ಭಾರತದ ರಾಜಕೀಯ ಹವಾಮಾನದಲ್ಲಿ ನಿಧಾನವಾಗಿ ಪಲ್ಲಟವಾಗುತ್ತಿರುವ ಮುನ್ಸೂಚನೆಗಳು ದಟ್ಟವಾಗಿ ಗೋಚರಿಸುತ್ತಿವೆ. ದಶಕದಿಂದ ದೇಶವನ್ನು ಮುನ್ನಡೆಸುತ್ತಿರುವ ಸರ್ಕಾರದ ಮೇಲಿನ ಭ್ರಮೆ ಕರಗುತ್ತಿದ್ದು, ಆಡಳಿತದ ಬಗ್ಗೆ ಯುವಜನರಲ್ಲಿ ಮಡುಗಟ್ಟಿರುವ ಆಕ್ರೋಶ ಸ್ಪೋಟಗೊಳ್ಳುವ ಹಂತದಲ್ಲಿದೆ. ಬೆಲೆ ಏರಿಕೆ, ನಿರುದ್ಯೋಗ, ಪರೀಕ್ಷಾ ಅಕ್ರಮಗಳು ಹಾಗೂ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಜನಸಾಮಾನ್ಯರಲ್ಲಿ ಹತಾಶೆ ಮನೆಮಾಡಿದೆ. ಎಲ್ಲಕ್ಕೂ ಮಿಗಿಲಾಗಿ, “ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ” ಎಂಬ ಗಂಭೀರ ಆತಂಕವನ್ನು ದೇಶದ ಶೇ 47ರಷ್ಟು ಜನರು ಆತಂಕದಿಂದ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಪರವಾದ ಅಲೆ ನಿಧಾನವಾಗಿ ಕ್ಷೀಣಿಸುತ್ತಿದ್ದು, ಮೋದಿ ಸರ್ಕಾರದ ಜನಪ್ರಿಯತೆ ಮಂಕಾಗುತ್ತಿರುವ ಈ ಕಟು ವಾಸ್ತವಗಳನ್ನು ತೆರೆದಿಟ್ಟಿರುವುದು ‘ದಿ ವೈರ್’ (The Wire) ಜಾಲತಾಣವು ಪ್ರಕಟಿಸಿರುವ ಇತ್ತೀಚಿನ ಸಿ-ವೋಟರ್‌ನ ‘ಮೂಡ್ ಆಫ್ ದ ನೇಷನ್’ (MOTN) ಸಮೀಕ್ಷೆಯ ವರದಿ.
ಒಂದು ವೇಳೆ ಲೋಕಸಭೆಗೆ ಈಗಲೇ ಚುನಾವಣೆ ನಡೆದರೆ, ಬಿಜೆಪಿ ಸ್ವಂತ ಬಲದ ಮೇಲೆ ಬಹುಮತ ಪಡೆಯಲು 11 ಸ್ಥಾನಗಳ ಕೊರತೆ ಎದುರಿಸಲಿದೆ ಎಂದು ಈ ಸಮೀಕ್ಷೆ ಅಂದಾಜಿಸಿದೆ. 2026ರ ಜನವರಿಯಲ್ಲಿ ನಡೆದಿದ್ದ ಇದೇ ಸಮೀಕ್ಷೆಯಲ್ಲಿ ಬಿಜೆಪಿಗೆ 287 ಸ್ಥಾನಗಳು ಸಿಗಲಿವೆ ಎಂದು ಹೇಳಲಾಗಿತ್ತು. ಆದರೆ, ಈಗ ಆ ಸಂಖ್ಯೆಯಲ್ಲಿ 26 ಸ್ಥಾನಗಳ ಭಾರಿ ಕುಸಿತ ಕಂಡಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧಿಸಿರುವ ಗೆಲುವನ್ನು ಹೊರತುಪಡಿಸಿದರೆ, ಪಕ್ಷದ ಸ್ಥಾನಗಳು ಇನ್ನಷ್ಟು ಪಾತಾಳಕ್ಕೆ ಕುಸಿಯುತ್ತಿದ್ದವು. ಆದಾಗ್ಯೂ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್.ಡಿ.ಎ) 326 ಸ್ಥಾನಗಳೊಂದಿಗೆ ಸುಭದ್ರವಾಗಿರಲಿದೆ. ಹಾಗಾಗಿ, ಮೋದಿ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ತಕ್ಷಣದ ಅಪಾಯವಿಲ್ಲದಿದ್ದರೂ, ಪಕ್ಷದ ಸ್ವಂತ ಬಲ ಗಣನೀಯವಾಗಿ ತಗ್ಗುತ್ತಿರುವುದು ಆಡಳಿತಾರೂಢರಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ 2024ರ ನಂತರ ಸತತವಾಗಿ ಇಳಿಮುಖವಾಗುತ್ತಿದೆ ಎಂಬುದು ಮತ್ತೊಂದು ಪ್ರಮುಖ ಅಂಶ. ಮೋದಿಯವರನ್ನು ಪ್ರಧಾನಿಯಾಗಿ ಶೇ 49ರಷ್ಟು ಜನ ಮಾತ್ರ ಬೆಂಬಲಿಸಿದ್ದು, ಅವರ ಕಾರ್ಯವೈಖರಿ ‘ಅತ್ಯುತ್ತಮ’ ಎಂದವರ ಸಂಖ್ಯೆ ಶೇ 35.6 ರಿಂದ 30.1ಕ್ಕೆ ಕುಸಿದಿದೆ. ಮತ್ತೊಂದೆಡೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜನಪ್ರಿಯತೆ ಏರುಗತಿಯಲ್ಲಿದ್ದು, ಶೇ 27ರಷ್ಟು ಬೆಂಬಲ ಪಡೆದಿದ್ದಾರೆ. ವಿಶೇಷವೆಂದರೆ, ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿ.ವಿ.ಕೆ ನಾಯಕ ಸಿ. ಜೋಸೆಫ್ ವಿಜಯ್ ಅವರು ಶೇ 9.2ರಷ್ಟು ಬೆಂಬಲದೊಂದಿಗೆ ದಿಢೀರ್ ಆಗಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ವಿರೋಧ ಪಕ್ಷಗಳ ನಾಯಕರ ಸಾಲಿನಲ್ಲಿ ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಅವರನ್ನು ಹಿಂದಿಕ್ಕಿ ವಿಜಯ್ ಮುಂಚೂಣಿಗೆ ಬಂದಿರುವುದು ರಾಷ್ಟ್ರ ರಾಜಕಾರಣದ ಅಚ್ಚರಿಯ ಬೆಳವಣಿಗೆಯಾಗಿದೆ.
ಆರ್ಥಿಕ ನಿರ್ವಹಣೆಯ ವಿಚಾರದಲ್ಲೂ ಸರ್ಕಾರದ ವಿರುದ್ಧ ಜನಾಭಿಪ್ರಾಯ ತಿರುಗುತ್ತಿರುವುದು ಸ್ಪಷ್ಟವಾಗಿದೆ. ಮೋದಿ ಸರ್ಕಾರದ ಆರ್ಥಿಕ ನೀತಿಗಳು ಕೇವಲ ಬಂಡವಾಳಶಾಹಿಗಳಿಗೆ ಮತ್ತು ದೊಡ್ಡ ಉದ್ಯಮಿಗಳಿಗೆ ಮಾತ್ರ ಲಾಭದಾಯಕವಾಗಿವೆ ಎಂದು ಶೇ 56ರಷ್ಟು ಜನ ಕಡ್ಡಿಮುರಿದಂತೆ ಹೇಳಿದ್ದಾರೆ. ಬೆಲೆ ಏರಿಕೆಯೇ ಸರ್ಕಾರದ ಅತಿದೊಡ್ಡ ವೈಫಲ್ಯ ಎಂದು ಶೇ 23ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಆಸಕ್ತಿದಾಯಕ ವಿಚಾರವೆಂದರೆ, ಆರ್ಥಿಕ ನಿರ್ವಹಣೆಯಲ್ಲಿ ಮೋದಿಯವರಿಗೆ (ಶೇ 47) ಮತ್ತು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ (ಶೇ 44) ಇರುವ ಬೆಂಬಲದ ಅಂತರ ತೀರಾ ಹತ್ತಿರಕ್ಕೆ ಬಂದಿದೆ. ಇನ್ನು, ಭವಿಷ್ಯದಲ್ಲಿ ತಮ್ಮ ಆದಾಯ ಹೆಚ್ಚಾಗಲಿದೆ ಎಂದು ಕೇವಲ ಶೇ 24ರಷ್ಟು ಜನ ಮಾತ್ರ ನಂಬಿದ್ದರೆ, ಶೇ 64ರಷ್ಟು ಮಂದಿ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂಬ ಹತಾಶೆ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರದ ವಿಚಾರದಲ್ಲಿ ಕೇಂದ್ರ ಸರ್ಕಾರವು ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ವಿಶೇಷವಾಗಿ ಅಯೋಧ್ಯೆ ರಾಮಮಂದಿರದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ‘ಚಂದಾ ಚೋರಿ’ (ದೇಣಿಗೆ ಕಳ್ಳತನ) ಹಗರಣವು ಕೇಂದ್ರದ ಮೋದಿ ಸರ್ಕಾರ ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ವರ್ಚಸ್ಸಿಗೆ ಭಾರಿ ಪೆಟ್ಟು ನೀಡಿದೆ ಎಂದು ಶೇ 46.6ರಷ್ಟು ಜನ ಹೇಳಿದ್ದಾರೆ. ಅಲ್ಲದೆ, ಎನ್‌ಡಿಎ ಮೈತ್ರಿಕೂಟದ 13 ವರ್ಷಗಳ ಆಡಳಿತದಲ್ಲಿ ದೇಶದಲ್ಲಿ ಭ್ರಷ್ಟಾಚಾರ ಮತ್ತಷ್ಟು ಮಿತಿಮೀರಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 43.2ರಷ್ಟು, ಅಂದರೆ ಪ್ರತಿಯೊಬ್ಬ ಎರಡನೇ ವ್ಯಕ್ತಿ, ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದು ಸರ್ಕಾರದ ‘ಶೂನ್ಯ ಭ್ರಷ್ಟಾಚಾರ’ದ ಪ್ರತಿಪಾದನೆಗೆ ಹಿನ್ನಡೆಯುಂಟುಮಾಡಿದೆ.
ಯುವಜನರ ಮತ್ತು ‘ಜೆನ್-ಝೆಡ್’ (Gen-Z) ಪೀಳಿಗೆಯ ಆಕ್ರೋಶ ಈ ಸಮೀಕ್ಷೆಯ ಅತ್ಯಂತ ಕಳವಳಕಾರಿ ಅಂಶವಾಗಿದೆ. ಶೇ 80ಕ್ಕೂ ಹೆಚ್ಚು ಯುವಜನರು ತಮ್ಮ ಭವಿಷ್ಯದ ಬಗ್ಗೆ ತೀವ್ರ ಅನಿಶ್ಚಿತತೆ ಮತ್ತು ಆತಂಕವನ್ನು ಎದುರಿಸುತ್ತಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಅತ್ಯಂತ ಗಂಭೀರವಾಗಿದೆ ಎಂದು ಶೇ 70ರಷ್ಟು ಯುವಕರು ಆತಂಕ ವ್ಯಕ್ತಪಡಿಸಿದ್ದಾರೆ. ಶೇ 46ರಷ್ಟು ಯುವಜನರು, ಭಾರತವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿರುವುದು ಸರ್ಕಾರದ ನೀತಿಗಳ ಮೇಲಿನ ಯುವಜನತೆಯ ನಂಬಿಕೆ ಸಂಪೂರ್ಣವಾಗಿ ಹುಸಿಯಾಗಿರುವುದನ್ನು ಎತ್ತಿ ತೋರಿಸುತ್ತದೆ. ಯುವ ಸಮುದಾಯವು ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುತ್ತಿರುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ.
ಸರ್ಕಾರಿ ನೇಮಕಾತಿ ಪರೀಕ್ಷೆಗಳ ಬಗ್ಗೆಯಂತೂ ಯುವಕರಲ್ಲಿ ತೀವ್ರ ನಿರಾಶೆ ಹಾಗೂ ಆಕ್ರೋಶ ಮಡುಗಟ್ಟಿದೆ. ಶೇ 67ರಷ್ಟು ಮಂದಿ, ಸರ್ಕಾರಿ ಪರೀಕ್ಷೆಗಳು ನ್ಯಾಯಸಮ್ಮತವಾಗಿ ನಡೆಯುತ್ತಿಲ್ಲ ಎಂದು ನೇರವಾಗಿ ದೂರಿದ್ದಾರೆ. ಇತ್ತೀಚಿನ ‘ನೀಟ್’ (NEET) ಪತ್ರಿಕೆ ಸೋರಿಕೆ ಬಿಕ್ಕಟ್ಟನ್ನು ಸರ್ಕಾರ ನಿಭಾಯಿಸಿದ ರೀತಿ ‘ತೀರಾ ಕಳಪೆ’ ಎಂದು ಶೇ 53ರಷ್ಟು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಯುವಕರು ಇತ್ತೀಚೆಗೆ ನಡೆಸಿದ ಬೃಹತ್ ಪ್ರತಿಭಟನೆಗೆ ಶೇ 67ರಷ್ಟು ಜನರ ಬೆಂಬಲ ವ್ಯಕ್ತವಾಗಿದೆ. ಕೇವಲ ಶೇ 14ರಷ್ಟು ಮಂದಿ ಮಾತ್ರ ಭಾರತದಲ್ಲಿ ನಡೆಯುವ ನೇಮಕಾತಿ ಪರೀಕ್ಷೆಗಳ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎಂಬುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಹೊಸದಾಗಿ ರೂಪುಗೊಂಡಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಬಗ್ಗೆಯೂ ಯುವಜನರು ಅಚ್ಚರಿಯ ಒಲವು ತೋರಿದ್ದಾರೆ. ಶೇ 42ರಷ್ಟು ಮಂದಿ ಈ ಸಂಘಟನೆಯು ಒಂದು ‘ಒತ್ತಡದ ಗುಂಪಾಗಿ’ ಮುಂದುವರಿಯಬೇಕು ಎಂದಿದ್ದರೆ, ಶೇ 40ರಷ್ಟು ಜನ, ಒಂದು ವೇಳೆ ಸಿಜೆಪಿ ಚುನಾವಣೆಗೆ ಸ್ಪರ್ಧಿಸಿದರೆ ತಾವು ಅದಕ್ಕೇ ಮತ ಹಾಕುವುದಾಗಿ ತಿಳಿಸಿದ್ದಾರೆ. ಜಂತರ್ ಮಂತರ್ ಪ್ರತಿಭಟನೆ ಮುಗಿದ ಎರಡು ವಾರಗಳ ಬಳಿಕ, 18-35 ವಯಸ್ಸಿನ 1,270 ಯುವಕರನ್ನು ಸಂಪರ್ಕಿಸಿದಾಗ ಶೇ 53ರಷ್ಟು ಮಂದಿ ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ತಮ್ಮ ಪ್ರಮುಖ ಚುನಾವಣಾ ಆದ್ಯತೆಗಳನ್ನಾಗಿ ಪರಿಗಣಿಸಿದ್ದಾರೆ. ನಾಯಕರು ಎತ್ತುವ ನೈಜ ಸಮಸ್ಯೆಗಳೇ ತಮ್ಮ ಮತದಾನದ ನಿರ್ಧಾರವನ್ನು ಬದಲಿಸುತ್ತವೆ ಎಂದು ಯುವಕರು ಖಚಿತವಾಗಿ ಹೇಳಿದ್ದಾರೆ.
ಈ ‘ಮೂಡ್ ಆಫ್ ದ ನೇಷನ್’ ಸಮೀಕ್ಷೆಯನ್ನು ಸಿ-ವೋಟರ್ ಸಂಸ್ಥೆಯು ಜುಲೈ 1 ರಿಂದ ಆಗಸ್ಟ್ 25ರ ನಡುವೆ ನಡೆಸಿದ್ದು, ಒಟ್ಟು 1,16,644 ಜನರ ಪ್ರತಿಕ್ರಿಯೆಗಳನ್ನು ಕಲೆಹಾಕಿದೆ. ಇದರಲ್ಲಿ 25,184 ನೇರ ಸಂದರ್ಶನಗಳು ಮತ್ತು ಕಳೆದ 24 ವಾರಗಳ 91,795 ಟ್ರ್ಯಾಕರ್ ದತ್ತಾಂಶಗಳು ಸೇರಿವೆ. ಆದರೆ, ಖ್ಯಾತ ವಿಶ್ಲೇಷಕ ಯೋಗೇಂದ್ರ ಯಾದವ್ ಅವರು ಈ ಸಮೀಕ್ಷೆಯ ವಿಧಾನವನ್ನು ಟೀಕಿಸಿದ್ದಾರೆ. ಕಳೆದ ಆರು ತಿಂಗಳ ದತ್ತಾಂಶವನ್ನು ಒಟ್ಟಾಗಿ ಸರಾಸರಿ ಮಾಡುವುದರಿಂದ, ಯುವಜನರ ಇತ್ತೀಚಿನ ಪ್ರತಿಭಟನೆಗಳ ನೈಜ ಆಕ್ರೋಶ ಮರೆಯಾಗಲಿದ್ದು, ಇದು ಬಿಜೆಪಿಯ ಸೀಟುಗಳನ್ನು ವಾಸ್ತವಕ್ಕಿಂತ ಹೆಚ್ಚಾಗಿ ತೋರಿಸುವಂತೆ ಮಾಡಿದೆ. ವಾಸ್ತವದ ಆಕ್ರೋಶ ಇನ್ನಷ್ಟು ಹೆಚ್ಚಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ ಅರಣ್ಯ ಇಲಾಖೆಯ ಇಬ್ಬಗೆಯ ನೀತಿ: ಬಡವರಿಗೊಂದು ನ್ಯಾಯ, ಬಲ್ಲಿದರಿಗೊಂದು ನ್ಯಾಯ!!
ಈ ಸಮೀಕ್ಷೆಯು ಪ್ರಧಾನಿ ಮೋದಿ ಸರ್ಕಾರಕ್ಕೆ ಎಚ್ಚರಿಕೆಯ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಮೈತ್ರಿಕೂಟದ ರಾಜಕೀಯ ಸ್ಥಿರತೆಯನ್ನು ಶೇ 13ರಷ್ಟು ಜನ ಸರ್ಕಾರದ ಸಾಧನೆ ಎಂದಿದ್ದರೂ; ನಿರುದ್ಯೋಗ, ಹಣದುಬ್ಬರ, ಭ್ರಷ್ಟಾಚಾರ ಮತ್ತು ಪರೀಕ್ಷಾ ಅಕ್ರಮಗಳ ವಿಚಾರದಲ್ಲಿ ಯುವಜನತೆ ಮತ್ತು ಸಾಮಾನ್ಯ ಜನರ ತಾಳ್ಮೆ ಮೀರುತ್ತಿರುವುದು ಸತ್ಯ. ಸರ್ಕಾರದ ಆರ್ಥಿಕ ನೀತಿಗಳು ಕೇವಲ ಬಂಡವಾಳಶಾಹಿಗಳ ಪರವಾಗಿವೆ ಎಂಬ ಭಾವನೆ ಜನರಲ್ಲಿ ಆಳವಾಗಿ ಬೇರೂರುತ್ತಿದೆ. ಮುಂಬರುವ ದಿನಗಳಲ್ಲಿ ಈ ಜನಾಕ್ರೋಶವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಅದು ಭಾರಿ ರಾಜಕೀಯ ಬೆಲೆ ತೆರುವಂತೆ ಮಾಡಬಹುದು.





