ಭಾರತೀಯ ದೃಶ್ಯ ಮಾಧ್ಯಮಗಳ TRP ಹೇಗೆ ನಿರ್ಧಾರವಾಗುತ್ತದೆ ಗೊತ್ತೇ?

Date:

Advertisements

ಖಾಸಗಿ ವಾಹಿನಿಗಳ ಜನಪ್ರಿಯತೆಯನ್ನು ಅಳೆಯುವ BARC ನ ಮಾನದಂಡದಲ್ಲಿದ್ದ ನ್ಯೂನತೆಯನ್ನು ಬಳಸಿಕೊಂಡು ಟಿಆರ್‌ಪಿಯನ್ನು ದೃಶ್ಯ ಮಾಧ್ಯಮಗಳು ತಮಗೆ ಬೇಕಾದಂತೆ ತಿರುಚುತ್ತಿದ್ದವು. ಆದರೆ ಒಂದು ವಾಹಿನಿಯ ಜನಪ್ರಿಯತೆಯನ್ನು ಅಳೆಯಲು ಬೇರೆ ಮಾದರಿಯ ಅನೇಕ ಮಾನದಂಡಗಳು ಲಭ್ಯ ಇವೆ.

ಭಾರತದ ಬಹುಸಂಖ್ಯಾತ ಮಾಧ್ಯಮಗಳು 2014ರ ಮುಂಚೆ ಆಳುವ ಸರ್ಕಾರವನ್ನು ಪ್ರತಿಯೊಂದು ಹೆಜ್ಜೆಯಲ್ಲಿ ಪ್ರಶ್ನಿಸುತ್ತಿದ್ದುದ್ದನ್ನು ನೋಡಿದ್ದೇವೆ. ಹಾಗೆ ಪ್ರಶ್ನಿಸುವುದು ಆರೋಗ್ಯಕಾರಿ ಪ್ರಜಾಪ್ರಭುತ್ವದ ಲಕ್ಷಣ ಕೂಡ. ಆದರೆ, 2014ರ ನಂತರ ನಮ್ಮ ಮಾಧ್ಯಮಗಳು ಆಳುವವರನ್ನು ಯಾರು ಪ್ರಶ್ನಿಸುತ್ತಾರೊ ಅವರನ್ನೇ ಪ್ರಶ್ನಿಸುವ ಹೊಸ ಚಾಳಿ ಬೆಳೆಸಿಕೊಂಡಿವೆ. ಇದಕ್ಕೆ ಬಹುಮುಖ್ಯ ಕಾರಣ, ಒಂದು ಬಹುತೇಕ ಮಾಧ್ಯಮಗಳ ಆಯಕಟ್ಟಿನ ಜಾಗದಲ್ಲಿ ಕುಳಿತಿರುವವರು ಮೇಲ್ವರ್ಗದ ಹಾಗೂ ಕೋಮುವಾದಿ ಮನಸ್ಥಿತಿಯ ಜನ. ಎರಡನೆಯದು, ಈಗ ಮಾಧ್ಯಮ ಸಂಸ್ಥೆಗಳನ್ನು ನಡೆಸುತ್ತಿರುವ ಯಜಮಾನರು ಬಹುತೇಕ ಫ್ಯಾಸಿಸ್ಟರನ್ನು ಬೆಂಬಲಿಸುವ ಕಾರ್ಪೋರೇಟ್ ಉದ್ಯಮಿಗಳು.

ಹಾಗಾಗಿ, ಕಳೆದೊಂದು ದಶಕಗಳಿಂದ ಭಾರತದ ಎಲ್ಲಾ ಬಗೆಯ ಮಾಧ್ಯಮಗಳು ತುಳಿದಿರುವ ಹಾದಿ ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು, ಮಾತ್ರವಲ್ಲದೇ ಈ ದೇಶಕ್ಕೆ ಅಪಾಯಕಾರಿಯಾದದ್ದು. ಪ್ರಭುತ್ವದ ಪರವಾಗಿ ಮಾತನಾಡುವುದು, ಆಳುವ ದೊರೆಗಳ ಮುಖಸ್ತುತಿ ಮಾಡುವುದು, ಸುಳ್ಳು ಸುದ್ದಿ ಬಿತ್ತರಿಸುವುದು, ಜನಾಂಗೀಯ ದ್ವೇಷ ಹರಡುವುದು, ಕೋಮು ಸಾಮರಸ್ಯ ಕದಡುವುದು, ಇಲ್ಲಿನ ವಿರೋಧ ಪಕ್ಷಗಳ ನಾಯಕರ ಮತ್ತು ದೇಶದ ಪ್ರಖರ ಚಿಂತಕರ/ಪ್ರಗತಿಪರರ ಕುರಿತು ಅಪಪ್ರಚಾರ ಮಾಡುವುದು, ಅವರ ತೇಜೋವಧೆ ಮಾಡುವುದು ಇವೇ ಇಂದಿನ ನಮ್ಮ ಮಾಧ್ಯಮಗಳ ಅಜೆಂಡಾ ಆಗಿದೆ. ಮಾಧ್ಯಮಗಳಲ್ಲಿ ದೇಶದ ವರ್ತಮಾನದ ಆರ್ಥಿಕ ಬಿಕ್ಕಟ್ಟು, ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಕದಡಿರುವ ಸಾಮರಸ್ಯ, ಅಸಹಿಷ್ಣುತೆ ಹಾಗೂ ಸೌಹಾರ್ದತೆಗಳ ಕುರಿತು ಯಾವುದೇ ಚರ್ಚೆಗಳಾಗಲಿ, ಸುದ್ದಿಗಳಾಗಲಿ ಇರುವುದಿಲ್ಲ.

Advertisements

ಮಾಧ್ಯಮಗಳ ಇದಿಷ್ಟೇ ಲೋಪದೋಷಗಳಾಗಿದ್ದರೆ ನಾವು ಭಯ ಪಡುವ ಅಗತ್ಯವಿಲ್ಲ. ಆದರೆ ಬಹುತೇಕ ಬ್ಲ್ಯಾಕ್ಮೇಲ್ ದಂಧೆ ಹಾಗೂ ಅಕ್ರಮ ವ್ಯವಹಾರಗಳು ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಉಳ್ಳವರನ್ನು ಬೆದರಿಸಿ ಹಣ ವಸೂಲಿ ಮಾಡುವುದು, ದುಡ್ಡಿಗಾಗಿ ದೇಶದ ಗೌಪ್ಯ ಮಾಹಿತಿಗಳನ್ನು ವಿದೇಶಗಳಿಗೆ ಮಾರಿಕೊಳ್ಳುವುದು, ಶ್ರೀಮಂತ ಉದ್ಯಮಿಗಳು ಹಾಗೂ ರಾಜಕಾರಣಿಗಳನ್ನು ಬೆದರಿಸಿ ಹಣ ಕೀಳುವುದು ಈ ರೀತಿಯ ಅನೇಕ ಸುದ್ದಿಗಳು ಜನರ ಗಮನಕ್ಕೆ ಬರುತ್ತಿವೆ. ಆದರೆ ಈ ಕುರಿತು ನಮ್ಮ ಮಾಧ್ಯಮಗಳಲ್ಲಿ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ಇದಷ್ಟೇ ಅಲ್ಲದೆ ನಮ್ಮಲ್ಲಿನ ವಿವಿಧ ಮಾಧ್ಯಮಗಳ ನಡುವೆ ಒಂದು ಬಗೆಯ ಅನೈತಿಕ ಸ್ಪರ್ಧೆ ಏರ್ಪಟ್ಟು ಅದು ಅನೇಕ ಅವ್ಯವಹಾರಗಳಿಗೆ ಹಾದಿ ಮಾಡುತ್ತಿದೆ. ಇತ್ತೀಚಿಗೆ ಹೆಚ್ಚು ಚರ್ಚೆಯಲ್ಲಿರುವ ಸಂಗತಿ ಎಂದರೆ ದೃಶ್ಯ ಮಾಧ್ಯಮಗಳು ಎಸಗುತ್ತಿವೆ ಎನ್ನಲಾಗುವ ಟಿಆರ್‌ಪಿ ತಿರುಚುವಿಕೆ ಎನ್ನುವ ಹಗರಣ.

TRP ಎಂದರೇನು?

ಟಿಆರ್‌ಪಿ ಅಂದರೆ ಟಾರ್ಗೆಟ್ ರೇಟಿಂಗ್ ಪಾಯಿಂಟ್ ಅಥವಾ ಗುರಿಯಿಟ್ಟು ದರ ನಿರ್ಧರಿಸುವ ಅಂಶ ಎಂದರ್ಥ. ಖಾಸಗಿ ವಾಹಿನಿಗಳ ಜನಪ್ರಿಯತೆಯನ್ನು ಅಳೆಯುವ ಒಂದು ಮಾನದಂಡವೇ ಈ ಟಿಆರ್‌ಪಿ.

ಯಾರು ಈ ಟಿಆರ್‌ಪಿಯನ್ನು ನಿರ್ಧರಿಸುತ್ತಾರೆ ?

ʼಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ʼ ಎನ್ನುವ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಯೊಂದು ಖಾಸಗಿ ದೃಶ್ಯ ವಾಹಿನಿಗಳ ಟಿಆರ್‌ಪಿಯನ್ನು ನಿರ್ಧರಿಸುತ್ತದೆ. ಈ BARC ಸಂಸ್ಥೆಯು ತಾನು ನೇರವಾಗಿ ಟಿಆರ್‌ಪಿಯನ್ನು ನಿರ್ಧರಿಸುವುದಿಲ್ಲ. ಕಳೆದ ನಾಲ್ಕಾರು ವರ್ಷಗಳ ಹಿಂದೆ ಈ ಕೆಲಸವನ್ನು ಹನ್ಸಾ ರಿಸರ್ಚ್ ಎನ್ನುವ ಮತ್ತೊಂದು ಖಾಸಗಿ ಸಂಸ್ಥೆಗೆ ವಹಿಸುತ್ತಿತ್ತು.

ಟಿಆರ್‌ಪಿ ನಿರ್ಧರಿಸುವ ಬಗೆ ಯಾವುದು?

ಜನರು ತಮ್ಮ ತಮ್ಮ ಮನೆಗಳಲ್ಲಿ ಯಾವಯಾವ ಖಾಸಗಿ ವಾಹಿನಿಗಳನ್ನು ಎಷ್ಟು ಸಮಯ ಅಥವಾ ಅವಧಿಯವರೆಗೆ ವಿಕ್ಷಿಸುತ್ತಾರೆ ಎಂಬ ಅಂಕಿಅಂಶಗಳನ್ನು ಪ್ರಾಥಮಿಕವಾಗಿ ಸಂಗ್ರಹಿಸಲಾಗುತ್ತದೆ. ದೇಶದಲ್ಲಿರುವ ಎಲ್ಲಾ ಮನೆಗಳ ಅಂಕಿಅಂಶಗಳನ್ನು ಸಂಗ್ರಹಿಸುವುದು ಕಷ್ಟಸಾಧ್ಯ. ಆದ್ದರಿಂದ ಆಯ್ದ 44,000 ಮನೆಗಳ Set Top Box ಒಂದು ಅಳತೆಯ ಸಾಧನವನ್ನು (Bor-O-meter) ಗುಪ್ತವಾಗಿ ಅಳವಡಿಸಲಾಗುತ್ತದೆ. ವಿಶೇಷ ಸಂದರ್ಭ ಹಾಗೂ ಚುನಾವಣಾ ಸಮಯದಲ್ಲಿ ವಾಹಿನಿಗಳು Exit Pol ಫಲಿತಾಂಶವನ್ನು ಆಯ್ದ ಕೆಲವೇ ಕೆಲವು ಮತದಾರರ ಅಭಿಪ್ರಾಯದ ಆಧಾರದ ಮೇಲೆ ಹೇಗೆ ಪ್ರಕಟಿಸುತ್ತವೆಯೋ, ಅದೇ ಮಾದರಿಯಲ್ಲಿ ದೇಶದ ವಿವಿಧ ಭಾಗಗಳ ಗ್ರಾಮೀಣ ಪ್ರದೇಶ ನಗರ ಪ್ರದೇಶ ಹಾಗೂ ವಿಭಿನ್ನ ಸಾಮಾಜಿಕ, ಆರ್ಥಿಕ ಹಿನ್ನೆಲೆಯ ಕುಟುಂಬಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆ ಮನೆಯವರು ಎಷ್ಟು ಸಮಯದ ತನಕ ಯಾವ ಯಾವ ವಾಹಿನಿಗಳನ್ನು ನೋಡುತ್ತಾರೆ ಎಂಬ ಮಾಹಿತಿಯ ಆಧಾರದ ಮೇಲೆ ವಾರದ ಕೊನೆಗೆ ಟಿಆರ್‌ಪಿಯನ್ನು ಘೋಷಿಸಲಾಗುತ್ತದೆ.

TV Cable Operator

ಖಾಸಗಿ ವಾಹಿನಿಗಳು ಹೇಗೆ ಟಿಆರ್‌ಪಿಯನ್ನು ತಿರುಚುತ್ತವೆ ?

1. ಟಿಆರ್‌ಪಿ ನಿರ್ಧರಿಸಲು BARC ನೇಮಿಸಿದ್ದ ಖಾಸಗಿ ಸಂಸ್ಥೆಯ ನಿವೃತ್ತ ನೌಕರನಿಗೆ ಲಂಚದ ಆಮಿಷವೊಡ್ಡುವ ಮೂಲಕ ಸೆಟ್‌ಟಾಪ್‌ ಬಾಕ್ಸ್‌ಗಳಲ್ಲಿ ಅಳವಡಿಸಲಾದ ಗ್ರಾಹಕರ ಮನೆಗಳನ್ನು ಖಾಸಗಿ ವಾಹಿನಿಗಳು ಮೊದಲು ಗುರುತಿಸುತ್ತವೆ. ಸ್ಥಳೀಯ ಕೇಬಲ್ ಆಪರೇಟರ್‌ಗಳನ್ನು ಬುಕ್ ಮಾಡಿಕೊಂಡು ಆ ಮನೆಯವರಿಗೆ ಪ್ರತಿ ದಿನ ಇಂತಿಷ್ಟು ಎಂದು ಹಣವನ್ನು ಪಾವತಿಸಿ ದಿನಾಲು ತಮ್ಮ ವಾಹಿನಿಯನ್ನು ಮಾತ್ರ ವೀಕ್ಷಿಸುವಂತೆ ಹಾಗೂ ಟಿವಿ ನೋಡದಿರುವ ಸಮಯದಲ್ಲೂ ಕೂಡ ಟಿವಿಯನ್ನು ಆನ್ ಮಾಡಿ ಇಡಲು ಮನವಿ ಮಾಡಲಾಗುತ್ತದೆ.

2. ಕೇಬಲ್ ಆಪರೇಟರ್‌ಗಳ ಸಹಾಯದಿಂದ ತಮಗೆ ಯಾವ ದೃಶ್ಯವಾಹಿನಿ ಪ್ರತಿಸ್ಪರ್ಧಿಯಾಗಿದೆಯೊ ಆ ವಾಹಿನಿಯ ಪ್ರಸಾರವನ್ನು ಪ್ರೈಮ್ ಟೈಂನಲ್ಲಿ ಪ್ರಸಾರವಾಗದಂತೆ ತಡೆಯುವುದು, ಕೇಬಲ್ ನೆಟ್‌ವರ್ಕ್ ಪಟ್ಟಿಯಿಂದ ಅಂತಹ ವಾಹಿನಿಗಳನ್ನು ಕೈಬಿಡುವುದು ಅಥವಾ ಆ ಪ್ರೈಮ್ ಸಮಯದಲ್ಲಿ ಪ್ರತಿಸ್ಪರ್ಧಿ ವಾಹಿನಿಯ ಆಡಿಯೋನಲ್ಲಿ ಒಂದು ಬಗೆಯ ಗೊಂದಲ ಅಥವಾ ತೊಂದರೆಯಾಗುವಂತೆ ನೋಡಿಕೊಂಡು ಆ ಮೂಲಕ ಜನರು ಆ ವಾಹಿನಿಯನ್ನು ನೋಡದಂತೆ ಮಾಡಲಾಗುತ್ತದೆ.

3. ಗ್ರಾಹಕರು ಟಿವಿ ಆನ್ ಮಾಡಿದ ತಕ್ಷಣ ಮೊದಲು ತಮ್ಮದೇ ವಾಹಿನಿ ಕಾಣಿಸಿಕೊಳ್ಳುವಂತೆ ಅಡ್ಜಸ್ಟ್ ಮಾಡಿಸಲಾಗುತ್ತದೆ. ಅಂದರೆ ಟಿವಿ ಆನ್ ಮಾಡಿದ ಕೂಡಲೇ ಆ ಸೆಟ್‌ಟಾಪ್ ಬಾಕ್ಸ್ ನಲ್ಲಿ ತಮ್ಮ ವಾಹಿನಿ ಮೊದಲು ಕಾಣಿಸಿಕೊಳ್ಳುವಂತೆ ಕೇಬಲ್ ಆಪರೇಟರ್‌ಗಳ ಮೂಲಕ ಡಿಫಾಲ್ಟ್ ಸೆಟ್ಟಿಂಗ್ ಮಾಡಿಸಲಾಗುತ್ತದೆ.

4. ಮನರಂಜನೆ, ಹಿಂದಿ ಸುದ್ದಿ ವಾಹಿನಿ, ಇಂಗ್ಲಿಷ್ ಸುದ್ಧಿ ವಾಹಿನಿ… ಹೀಗೆ ಬೇರೆ ಬೇರೆ ಎಲ್ಲ ಬಗೆಯ ವಿಭಾಗಗಳಲ್ಲಿ ತಮ್ಮ ವಾಹಿನಿಯ ಸಂಖ್ಯೆಯನ್ನು ಅಳವಡಿಸಲು ಕೇಬಲ್ ಆಪರೇಟರ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಇದನ್ನು ಡ್ಯುಯಲ್ ಲಾಜಿಕಲ್ ನಂಬರ್ ಎಂದು ಕರೆಯುತ್ತಾರೆ. ಹೀಗೆ ಎಲ್ಲ ಕೆಟಗರಿಗಳಲ್ಲಿ ಒಂದು ವಾಹಿನಿಯ ನಂಬರ್ ಪುನಃ ಪುನಃ ಅಳವಡಿಸುವಂತೆ ಮಾಡಲಾಗುತ್ತದೆ. ಗ್ರಾಹಕರು ಮನೆಗಳಲ್ಲಿ ಟಿವಿ ನೋಡುವಾಗ ತಮ್ಮ ರಿಮೋಟ್ ಓಡಿಸುವ ಸಂದರ್ಭದಲ್ಲಿ ಅಡ್ಡಡ್ಡಲಾಗಿ ಪ್ರತಿ ಸಲ ಅದೇ ವಾಹಿನಿ ಓಪನ್ ಆಗುವಂತೆ ಅಡ್ಜಸ್ಟ್ ಮಾಡಲಾಗುತ್ತದೆ. ಹಾಗೆ ಮಾಡಿದಾಗ ಒಂದಷ್ಟು ವಾಚ್ ಟೈಂ ಆ ವಾಹಿನಿಯ ಖಾತೆಗೆ ಹೋಗುತ್ತದೆ.

ಟಿಆರ್‌ಪಿಯಿಂದ ದೃಶ್ಯ ವಾಹಿನಿಗಳಿಂದ ಏನು ಲಾಭ?

ಒಂದು ದೃಶ್ಯ ವಾಹಿನಿಯು ಅತಿ ಹೆಚ್ಚು ಜನರು ನೋಡುತ್ತಾರೆಂದರೆ ಅದರ ಟಿಆರ್‌ಪಿ ಅಗ್ರಶ್ರೇಣಿಯಲ್ಲಿದೆ ಎಂದರ್ಥ. ಅಂದರೆ ದೃಶ್ಯ ವಾಹಿನಿಯೊಂದು ಬಹಳಷ್ಟು ಜನರು ವೀಕ್ಷಿಸುತ್ತಾರೆ ಎನ್ನುವಂತಾದರೆ ಅದು ಬಹಳ ಜನಪ್ರಿಯ ವಾಹಿನಿ ಎಂದು ನಿರ್ಧರಿಸಲಾಗುತ್ತದೆ. ಒಂದು ದೃಶ್ಯವಾಹಿನಿಯನ್ನು ಹೆಚ್ಚು ಜನರು ವೀಕ್ಷಿಸುತ್ತಾರೆ ಎಂದು ನಿರ್ಧಾರವಾದರೆ ಆ ದೃಶ್ಯವಾಹಿನಿಯು ಸಾಮಾನ್ಯವಾಗಿ ಖಾಸಗಿ ಕಂಪನಿಗಳ ಜಾಹೀರಾತನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಬಲ್ಲದು. ಆ ದೃಶ್ಯವಾಹಿನಿಯಲ್ಲಿ ಪ್ರಸಾರವಾಗುವ ಜಾಹೀರಾತುಗಳು ಹೆಚ್ಚು ಜನರಿಗೆ ಮುಟ್ಟಿದರೆ ತಮ್ಮ ಉತ್ಪನ್ನಗಳ ಮಾರುಕಟ್ಟೆ ವಿಸ್ತಾರವಾಗುತ್ತದೆ ಎಂದು ಉತ್ಪಾದಕರು ತಮ್ಮ ಜಾಹೀರಾತುಗಳನ್ನು ಅಂತಹ ಜನಪ್ರಿಯ ವಾಹಿನಿಗಳಿಗೆ ನೀಡುತ್ತಾರೆ. ಜಾಹೀರಾತು ಮೂಲಗಳಿಂದ ದೃಶ್ಯವಾಹಿನಿಗಳಿಗೆ ಅಪಾರ ಪ್ರಮಾಣದ ಹಣ ಹರಿದು ಬರುತ್ತದೆ.

ಟಿಆರ್‌ಪಿ ತಿರುಚುವಿಕೆ, ರಿಪಬ್ಲಿಕ್ ವಾಹಿನಿ ಮತ್ತು ಅರ್ನಬ್‌ ಗೋಸ್ವಾಮಿ

ಕಳೆದ ನಾಲ್ಕಾರು ವರ್ಷಗಳ ಹಿಂದೆ ಮುಂಬೈ ಪೊಲೀಸ್ ಆಯುಕ್ತರು ಹಿಂದಿ ರಿಪಬ್ಲಿಕ್ ವಾಹಿನಿಯ ಮೇಲೆ ಗುಮಾನಿ ವ್ಯಕ್ತಪಡಿಸಿ, ಟಿಆರ್‌ಪಿ ತಿರುಚುವಿಕೆ ಪ್ರಕರಣವನ್ನು ದಾಖಲಿಸಿ, ಹೆಚ್ಚಿನ ತನಿಖೆ ಮಾಡುವುದಾಗಿ ಹೇಳಿದ್ದನ್ನು ನೀವೆಲ್ಲ ಓದಿರುತ್ತೀರಿ. ಹಿಂದಿ ರಿಪಬ್ಲಿಕ್ ವಾಹಿನಿಯ ಮೇಲಿನ ಟಿಆರ್‌ಪಿ ತಿರುಚುವಿಕೆ ಆರೋಪ ತುಂಬಾ ಹಳೆಯದು. 2017ರಲ್ಲೂ ಕೂಡ ಇಂತಹದ್ದೇ ವಂಚನೆಯ ಪ್ರಕರಣ ಈ ದೃಶ್ಯ ವಾಹಿನಿಯ ಮೇಲೆ ದಾಖಲಾಗಿತ್ತು. ಪ್ರಮುಖವಾಗಿ ಈ ವಾಹಿನಿಯ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ ಎನ್ನುವ ವ್ಯಕ್ತಿ ಬಿಜೆಪಿಗೆ ನಿಷ್ಠವಾಗಿರುವ ಕೌಟುಂಬಿಕ ಹಿನ್ನೆಲೆಯುಳ್ಳವರು. ಈತ ವಿಶೇಷವಾಗಿ ವಿದ್ಯುನ್ಮಾನ ಸುದ್ದಿ ಮಾಧ್ಯಮಗಳಲ್ಲಿ ಹುಟ್ಟು ಹಾಕಿರುವ ಅನೈತಿಕ ಪರಂಪರೆ ಹಾಗೂ ಕೂಗುಮಾರಿ ಮಾದರಿಯು ಮಾಧ್ಯಮ ಕ್ಷೇತ್ರದಲ್ಲಿ ಈತ ಒಂದು ಕಪ್ಪುಚುಕ್ಕೆ ಎಂದೇ ಪ್ರಾಜ್ಞರು ಮಾತನಾಡುತ್ತಾರೆ. ಈತನ ಅಸಭ್ಯ ಚೀರಾಟ, ಅನಗತ್ಯ ಅರಚಾಟ, ಪಕ್ಷಪಾತ ಪೂರಿತ ಸುದ್ಧಿ ಪ್ರಸಾರ, ದ್ವೇಷ ಹರಡುವಿಕೆಯ ಕಾರ್ಯಕ್ರಮಗಳು ಇಡೀ ಭಾರತೀಯ ಮಾಧ್ಯಮ ಕ್ಷೇತ್ರವನ್ನು ಇನ್ನಿಲ್ಲದಂತೆ ಕುಲಗೆಡಿಸಿದೆ.

Arnab

ಈತನನ್ನು ಮಾದರಿಯಾಗಿಟ್ಟುಕೊಂಡು ಈತನಂತೆ ನಕಲು ಮಾಡಲು ಪ್ರಯತ್ನಿಸುವ ಅದೆಷ್ಟೊ ಪ್ರಾದೇಶಿಕ ವಾಹಿನಿಗಳ ಸುದ್ಧಿವಾಚಕರು ಆತನಂತೆಯೇ ಅನೈತಿಕ ಮತ್ತು ಆತ್ಮಹತ್ಯಾತ್ಮಕ ಹಾದಿಯನ್ನು ತುಳಿದಿದ್ದು ನೀವು ಗಮನಿಸಿರುತ್ತೀರಿ. ಕನ್ನಡದ ದೃಶ್ಯ ಮಾಧ್ಯಮಗಳಲ್ಲೂ ಕೂಡ ಒಬ್ಬಿಬ್ಬರು ಸುದ್ದಿವಾಚಕರು ಗೋಸ್ವಾಮಿಯನ್ನು ನಕಲು ಮಾಡುತ್ತಾರೆ ಹಾಗೂ ತಮ್ಮನ್ನು ತಾವು ರಾಷ್ಟ್ರೀಯವಾದಿ ಪತ್ರಕರ್ತರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸಿಕೊಳ್ಳುತ್ತಾರೆ. ಇಂತಹ ಮತಿಗೇಡಿ, ಕೋಮುವಾದಿ, ಪಕ್ಷಪಾತಿ ಪತ್ರಕರ್ತರನ್ನು ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಏಜೆಂಟ್ ಎಂದು ಟ್ರೋಲ್ ಮಾಡುವುದನ್ನು ನೀವೆಲ್ಲ ನೋಡಿರಬಹುದು. ಬಹುಶಃ ಈ ದಶಕದುದ್ದಕ್ಕೂ ರಾಜಕಾರಣಿಗಳಿಂತ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಹಾಗೂ ಅಪಹಾಸ್ಯಕ್ಕೆ ಗುರಿಯಾದವರು ಈ ಬಗೆಯ ಸುದ್ದಿವಾಚಕರು ಎನ್ನುವುದು ವಿಶೇಷ ಸಂಗತಿ.

Republic ಮತ್ತು NDTV ಗಳ ಅಂಕಿ ಅಂಶಗಳು

ಖಾಸಗಿ ವಾಹಿನಿಗಳ ಜನಪ್ರಿಯತೆಯನ್ನು ಅಳೆಯುವ BARC ನ ಮಾನದಂಡದಲ್ಲಿದ್ದ ನ್ಯೂನತೆಯನ್ನು ಬಳಸಿಕೊಂಡು ಟಿಆರ್‌ಪಿಯನ್ನು ದೃಶ್ಯ ಮಾಧ್ಯಮಗಳು ತಮಗೆ ಬೇಕಾದಂತೆ ತಿರುಚುತ್ತಿದ್ದವು. ಆದರೆ, ಒಂದು ವಾಹಿನಿಯ ಜನಪ್ರಿಯತೆಯನ್ನು ಅಳೆಯಲು ಬೇರೆ ಮಾದರಿಯ ಅನೇಕ ಮಾನದಂಡಗಳು ಲಭ್ಯ ಇವೆ. ನಾನು ಇಲ್ಲಿ ಎರಡು ವಾಹಿನಿಗಳನ್ನು ಉದಾಹರಣೆಗೆ ತೆಗೆದುಕೊಂಡಿದ್ದೇನೆ. ಹೆಚ್ಚು ವಿಶ್ವಾಸಾರ್ಹವಾಗಿ ಪರಿಗಣಿಸಬಹುದಾದ ಪರ್ಯಾಯ ಮಾರ್ಗದ ಕುರಿತು ನಾನು ನಿಮಗೆ ಒಂದಷ್ಟು ಮಾಹಿತಿಗಳನ್ನು ನೀಡುತ್ತಿದ್ದೇನೆ. ಖಾಸಗಿ ದೃಶ್ಯ ವಾಹಿನಿಗಳ ಜನಪ್ರಿಯತೆ ಈ ಕೆಳಗಿನ ಮಾನದಂಡವನ್ನು ಬಳಸಿಯೂ ನಿರ್ಧರಿಸಬಹುದು ಎನ್ನುವುದಷ್ಟೆ ನನ್ನ ಚಿಂತನೆ:

1. ಸುದ್ದಿ ವಾಹಿನಿಗಳ ಯುಟ್ಯೂಬ್ ಖಾತೆಯ Subscribers ಸಂಖ್ಯೆ.

2. ಸುದ್ದಿ ವಾಹಿನಿಗಳ ವೆಬ್‌ಸೈಟ್‌ಗೆ ಭೇಟಿ ಕೊಡುವ visiters ಸಂಖ್ಯೆ.

3. ಸುದ್ದಿ ವಾಹಿನಿಗಳ ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಂಡಿರುವವರ ಸಂಖ್ಯೆ.

ಈ ಅಂಕಿಅಂಶಗಳು ಸಂಪೂರ್ಣವಾಗಿ ಪಾರದರ್ಶಕವಾಗಿವೆ ಎಂದು ನಾನು ಹೇಳಲಾರೆ. ಆದರೂˌ ಇಲ್ಲಿ ಒಳನುಸುಳುವಿಕೆ ಮತ್ತು ತಿರುಚುವಿಕೆಗಳಿಗೆ ಒಂದಷ್ಟು ಇತಿಮಿತಿಗಳಿಗೆ ಎನ್ನುವ ಕಾರಣಕ್ಕೆ ಇದನ್ನು ಪರ್ಯಾಯ ಮಾನದಂಡವಾಗಿ ಬಳಸಿ ಟಿಆರ್‌ಪಿಯನ್ನು ನಿರ್ಧರಿಸಬಹುದು. ರಿಪಬ್ಲಿಕ್ ಮತ್ತು NDTV ಗಳ ಈ ಅಂಕಿಅಂಶಗಳು ನೋಡಿದಾಗ ಬಹಳ ಆಶ್ಚರ್ಯ ಆಗುವುದಂತೂ ನಿಜ.

NDTV : ಯುಟ್ಯೂಬ್ ಸಬ್‌ಸ್ಕ್ರೈಬರ್‌ ಸಂಖ್ಯೆ: 90 ಲಕ್ಷ ಪ್ಲಸ್.

ರಿಪಬ್ಲಿಕ್: ಯುಟ್ಯೂಬ್ ಸಬ್‌ಸ್ಕ್ರೈಬರ್‌ ಸಂಖ್ಯೆ: 38 ಲಕ್ಷ ಪ್ಲಸ್.

NDTV: ವೆಬ್ಸೈಟ್ ವಿಜಿಟರ್ಸ್ ಸಂಖ್ಯೆ: 80 ಮಿಲಿಯನ್ ಪ್ಲಸ್.

ರಿಪಬ್ಲಿಕ್: ವೆಬ್ಸೈಟ್ ವಿಜಿಟರ್ಸ್ ಸಂಖ್ಯೆ: 15 ಮಿಲಿಯನ್ ಪ್ಲಸ್.

NDTV : ಆ್ಯಪ್‌ ಡೌನ್ಲೋಡ್ ಮಾಡಿಕೊಂಡವರ ಸಂಖ್ಯೆ: 50 ಲಕ್ಷ ಪ್ಲಸ್.

ರಿಪಬ್ಲಿಕ್: ಆ್ಯಪ್‌ ಡೌನ್ಲೋಡ್ ಮಾಡಿಕೊಂಡವರ ಸಂಖ್ಯೆ: 10 ಲಕ್ಷ ಪ್ಲಸ್.

BARC ಈ ಎರಡೂ ವಾಹಿನಿಗಳಿಗೆ ಘೋಷಿಸಿದ ಟಿಆರ್‌ಪಿ: NDTV: 1. 30 %, ರಿಪಬ್ಲಿಕ್ : 77.18%

(ಸೂಚನೆ: ಈ ಅಂಕಿ ಅಂಶಗಳು ಇಂದಿಗೆ ಮೂರು-ನಾಲ್ಕು ವರ್ಷಗಳಷ್ಟು ಹಳೆಯವಾಗಿದ್ದು ಆಗ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿತ್ತು).

India Media

ಈ ಮೇಲಿನ ಮೂರು ಮಾನದಂಡಗಳನ್ನು ಗಮನಿಸಿದಾಗ ಎನ್‌ಡಿಟಿವಿಯು ರಿಪಬ್ಲಿಕ್ ಟಿವಿಗಿಂತ ಎಲ್ಲ ಬಗೆಯಲ್ಲಿ ಜನಪ್ರಿಯವಾಗಿದೆ ಎನ್ನಬಹುದು. ಆದರೆ, BARCಯ ಮಾನದಂಡವನ್ನು ವ್ಯವಸ್ಥಿತವಾಗಿ ತಿರುಚುವ ಮೂಲಕ ರಿಪಬ್ಲಿಕ್ ವಾಹಿನಿಯು ನಕಲಿ ಟಿಆರ್‌ಪಿಯನ್ನು ಪಡೆಯುತ್ತಿದೆ ಎಂಬ ಗುಮಾನಿಗಳ ಆಧಾರದಲ್ಲಿ ಅದರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅದಾಗ್ಯೂ, ಅರ್ನಬ್‌ ಗೋಸ್ವಾಮಿ ಮುಂಬೈ ಪೊಲೀಸರ ಈ ಕ್ರಮವನ್ನು ದುರುದ್ದೇಶಪೂರಿತ ಎಂದು ಆರೋಪಿಸಿದ್ದರು. ಈ ಪ್ರಕರಣ ದಾಖಲಾದ ಮೇಲೆ BARC ಸಂಸ್ಥೆಯು ವಾರದ ಕೊನೆಗೆ ಟಿಆರ್‌ಪಿ ಘೋಷಣೆ ಮಾಡುವ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ಇದನ್ನೂ ಓದಿ ಈ ವಿಕಾಸ್ ಯಾದವ್ ಯಾರು? ತನ್ನ ನೆಲದಲ್ಲಿ ತನ್ನದೇ ನಾಗರಿಕನ ಹತ್ಯೆಯ ಯತ್ನ ಕುರಿತು ಏನಿದು ಅಮೆರಿಕೆಯ ಆಪಾದನೆ?

ಖಾಸಗಿ ದೃಶ್ಯವಾಹಿನಿಗಳನ್ನು ಹೆಚ್ಚು ಜನರು ವೀಕ್ಷಿಸುತ್ತಾರೆ ಮತ್ತು ಅದರ ಮೂಲಕ ತಮ್ಮ ಉತ್ಪನ್ನಗಳ ಜಾಹೀರಾತು ಬಹಳಷ್ಟು ಜನರಿಗೆ ತಲುಪುತ್ತವೆ ಎಂದು ಭ್ರಮಿಸಿ ಉದ್ಯಮಿಗಳು ತಮ್ಮ ಉತ್ಪನ್ನಗಳ ಜಾಹೀರಾತಿಗೆ ಅಪಾರ ಪ್ರಮಾಣದ ಹಣವನ್ನು ವ್ಯಯಿಸುತ್ತಾರೆ. ಆದರೆ, ಟಿಆರ್‌ಪಿ ರೇಟ್‌ಗಳು ಖೊಟ್ಟಿ ಆಗಿರುತ್ತವೆ ಎನ್ನುವ ಸತ್ಯ ತಿಳಿದ ಮೇಲಾದರೂ ಜಾಹೀರಾತು ನೀಡುವ ಉದ್ಯಮಿಗಳು ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಇಲ್ಲದಿದ್ದರೆ ಯಾರೂ ನೋಡದ ವಾಹಿನಿಗಳಿಗೆ ಜಾಹೀರಾತು ನೀಡಿ ಹಣ ಖರ್ಚು ಮಾಡುವುದು ವ್ಯರ್ಥ. ಟಿಆರ್‌ಪಿ ತಿರುಚುವಿಕೆಯಿಂದ ಅತ್ಯಂತ ಹೆಚ್ಚು ಮೋಸವಾಗುವುದು ಅಂತಹ ದೃಶ್ಯ ವಾಹಿನಿಗಳಿಗೆ ಜಾಹೀರಾತು ನೀಡುವ ಖಾಸಗಿ ಕಂಪನಿಗಳಿಗೆ. ಈಗಲಾದರೂ ಈ ಕುರಿತು ಖಾಸಗಿ ಕಂಪನಿಗಳು ಚಿಂತಿಸುವ ಅಗತ್ಯವಿದೆ.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X