ಪ್ರತಿ ಬಾರಿಯೂ ಪದಕ ಗೆದ್ದಾಗ ಕ್ರೀಡಾಪಟುಗಳೊಂದಿಗೆ ಫೋಟೋ ತೆಗೆಸಿಕೊಳ್ಳುವ, ಫೋನ್ ಮಾಡಿ ಅಭಿನಂದಿಸುವ ಪ್ರಧಾನಿ ಮೋದಿ ಅವರು, ಅದೇ ಕ್ರೀಡಾಪಟುಗಳು ಸಂಕಷ್ಟದಲ್ಲಿದ್ದಾಗಲೂ ಜೊತೆಯಾಗಬೇಕಲ್ಲವೇ? ಪ್ರಧಾನಿ ಮೋದಿ ವಿನೇಶ್ ಫೋಗಟ್ ಬಗ್ಗೆ ಮೌನ ಮುರಿಯುವುದು ಯಾವಾಗ?
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ (ಮನದ ಮಾತು) ರೇಡಿಯೋ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರವು ನಿರಂತರವಾಗಿ ರಾಜಕೀಯ ರಹಿತ ಕಾರ್ಯಕ್ರಮ ಎಂದು ಹೇಳಿಕೊಂಡು ಬರುತ್ತಿದೆ. ಈ ಕಾರ್ಯಕ್ರಮದಲ್ಲೇ ಪ್ರಧಾನಿ ಮೋದಿ ದೇಶದ ವಿವಿಧ ಮೂಲೆಗಳ ಕ್ರೀಡಾಪಟುಗಳ ಸಾಧನೆ, ಪರಿಶ್ರಮ ಮತ್ತು ಯುವ ಪ್ರತಿಭೆಗಳನ್ನು ಶ್ಲಾಘಿಸುತ್ತಾ ಬಂದಿದ್ದಾರೆ. ಒಲಿಂಪಿಕ್ಸ್ ಇರಲಿ, ಪ್ಯಾರಾಲಿಂಪಿಕ್ಸ್ ಇರಲಿ ಅಥವಾ ಸಣ್ಣಪುಟ್ಟ ಪ್ರಾದೇಶಿಕ ಕ್ರೀಡಾಕೂಟಗಳೇ ಇರಲಿ ಆ ಕ್ರೀಡಾಪಟುಗಳ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ಇತ್ತೀಚೆಗೆ ನಡೆದ ಮನ್ ಕೀ ಬಾತ್‌ನಲ್ಲೂ ಪ್ರಧಾನಿ ಮೋದಿ ಕ್ರೀಡಾಪಟುಗಳ ಗುಣಗಾನ ಮಾಡಿದ್ದಾರೆ. ಆದರೆ ಪ್ರಧಾನಿಗೆ ಈವರೆಗೆ ನಮ್ಮ ದೇಶದ ಹೆಮ್ಮೆ, ಪ್ರತಿಭಾನ್ವಿತ ಕುಸ್ತಿಪಟು ವಿನೇಶ್ ಫೋಗಟ್ ಮಾತ್ರ ಕಾಣಿಸಿಲ್ಲ!
ಸದ್ಯ ದೇಶದ ಕ್ರೀಡಾ ರಂಗದಲ್ಲೇ ಚರ್ಚೆಗೆ ಗ್ರಾಸವಾಗುತ್ತಿರುವವರು ವಿನೇಶ್ ಫೋಗಟ್. ಏಷ್ಯನ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳೆರಡರಲ್ಲೂ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವವರು. 2025ರ ಡಿಸೆಂಬರ್‌ನಲ್ಲಿ ನಿವೃತ್ತಿ ನಿರ್ಧಾರವನ್ನು ಹಿಂಪಡೆದು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಗುರಿಯೊಂದಿಗೆ ಮತ್ತೆ ಕುಸ್ತಿಪಟುವಾಗಿ ಮರಳುವುದಾಗಿ ಘೋಷಿಸಿದ್ದಾರೆ. ಈ ವಿಚಾರದಲ್ಲಿ ಮೊನ್ನೆ ತಾನೇ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ಆದರೆ ಪ್ರಧಾನಿ ಮೋದಿ ವಿನೇಶ್ ಬಗ್ಗೆ ಮೌನ ಮುರಿಯುವುದು ಯಾವಾಗ? ಮನ್ ಕೀ ಬಾತ್‌ನಲ್ಲಿ ವಿನೇಶ್ ಫೋಗಟ್ ಅವರ ಹೋರಾಟಕ್ಕೆ ಜಾಗ ಸಿಗುವುದು ಯಾವಾಗ ಮೋದಿ ಜೀ?
ಇದನ್ನು ಓದಿದ್ದೀರಾ? ಬಿಜೆಪಿ ನಾಯಕ ಬ್ರಿಜ್ ಭೂಷಣ್‌ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದವರಲ್ಲಿ ನಾನೂ ಒಬ್ಬಳು: ವಿನೇಶ್ ಫೋಗಟ್
ವಿನೇಶ್ ಫೋಗಟ್ ಕೇವಲ ದೇಶದ ಕ್ರೀಡಾಪಟುವಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದ, ದೇಶಕ್ಕೆ ಹತ್ತಾರು ಪದಕಗಳನ್ನು ತಂದುಕೊಟ್ಟ ಹೆಮ್ಮೆಯ ಮಗಳು ವಿನೇಶ್. ಕೇವಲ ಅಖಾಡದಲ್ಲಷ್ಟೇ ಅಲ್ಲದೆ, ಅಖಾಡದ ಹೊರಗೂ ತಮ್ಮ ಹಕ್ಕುಗಳಿಗಾಗಿ ಮತ್ತು ಕ್ರೀಡಾ ವ್ಯವಸ್ಥೆಯ ಸುಧಾರಣೆಗಾಗಿ ಧ್ವನಿ ಎತ್ತಿದ ಧೀರ ಮಹಿಳೆ.
ಆದರೆ ಕಳೆದ ಕೆಲವು ಸಮಯದಿಂದ ಕ್ರೀಡಾಂಗಣಕ್ಕಿಂತ ಹೆಚ್ಚಾಗಿ ನ್ಯಾಯಾಲಯದಲ್ಲೇ, ಪ್ರತಿಭಟನಾ ಸ್ಥಳಗಳಲ್ಲೇ ವಿನೇಶ್ ಕಾಣಿಸಿಕೊಳ್ಳುವಂತಾಗಿದೆ. ಇದು ದೇಶದ ಕ್ರೀಡಾ ವ್ಯವಸ್ಥೆಯ ಸುಸ್ಥಿತಿಗೆ ಹಿಡಿದ ಕನ್ನಡಿ ಎಂದರೆ ತಪ್ಪಾಗಲಾರದು. ಕ್ರೀಡಾ ಒಕ್ಕೂಟದೊಳಗಿನ ಶೋಷಣೆ ಮತ್ತು ಆಡಳಿತ ವೈಫಲ್ಯದ ವಿರುದ್ಧ ಧ್ವನಿ ಎತ್ತಿದ ವಿನೇಶ್, ವ್ಯವಸ್ಥೆಯ ವಿರುದ್ಧ ಸುದೀರ್ಘ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಸದ್ಯ ತಾನೇ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಆದರೆ ಪ್ರಧಾನಿ ಮಾತ್ರ ವಿನೇಶ್ ಬಗ್ಗೆ ಗಪ್‌ಚುಪ್ ಆಗಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಭಾಷಣಗಳಲ್ಲಿ ಕ್ರೀಡೆಯ ಮಹತ್ವವನ್ನು ಸಾರುತ್ತಾ, ಆಟಗಾರರು ಎದುರಿಸುವ ಸವಾಲುಗಳ ಬಗ್ಗೆ ಮಾತನಾಡುತ್ತಾರೆ. ಸೋಲಿನಿಂದ ಧೃತಿಗೆಡದೆ ಮುನ್ನಡೆಯುವಂತೆ ದೇಶದ ಯುವಜನತೆಗೆ ಕರೆ ನೀಡುತ್ತಾರೆ. ಆದರೆ ಕ್ರೀಡಾ ರಾಜಕಾರಣ ಮತ್ತು ವ್ಯವಸ್ಥೆಯ ಕಿರುಕುಳದ ವಿರುದ್ಧ ಹೋರಾಡುತ್ತಾ, ಕಣಕ್ಕಿಳಿಯಲು ಕಾನೂನು ಸಮರ ನಡೆಸಬೇಕಾಗಿ ಬಂದಿರುವ ವಿನೇಶ್ ಫೋಗಟ್ ಅವರಂತಹ ಒಲಿಂಪಿಯನ್ ಅನುಭವಿಸುತ್ತಿರುವ ಮಾನಸಿಕ ಮತ್ತು ದೈಹಿಕ ಯಾತನೆ ಪ್ರಧಾನಿಯವರ ಗಮನಕ್ಕೆ ಬಂದಿಲ್ಲವೇ? ಒಬ್ಬ ಮಹಿಳಾ ಅಥ್ಲೀಟ್ ದೇಶದ ಅತ್ಯುನ್ನತ ನ್ಯಾಯಾಲಯದ ಕದ ಬಡಿಯುವ ಪರಿಸ್ಥಿತಿ ಬಂದಾಗ, ಪ್ರಧಾನಿಯಾಗಿ ಅಥ್ಲೀಟ್ ಪರವಾಗಿ ನಿಲ್ಲುವುದು ಅಥವಾ ಅವರ ನೋವಿಗೆ ಸ್ಪಂದಿಸುವುದು ಕ್ರೀಡಾ ಇಲಾಖೆಯ, ಸರ್ಕಾರದ ಕರ್ತವ್ಯವಲ್ಲವೇ?
‘ಬೇಟಿ ಬಚಾವೋ, ಬೇಟಿ ಪಢಾವೋ’ ಮತ್ತು ‘ಖೇಲೋ ಇಂಡಿಯಾ’ದಂತಹ ಅಭಿಯಾನ ಬರೀ ಹೆಸರಿಗಷ್ಟೇ ಇರುವುದೇ? ಈ ಅಭಿಯಾನಗಳನ್ನು ನಾವು ನಡೆಸುತ್ತಿದ್ದೇವೆ ಎಂದು ಪದೇ ಪದೇ ಸಾರುವ ಪ್ರಧಾನಿ ಮೋದಿ ಅವರಿಗೆ ದೇಶದ ಹೆಣ್ಣುಮಗಳೊಬ್ಬಳ ಈ ಹೋರಾಟ ಕಾಣಿಸುತ್ತಿಲ್ಲವೇ ಎಂಬ ಅಸಮಾಧಾನ ಕ್ರೀಡಾಭಿಮಾನಿಗಳದ್ದು. ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಬದಿಗಿಟ್ಟು, ಕ್ರೀಡೆ ಮತ್ತು ಕ್ರೀಡಾಪಟುಗಳ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಮಾತನಾಡುವುದು ಯಾವಾಗ?
ಅಷ್ಟಕ್ಕೂ ಪ್ರತಿ ಬಾರಿಯೂ ಪದಕ ಗೆದ್ದಾಗ ಕ್ರೀಡಾಪಟುಗಳೊಂದಿಗೆ ಫೋಟೋ ತೆಗೆಸಿಕೊಳ್ಳುವ, ಫೋನ್ ಮಾಡಿ ಅಭಿನಂದಿಸುವ ಪ್ರಧಾನಿ ಮೋದಿ ಅವರು, ಅದೇ ಕ್ರೀಡಾಪಟುಗಳು ಸಂಕಷ್ಟದಲ್ಲಿದ್ದಾಗಲೂ ಜೊತೆಯಾಗಬೇಕಲ್ಲವೇ? ಸದಾ ಕೀಳು ರಾಜಕೀಯದಲ್ಲೇ ತೊಡಗಿರುವ ಪ್ರಧಾನಿಯವರ ಮುಂದಿನ ‘ಮನ್ ಕೀ ಬಾತ್’ನಲ್ಲಿ ವಿನೇಶ್ ಫೋಗಟ್ ಅವರ ಹೋರಾಟಕ್ಕೆ ನ್ಯಾಯ ಸಿಗುವ ಮಾತುಗಳು ಕೇಳಿ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳುವುದು ಸಲ್ಲ ಎಂಬುದು ಸ್ಪಷ್ಟ.





