲ.
ಇಂದಿನ ಕರ್ನಾಟಕದ ರಾಜಕೀಯ ಪರಿಸ್ಥಿತಿಯು ನಾಲ್ಕು ದಶಕಗಳ ಹಿಂದಿನ ಪರಿಸ್ಥಿತಿಗಿಂತ ತೀರಾ ಭಿನ್ನವಾಗಿದೆ. ಇಂದು ಮತದಾರರು ಮತ್ತಷ್ಟು ಜಾಗೃತನಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾಗಿದೆ. ಸರ್ಕಾರದ ಸಣ್ಣ ತಪ್ಪುಗಳೂ ತಕ್ಷಣವೇ ಸಾರ್ವಜನಿಕ ಚರ್ಚೆಗೆ ಒಳಗಾಗುತ್ತವೆ. ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದ್ದರೂ, ಆಡಳಿತದ ಹಾದಿ ಅಷ್ಟು ಸುಲಭವಾಗಿಲ್ಲ. ಬಿಜೆಪಿ ಐಟಿ ಸೆಲ್ ಕೂಡ ಸಕ್ರಿಯವಾಗಿದ್ದು, ಸರ್ಕಾರದ ವಿರುದ್ಧ ನಿರಂತರ ಆರೋಪಗಳನ್ನು ಮಾಡುತ್ತಲೇ, ಜನರ ಅಭಿಪ್ರಾಯವನ್ನು ಬದಲಿಸುವ ತಂತ್ರ ರೂಪಿಸುತ್ತಲೇ ಇದೆ.
ಈ ಪರಿಸ್ಥಿತಿಯಲ್ಲಿ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆಯ ಆರೋಪಗಳು, ಆಂತರಿಕ ಭಿನ್ನಾಭಿಪ್ರಾಯಗಳಂತಹ ಸವಾಲುಗಳು ಕಾಂಗ್ರೆಸ್ನ ಪಡಸಾಲೆಯಲ್ಲಿವೆ. ದಿನಕಳೆದಂತೆ, ಆಡಳಿತಾರೂಢ ಪಕ್ಷದ ವಿರುದ್ಧ ಮತದಾರರಲ್ಲಿ ಸಣ್ಣ ಮಟ್ಟದ ಅಸಮಾಧಾನಗಳು ಹೊಗೆಯಾಡತೊಡಗಿದೆ. ಇಂತಹ ಸಂದರ್ಭದಲ್ಲಿ, ಐದು ವರ್ಷಗಳ ಆಡಳಿತ ಮುಗಿಯುವ ಹೊತ್ತಿಗೆ ಎದುರಾಗಬಹುದಾದ ತೀವ್ರ ಆಡಳಿತವಿರೋಧಿ ಅಲೆಯನ್ನು ಈಗಿನಿಂದಲೇ ತಡೆಯುವುದು ಕಾಂಗ್ರೆಸ್ ಪಾಲಿಗೆ ಅತಿ ದೊಡ್ಡ ಸವಾಲಾಗಿದೆ.
ಹೀಗಿರುವಾಗ, ಪಕ್ಷ ಸಂಘಟನೆ ಮತ್ತು ಚುನಾವಣಾ ತಂತ್ರಗಾರಿಕೆಯಲ್ಲಿ ‘ಟ್ರಬಲ್ ಶೂಟರ್’ ಎಂದೇ ಹೆಸರಾಗಿರುವ ಡಿ.ಕೆ. ಶಿವಕುಮಾರ್ ಅವರ ಕೈಗೆ ಸರ್ಕಾರದ ಚುಕ್ಕಾಣಿ ನೀಡಲಾಗಿದೆ. 2023ರ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಶಿವಕುಮಾರ್, ಮುಖ್ಯಮಂತ್ರಿಯಾಗಿ 2028ರಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಬೇಕು ಮತ್ತು 40 ವರ್ಷಗಳ ಇತಿಹಾಸವನ್ನು ಬದಲಾಯಿಸಬೇಕು ಎಂಬ ಅಲಿಖಿತ ಜವಾಬ್ದಾರಿಯನ್ನು ಹೊರಿಸಲಾಗಿದೆ.
ಈ ಲೇಖನ ಓದಿದ್ದೀರಾ?: ರಾಷ್ಟ್ರೀಯ ಬಿಕ್ಕಟ್ಟುಗಳಲ್ಲಿ ಮೋದಿ ‘ನಿಗೂಢ ಮೌನ’; ಮರ್ಮವೇನು?
ಇಂದಿನಿಂದ ಆರಂಭವಾಗಿರುವ ‘ಡಿಕೆಶಿ ಪರ್ವ’ ಕೇವಲ ಅಧಿಕಾರ ಚಲಾವಣೆಯಲ್ಲ, ಬದಲಿಗೆ ಭವಿಷ್ಯದ ಚುನಾವಣೆಯ ಭದ್ರ ಬುನಾದಿಯೂ ಆಗಿರಲಿದೆ. ಡಿ ಕೆ ಶಿವಕುಮಾರ್ ಅವರ ಮುಂದಿರುವ ಮೊದಲ ಕಾರ್ಯಸೂಚಿ ಎಂದರೆ ಪಕ್ಷದ ಕಾರ್ಯಕರ್ತರಲ್ಲಿ ನಿರಂತರ ಉತ್ಸಾಹವನ್ನು ಕಾಯ್ದುಕೊಳ್ಳುವುದು. ಜೊತೆಗೆ, ಸರ್ಕಾರದ ಸಾಧನೆಗಳನ್ನು ಮತ್ತು ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಪ್ರತಿ ಮನೆಗೆ ತಲುಪಿಸುವುದು. ಅಲ್ಲದೆ, ಜಾತಿ ಸಮೀಕರಣಗಳು ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ.
ಸರ್ಕಾರವು ಆಡಳಿತವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲಬೇಕಾದರೆ ಸರ್ಕಾರ ಮತ್ತು ಸಂಘಟನೆ ಎರಡೂ ಒಟ್ಟಾಗಿ ಸಾಗಬೇಕಾಗುತ್ತದೆ. ಶಿವಕುಮಾರ್ ಅವರು ತಳಮಟ್ಟದ ರಾಜಕಾರಣವನ್ನು ಬಲ್ಲವರಾಗಿದ್ದರಿಂದ, ಬೂತ್ ಮಟ್ಟದಿಂದಲೇ ಪಕ್ಷವನ್ನು ಮರುಸಂಘಟಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.
ದೇವರಾಜ ಅರಸು ಅವರು ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸುವ ಮೂಲಕ ಆಡಳಿತವಿರೋಧಿ ಅಲೆಯನ್ನು ಗೆದ್ದಿದ್ದರು. ಅಂತೆಯೇ, ಡಿ.ಕೆ. ಶಿವಕುಮಾರ್ ಅವರು ಆರ್ಥಿಕ ಹಿಂದುಳಿದ ವರ್ಗಗಳ ಮತ್ತು ಗ್ಯಾರಂಟಿ ಫಲಾನುಭವಿಗಳ ಒಂದು ಬಲಿಷ್ಠ ‘ಮತಬ್ಯಾಂಕ್’ ಅನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಅದಕ್ಕಾಗಿ, ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಆಡಳಿತ ನೀಡಬೇಕಿದೆ.
ಡಿ.ಕೆ. ಶಿವಕುಮಾರ್ ಅವರ ನಾಯಕತ್ವಕ್ಕೆ ಇದು ಅಗ್ನಿಪರೀಕ್ಷೆಯ ಕಾಲ. ನಾಲ್ಕು ದಶಕಗಳ ಕಾಲ ಮರೀಚಿಕೆಯಾಗಿದ್ದ ಸತತ ಎರಡನೇ ಬಾರಿಯ ಅಧಿಕಾರದ ಕನಸನ್ನು ನನಸು ಮಾಡಿ, ಡಿ.ಕೆ ಶಿವಕುಮಾರ್ ಇತಿಹಾಸದ ಪುಟಗಳಲ್ಲಿ ಹೊಸ ಅಧ್ಯಾಯ ಬರೆಯುತ್ತಾರಾ ಅಥವಾ ಕರ್ನಾಟಕದ ಸಾಂಪ್ರದಾಯಿಕ ಮತದಾನದ ಶೈಲಿಗೆ ಮತ್ತೊಮ್ಮೆ ಕಾಂಗ್ರೆಸ್ ಬಲಿಯಾಗುತ್ತಾ ಎಂಬುದನ್ನು ಕಾಲವೇ ನಿರ್ಣಯಿಸಲಿದೆ.




